ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಹರೇಶ್ವರ ಬಿತ್ತಿಹೋದ ಅಳಿಯದ ಕನ್ನಡತನವೆಂಬ ಬೆಳೆ

By ಅಹಿತಾನಲ, ಅಮೆರಿಕಾ
|
Google Oneindia Kannada News

ಕುವೆಂಪು, ಅವರ "ಕನ್ನಡವೆ ಸತ್ಯ, ಕನ್ನಡವೆ ನಿತ್ಯ..." ಎಂಬ ಕವನದ ಸಾಲನ್ನು ಬರೆಯುವಾಗ, ಶಿಕಾರಿಪುರ ಹರಿಹರೇಶ್ವರಂಥವರನ್ನೇ ಗಮನದಲ್ಲಿ ಇಟ್ಟುಕೊಂಡಿರಬೇಕು. ಹರಿಹರೇಶ್ವರರಿಗೆ - ಕನ್ನಡವೇ ಸತ್ಯ ಹಾಗೂ ನಿತ್ಯ - ಎಂಬುದಂತೂ ನಿಜ! ಅಮೆರಿಕದಲ್ಲಿ ಕನ್ನಡ ಪ್ರಜ್ಞೆಯನ್ನು ಹೊಡೆದೆಬ್ಬಿಸಿದ ವೀರ ಕನ್ನಡಿಗ, ಅವರು. ಜುಲೈ 22, 2010ರಂದು ಅವರು ಮೈಸೂರಿನಲ್ಲಿ ಸ್ವರ್ಗಸ್ಥರಾದರು. ಆದರೆ, ಅಮೆರಿಕನ್ನಡಿಗರ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದ ಅಮರ ವೀರ, ಹರಿಹರೇಶ್ವರರು!

ಅಮೆರಿಕನ್ನಡ ಸಂಚಿಕೆಗಳಿಗೆ ಕಂಪ್ಯೂಟರ್ ತಂತ್ರಾಂಶದ ಕಾಣಿಕೆಅಮೆರಿಕನ್ನಡ ಸಂಚಿಕೆಗಳಿಗೆ ಕಂಪ್ಯೂಟರ್ ತಂತ್ರಾಂಶದ ಕಾಣಿಕೆ

ಅವರು ನಡೆಸಿಕೊಂಡು ಬಂದ "ಅಮೆರಿಕನ್ನಡ" ದ್ವೈಮಾಸಿಕ ಮ್ಯಾಗಜಿನ್ ಅವರನ್ನು ಅಮರರನ್ನಾಗಿ ಮಾಡಿದೆ, ಈಗ ಅವರು ಭೌತಿಕವಾಗಿ ನಮ್ಮನ್ನಗಲಿದ್ದರೂ! ಎಷ್ಟೊಂದು ಹವ್ಯಾಸೀ ಬರಹಗಾರರಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಕೆರಳಿಸಿ, ಪ್ರೋತ್ಸಾಹಿಸಿ, ಅವರಿಂದ ಲೇಖನಗಳನ್ನು ಬರೆಸಿ, "ಅಮೆರಿಕನ್ನಡ"ದಲ್ಲಿ ಪ್ರಕಟಿಸಿ, ಅಮೆರಿಕದಲ್ಲಿ ಕನ್ನಡದ ಅಪಾರ ಸೇವೆ ಮಾಡಿದವರಲ್ಲಿ ಮೊದಲಿಗರು ಎಂದರೆ ಅತಿಶಯೋಕ್ತಿಯಾಗಲಾರದು. ಅವರಿಂದಾಗಿ, ಎಷ್ಟೋ ಅಮೆರಿಕನ್ನಡಿಗರಲ್ಲಿ ಸುಪ್ತವಾಗಿ ಅಡಗಿ ಕುಳಿದಿದ್ದ "ಪ್ರತಿಭೆ" ಪ್ರಕಟವಾಗಲು ಅವಕಾಶ ದೊರಕಿತ್ತು.

