ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಹಿಂದುಳಿದ ದೇಶ ಅಂತ ಅನಿಸಿದೆಯಾ?

By ನಾಗರಾಜ ಎಂ., ಕನೆಕ್ಟಿಕಟ್
|
Google Oneindia Kannada News

"ಲೇ ರಾಜು... ಇಲ್ಲೇ ಹಳ್ಳಿ ಕಡೆ ಹೋಗಿ ಬರೋಣಾ ಬಾ. ಹೇಗಿದ್ದರೂ ಬೋರ್ ಆಗ್ತಿದೆ ಅಂತಾ ಇದೀಯಲ್ಲ. ಲೋಕೇಶನ ಮಾತಾಡಿಸಿಕೊಂಡು ಬರುವಾ" ಅಂತ ಅಣ್ಣ ಕರೆದಾಗ ಪ್ಯಾಂಟು ಏರಿಸಿಕೊಂಡು ನಡೆದಿದ್ದೆ.

ಕಾರ್ ಏನಕ್ಕೆ? ಬೈಕಲ್ಲೇ ಹೋಗಿದ್ರೆ ಚೆನ್ನಾಗಿತ್ತೇನೋ? ಮೊದಲೇ ಹಳ್ಳಿ ರೋಡ್ಸ್ ಅಂತಾ ನಾ ಕೇಳಿದಾಗ... ಇಲ್ಲ ಈಗೆಲ್ಲ ರೋಡ್ಸ್ ಬಹಳ ಚೆನ್ನಾಗಿ ಮಾಡಿದಾರೆ. ಎಲ್ಲ ಸಿಮೆಂಟ್ ರೋಡ್ಸ್" ಅಂತ ನುಡಿಯುತ್ತಲೇ ಅಣ್ಣ ಕಾರ್ ಡ್ರೈವ್ ಮಾಡಿದ್ದ.

ನಿಜವಾಗಲು ಒಳ್ಳೆ ಅಗಲವಾದ ರೋಡ್ಗಳು. ಸುತ್ತಲೂ ಹಸಿರು. ಗಗನಕ್ಕೆ ಚುಂಬನ ಕೊಡಲು ನಾ ಮೊದಲು ತಾ ಮೊದಲು ಅನ್ನೋ ಹಾಗೆ ಪೈಪೋಟಿ ನಡೆಸುವಂತೆ ಎತ್ತರೆತ್ತರಕ್ಕೆ ಬೆಳೆದು ನಿಂತಿರುವ ಅಡಿಕೆ ಮರಗಳು. ಮಧ್ಯೆ ಮಧ್ಯೆ ಬಾಳೆ ತೋಟಗಳು ..wow ಫುಲ್ ಗ್ರೀನರಿ. 6 ವರ್ಷದ ಹಿಂದೆ ಎಲ್ಲ ಬರುಡು ಬರುಡು ಆಗಿ ಕಾಣುತ್ತಿದ್ದ ನಮ್ಮ ಹಳ್ಳಿ ನೋಟವೆಲ್ಲಿ? ಈಗಿನ ನೋಟವೆಲ್ಲಿ? ಹಮ್ ಅಂತ ವಿಸ್ಮಯಗೊಂಡಿದ್ದೆ.

