ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾರ್-ಎಸ್-ಸಲಾಮ್ ನಲ್ಲಿ ಮರೆಯಲಾಗದ ಸಂಗೀತ ಸಂಜೆ

By ಪ್ರಶಾಂತ್ ಬೀಚಿ, ತಾನ್ಜಾನಿಯ
|
Google Oneindia Kannada News

ಒಂದು ಸುಂದರವಾದ ಸಂಜೆಯಲ್ಲಿ ಸಮಾನ ಮನಸ್ಕರು ಸೇರಿದಾಗ, ಕಿವಿಗೆ ಇಂಪಾದ ಸಂಗೀತ ಕೇಳಿದರೆ ಅದರ ಸುಖವೇ ಬೇರೆ. ಕನ್ನಡ ಭಾವಗೀತೆ, ಕರ್ನಾಟಕ ಸಂಗೀತದ ಸುಂದರ ಗೀತೆಗಳು, ದಾಸರ ವಾಣಿ, ವಚನಗಳು, ಮಂಕುತಿಮ್ಮನ ಕಗ್ಗ ಹೀಗೆ ಮನ ತಣಿಸುವ ಗೀತೆಗಳು ನಮ್ಮನ್ನೆಲ್ಲ ಸಂತುಷ್ಟಗೊಳಿಸಿದವು ಎಂದರೆ ಬೇರೆಯವರಿಗೆ ಹೊಟ್ಟೆಕಿಚ್ಚು ಬರದೆ ಇರುವುದಿಲ್ಲ.

ಇಂತಹ ಒಂದು ಸಂಜೆ ನಮಗಾಗಿ ದಾರ್-ಎಸ್-ಸಲಾಮ್ ನಲ್ಲಿ ಏರ್ಪಾಡಾಗಿತ್ತು. ಕನ್ನಡ ಸಂಘದ ಕೆಲವು ಹಿರಿಯರು ಸೇರಿ ಆಯೋಜಿಸಿದ್ದ ಕಾರ್ಯಕ್ರಮ, ಪ್ರತಿಷ್ಠಿತ ಹೋಟೆಲ್ ನ್ಯೂ ಆಫ್ರಿಕಾದಲ್ಲಿ ನಡೆಯಿತು. ಪ್ರಥಮ ಬಾರಿಗೆ ಒಂದು ಸಂಗೀತ ಸಂಜೆ ಆಯೋಜಿತವಾಗಿದ್ದರಿಂದ ಬಹಳ ಕಡಿಮೆ ಜನ ಬರಬಹುದು ಎನ್ನುವುದು ನಮ್ಮ ಊಹೆಯಾಗಿತ್ತು. ಅದನ್ನು ಸುಳ್ಳು ಮಾಡಿದವರು ಇಲ್ಲಿನ ಕನ್ನಡಿಗರು. ಬೇರೆ ಭಾಷಿಕರೂ ಕೂಡ ಸಂಗೀತ ಕೇಳಲು ಬಂದಿದ್ದು ಸಂಭ್ರಮವನ್ನು ಹೆಚ್ಚಿಸಿತ್ತು. ಸಮಯಕ್ಕೆ ಸರಿಯಾಗಿ ಶುರುವಾದ ಕಾರ್ಯಕ್ರಮದಲ್ಲಿ ಸಂಗೀತಗಾರರ ಪರಿಚಯ ಮಾಡಿಕೊಟ್ಟಿದ್ದು ರಾಘವೇಂದ್ರ ರಾವ್. ಕಾರ್ಯಕ್ರಮದ ಸುಂದರ ನಿರೂಪಣೆ ನಿರ್ವಹಿಸಿದ್ದು ಕೃಷ್ಣ ಅರಸ್ ಮತ್ತು ಪ್ರಶಾಂತ್. ಸುಂದರ ಹಾಡುಗಳನ್ನು ಸುಮಧುರವಾಗಿ, ತಾಳಬದ್ದವಾಗಿ ಹಾಡಿದವರು ರೋಹಿಣಿ ಮೋಹನ್ ಮತ್ತು ವಿಜಯ ಐಯ್ಯರ್. [ಚಿತ್ರಪಟ]