Harihareshwara the power behind Kannada in America

ಕನ್ನಡಿಗರು ಆ ಬಗ್ಗೆ ಹರಿಹರೇಶ್ವರರಿಗೆ ಎಷ್ಟು ಕೃತಜ್ಞತೆ ನೀಡಿದರೂ ಅದು ಕಡಿಮೆಯೇ! ಆದರೆ, ಅಮೆರಿಕನ್ನಡಿಗರ ದುರಾದೃಷ್ಟವೆಂಬಂತೆ "ಅಮೆರಿಕನ್ನಡ" ದ್ವೈಮಾಸಿಕ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಬೇಕಾಯ್ತು. ಅದರಿಂದಾಗಿ, ಹರಿಹರೇಶ್ವರರು ಆರ್ಥಿಕವಾಗಿ "ಕೈ ಸುಟ್ಟು"ಕೊಂಡಿದ್ದರು. ಆದರೂ ಅವರಿಗೆ ತಮಗಾದ ಆರ್ಥಿಕ ನಷ್ಟದ ಬಗ್ಗೆ ಪಶ್ಚಾತ್ತಾಪವಿಲ್ಲ. ಕಾರಣ, ಆರ್ಥಿಕ ನಷ್ಟಕ್ಕಿಂತಲೂ ತಮ್ಮಿಂದ ಕಿಂಚಿತ್ತಾದರೂ ಕನ್ನಡ ಸೇವೆ ನಡೆಯಿತು ಎಂಬ "ಆತ್ಮತೃಪ್ತಿ" ಅವರಿಗೆ ಅಗಾಧ moral support ಕೊಟ್ಟಿತ್ತು! ಅಮೆರಿಕದಲ್ಲಿ ಒಂದು ಬಗೆಯ ಸಾಹಿತ್ಯಿಕ ಕ್ರಾಂತಿಗೆ ಹರಿಕಾರರಾಗಿದ್ದರು ಹರಿಯವರು!

ವೃತ್ತಿಯಲ್ಲಿ ಅವರೊಬ್ಬ ಇಂಜಿನಿಯರ್. ಆದರೆ, ಸಮಾಜ ಸೇವೆ, ಕನ್ನಡ ಸೇವೆ ಅವರ ಪ್ರವೃತ್ತಿಯಾಗಿತ್ತು. ಅವರೊಬ್ಬ ಮಹಾ ಮಾತುಗಾರರು! ಅವರ ಮಾತಿನಲ್ಲಿ ಸಿಗುವ ತಿರುಳು ಅರಗಿಸಿಕೊಳ್ಳುವಂಥದು! ಅವರು ಬರೆದ, "ಮಾತಿನ ಮಂಟಪ", "ಮಾತಿನ ಚಪ್ಪರ", "ಮಾತಿನ ಚಾವಡಿ", "ಮಾತಿನ ಮಲ್ಲಿಗೆ", "ಮಾತೇ ಮುತ್ತು", ಇತ್ಯಾದಿ ಗ್ರಂಥಗಳೇ ಈ ಮಾತಿಗೆ ಸಾಕ್ಷಿ! ಅವರ ಆತ್ಮಕತೆ, "ಮೌನ ಮಾತಾಡಿದಾಗ"ದಲ್ಲಿ ಮೌನಕ್ಕೂ ಮಾತು ಜೋಡಿಸಿದ್ದಾರೆ. ಅವರ ಅಗಲುವಿಕೆಯಿಂದ ಕವಿದ "ಮೌನ" ನಮ್ಮ ಮನಸ್ಸಿನಲ್ಲಿ ಮಾತುಗಳನ್ನು ಹುಟ್ಟಿಸಿದೆ! ಅವರು ಪ್ರಕಟಿಸಿದ ಇತರ ಗ್ರಂಥಗಳೂ - ಉದಾ., "ವಿದೇಶಕ್ಕೆ ಬಂದವರು", "ಕನ್ನಡ ಉಳಿಸಿ ಬೆಳಸುವ ಬಗೆ", ಇತ್ಯಾದಿ - ಓದುಗರ ಮೆಚ್ಚುಗೆ ಪಡೆದಿವೆ. ಅವರು ಬರೆದಿಟ್ಟ ಹಲವು ಗ್ರಂಥಗಳನ್ನು ಅವರು ತೀರಿಕೊಂಡ ಮೇಲೆ ಪ್ರಕಟಿಸಿದವರು, ಅವರ ಸಹಧರ್ಮಿಣಿ, ನಾಗಲಕ್ಷ್ಮೀಯವರು.

