ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾರ ಸಮ್ಮೇಳನ 'ಬೆಳಗಲಿರುವ' ಕನ್ನಡ ಕಲಾವಿದರು

ಸಿಂಗಪುರದಲ್ಲಿ ಸಿಂಗಾರ ಸಮ್ಮೇಳನದ ಮೆರಗನ್ನು ನೂರ್ಮಡಿಗೊಳಿಸಲು ಎಸ್ಎಲ್ ಭೈರಪ್ಪ, ಮಂಡ್ಯ ರಮೇಶ್, ರಾಜೇಶ್ ಕೃಷ್ಣನ್ ಸೇರಿದಂತೆ ಕನ್ನಡ ನಾಡಿನ ಪ್ರಸಿದ್ಧ ಕಲಾವಿದರು, ನಟರು, ಸಾಹಿತಿಗಳು, ಗಾಯಕರು, ನರ್ತಕರು ಆಗಮಿಸುತ್ತಿದ್ದಾರೆ.

By ಜಯಶ್ರೀ ಭಟ್
|
Google Oneindia Kannada News

ಅಕ್ಟೋಬರ್ 29 ಮತ್ತು 30ರಂದು ತನ್ನ 20ನೇ ವಾರ್ಷಿಕ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕನ್ನಡ ಸಂಘ (ಸಿಂಗಪುರ) 'ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ'ಕ್ಕೆ ಪೂರ್ಣ ರೀತಿಯಲ್ಲಿ ಸಜ್ಜಾಗಿದೆ. ಈ ಸಮ್ಮೇಳನಕ್ಕೆ ಆಗಮಿಸಲಿರುವ ನಮ್ಮ ಕರುನಾಡಿನ ಹೆಮ್ಮೆಯ ಕಲಾವಿದರ ಪ್ರತಿಭೆ ಮತ್ತೊಮ್ಮೆ ದೀಪಾವಳಿಯ ಬೆಳಕನ್ನು ಹೆಚ್ಚಿಸಿ ಇಲ್ಲಿನ ಕನ್ನಡಿಗರ ಮನ ಬೆಳಗಲಿದೆ.

ಇಲ್ಲಿನ ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಲಿರುವ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ" ವಿಜೃಂಭಣೆಯಿಂದ ನಡೆಸಲು ನೂರಾರು ಕಾರ್ಯಕರ್ತರು, ಸಹೃದಯಿ ಕನ್ನಡ ಮಿತ್ರರು ಹಗಲಿರುಳೂ ಶ್ರಮಿಸುತ್ತಿದ್ದಾರೆ.

ಈ ಕಾರ್ಯಕ್ರಮದ ಮೆರಗನ್ನು ನೂರ್ಮಡಿಗೊಳಿಸಲು ಕನ್ನಡ ನಾಡಿನ ಪ್ರಸಿದ್ಧ ಕಲಾವಿದರು, ನಟರು, ಸಾಹಿತಿಗಳು, ಗಾಯಕರು, ನರ್ತಕರು ಆಗಮಿಸುತ್ತಿದ್ದಾರೆ. ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲು, ಎಲ್ಲರ ಮನರಂಜಿಸಲು ಬರುತ್ತಿರುವ ಈ ಪ್ರತಿಭಾವಂತರ ಹಾಗೂ ಅವರ ವಿಶಿಷ್ಟ ಕಾರ್ಯಕ್ರಮಗಳ ಕಿರುಪರಿಚಯ ಇಲ್ಲಿದೆ.

Karnataka artists gracing Singara Sammelana in Singapore

ಮಂಡ್ಯ ರಮೇಶ್ ಅವರ 'ಚಾಮ ಚೆಲುವೆ'

ಮಂಡ್ಯ ರಮೇಶ್ ಎಂಬ ಕನ್ನಡದ ಸಮಕಾಲೀನ ರಂಗಪ್ರತಿಭೆ ಕಟ್ಟಿ ಬೆಳೆಸಿರುವ 'ನಟನ' ತಂಡ ಪ್ರಸ್ತುತ ಪಡಿಸಲಿರುವ ನಗೆ ನಾಟಕ 'ಚಾಮ ಚೆಲುವೆ'. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಇದೊಂದು ವಿಶಿಷ್ಟ ಜಾನಪದ ಶೈಲಿಯ ನಾಟಕ. ಇದರಲ್ಲಿನ ಪಾತ್ರಗಳೆಲ್ಲ ದೇವಾನು ದೇವರೋ, ಸಾಕ್ಷಾತ್ ದೇವಿಯರೋ ಆಗಿದ್ದರೂ ಜನ ಸಾಮಾನ್ಯರಂತೆ ವಾದ ವಿವಾದಗಳಲ್ಲಿ ತೊಡಗುವುದು, ಮನುಷ್ಯ ಮಾತ್ರರಂತೆ ನಡೆದುಕೊಳ್ಳುವುದು ಇಲ್ಲಿನ ನಿರೂಪಣೆಯ ವೈಶಿಷ್ಟ್ಯವಾಗಿದೆ.