ರೋಹಿಣಿ ಮೋಹನ್ ರವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಹಾಡುಗಾರರು. ತಮ್ಮದೆ ಸಿರಿಕಂಠದಿಂದ ಹಲವಾರು ಭಾವಗೀತೆಗಳ ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಅಪರೂಪವೆನಿಸುವಂತೆ ಕಗ್ಗಗಳನ್ನು ಹಾಡಿ ಎಲ್ಲಾ ಕನ್ನಡಿಗರಿಗೆ ತಲುಪಿಸಿದ್ದಾರೆ. ಬಹಳ ಕಡಿಮೆ ಕೇಳಿಸಿಕೊಂಡಿರುವ ಉತ್ತಮ ಕಾವ್ಯಗಳಿಗೆ ದ್ವನಿಯಾಗಿ ವಿಶೇಷವೆನಿಸಿಕೊಂಡಿದ್ದಾರೆ. ವಿಜಯ ಅಯ್ಯರ್ ರವರು ಸಂಗೀತ ಮನೆತನದಲ್ಲಿ ಬೆಳೆದು, ಕರ್ನಾಟಕ ಸಂಗೀತವನ್ನು ಕಲಿತು ಇಂದಿನ ಮಕ್ಕಳಿಗೆ ಕಲಿಸುತ್ತಿದ್ದಾರೆ. ದಾಸರ ಪದಗಳ ಜೊತೆಗೆ ವಚನಗಳನ್ನು ಕರ್ನಾಟಕ ಸಂಗೀತದಲ್ಲಿ ಹಾಡಿ ಕೇಳುಗರನ್ನು ಬೇರೆಯದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಶಕ್ತಿ ಹೊಂದಿದ್ದು ಎಲ್ಲಾ ಶ್ರೋತೃಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ತೇಲಿಸುತ್ತಾರೆ.

ಮೊದಲಿಗೆ ಮುತ್ತು ಸ್ವಾಮಿ ದೀಕ್ಷಿತರ "ಮಹಾ ಗಣಪತಿ ಮನಸಾ ಸ್ಮರಾಮಿ" ಎನ್ನುವ ದೇವರ ನಾಮದಿಂದ ಶುರುವಾಯಿತು. ನಂತರ ಮೆಚ್ಚಿನ ರಾಷ್ಟ್ರಕವಿ ಪ್ರೋ ಜಿ ಎಸ್ ಶಿವರುದ್ರಪ್ಪನವರ ಸುಂದರ ಗೀತೆ ಕೇಳಿಬಂತು. ಹೀಗೆ ಒಂದು ಕರ್ನಾಟಕ ಸಂಗೀತದ ಶಾಸ್ತ್ರೀಯ ಸಂಗೀತ ಕೇಳಿ ಬಂದರೆ ತದನಂತರ ಭಾವಗೀತೆಯ ಭಾವಪೂರ್ಣ ಗೀತೆಗಳು ಕೇಳಿಬಂದವು. ಸುಮಾರು ಎರಡು ತಾಸುಗಳ ಕಾರ್ಯಕ್ರಮದಲ್ಲಿ ಪ್ರತೀ ಹಾಡುಗಳ ಮೊದಲಿಗೆ ಅರ್ಥಪೂರ್ಣವಾದ ಮತ್ತು ಮುನ್ನುಡಿ ಎನ್ನುವಂತಹ ನಿರೂಪಣೆಯನ್ನು ಕೃಷ್ಣ ಅರಸ್ ರವರು ಕರ್ನಾಟಕ ಸಂಗೀತದ ಹಾಡುಗಳಿಗೆ ನೀಡಿದರೆ, ಪ್ರಶಾಂತ್ ಬೀರೂರ್ ರವರು ಭಾವಗೀತೆಗಳಿಗೆ ನೀಡಿದರು. ಕವಿಯ ಪರಿಚಯ, ಕಾವ್ಯದ ಅರ್ಥ, ದಾಸರ ಸಾರ್ಥಕ ಜೀವನ, ವಚನಕಾರರ ಶಕ್ತಿ ಹೀಗೆ ಪ್ರತಿಯೊಂದನ್ನು ವಿವರಿಸಿದ್ದು ಕೇಳುಗರನ್ನು ಹಾಡಿನ ಕಡೆಗೆ ಆಸಕ್ತಿ ಹೆಚ್ಚಿಸುವಂತೆ ಮಾಡಿತ್ತು.


