ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗ ಸಂಭ್ರಮ - ಬಾಸ್ಟನ್ ನಲ್ಲಿ ಕನ್ನಡ ನಾಟಕೋತ್ಸವ

By ಮಧುಸೂದನ್ ಅಕ್ಕಿಹೆಬ್ಬಾಳ್
|
Google Oneindia Kannada News

ಅಮೆರಿಕಾದ ಬಾಸ್ಟನ್ ಬಳಿಯ ಲಿಟ್ಟಲ್ಟನ್ ಹೈಸ್ಕೂಲ್ ನಲ್ಲಿ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ರಂಗತರಂಗ ಬಾಸ್ಟನ್ ಅವರು ಜೊತೆಗೂಡಿ ಅರ್ಪಿಸಿದ ಭರ್ಜರಿ ನಾಟಕೋತ್ಸವ "ರಂಗ ಸಂಭ್ರಮ" ಇತ್ತೀಚೆಗೆ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು.

ನಾಟಕದ ಈ ನೂತನ ವೇದಿಕೆ ಬಾಸ್ಟನ್ ಕನ್ನಡಿಗರಿಗೆ ಒಂದು ಹೊಸ ಅನುಭವ ಕೊಟ್ಟಿತು. ಅತ್ಯುತ್ತಮ ರಂಗಸಜ್ಜಿಕೆ, ಧ್ವನಿ ವ್ಯವಸ್ಥೆ, ಬೆಳಕು, ಹಿನ್ನೆಲೆ ಸಂಗೀತ, ಪಾತ್ರಕ್ಕೆ ತಕ್ಕ ಉಡುಪುಗಳು ಮತ್ತು ಪ್ರೇಕ್ಷಕರನ್ನು ಹಿಡಿದಿಟ್ಟ ನಾಟಕಗಳು ಮತ್ತು ಅಭಿನಯ - ಇವೆಲ್ಲಾ ರಂಗ ಸಂಭ್ರಮದ ಮುಖ್ಯ ಆಕರ್ಷಣೆಗಳು! ನಾನೂರಕ್ಕೂ ಹೆಚ್ಚಿನ ಜನ ವೀಕ್ಷಿಸಿದ ಈ ವಿನೂತನ ಕನ್ನಡ ನಾಟಕೋತ್ಸವದ ಮೂರೂ ನಾಟಕಗಳು ಬಾಸ್ಟನ್ ಕನ್ನಡಿಗರ ಮನ ಸೆಳೆದವು.

Kannada drama festival held in Boston, USA

ಕಾರ್ಯಕ್ರಮ ನಿರೂಪಕರಾದ ರಾಮನಾಥ್ ಮತ್ತು ಮಮತಾ ಕೂಡ್ಲುಗಿ ಅವರ ಸ್ವಾಗತದ ನಂತರ ಅರ್ಚನಾ ಪುರೋಹಿತ್ ಮತ್ತು ನೇಹಾ ಪ್ರಸಾದ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಪ್ರಾರಂಭ. ಸುಗಮ ಸಂಗೀತ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮೈಸೂರಿನ ಪ್ರೊ. ಮಲ್ಲಣ್ಣ ಅವರಿಂದ ಕನ್ನಡ ರಂಗಭೂಮಿಯ ಕಿರು ಪರಿಚಯದ ನಂತರ ಕೆಲವು ಜನಪ್ರಿಯ ಹಾಡುಗಳು.
Kannada drama festival held in Boston, USA

ನಾಟಕ ಬಿಟ್ಟಿ ಭವಿಷ್ಯ : ಮೊದಲನೇ ನಾಟಕ ಬಾಸ್ಟನ್ ಗಾಂಪರ ಗುಂಪು ತಂಡದ "ಬಿಟ್ಟಿ ಭವಿಷ್ಯ". ಹನಿಗವಿ ಎಚ್. ಡುಂಡಿರಾಜ ಅವರ ಈ ನಾಟಕದ ವಿಶೇಷ ಅಂದರೆ ದೂರದರ್ಶನ ಸ್ಟುಡಿಯೋದಿಂದ ಮನೆ ಮನೆಗೆ ಬಿತ್ತರವಾಗುವ ಜ್ಯೋತಿಷ್ಯ ಕಾರ್ಯಕ್ರಮದ ವಿಡಂಬನೆ. ಉತ್ತಮ ರಂಗಸಜ್ಜಿಕೆ, ಶೀರ್ಷಿಕೆ ಗೀತೆ, ವೇಷ ಭೂಷಣ, ತಿಳಿ ಹಾಸ್ಯಭರಿತ ನಾಟಕ ಪ್ರೇಕ್ಷಕರ ಮನ ತಣಿಸಿತು. ನಿತ್ಯ ಜೀವನದಲ್ಲಿ ಕಾಣುವ ವಿವಿಧ ಪಾತ್ರಗಳ ಮೂಲಕ, ಜ್ಯೋತಿಷ್ಯವನ್ನು ಅತಿಯಾಗಿ ನಂಬುವವರ ಬಗೆಗಿನ ಈ ನಾಟಕ ನಿರ್ದೇಶಿಸಿದವರು ಚನ್ನಬಸವನ ಗೌಡ ಅವರು.
Kannada drama festival held in Boston, USA