ಜಾನಪದ ಪರಂಪರೆಯಲ್ಲಿ ಆಚಾರ, ವ್ಯವಹಾರಗಳು ವಿಚಾರದ ತಳಹದಿಯ ಮೇಲೆ ನಿಂತಿರುವುದು ನಿಚ್ಚಳವಾಗಿ ಕಂಡುಬರುತ್ತದೆ. ಸಮಾಜದ ಬೇರೆಲ್ಲ ಸ್ತರಗಳಲ್ಲಿ ಪುರುಷಪ್ರಧಾನ ತತ್ವವೇ ಅನೂಚಾನವಾಗಿ ಕಂಡುಬಂದರೂ ನಮ್ಮ ಜಾನಪದ ಕಾವ್ಯಗಳಲ್ಲಿ ಹೆಣ್ಣು ಮಹತ್ತರವಾದ ಪಾತ್ರ ವಹಿಸುತ್ತಾಳೆ. ಆಕೆ ಗಂಡಿನ ಅಂಕೆಗೊಳಪಡುವ ಸತ್ವಹೀನ ವ್ಯಕ್ತಿತ್ವದವಳಾಗಿಲ್ಲದೆ ಸಶಕ್ತಳಾಗಿದ್ದಾಳೆ. ಇಲ್ಲಿ ಪುರಾಣದ ಕಥೆಗಳು ಜಾಳಾಗಿ ಮಾನವೀಯ ಸಂಬಂಧದ ತಳಪಾಯದ ಮೇಲೆ ಕಥೆ ಗಟ್ಟಿಯಾಗುತ್ತಾ ಹೋಗುತ್ತದೆ.

ಪ್ರಸ್ತುತ ನಾಟಕದಲ್ಲಿ ಇಬ್ಬರ ಹೆಂಡಿರ ಮುದ್ದಿನ ಪತಿರಾಯ ನಂಜುಂಡ ಮಹಿಷಾಸುರನನ್ನು ಮರ್ದಿಸಿದ ಚಾಮುಂಡಿಯಲ್ಲಿ ಅನುರಕ್ತನಾಗುವುದು ಕಥೆಯ ಒಳಗಣ ಸೆಳೆತ ಹಾಗು ಅಂತಃಪ್ರವಾಹ! ನಂಜುಂಡ ಇಬ್ಬರ ಹೆಂಡಿರಾದ ದೇವೀರಿ, ಪಾರ್ವತೀಯರು ಪತಿಯ ಮೇಲಿನ ಮುಷ್ಟಿ ಬಿಗಿತವನ್ನು ಬಿಗಿಗೊಳಿಸುವ ಭರದಲ್ಲಿ ಚಾಮುಂಡಿಯ ತೀರಾ ಸಾಮಾನ್ಯ ಮನುಜರಂತೆ ಜಗಳಕ್ಕೆ ಇಳಿಯುವುದು ತಮಾಷೆಯಾಗಿಯೂ, ವೈಶಿಷ್ಟ್ಯಪೂರ್ಣವಾಗಿಯೂ ಇದೆ.

ವರ್ಗ ಸಂಘರ್ಷ, ವರ್ಣ ತಾರತಮ್ಯ ಮೊದಲಾದ ಅನಿಷ್ಟಗಳಿಗೆ ಕೊಡಲಿಯೇಟನ್ನು ನೀಡುವ ಅಂತಃಪ್ರಜ್ಞೆ ಈ ಕಾವ್ಯದಲ್ಲಿದೆ. ದೈವಿಕ ಶಕ್ತಿ ಆರೋಪಿತವಾಗಿದ್ದರೂ ನಂಜುಂಡ ಮಾನವ ಸಹಜ ಪ್ರವೃತ್ತಿಗೆ ಒಗ್ಗಿಕೊಳ್ಳುವುದು ಭಾವ ಸಂವೇದನೆಯನ್ನು ತೀವ್ರಗೊಳಿಸುತ್ತದೆ. ಉರಿಮಾರಿ, ರಂಗನಾಥ ಸಮಾಜದ ಹಿತಾಸಕ್ತಿಯನ್ನು ಕಾಪಾಡುವ ಮಹಾನ್ ಚೇತನಗಳಾಗಿ ಬಿಂಬಿತವಾಗಿರುತ್ತಾರೆ.