ಕರ್ನಾಟಕ ಸಂಗೀತ ಮತ್ತು ಭಾವಗೀತೆಗಳು ಒಂದರ ನಂತರ ಒಂದರಂತೆ ಕೇಳಿಸುತ್ತಿದ್ದರೆ, ನಮಗೆ ತಿಳಿಯದೆ ಅದು ಜುಗಲ್ ಬಂದಿಯಂತೆ ಆಗಿತ್ತು. ಸ್ವಾಮಿ ಚಿನ್ಮಯಾನಂದ ಸರಸ್ವತಿಯವರ "ಹಂಸಯುಕ್ತ" ಹಾಡು, ಪುರಂದರ ದಾಸರ "ಜಗದೋದ್ಧಾರನ ಆಡಿಸಿದಳ್ ಯಶೋಧೆ", ಎಲ್ಲಾ ದೇವಿಯನ್ನು ನೆನೆಸುವ "ದೀನ ದಯಾಪರಿ ಪೂರ್ಣಕಟಾಕ್ಷಿಣಿ", ಪುರಂದರ ದಾಸರು ಬರೆದಿರುವ ಎಲ್ಲಾ ಕೀರ್ತನೆಗೆ ಕಳಸವಿಟ್ಟಂತಿರುವ "ದಾಸನ ಮಾಡಿಕೋ ಎನ್ನ", ವಚನ ಶ್ರೇಷ್ಠ ಬಸವಣ್ಣನ ವಚನಗಳು, ಉತ್ತರ ಭಾರತದ ಸಂತ ಭಾನು ದಾಸನ ಪಂಕ್ತಿ, ಮತ್ತೊಂದು ದಾಸರ ಪದವಾಗಿ "ನಾರಾಯಣ ಹರಿ ಗೋವಿಂದ" ಎಂದು ಕೇಳುತ್ತಿದ್ದರೆ ನಮಗೆ ಗೊತ್ತಿಲ್ಲದೆ ನಾವು ದೇವರ ಪಾದಕ್ಕೆ ಎರಗಿದ್ದೆವು. ಕರ್ನಾಟಕ ಸಂಗೀತ ಸಾಮಾನ್ಯರಿಗಲ್ಲ ಎನ್ನುವ ಮಾತು ಸುಳ್ಳು ಮಾಡಿ, ಎಲ್ಲರನ್ನು ವಿಜಯ ಅಯ್ಯರ್ ರವರು ಮೋಡಿ ಮಾಡಿದರು.