Harihareshwara the power behind Kannada in America

ಹರಿಹರೇಶ್ವರರು ಬದುಕಿರುತ್ತಿದ್ದರೆ, ಈ ವರ್ಷ ಅವರಿಗೆ 80 ತುಂಬುತ್ತಿತ್ತು. ತಮ್ಮ ಸಹಸ್ರ ಚಂದ್ರ ದರ್ಶನದ ದಿನವನ್ನು ನೋಡುವ ಭಾಗ್ಯವಿಲ್ಲದಿದ್ದರೂ, ಅವರ ಅಪಾರ ಹಿತಾಸಕ್ತರಿಗೆ ಆ ದಿನಾಚರಣೆ ಮಾಡಿ ಸಂತೋಷಪಡುವ ಅವಕಾಶ ದೊರಕಿತ್ತು. ಅಮೆರಿಕಕ್ಕೆ ಭೇಟಿಕೊಟ್ಟ ಅವರ ಧರ್ಮಪತ್ನಿ ಈ ಅವಕಾಶ ಸಿಗುವುದರಲ್ಲಿ ಕಾರಣರಾಗಿದ್ದರು. ಭಾರತದಲ್ಲಿ, ಕಳೆದ ಮಾರ್ಚ್(2016)ನಿಂದ ಈ ವರ್ಷ ಮಾರ್ಚ್(2017)ರವರೆಗೂ ಹರಿಹರೇಶ್ವರರ ನೆನಪಿನಲ್ಲಿ ಅನೇಕ ಸಂಕಿರಣಗಳನ್ನು ಏರ್ಪಡಿಸಿ, ಇದೀಗ ಅಮೆರಿಕದಲ್ಲಿಯೂ ಹಲವೆಡೆ ಆ ಯೋಜನೆಯನ್ನು ಕೈಗೂಡಿಸುವುದರಲ್ಲಿದ್ದಾರೆ. ಅವರು ಕೀರ್ತಿಶೇಷರಾದ ಜುಲೈ 22ರಂದು, ಕ್ಯಾಲಿಫೋರ್ನಿಯಾದ ಪಮೋನದಲ್ಲಿ ವಾಸಿಸುತ್ತಿರುವ ಶ್ರೀನಿವಾಸ ಮತ್ತು ಶಾರದಾ/ಸುಮಾ ಭಟ್ಟರ ಮನೆಯಲ್ಲಿ ಅಂಥದೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿದುದು ನನ್ನ ಅದೃಷ್ಟವೆಂದೇ ತಿಳಿದಿರುತ್ತೇನೆ. ಅವರ ಬಗ್ಗೆಯ ಒಂದು ಗ್ರಂಥ, "ಹರಿ"ಯ ಮರು ಬಿಡುಗಡೆಯೂ ನಡೆದಿತ್ತು. ಅದರಲ್ಲಿ ಹರಿಯವರ ಬಗ್ಗೆ ಹಲವರು ತಮ್ಮ-ತಮ್ಮ ಅಭಿಪ್ರಾಯ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕೃತಿಗಳ ಬಗ್ಗೆ ಸೇರಿದ ಹಲವರು ಮಾತಾಡಿದರು. ಅದೊಂದು ಹರಿಹರೇಶ್ವರರಿಗೆ ಸಲ್ಲುವ ವಿಶೇಷ ಶ್ರದ್ಧಾಂಜಲಿಯೂ ಹೌದು.