ಜಾನಪದ ಸೊಲ್ಲುಗಳನ್ನು ಮೂಲ ಸೊಗಡಿನಿಂದಲೇ ಪ್ರಸ್ತುತ ಪಡಿಸುವ ಒಂದು ಪ್ರಯತ್ನವೇ 'ಚಾಮಚಲುವೆ'. ನಟನದ ನಾಟಕಗಳಾದ ಚೋರ ಚರಣದಾಸ, ಗಾಂಧಿ- ಅಂಬೇಡ್ಕರ್, ಅಲೀಬಾಬ. ನಾಯಿತಿಪ್ಪ, ರತ್ನಪಕ್ಸಿ, ಧಾಂ ಧೂಂ ಸುಂಟರಗಾಳಿ ಮುಂತಾದ ನಾಟಕಗಳು ಈಗಾಗಲೇ 100 ಪ್ರದರ್ಶನಗಳನ್ನು ಮೀರಿದ್ದು, ಈಗ ಚಾಮ ಚೆಲುವೆಯೂ ನೂರರ ಗಡಿ ದಾಟುವ ಸನ್ನಾಹದಲ್ಲಿರುವುದು ನಮಗೆಲ್ಲ ಅತ್ಯಂತ ಹೆಮ್ಮೆಯ ವಿಚಾರ.

Karnataka artists gracing Singara Sammelana in Singapore

ನಟನ ತಂಡದ ಇನ್ನೊಂದು ನಾಟಕ 'ಸಾಯೋ ಆಟ'

ನಟನ ತಂಡದವರಿಂದ ಪ್ರಸ್ತುತಗೊಳ್ಳಲಿರುವ ಇನ್ನೊಂದು ನಾಟಕ 'ಸಾಯೋ ಆಟ'. ನಗುವಿನ ಮೂಲಕ ನೋವನ್ನೂ, ಬದುಕನ್ನೂ, ಗೆಲುವನ್ನೂ ಪರಿಚಯಿಸುತ್ತಾ ಹೋಗುವ, ತಮಾಶೆ ಎನಿಸಿದರೂ ಸೀರಿಯಸ್ ಮೆಸೇಜ್ ಇರುವ ಬಲು ವಿಶಿಷ್ಟ ನಾಟಕ. ನಗೆಯ ಕಡಲಿನಲ್ಲಿ ಮೀಯಿಸುವ 'ಸಾಯೋ ಆಟ' ಎಂಬುವುದು 'ಟ್ರಾಜಿಡಿ' ಎಂಬ ಆಂಗ್ಲ ಪದಕ್ಕೆ ವ್ಯಂಜಕವಾದ ದೇಸಿ ಮಾತು.

ಸಮಾಜವೆಲ್ಲ ಸಾಮಾಜಿಕ ಕ್ರಾಂತಿಯಲ್ಲಿರುವಾಗ ಹುಚ್ಚಾಟಗಳು ಬಯಲಿಗೆ ಬಂದಷ್ಟೂ ಒಳ್ಳೆಯದು. ಸಾಯೋ ಆಟ ನಿಲ್ಲಬೇಕು; ಬದುಕೋ ಆಟ ನಡೆಯಬೇಕು. ಸಾಯೋ ಆಟ ಸುಳ್ಳಾದ ದಿವಸ ನವಯುಗದ ಪ್ರಾರಂಭ. ದಿನಾ ಸತ್ತರೆ ಅಳುವವರ್ಯಾರು? ಹೀಗೆ ಇರಿಕಿನಲ್ಲಿ ಬುದ್ಧಿಯನ್ನು ತುರುಕುವುದು 'ಸಾಯೋ ಆಟ' ಎಂಬ ಉದಾತ್ತ ಆಶಯಗಳನ್ನು ಇಟ್ಟುಕೊಂಡು, ಮೊದಲಿನಿಂದ ಕಡೆಯವರೆಗೆ ಶುದ್ಧ ಹಾಸ್ಯದ ಮೂಲಕ ಪ್ರೇಕ್ಷಕರ ಮನರಂಜಿಸುವ ಪ್ರಯೋಗವಿದು.