ಕವಿ ನಿಸಾರ ಅಹಮದ್ ರವರ "ಜೋಗದ ಸಿರಿ ಬೆಳಕಿನಲ್ಲಿ" ಹಾಡು ಕನ್ನಡಿಗರನ್ನು ಭಾವಪರವಶನನ್ನಾಗಿ ಮಾಡಿತು. ನಮ್ಮ ಮೆಚ್ಚಿನ ಕವಿ ಕುವೆಂಪು ರವರು "ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ" ಎಂದು ನಮ್ಮನ್ನು ಕರೆದರು, ಕನ್ನಡ ನಾಡಿನ ಗಾರುಡಿಗ, ಕನ್ನಡವನ್ನು ಕೈ ಬೆರಳಲ್ಲಿ ಕುಣಿಸಿದ ಮಾಂತ್ರಿಕ ದ ರಾ ಬೇಂದ್ರೆಯವರ ಸುಂದರ ಗೀತೆಯನ್ನು ಕೇಳಿಸಿ ನಮ್ಮನ್ನು ಮನಸ್ಸಿನಲ್ಲೆ ಕುಣಿಸಿದರು, "ರಾಯರು ಬಂದರು ಮಾವನ ಮನೆಗೆ" ಎಂದು ಪ್ರೇಮಕವಿ ಕೆ ಎಸ್ ನರಸಿಂಹ ಸ್ವಾಮಿಯವರನ್ನು ಕರೆದುಕೊಂಡು ಬಂದರು. "ಯಾವ ಮೋಹನ ಮುರಳಿ ಕರೆಯಿತೊ" ಎಂದು ಹಾಡುತ್ತಾ, ದೇಶ ಬಿಟ್ಟು ಬಂದ ಎಲ್ಲರನ್ನು ಚಿವುಟಿದರು ಅಡಿಗರು. ಕುವೆಂಪುರವರನ್ನು ಪ್ರೇಮ ಕಾಶ್ಮೀರದಿಂದ ಕರೆತಂದು ನಂತರ ಮಂಕುತಿಮ್ಮನ ಕಗ್ಗ ಹೇಳುತ್ತಾ ಜೀವನವನ್ನು ನಮ್ಮ ಶ್ರೋತೃಗಳ ಮುಂದೆ ಹಾಡಿನ ಮೂಲಕ ತೋರಿಸಿಕೊಟ್ಟವರು ರೋಹಿಣಿ ಮೋಹನ್ ರವರು.

Kannada music evening in Dar Es Salaam, South Africa

ಒಂದು ಕಡೆ ಕರ್ನಾಟಕ ಸಂಗೀತ ಇನ್ನೊಂದು ಕಡೆ ಭಾವಗೀತೆ, ಒಂದು ಶಾಸ್ತ್ರೀಯ ಸಂಗೀತವಾದರೆ ಇನ್ನೊಂದು ಸುಶ್ರಾವ್ಯ ಸಂಗೀತ. ಒಂದರ ನಂತರ ಇನ್ನೊಂದು ಕೇಳುತ್ತಿದ್ದರೆ, ಕೇಳುಗರಿಗೆ ಹಬ್ಬದೂಟ! ಕಾರ್ಯಕ್ರಮದ ಎಲ್ಲಾ ಓರೆ ಕೋರೆಗಳನ್ನು ನೇರವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದ ಪ್ರಸನ್ನರವರು ಸುಮಧುರ ಸಂಜೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡಿದರು. ಎಲ್ಲ ಮುಗಿದ ಮೇಲೆ ಉತ್ತಮ ಭೋಜನದ ವ್ಯವಸ್ಥೆ ಇತ್ತು. ಸಂಗೀತದ ರಸದೌತಣದ ಜೊತೆಗೆ ಭೋಜನವನ್ನೂ ಮುಗಿಸಿ ಮನೆಗೆ ಹೋಗುವ ಎಲ್ಲರಿಗೂ ಒಂದು ಸುಂದರ ಸಂಜೆ ನೆನಪು ತಲೆಯಲ್ಲಿ ತುಂಬಿತ್ತು. ಜೀವನದಲ್ಲಿ ಮರೆಯಲಾಗದ ಒಂದು ಸಂಜೆಯಾಗಿ ಬಂದವರನ್ನೆಲ್ಲಾ ಆವರಿಸಿತ್ತು.
English summary
Kannada enthusiasts had organized Kannada music evening in Dar Es Salaam, Tanzania, South Africa recently. Singers Rohini Mohan and Vijaya Aiyer sung written by many eminent Kannada poets. Report by Prashanth Birur (Beechi).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X