ಊರಿನ ದೊಡ್ಡಿ ಬಾಗಿಲು ಬಳಿ ಕಾರು ನಿಧಾನವಾಗಿ ತಿರುಗಿದಾಗ ಅಲ್ಲಿದ್ದ ಅರಳಿಕಟ್ಟೆ ಮೇಲೆ ಕೂತಿದ್ದ ನಿಂಗಪ್ಪ, ಅಣ್ಣನ ಮುಖ ನೋಡಿದ ಕೂಡಲೇ... ಆರಾಮಿದಿರಾ? ಬಹಳ ದಿನ ಆಯಿತು ಹಳ್ಳಿ ಕಡೆ ಬಂದೆ ಇಲ್ಲಾ? ಅಂತಾ ಕೇಳಿದಾಗ.. ಆ... ಟೈಮ್ ಆಗಿದ್ದಿಲ್ಲ.. ಅಮೆರಿಕದಿಂದ ನನ್ನ ತಮ್ಮ ಬಂದಿದ್ದ... ಸರಿ ಅವನಿಗೂ ಹಳ್ಳಿ ತೋರಿಸೋನಾ ಅಂತಾ ಈಗ ಬರ್ತಿದಿವಿ. ಏನು ಒಬ್ಬನೇ ಅರಳಿಕಟ್ಟೆ ಮೇಲೆ ಕೂತಿದಿಯಾ? ಎಲ್ಲೋದ್ರು? ನಿಮ್ಮ ಸಂಜೆ ಹರಟೆ ಗ್ರೂಪ್ ಅಂತ ಅಣ್ಣ ಕೇಳಿದಾಗ... "ಅಯ್ಯೋ ಏನು ಬಿಡಿ ಅಣ್ಣ... ಎಲ್ರೂ ಈಗ ಬುಸಿ ಆಗಿಬಿಟ್ಟಿದಾರೆ. ಎಲ್ಲರ ಮನೆಯಲ್ಲೂ ಒಂದು ಕಾರ್. ಸಂಜೆ ಆಗೋದೇ ತಡ ಸಿಟಿ ಕಡೆ ಹೋಗಿ ಅಡ್ಡಾಡಿಕೊಂಡು ಬರೋಣಾ ಅಂತ ಹೋಗಿಬಿಡ್ತಾರೆ. ಯಾರು ಸಿಗೋದೆ ಇಲ್ಲ ಈಗ" .ಅಂತಾ ನಿಟ್ಟುಸಿರು ಬಿಟ್ಟಿದ್ದ. ಪರ್ವಾಗಿಲ್ವೆ. ಕಾಡು ಹರಟೆ ಹೊಡೆಯೋದು ಬಿಟ್ಟು ನಮ್ಮೂರಿನ ಜನ ಬಹಳ ಇಂಪ್ರೂವ್ ಆಗಿದಾರೆ ಅಂತ ... ನಾ ಅಂದುಕೊಂಡಿದ್ದೆ. [ಒಂದೊಂದು ಹಳ್ಳಿ ದತ್ತು ತಗೊಳ್ಳಿ : ನರೇಂದ್ರ ಮೋದಿ]

Do you think America is backward country?

ಲೋಕೇಶನ ಮನೆಗೆ ಹೋದಾಗ ಲೋಕಿಯ ಅಮ್ಮ ಮತ್ತು ಅವನ ಪತ್ನಿ ಇಬ್ಬರೇ ಯಾವುದೋ ಒಂದು ಟಿವಿ ಸೀರಿಯಲ್ ಸೀರಿಯಸ್ ಆಗಿ ನೋಡ್ತಾ ಇದ್ದರು. ಲೋಕಿ ಹೊಲದ ಕಡೆ ಹೋಗಿದಾನೆ ಬನ್ನಿ ಟೀ ಕುಡಿಯುವಿರಂತೆ... ಅಂತ ಗೋಡೆಗೆ ಫಿಕ್ಸ್ ಮಾಡಿದ್ದ LED TV ಆಫ್ ಮಾಡಿ ಟೀ ಮಾಡಿಕೊಟ್ಟರು. ಮನೆಯಲ್ಲಿ ಸಾಕಿದ ಎಮ್ಮೆಯ ಮಂದವಾದ ಹಾಲಿಂದ ಮಾಡಿದ್ದ ಟೀ ಬಹಳ ಚೆನ್ನಾಗಿತ್ತು. ಟೀ ಕುಡಿಯುವಾಗ, ಹೋ ಅಂತಾ ಕೂಗುತ್ತಾ ಮಕ್ಕಳು ಸ್ಕೂಲಿಂದ ಓಡಿ ಬಂದರು. ಇವ ನನ್ನ ದೊಡ್ಡ ಮಗ ಸೆಕೆಂಡ್ ಸ್ಟ್ಯಾಂಡರ್ಡ್. ಮಗಳು ಇನ್ನೂ ಪ್ಲೇ ಗ್ರೂಪ್ ಅಂತಾ ಲೋಕಿಯ ಹೆಂಡತಿ ಪರಿಚಯಿಸಿದ್ದಳು ಮಕ್ಕಳನ್ನು.