ನಾನು ಅವರ ಮೈಸೂರಿನ ಮನೆಗೊಮ್ಮೆ ಭೇಟಿಕೊಟ್ಟಾಗ, ಅವರೊಂದು ಗ್ರಂಥ ನನಗೆ ಕೊಟ್ಟಿದ್ದರು - ಡಾ. ರಾಜಶೇಖರ ಅವರ "ಜನಪದ ಮಹಾಭಾರತ". ಅದರಲ್ಲೊಂದು ಕವನ ಹೀಗಿದೆ:

ಸತ್ಯವಂತ ಪಾಂಡವರು ಸತ್ತರೆಂದೆನಬ್ಯಾಡಿ
ಸತ್ತರೆ ಲೋಕ ಉಳಿಯಾವು - ಪಾಂಡವರು
ಬಿತ್ತಿ ಹೋಗವ್ರೆ ಅವರೆಯ

(ಇಲ್ಲಿ 'ಅವರೆ' ಎಂಬ ಶಬ್ದ ಗಮನೀಯವಾದುದು. ಅವರೆ ಹಳ್ಳಿಯಲ್ಲಿ ಬೆಳೆಯುವ ಬೆಳೆ. ಇಲ್ಲಿ ಜಾನಪದದ ಗ್ರಂಥದಲ್ಲಿ ಆ ಶಬ್ದ ಪ್ರಯೋಗ significant. ಆ ಧಾನ್ಯದಲ್ಲಿ ಸುಮಾರಾಗಿ ಐದು ಅವರೆ ಕಾಳಿರುವುದೂ (ಪಂಚಪಾಂಡವರು) ಗಮನೀಯ.

Harihareshwara the power behind Kannada in America

ಹರಿಹರೇಶ್ವರರ ನಿಧನದ ವಾರ್ತೆ ಕೇಳಿದ ನನ್ನಲ್ಲಿ ಅದ್ಯಾಕೋ ಮೇಲಿನ ಕವನ ನೆನಪಾಯ್ತು. ನಾನು ಅದನ್ನು ಈ ಕೆಳಗಿನಂತೆ ಬದಲಿಸಿದ್ದೆ:

ಸತ್ಯವಂತ ಹರಿಯವರು ಸತ್ತರೆಂದೆನಬ್ಯಾಡಿ
ಸತ್ತರೆ ಕನ್ನಡ ಉಳಿಯಾವು - ಅಮೆರಿಕದಲ್ಲಿ
ಬಿತ್ತಿಹೋಗವ್ರೆ ಅವ್ರು ಕನ್ನಡವ

ಇಲ್ಲಿ ಹರಿಹರೇಶ್ವರರ ಕನ್ನಡ ಪ್ರೀತಿ, ಅಪ್ಪಟ ಸತ್ಯ! ಅವರು "ಸತ್ತು"ಹೋದರು ಅಂತ ತಿಳಿಯದೆ, ಅವರು ಬಿತ್ತಿಹೋದ ಕನ್ನಡತನ"ವೆಂಬ ಬೆಳೆ ಅಳಿಯದೇ ಉಳಿದು, ಬೆಳೆದು ಬರಲಿ ಎಂಬ ಆಕಾಂಕ್ಷೆ ವ್ಯಕ್ತವಾಗಿದೆ. ಭೌತಿಕವಾಗಿ ಹರಿಹರೇಶ್ವರ ನಮ್ಮ ಮಧ್ಯೆ ಇಲ್ಲದಿದ್ದರೂ, ನಮ್ಮ ಸ್ಮರಣೆಯಲ್ಲಿ ಅವರು ಬಿತ್ತಿ ಹೋದ "ಕನ್ನಡತನ"ದ ಮೂಲಕ ಇನ್ನೂ ಉಳಿದಿದ್ದಾರೆ! ಆ ಸ್ಮರಣೆಗೆ ಸಾವೆಂಬುದಿಲ್ಲ!