ವಿಶ್ವೇಶ್ ಭಟ್ ತಂಡ 'ಕನ್ ಫ್ಯೂಶನ್'

ಈ ತಂಡ ಪ್ರತಿಭಾನ್ವಿತ ವಿಶ್ವೇಶ್ ಭಟ್ ಅವರ ನೇತೃತ್ವದಲ್ಲಿ ಸಂಗೀತ ಸುಧೆಯನ್ನು ವಿಶ್ವದಾದ್ಯಂತ ಪಸರಿಸುತ್ತಿದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿದ್ದರೂ ಕನ್ನಡದಲ್ಲಿ 'ಫ್ಯೂಶನ್ ' ಎಂಬ ಆಧುನಿಕ ಕಲ್ಪನೆಯ ಸಂಗೀತವನ್ನು ಸಂಯೋಜಿಸಿ, ವಾದ್ಯ ಸಂಗೀತದ ವಿನೂತನ ಕಲೆಯನ್ನು ಇವರು ಪ್ರಸ್ತುತ ಪಡಿಸುತ್ತಿದ್ದಾರೆ. ಇದೊಂದು ವಿಶೇಷವಾದ ಹಲಬಗೆಯ ಸಂಗೀತ ಮಾದರಿಗಳ ಮಿಶ್ರಣ.

ಲಘು ಸಂಗೀತ, ಭಾರತೀಯ ಅದರಲ್ಲೂ ಕನ್ನಡ ಸಿನಿ ಸಂಗೀತ ಹಾಗೂ ಹಾಲಿವುಡ್ ಸಂಗೀತಗಳ ಮಿಶ್ರಣ ಇದೆ. ಇಷ್ಟೆಲ್ಲ ಆದರೂ ಭಾರತೀಯ ಸಂಗೀತ ಪರಂಪರೆಗೇ ವಿಶೇಷ ಆದ್ಯತೆ ಇದೆ. ಬರೀ ಗಾಯನವಷ್ಟೇ ಅಲ್ಲದೆ ಹಲಬಗೆಯ ಸಂಗೀತ ವಾದ್ಯಗಳು, ಕೆಲವು ವಿಶಿಷ್ಟ ಪಾತ್ರಗಳು ರಂಗದ ಮೇಲಿದ್ದು ವಿನೂತನ ಕಾರ್ಯಕ್ರಮ ಇದಾಗಿರುತ್ತದೆ. ಕನ್ ಫ್ಯೂಸ್ ಆಗುವಂಥದ್ದೇನೂ ಇರುವುದಿಲ್ಲ ಬರೀ ನಿಮ್ಮ ಮನರಂಜಿಸುವ ಗೀತೆಗಳ ಅದ್ಭುತ ಕಾರ್ಯಕ್ರಮ ಇದಾಗಿರುತ್ತೆ.


ಶಿವಪ್ರಿಯ ನೃತ್ಯ ವೃಂದದ 'ರಸಮಯ ಕರ್ನಾಟಕ'

"ಶಿವಪ್ರಿಯ ನೃತ್ಯ ವೃಂದ" ಕರ್ನಾಟಕದ ವೈಭವದ ಚರಿತ್ರೆಯನ್ನು ನಿರೂಪಿಸುವ ನೃತ್ಯ ರೂಪಕ 'ಶಿವಪ್ರಿಯ-ರಸಮಯ ಕರ್ನಾಟಕ'ವನ್ನು ಪ್ರಸ್ತುತಪಡಿಸುತ್ತಿದೆ. ಈ ನೃತ್ಯ ರೂಪಕ ಹೊಯ್ಸಳ ಹಾಗು ವಿಜಯನಗರ ಸಾಮ್ರಾಜ್ಯದ ಘನತೆ, ಆಚಾರ್ಯತ್ರಯರಾದ, ಆದಿ ಶಂಕರ, ರಾಮನುಜ, ಮಧ್ವಾಚಾರ್ಯ ಮತ್ತು ಬಸವಣ್ಣನವರ ಕೊಡುಗೆ, ಅಷ್ಟೇ ಅಲ್ಲದೆ ಪ್ರಸಿದ್ದ ಯಾತ್ರಾಸ್ಥಳಗಳಾದ ಚಾಮುಂಡಿ ಬೆಟ್ಟ, ಶ್ರವಣಬೆಳಗೊಳ, ವಿಶ್ವವಿಖ್ಯಾತ ಮೈಸೂರು ದಸರ ಹಾಗು ಮೈಸೂರು ರಾಜ್ಯದ ಒಡೆಯರ್- ಈ ಎಲ್ಲದರ ಸಮ್ಮಿಲನ.