ಯುನಿಫಾರ್ಮ್ ಮಸ್ತ್ ಇದೆಯಲ್ಲೋ ಪುಟ್ಟಾ. ನಾವು ಇಲ್ಲೇ ಓದುವಾಗ ಇದ್ದಿದ್ದಿಲ್ಲಾ... ಅಂತ ನಾ ಅಂದಾಗ... ಹೇ ಇಲ್ಲಾರಿ.. ಕಿಡ್ಸ್ ಕಾನ್ವೆಂಟ್ ಸ್ಕೂಲ್ ಗೆ ಹೋಗ್ತಾರೆ... ಗವರ್ನಮೆಂಟ್ ಸ್ಕೂಲ್ಗೆ ಹುಡುಗರೆ ಬರೋಲ್ಲ. ಇಲ್ಲೇ ಬೆಟರ್ ಇದೆ ಅಂತಾ ಅವರಮ್ಮ ನುಡಿದಾಗ... ಮನದಲ್ಲೇ ಅಂದು ಕೊಂಡಿದ್ದೆ, ಡೈಲಿ ನ್ಯೂಸ್ ಪೇಪರ್ ನಲ್ಲಿ "ಸರ್ಕಾರೀ ಸ್ಕೂಲ್ಗೆ ಜಡಿದ ಬೀಗ... ಮಕ್ಕಳಿಲ್ಲದ ಕಾರಣ" ಯಾಕೆ ಬರೆದಿದ್ದರು ಅಂತ ಈಗ ಗೊತ್ತಾಗಿತ್ತು.

ಸರಿ ಅಮ್ಮಾ... ನಾವು ಹೊರಡ್ತೀವಿ... ದಾರಿಯಲ್ಲೇ ಲೋಕೇಶನ ಮಾತಾಡಿಸಿಕೊಂಡು ಹೋಗ್ತಿವಿ ಅಂತಾ ಹೇಳಿ, ಮಕ್ಕಳಿಗೆ ಚಾಕಲೇಟ್ ಪ್ಯಾಕೆಟ್ ಕೊಟ್ಟು ಹೊಲದ ಕಡೆ ಕಾರ್ ಹೊರಳಿಸಿದ್ದೆವು.