ನಾಟಕ ಜಡೆ ಮಾರ್ನಳ್ಳಿ ಜ್ವಾಲೆ : ನಂತರ, ಮಧು ಮತ್ತೀಹಳ್ಳಿ ಮತ್ತು ಕಿರಣ ಅಡ್ಕೋಳಿ ಅವರಿಂದ ರಚಿಸಲ್ಪಟ್ಟು, ಅವರೇ ನಿರ್ದೇಶಿಸಿದ "ಜಡೆ ಮಾರ್ನಳ್ಳಿ ಜ್ವಾಲೆ" ಅನ್ನುವ ನಾಟಕ ಪ್ರದರ್ಶಿತವಾಯಿತು. ಈ ನಾಟಕ ಹಿಂದಿಯ ಅತ್ಯಂತ ಜನಪ್ರಿಯ ಚಿತ್ರ "ಶೋಲೆ" ಅನ್ನು ನೆನಪಿಸಿತು.

ಆ ಚಿತ್ರವನ್ನು ಆಧಾರವಾಗಿಟ್ಟುಕೊಂಡು ನಗೆಭರಿತ ನಿರೂಪಣೆ ಮಾಡಿದ ಈ ನಾಟಕದಲ್ಲಿ ಕಿರಿಯರೂ ಪಾತ್ರವಹಿಸಿದ್ದು ಒಂದು ವಿಶೇಷ. ಒಂದು ದೊಡ್ಡ ಪರದೆಯ ಮುಂದೆ ನಡೆದ ನಾಟಕದಲ್ಲಿ ಆ ಪರದೆಯ ಮೇಲೆ ಸನ್ನಿವೇಶಕ್ಕೆ ತಕ್ಕ ಚಿತ್ರ ಅಥವಾ ವಿಡಿಯೋ ತುಣುಕು ಮೆರಗು ನೀಡಿತು. ಜನರ ಮೆಚ್ಚುಗೆ ಪಡೆದ ಈ ನಾಟಕವನ್ನು ಜಂಟಿಯಾಗಿ ಪ್ರಸ್ತುತಪಡಿಸಿದವರು ನ್ಯೂ ಇಂಗ್ಲೆಂಡ್ ನಾಲಾಯಕರು ಮತ್ತು ನಟಲೋಕ ತಂಡದವರು.

Kannada drama festival held in Boston, USA

ನಾಟಕ ಪುಟ್ಟ ಮಲ್ಲಿಗೆ ಎಸ್ಟೇಟ್ : ಹದಿನೈದು ವರ್ಷಗಳಿಂದ ನ್ಯೂ ಇಂಗ್ಲೆಂಡ್ ನಲ್ಲಿ ಕನ್ನಡ ನಾಟಕಗಳನ್ನು ಪ್ರದರ್ಶಿಸಿರುವ ರಂಗತರಂಗ ಬಾಸ್ಟನ್ ಅವರಿಂದ ಈ ಕಾರ್ಯಕ್ರಮದ ಮೂರನೇ ಹಾಗು ಕಡೆಯ ನಾಟಕ. ಈ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ರಂಗತರಂಗ ಬಾಸ್ಟನ್ ತಂಡದವರು ಕ್ಯಾಲಿಫೋರ್ನಿಯಾದ ಕೆ.ವಿ. ರಾಮ ಪ್ರಸಾದ್ ಅವರ ನಾಟಕವನ್ನು ಪ್ರಸ್ತುತ ಪಡಿಸಿದರು. ಕುತೂಹಲಕಾರಿ, ರೋಮಾಂಚನಕಾರಿ ವಸ್ತುವುಳ್ಳ "ಪುಟ್ಟ ಮಲ್ಲಿಗೆ ಎಸ್ಟೇಟ್" ನಾಟಕದ ಭವ್ಯ ರಂಗಸಜ್ಜಿಕೆ (ಟೀ ಎಸ್ಟೇಟ್ ದೊಡ್ಡ ಮನೆಯ ಪ್ರಾಂಗಣ) ಎಲ್ಲರ ಮನ ಸೆಳೆಯಿತು.
Kannada drama festival held in Boston, USA