10 ಜನರ ಈ ತಂಡದೊಂದಿಗೆ ಸಿಂಗಪುರದ 2 ಸ್ಥಳೀಯ ಕಲಾಕಾರರು ಕೂಡ ಪಾಲ್ಗೊಳ್ಳುತ್ತಾರೆ. ಶಾಸ್ತ್ರೀಯ, ಜನಪದ ಸೊಬಗಿನ ನೃತ್ಯಗಳ ಸಮ್ಮಿಶ್ರಣದ ಈ ಪ್ರದರ್ಶನ ಅನೇಕ ವೈವಿಧ್ಯತೆಗಳಿಂದ ಮೂಡಿಬರಲಿದೆ. ಈ ಹಿಂದೆ ಸೆಪ್ಟೆಂಬರ್ 2015ರಲ್ಲಿ ನಡೆದ 'ನಾವಿಕ ವಿಶ್ವ ಕನ್ನಡ ಸಮ್ಮೇಳನ'ದಲ್ಲಿ ಈ ಕಾರ್ಯಕ್ರಮ ಸಭಿಕರ ಮೆಚ್ಚುಗೆ, ಶ್ಲಾಘನೆಯನ್ನು ಪಡೆದಿತ್ತು. 50 ನಿಮಿಷದ ಈ ರೋಮಾಂಚಕ ಪ್ರಸ್ತುತಿಯಲ್ಲಿ ನಿರೀಕ್ಷಿಸಿ, ಮನಮೋಹಕ ಸಂಗೀತ, ಹುರುಪಿನ ವೈವಿಧ್ಯತೆಯ ನೃತ್ಯ, ಬಹುಮಾಧ್ಯಮದ ದೃಶ್ಯಗಳು ಹಾಗು ರಂಗವಿದ್ಯೆಯ ಪ್ರದರ್ಶನವನ್ನು. ಈ ತಂಡ ಎಲ್ಲ ನರ್ತಕ ಕಲಾಕಾರರು ವೃತ್ತಿಪರವಾಗಿ 15ಕ್ಕೂ ಹೆಚ್ಚು ವರ್ಷಗಳ ಕಾಲ 'ಶಿವಪ್ರಿಯ'ದಲ್ಲಿ ತರಬೇತಿ ಪಡೆದಿದ್ದಾರೆ.

The Shivapriya Ensemble ಗುರು ಡಾ. ಸಂಜಯ್ ಶಾಂತಾರಾಮ್‍ರವರ ಕಲ್ಪನೆಯ ಕೂಸು. ಬಹುಮುಖ ಪ್ರತಿಭೆಯ ಡಾ. ಸಂಜಯ್ ಶಾಂತಾರಾಮ್ ಭರತನಾಟ್ಯ, ಕೂಚಿಪುಡಿ ನೃತ್ಯ ಶೈಲಿಗಳ ಪರಿಣಿತರು. ಕನ್ನಡ, ತೆಲುಗು ಚಿತ್ರರಂಗದ ಕಲಾವಿದರು ಮತ್ತು ಕಿರುತೆರೆಯ ನಟರೂ ಕೂಡ. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಸಂಯೋಜಕರಾದ ಡಾ, ಸಂಜಯ್ ಶಾಂತಾರಾಮ್ ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಗಾಯಕರೂ ಕೂಡ.