ಮುಂಚೆ ಬರೀ ಜೋಳ, ರಾಗಿ ಬೆಳೆಯುತ್ತಿದ್ದ ಹೊಲದಲ್ಲಿ ಇಂದು ಅಡಿಕೆ ಮರಗಳು, ತೆಂಗಿನ ಮರಗಳು ಹಚ್ಚ ಹಸುರಿಂದ ಕಂಗೊಳಿಸುತ್ತಿದ್ದವು. ಇವುಗಳ ಮಧ್ಯೆ ಲೋಕೇಶನ ಎಲ್ಲಿ ಹುಡುಕೋದು? ಅಂದು ಲೋಕಿ ಲೋಕಿ ಅಂತಾ ಜೋರಾಗೆ ಕೂಗುತ್ತಾ ನಡೆದಾಗ.. ಒಂದು ತೆಂಗಿನ ಮರದ ಕೆಳಗಡೆ ಹಾಯಾಗಿ ಕಿವಿಗೆ ear ಫೋನ್ ಹಾಕಿಕೊಂಡು ಜೀನ್ಸ್ ಪ್ಯಾಂಟಿಗೆ ಸಿಕ್ಕಿಸಿಕೊಂಡಿದ್ದ ಸೆಲ್ ಫೋನ್ನಲ್ಲಿ ಯಾವುದೋ ಹಾಡು ಕೇಳುತ್ತಾ ಕೂತಿದ್ದ ಲೋಕಿ ನಮ್ಮ ನೋಡಿದೊಡನೆಯೇ.. ಓಹ್.. ಅಣ್ಣ ಬರ್ರಿ ಬರ್ರಿ.. ಯಾವಾಗ ಬಂದ್ರಿ.. ಮನೆಯಲ್ಲಿ ಎಲ್ಲರು ಚೆನ್ನಾಗಿದಾರಾ? ಅಂತಾ ಒಮ್ಮೆಲೇ ಬಡಬಡಿಸಿದ್ದ. ಹೂ ಲೋಕೇಶ... ಆರಾಮು.. ಊರಕಡೆ ಬರದಲೇ ತುಂಬಾ ದಿನಗಳಾಗಿದ್ದವು. ಹಂಗೆ ನಿಮ್ಮನ್ನೆಲ್ಲ ನೋಡಿಕೊಂಡು ಬರೋಣಾ ಅಂತಾ ಬಂದ್ವಿ ಅಂದೆವು. ಹತ್ತು ನಿಮಿಷ ಅದು ಇದು ಮಾತಾಡುತ್ತ ಕುಳಿತಾಗ... ಎಳೆನೀರು ಕುಡಿತೀರಾ ಅಂತಾ ಅವಾ ಕೇಳಿದಾಗ.. ಹೇಗೆ ಬೇಡ ಅನ್ನಲಿ... (ಇಲ್ಲಿ ಡಬ್ಬದಲ್ಲಿ ಎಂದೋ ಪ್ಯಾಕ್ ಮಾಡಿಟ್ಟಿದ್ದ ಕೊಕೊನಟ್ ವಾಟರ್ ಕುಡಿದು ಬೇಜಾರು ಬೇರೆ ಆಗಿತ್ತು ನಂಗೆ).

ಅಣ್ಣಾ... ಒಂದು ನಿಮಿಷಾ ಅಂತಾ ಹೇಳಿ ಲೋಕೇಶ ಸೆಲ್ಫೋನ್ ನಲ್ಲಿ ಏನೋ ಟೈಪ್ ಮಾಡ್ತಿದ್ದ.. ಲೋಕಿ.. ಲೇಟ್ ಆಗುತ್ತೆ ಕಣೋ, ಬೇಗ ಹತ್ತಿ ಎಳೆನೀರು ಕೀಳಬಾರ್ದಾ ಅಂತಾ ಅಣ್ಣ ನುಡಿದಾಗ... ಹೇಹೇ.. ಅತ್ತಬಹುದಿತ್ತು ಅಣ್ಣ... ಈ ಜೀನ್ಸ್ ಬೇರೆ ಹಾಕ್ಬಿಟ್ಟಿದೀನಿ. ಸಿಟಿ ಕಡೆ ಹೋಗಿಬರೋಣ ಎಂದು... ಒಂದೈದು ನಿಮಿಷ.. ನಮ್ಮ ಆಳು ಮಗ ಸೂರಿಗೆ whatsappನಲ್ಲಿ ಮೆಸೇಜ್ ಮಾಡಿದಿನಿ ಬಾ ಅಂತಾ, ಇನ್ನೇನು ರಿಪ್ಲೈ ಬರಬಹುದು. ಫೋನ್ ಮಾಡಿ ಕರಿಬಾರ್ದೇನು ಅಂದಾಗ... ಇಲ್ಲಣ್ಣ ಸುಮ್ನೆ ಮಿನಿಟ್ಸ್ ಬೇರೆ ಕಡಿಮೆ ಇವೆ.. ಇದಾದರೆ ಫ್ರೀ ಅಲ್ವಾ? ಅಂತಾ ತಿರುಗಿ ಆವಾ ನುಡಿದಾಗ.. ಭೇಷ್ ..whatsapp ಕರಾಮತ್ತು ಜೋರಿದೆ ಅಂದಿದ್ದೆ ಮನದಲ್ಲೇ.