ಹರಿಸ್ಮರಣೆ ಮತ್ತು "ಹರಿ" ಗ್ರಂಥ ಮರುಬಿಡುಗಡೆ ಸಮಾರಂಭ : ಶ್ರೀನಿವಾಸ ಭಟ್ಟರ ನೇತೃತ್ವದಲ್ಲಿ, ಸುಮಾ ಭಟ್ಟರಿಂದ ಪ್ರಾರ್ಥನೆಯೊಂದಿಗೆ, ಹರಿಹರೇಶ್ವರರು ನಿಧನರಾದ ಪುಣ್ಯತಿಥಿಯಂದು, (ಜುಲೈ 22) ಹರಿಯವರ ಸಾಧನೆಗಳನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿಯನ್ನು ನೀಡಲಾಯ್ತು. ಅದೇ ಸಮಯ ನಾಗಲಕ್ಷ್ಮೀ ಹರಿಹರೇಶ್ವರರು ಸಂಪಾದಿಸಿದ "ಹರಿ" ಗ್ರಂಥವನ್ನೂ ಮರುಬಿಡುಗಡೆ ಮಾಡಲಾಯ್ತು.

Harihareshwara the power behind Kannada in America

ಬಿಡುಗಡೆ ಮಾಡಿದ ನಾಗ ಐತಾಳರು, ಅಮೆರಿಕದಲ್ಲಿ ಕನ್ನಡ ಪ್ರಜ್ಞೆಯನ್ನು ಹೊಡೆದೆಬ್ಬಿಸಿದ ಹರಿಯವರ ಹಲವು ಸಾಧನೆಗಳನ್ನು ವಿವರಿಸಿದರು. ಡಾ| ವಿಶ್ವೇಶ್ವರ ದೀಕ್ಷಿತರು ಮಾತನಾಡುತ್ತ, ತಮ್ಮ-ಹರಿಯವರೊಳಗಿನ ನಿಕಟ ಸಂಬಂಧಗಳನ್ನು ನೆನೆದು, ಅವರಿಗೆ ಶ್ರದ್ಧಾಂಜಲಿಯನ್ನರ್ಪಿಸಿದರು. ಸಭೆಯಲ್ಲಿ ಉಪಸ್ಥಿತರಾದ ರಮೇಶ ಬಸವಪಟ್ಟಣರೂ ಹರಿಯವರು ಅಮೆರಿಕದಲ್ಲಿ ಕನ್ನಡ ಬೆಳವಣಿಗೆಗೆ ಮಾಡಿದ ಹಲವು ಕಾರ್ಯಗಳನ್ನು ಸ್ಮರಿಸಿದರು.

ನಾಗಲಕ್ಷ್ಮಿಯವರು ಮಾತನಾಡುತ್ತ, ಹರಿಯವರು ಕಂಪ್ಯೂಟರ್‌ನಲ್ಲಿ ಬರೆದಿಟ್ಟ ಹಲವಾರು ಗ್ರಂಥಗಳನ್ನು ಪರಿಷ್ಕರಿಸಿ, ಅವನ್ನೆಲ್ಲಾ (17 ಗ್ರಂಥಗಳು) ಪ್ರಕಟಿಸಿದ ವಿವರಗಳನ್ನು ತಿಳಿಸಿದರು. "ಹರಿ" ಗ್ರಂಥಕ್ಕೆ ಬರೆದುಕೊಟ್ಟ ಲೇಖಕರ ಸಹಾಯವನ್ನು ಸ್ಮರಿಸಿ, ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ಶ್ರೀನಿವಾಸ ಭಟ್ಟರು ನಡೆಸಿಕೊಟ್ಟುದಲ್ಲದೆ, ಹರಿಹರೇಶ್ವರರು ಮಾಡಿದ ಹಲವು ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸಿದರು. ಸಭೆಯಲ್ಲಿ ಸೇರಿದ ಹಲವು ಸಭಿಕರು ಹರಿಯವರ ಗುಣಗಾನ ಮಾಡಿದರು.

English summary
Harihareshwara was not just a Kannada writer or publisher in America, he was the power, force behind many Kannada activities. He encouraged many writers to take up Kannada cultivation in America. Naga Aithal remembers him on his death anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X