10 ನೃತ್ಯ ಕಲಾವಿದರನ್ನೊಳಗೊಂಡ "ಶಿವಪ್ರಿಯ" ಸುಮಾರು 26 ವರುಷಗಳಿಂದ ಕಲಾರಂಗದಲ್ಲಿ ಸಕ್ರಿಯವಾಗಿ ಕಾರ್ಯನಿರತವಾಗಿದೆ. ಅಕ್ಕ ಸಮ್ಮೇಳನ, ಅಮೆರಿಕ 2014, ನಾವಿಕ 2015, ಬಹ್ರೇನ್ ಬಸವ ಸಮಿತಿ, ಶ್ರೀಲಂಕಾ, ಮಲೇಷ್ಯಾ, ಮಸ್ಕತ್, ಸ್ವಿಟ್ಜರ್ಲೆಂಡ್ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಅಮೋಘ ನೃತ್ಯ ಪ್ರದರ್ಶನಗಳನ್ನು ನೀಡಿರುತ್ತಾರೆ. 3 ಪುರುಷ ಮತ್ತು 7 ಸ್ತ್ರೀ ನೃತ್ಯಕಲಾಕಾರರ ಈ ತಂಡ ಕಥಕ್, ಕೂಚಿಪುಡಿ, ಭರತನಾಟ್ಯ, ಕಲರಿ, ಜನಪದ ನೃತ್ಯಗಳು, ಇತ್ಯಾದಿಯ ಅಧಿಕೃತ ಶೈಲಿಗಳಲ್ಲಿ ಶ್ರೇಷ್ಠ ದರ್ಜೆಯ ತರಬೇತಿ ಪಡೆದಿರುತ್ತಾರೆ.

'ಓಶನ್ ಕಿಡ್ಸ್'ನ ನೃತ್ಯ ವಿಸ್ಮಯ

1989ರಲ್ಲಿ ಹುಟ್ಟಿಕೊಂಡ 'ಓಶನ್ ಕಿಡ್ಸ್' ಎಂಬ ಕರಾವಳಿಯ ನೃತ್ಯ ತಂಡ ಕಲರ್ಸ್ ಟಿವಿಯವರು ನಡೆಸುವ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಎಂಬ ಟೆಲಿವಿಶನ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯದ ನಿರ್ಣಾಯಕ ಹಂತ ತಲುಪಿದ್ದಂತಹ ಪ್ರತಿಭಾನ್ವಿತರು. ಸಮುದ್ರದ ಅಲೆಗಳು ಹಾಗೂ ತೆಂಗಿನ ಗರಿಗಳ ನಡುವೆ ಹೆಜ್ಜೆಹಾಕುತ್ತಾ ಸಾಗಿದ ಇವರ ನಾಟ್ಯಕಲೆ ಇಂದು ಬಲು ದೂರದವರೆಗೂ ಸಾಗಿದೆ.

ಬಾಲಿವುಡ್ ನ ಖ್ಯಾತನಾಮರ ಜೊತೆ ಇವರು ಸಾಕಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವರ ನಾಟ್ಯ ಅಕಾಡೆಮಿ ಮಂಗಳೂರು, ಬೆಂಗಳೂರು ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಯನಿರತವಾಗಿದೆ. ಪೌರಾಣಿಕ ಹಾಗೂ ಸಿನೆಮಾ ಕಥೆಗಳ ಸಮ್ಮಿಶ್ರಣದೊಂದಿಗೆ ಇವರು ಪ್ರಸ್ತುತ ಪಡಿಸುವ ಕಾರ್ಯಕ್ರಮಗಳು ಕಣ್ಣಿಗೆ ಹಬ್ಬವನ್ನುಂಟುಮಾಡಲಿವೆ. ಇವರ ನೃತ್ಯವು ಕೆಲವೊಂದು ಶಾಸ್ತ್ರೀಯ ನೃತ್ಯ ಭಂಗಿಯಲ್ಲಿ, ಇನ್ನು ಕೆಲವು ವಿನೂತನ ಫ್ಯೂಶನ್ ಶೈಲಿಯಲ್ಲಿ ಇದ್ದು, ನೋಡುಗರ ಮನಸನ್ನು ಸೂರೆಗೊಳ್ಳಲಿದೆ. ಇವರ ಈ ಕಾರ್ಯಕ್ರಮ ವಿಸ್ಮಯಕಾರಿಯಾಗಿರುವುದಂತೂ ನಿಜ.