ಸೂರಿ ಬರೋ ತನಕ ಏನು ಮಾಡೋದು ಅಂತ ಯೋಚಿಸುತ್ತ .. ಊರಿಗೆ ಫೋನ್ ಮಾಡುವ ಅಂದ್ರೆ ಸೆಲ್ ಫೋನ್ ಚಾರ್ಜ್ ಹೋಗಿಬಿಟ್ಟಿತ್ತು. ಸರಿ.. ಲೋಕೇಶ ನಿನ್ನ ಫೋನ್ ಕೊಡಮ್ಮ.. ಒಂದೇ ಒಂದು ಕಾಲ್ ಮಾಡ್ತೀನಿ ಮನೆಗೆ.. ಅಂದಾಗ.. ಒಂದು ನಿಮಿಷ ಅಂತ ಅವಾ.. ಜೀನ್ಸ್ ಹಿಂಬಾಗದ ಪಾಕೆಟ್ ನಿಂದ ಇನ್ನೊಂದು ಸೆಲ್ ಫೋನ್ ತೆಗೆದು ಒರೆಸಿ ಕೊಟ್ಟಿದ್ದ. ಇದ್ಯಾವುದೋ ಇನ್ನೊಂದು ಫೋನ್? ಅದೇ ಕೊಡು ಪರವಾಗಿಲ್ಲ ಅಂದಾಗ.. ಇಲ್ಲಣ್ಣ.. ನೀವು ಅಮೆರಿಕಾದೊರು.. ಟಚ್ ಮಾಡೇ ಮಾತಾಡಿಸೋದು ಅಲ್ವಾ? ಅದಕ್ಕೆ ಈ ಟಚ್ ಸ್ಕ್ರೀನ್ ಫೋನ್ use ಮಾಡಿ ಅಂತಾ ಹೇಳಿ ಕೊಟ್ಟಾಗ... ನಿಂಗೆ ಯಾರು ಹೇಳಿದ್ರಪ್ಪ? ಅಮೆರಿಕದೋರು ಎಲ್ಲಾ ಟಚ್ ಮಾಡೇ ಮಾತಾಡಿಸೋದು (ಯಾರಾದ್ರೂ ಮತ್ತೆ ತಪ್ಪು ತಿಳಿದಾರು) ಅಂತ? ನಾ ಹುಬ್ಬೇರಿಸಿ ಕೇಳಿದಾಗ... ಹೇಹೇ ಟೀವಿನಲ್ಲಿ ಎಲ್ಲಾ ನೋಡಿತಿವಲ್ಲಣ್ಣಾ... ಅಂತ ಅವ ಅಂದಾಗ, ನಾನೇ ಬೆಪ್ಪಾಗಿದ್ದೆ.