ಪ್ರಕಾಶ್ ಪುರೋಹಿತ್ ಅವರ ನಿರ್ದೇಶನದ ನಾಟಕದಲ್ಲಿ ಪಾತ್ರಗಳ ವೇಷ ಭೂಷಣ, ಅಭಿನಯ, ಬೆಳಕು, ಹಿನ್ನೆಲೆ ಸಂಗೀತ ಮತ್ತು ಶೀರ್ಷಿಕೆ ಗೀತೆಗಳು (ಸಾಹಿತ್ಯ - ಮಧುಸೂದನ್ ಅಕ್ಕಿಹೆಬ್ಬಾಳ್, ರಾಗ ಸಂಯೋಜನೆ ಮತ್ತು ಗಾಯನ - ಸೌಮ್ಯಶ್ರೀ ಸಂದೀಪ್ ಮತ್ತು ಸಂಗೀತ - ವಿಕಾಸ್ ವಸಿಷ್ಠ) ಜನಮನ ಗೆದ್ದವು.

ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಅಧ್ಯಕ್ಷರಾದ ಸುಧಾಕರ ರಾವ್ ಮತ್ತು ರಂಗತರಂಗ ಬಾಸ್ಟನ್ ನ ಅಧ್ಯಕ್ಷರಾದ ಪ್ರಕಾಶ್ ಪುರೋಹಿತ್ ಅವರಿಂದ ವಂದನಾರ್ಪಣೆ ನಡೆಯಿತು. ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಹಲವಾರು ಕಾರ್ಯಕರ್ತರು ಬಹಳ ಶ್ರಮ ಪಟ್ಟಿದ್ದಾರೆ, ಹಲವು ಪ್ರಾಯೋಜಕರು ಸಹಾಯ ಮಾಡಿದ್ದಾರೆ ಮತ್ತು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ - ಇವೆರೆಲ್ಲರಿಗೂ ಧನ್ಯವಾದ ಅರ್ಪಿಸಲಾಯಿತು.

Kannada drama festival held in Boston, USA

ಉಷಾ ರಾವ್ ಅವರ ಮುಂದಾಳತ್ವದಲ್ಲಿ ಸಂಯೋಜಿಸಲ್ಪಟ್ಟ, ಕನ್ನಡ ರಂಗ ಭೂಮಿಯ ವಸ್ತುವನ್ನು ಆಧರಿಸಿದ ಅಲಂಕಾರ ವ್ಯವಸ್ಥೆ ಎಲ್ಲರಿಗೂ ಬಹಳ ಹಿಡಿಸಿತು. ಒಟ್ಟಿನಲ್ಲಿ, ಬಾಸ್ಟನ್ ಕನ್ನಡಿಗರಿಗೆ ಮೊದಲ ಬಾರಿ ಒಂದು ಯಶಸ್ವಿ, ವಿನೂತನ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬಂದಿತು.

ರಂಗ ಸಂಭ್ರಮ ಸಂಚಾಲಕ ತಂಡ : ಸುಧಾಕರ ರಾವ್, ಪ್ರಕಾಶ್ ಪುರೋಹಿತ್, ಮಧುಸೂದನ್ ಅಕ್ಕಿಹೆಬ್ಬಾಳ್, ರಾಜಣ್ಣ ಹೆಗ್ಗಡಹಳ್ಳಿ, ವರವಾಣಿ ದ್ವಾರಕಿ, ಮಧು ಮತ್ತೀಹಳ್ಳಿ, ಶ್ರೀನಿವಾಸ್ ಅಂಬಾಟಿ, ನಿಖಿಲಾ ಅಂಬಾಟಿ, ಎನ್. ಬಿ. ಪಾಟೀಲ್, ರಾಮ್ ಗೋಪಾಲ್ ದೇಶಪಾಂಡೆ, ಗೀತಾ ಸೆಟ್ಟಿ, ರಘು ಮಾವಿನಹಳ್ಳಿ, ಕವಿತಾ ಚಂದ್ರನ್, ನಾಗೇಂದ್ರ ರಾವ್, ರವಿ ಕುಮಾರ್.

English summary
Various troups in Boston, USA presented Kannada plays in a Kannada drama festival conducted by Mandara New England Kannada Koota and Rangataranga. The festival was huge success, humorous Kannada plays were played and witnessed by many Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X