ಕನ್ನಡ ಸಿನಿ ದಿಗ್ಗಜರ ಸವಿ ಸವಿ ನೆನಪು

ಕನ್ನಡ ಸಿನೆಮಾದ ಹೆಸರಾಂತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ನಮಿತ ತಮ್ಮ ಸುಮಧುರ ಕಂಠದಿಂದ ಸಾಹಸಸಿಂಹ ವಿಷ್ಣುವರ್ಧನ್, ಆಟೋರಾಜ ಶಂಕರ್ ನಾಗ್ ಹಾಗೂ ಮೇರು ನಟಿ, ಮಿನುಗುತಾರೆ ಕಲ್ಪನಾ ಅವರು ಅಭಿನಯಿಸಿರುವ ಗೀತೆಗಳನ್ನು ಹಾಡಿ ಸಿಂಗಪುರದ ಕನ್ನಡಿಗರನ್ನು ರಂಜಿಸಲಿದ್ದಾರೆ. ಇವರ ಜೊತೆ ವಿಕ್ರಮ್ ಸೂರಿ ಹಾಗೂ ನಮಿತಾ ಅವರು ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಿ ಗೀತ ಸಂಗೀತದ ಜೊತೆ ಅಪೂರ್ವವಾದ ನೃತ್ಯವನ್ನೂ ಬೆರೆಸಿ ಅವರೊಂದಿಗೆ ಕಳೆದ ಕೆಲಹೊತ್ತನ್ನು ಸವಿ ಸವಿ ನೆನಪಾಗಿಸಲಿದ್ದಾರೆ.

ಕನ್ನಡ ಚಿತ್ರ ರಸಿಕರು ಎಂದೆಂದೂ ಮರೆಯಲಾಗದ ಕಲ್ಪನಾ, ವಿಷ್ಣುವರ್ಧನ್ ಹಾಗೂ ಮಿಂಚಿನಂತೆ ಮರೆಯಾದ ಪ್ರತಿಭೆಯ ಗಣಿಯಾಗಿದ್ದ ಶಂಕರ್ ನಾಗ್ ಇವರ ಅಭಿನಯದ ಹಾಡುಗಳನ್ನು ಇವತ್ತಿನ ಅತ್ಯುತ್ತಮ ಹಿನ್ನೆಲೆ ಗಾಯಕರ ಕಂಠದಿಂದ ಕೇಳುವುದು ಸಿಂಗಪುರದ ಕನ್ನಡಿಗರಿಗೆಲ್ಲ ಒದಗಿಬಂದಿರುವ ಅಪರೂಪದ ಅವಕಾಶ, ಅಲ್ಲ.., ಸುವರ್ಣಾವಕಾಶ.

ಪ್ರೊ ಕೃಷ್ಣೇಗೌಡರ ಹಾಸ್ಯೋಲ್ಲಾಸ

ಪ್ರೊಫೆಸರ್ ಕೃಷ್ಣೇಗೌಡ ಅವರು ಪ್ರಸ್ತುತಪಡಿಸಲಿರುವ ಈ ಹಾಸ್ಯೋಲ್ಲಾಸ ಕಾರ್ಯಕ್ರಮ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ನಕ್ಕು ಹಗುರಾಗಲು, ಅತ್ಯುತ್ತಮ ಸಮಯ ಒದಗಿಸಲಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದ ಹತ್ತಿರದ ಚಿಕ್ಕದೊಂದು ಹಳ್ಳಿಯಲ್ಲಿ ಬೆಳೆದ ಕೃಷ್ಣೇಗೌಡ ಅವರು ವೃತ್ತಿಯಲ್ಲಿ ಕಾಲೇಜು ಪ್ರಾಧ್ಯಾಪಕರು. ಇವರ ಹವ್ಯಾಸ ಹಾಸ್ಯ, ಜನರನ್ನು ನಗಿಸಿ ನಗುವಿನ ಮೂಲಕವೇ ಬದುಕಿನ ತತ್ವಗಳನ್ನು ತಿಳಿಸಿ ಹೇಳುವ ಕಲೆ ಅವರಿಗೆ ಸಹಜವಾಗಿಯೇ ಒಲಿದು ಬಂದಿದೆ.

ಹಳ್ಳಿ ಬದುಕಿನ ಸೊಗಡು, ಶ್ರೀಮಂತಿಕೆ ಅವರಲ್ಲಿ ಮನುಷ್ಯನ ನಿಜ ಸ್ವರೂಪವನ್ನು ಹಾಗೂ ಅವನ ಅಂತರಂಗದ ಅಭಿಲಾಷೆಯನ್ನು ಅರಿತುಕೊಳ್ಳುವಲ್ಲಿ ಅವರಿಗೆ ಸಹಾಯವಾಗಿರಬೇಕು. ಹಾಗಾಗೇ ಕೃಷ್ಣೇಗೌಡರ ಹಾಸ್ಯ ಕಾರ್ಯಕ್ರಮ ಬರೀ ನಗಿಸುವ ಕಲೆಯಲ್ಲ, ಬದುಕಲು ಕಲಿಸುವ ಕೋಚಿಂಗ್ ಕ್ಲಾಸಿಗೆ ನಗೆಯ ಲೇಪನ ಮಾಡಿದಂತಿರುತ್ತದೆ. ಸಿಂಗಪುರದಲ್ಲಿ ಅವರು ಕೊಡಲಿರುವ ಹಾಸ್ಯೋಲ್ಲಾಸ ಕಾರ್ಯಕ್ರಮವು ಹೊಸ ಹುರುಪನ್ನು, ಹೊಸ ಹೊಳಹನ್ನೂ ಕೊಟ್ಟು ಇಲ್ಲಿನ ಕನ್ನಡಿಗರ ಮನ ಬೆಳಗಲಿದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ.