ಲೋಕೇಶ... ಕಾಲ್ ಮಾಡೋಣ ಅಂದ್ರೆ ಇದು ಡೋಕೊಮೋ, ರಿಲಯನ್ಸ್ ಅಂತಾ ಕೇಳುತ್ತಲ್ಲೋ? ಅಂತ ಅವನಿಗೆ ಕೇಳಿದಾಗ.. "ಡಬಲ್ ಸಿಮ್ ಫೋನ್ ಅದು. ಡೋಕೊಮೋ ಓನ್ಲಿ ಇನ್ಕಮಿಂಗ್ ಕಾಲ್ಸ್ ಗೆ ಮಾತ್ರ. ರಿಲಯನ್ಸ್ ಔಟ್ ಗೋಯಿಂಗ್ ಕಾಲ್ಸ್ ಗೆ. ರಿಲಯನ್ಸ್ ಸೆಲೆಕ್ಟ್" ಮಾಡಿ ಅಂದಿದ್ದ. "ಚೈನಾ ಸೆಟ್ ಫೋನ್ ಇದು. ಒಂದು ವರ್ಷ ಇದ್ರೆ ಸಾಕು ಕಳೆದು ಹೋದರು ಪರವಾಗಿಲ್ಲ... ಬರೀ ಮೂರು ಸಾವಿರ ಇದಕ್ಕೆ.. ಇಂಟರ್ನೆಟ್, ಯುಟ್ಯೂಬ್ ನೋಡಕೆ ಮಾತ್ರ use ಮಾಡ್ತೀನಿ... ಈವಾಗ ಎಲ್ಲರ ಹತ್ತಿರ ಎರಡು, ಮೂರು ಫೋನ್ ಗಳು ಇರ್ತಾವೆ.... ಇದೆಲ್ಲ ಕಾಮನ್" ಅಂತಾ ಲೋಕಿ ಹೇಳಿದಾಗ... ಒಮ್ಮೆ ತೆಗೆದುಕೊಂಡ ಐಫೋನ್ 3s ಅನ್ನು 5-6 ವರ್ಷಗಳಿಂದ ಚೇಂಜ್ ಮಾಡದೆ, ಹಳೆ ತಲೆಮಾರಿನ LCD ಟೀವಿನೆ ಉಪಯೋಗಿಸುತ್ತಿದ್ದ ನಂಗೆ ಒಂತರಾ ಏನೋ ಹೇಳಲಾರದ ಸಂಕಟವಾದಂತೆ ಆಗಿತ್ತು.

15 ನಿಮಿಷಗಳಾದರೂ ಸೂರಿಯ ಪತ್ತೇನೆ ಇಲ್ಲದ್ದ ಕಂಡು... ಲೇಟ್ ಆಗುತ್ತೆ ಅಂತ ಹಾಗೆ ಅಲ್ಲಿಂದ ಹೊರಟಿದ್ದೆವು. ನಾನು ಬರ್ತೀನಿ ನಿಮ್ಮ ಜೊತೇನೆ.. ಅಲ್ಲೇ ಸಿಟಿನಲ್ಲಿ ಡ್ರಾಪ್ ಮಾಡಿ ನನ್ನ... ಸ್ವಲ್ಪ ಹೊತ್ತು ಅಡ್ಡಾಡಿಕೊಂಡು ಮತ್ತೆ ರಾತ್ರಿ ಕೊನೆ ಬಸ್ಸಿಗೆ ಬರ್ತೀನಿ ನಾ.. ಅಂತಾ ಲೋಕೇಶ ಸಹಾ ಕಾರು ಹತ್ತಿದ್ದ.

ಅರ್ಧ ತೆಗೆದಿದ್ದ ಕಿಟಕಿಯಲ್ಲಿ ಬರುತ್ತಿದ್ದ ತಣ್ಣನೆಯ ಗಾಳಿಗೆ, ಅರ್ಧ ಕಣ್ಣ ಮುಚ್ಚಿ ಸೀಟಿಗೆ ಒರಗಿ ಕೂತಿದ್ದ ನನ್ನ ಮನದೊಳಗೆ "ಅಂದು ಮುಂದುವರಿದ ದೇಶ ಅಂತಾ ಅಮೆರಿಕಾಕ್ಕೆ ಹೋಗಿದ್ದ ನಂಗೆ.. ಯಾಕೋ ಇಂದು ಅದೇ ಅಮೆರಿಕ ಹಿಂದುಳಿದ ದೇಶ" ಅಂತ ಅನಿಸತೊಡಗಿತ್ತು!

ನಿಮಗೆ ಕೂಡ ಇದೇ ರೀತಿ ಅನಿಸಿದೆಯಾ any time?

English summary
Do you think America is backward country? or India is developed country? Nagaraj Maheswarappa from Connecticut, USA shares his experience when he visited his village in Karnataka. Even villages have started advanced gadgets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X