Karnataka artists gracing Singara Sammelana in Singapore

ಡಾ. ಎಸ್.ಎಲ್ ಭೈರಪ್ಪ ಅವರೊಡನೆ ಮುಖಾಮುಖಿ

ನಿಮಗೆಲ್ಲಾ ಇಲ್ಲಿದೆ ಸಿಹಿ ಸಿಹಿ ಸುದ್ಧಿ. ಕೇಂದ್ರ ಸಾಹಿತ್ಯ ಅಕಾಡಮಿ, ಸರಸ್ವತಿ ಸಮ್ಮಾನ್ ಮತ್ತು ಇನ್ನೂ ಅನೇಕ ಗೌರವ, ಪ್ರಶಸ್ತಿಗಳ ವಿಜೇತರಾದ, ಕನ್ನಡಿಗರ ಹೆಮ್ಮೆಯ ಸರಸ್ವತಿ ಪುತ್ರ, ಡಾ. ಎಸ್.ಎಲ್. ಭೈರಪ್ಪನವರು ಕನ್ನಡ ಸಂಘ (ಸಿಂಗಪುರ) ಆಯೋಜಿಸುತ್ತಿರುವ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ!

"ಪರ್ವ", "ದಾಟು", "ವಂಶವೃಕ್ಷ", "ತಬ್ಬಲಿಯು ನೀನಾದೆ ಮಗನೆ", "ಆವರಣ" ಮುಂತಾದ ಹತ್ತು-ಹಲವಾರು ಜನಪ್ರಿಯ ಕನ್ನಡ ಕಾದಂಬರಿಗಳನ್ನು ನೀವು ಓದಿಯೇ ಇರುತ್ತೀರಿ. ಇವುಗಳ ಕರ್ತೃ, ಆಧುನಿಕ ಕನ್ನಡ ಸಾಹಿತ್ಯದ ಮಹಾನ್ ಲೇಖಕ, ಪದ್ಮಶ್ರೀ ಡಾ|| ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರ ಅಭಿಮಾನಿಯೂ ಆಗಿರುತ್ತೀರ. ಜೀವನದಲ್ಲಿ ಒಮ್ಮೆ ಅವರನ್ನು ಭೇಟಿಯಾಗಿ, ಅವರೊಂದಿಗೆ ಮಾತನಾಡಲು ಹಂಬಲಿಸಿರುತ್ತೀರ ಕೂಡ. ಬನ್ನಿ, ಅವರನ್ನು ಮುಖತಃ ಭೇಟಿಯಾಗೋಣ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಗಳ ಬಗ್ಗೆ ನಮ್ಮ ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಳ್ಳೋಣ.

ಸಿಂಗಪುರದ ಕನ್ನಡದ ಕಲಾರಸಿಕರೆಲ್ಲ ಬೇಗ ಬೇಗ ಸೀಟು ಕಾಯ್ದಿರಿಸಿಕೊಳ್ಳಿ. ತಡಮಾಡದೆ ಬಂದು ಈ ಎಲ್ಲ ಕಾರ್ಯಕ್ರಮವನ್ನು ವೀಕ್ಷಿಸಿ, ಆನಂದಿಸಿ. ಕನ್ನಡವನ್ನು ಕಟ್ಟೋಣ, ಬೆಳೆಸೋಣ, ಬಳಸೋಣ. ಸಿರಿಗನ್ನಡಂ ಗೆಲ್ಗೆ ಅನ್ನೋಣ ಅಲ್ವಾ?

English summary
Well known artists from Karnataka will be performing at Singara Sammelana organized by Singapore Kannada Sangha on 29 and 30, October, 2016. Mandya Ramesh, Rajesh Krishnan, Prof Krishnegowda, Vishwesh Bhat and others have been invited to the mega Kannada Event. Laureate SL Bhyrappa too will be there to interact with his fans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X