ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸ್ತ್ ಮಜಾ ನೀಡಿದ ದೊಡ್ಡ ಗುಂಡುರುಳಿಸುವ ಸ್ಪರ್ಧೆ

By ವೆಂಕಟ್, ಸಿಂಗಪುರ
|
Google Oneindia Kannada News

ಕನ್ನಡ ಸಂಘ (ಸಿಂಗಪುರ) ಪ್ರತಿ ವರ್ಷ ಆಯೋಜಿಸುತ್ತಿರುವ 'ಬೋಲಿಂಗ್' ಸ್ಪರ್ಧೆಯನ್ನು, ಈ ಬಾರಿಯೂ ಅನೇಕ ನುರಿತ ಹಾಗೂ ಉತ್ಸಾಹಿ ಆಟಗಾರರ ಸಹಭಾಗಿತ್ವದಲ್ಲಿ 13 ಸೆಪ್ಟೆಂಬರ್ "SAFRA -Yishunನಲ್ಲಿ ನಡೆಸಲಾಯಿತು. ಈ ಬಾರಿ ಮಕ್ಕಳೂ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಆಸಕ್ತರು ವಯೋಮಿತಿಯಿಲ್ಲದೆ ಬಂದು ಸ್ಪರ್ಧಾತ್ಮಕ ಭಾವನೆಯಲ್ಲಿ ಆಡಿದ್ದು, ಒಂದು ಕುಟುಂಬದವರೆಲ್ಲ ಸೇರಿ ಆನಂದಿಸಿದ ಕಾರ್ಯಕ್ರಮವೆನ್ನುವಂತಿತ್ತು. ಇದರಲ್ಲಿ ಅನೇಕರು ಹೊಸದಾಗಿ ಸಂಘದ ಸದಸ್ಯತ್ವವನ್ನು ಪಡೆದು ಭಾಗಿಯಾಗಿದ್ದು ವಿಶೇಷವಾಗಿತ್ತು.


ಕನಕೇಶ್, ರಾಮಪ್ರಸಾದ ಅವರ ನೇತೃತ್ವದಲ್ಲಿ ನಡೆದ ಈ ಬೋಲಿಂಗ್ ಸ್ಪರ್ಧೆಯಲ್ಲಿ ನೋಂದಾಯಿಸಿದ ಸದಸ್ಯರನ್ನು ಯಾದೃಚ್ಛಿಕವಾಗಿ ವಿಂಗಡಿಸಿ ಪ್ರತಿ ಗುಂಪಿಗೆ 4 ಜನರನ್ನೊಳಗೊಂಡ, ದೊಡ್ದವರ 10 ಹಾಗು ಮಕ್ಕಳ 2 ತಂಡಗಳಾಗಿ ವಿಂಗಡಿಸಲಾಗಿತ್ತು. ಸ್ಪರ್ಧೆಗೆ ಮುಂಚೆ ಅಭ್ಯಾಸಕ್ಕೆಂದು 5 ನಿಮಿಷಗಳ ಕಾಲ ಮೀಸಲಿಡಲಾಗಿತ್ತು. ಇದರಲ್ಲಿ ಅವಸರವಾಗಿ ಇದ್ದ ಗುಂಡುಗಳನ್ನೆಲ್ಲಾ ಎತ್ತಿ-ಎತ್ತಿ ಹಿಡಿದು ಭಾರ, ಗಾತ್ರ, ಬಣ್ಣಗಳನ್ನೆಲ್ಲಾ ಪರೀಕ್ಷಿಸಿ ಕೊನೆಗೂ ಆಯ್ದ ಗುಂಡನ್ನು ಉರುಳಿಸಿ, ಅದು ಗುರಿಯೋ.. ಮೋರಿಯೋ ತಲುಪುವವರೆಗೆ ಪಟುಗಳೂ ಸಹ ವಾಲಿ, ಕಾಲೂರಿ, ದಿಕ್ಕು ತಪ್ಪುತ್ತಿರುವ ಗುಂಡುಗಳ ದಿಕ್ಕನ್ನೇ ಬದಲಾಯಿಸುವ ವಿಫಲ ಪ್ರಯತ್ನಕ್ಕೆ ಮೊರೆಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಈ ಬಾರಿಯ ಸ್ಪರ್ಧೆಗಳು ಬಹಳ ಸ್ಪರ್ಧಾತ್ಮಕವಾಗಿ ನಡೆಯುತ್ತಿದ್ದನ್ನು ನೋಡಿದರೆ ಅನೇಕರು ಪಂದ್ಯಗಳಿಗೆ ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದನ್ನು ಕಾಣಬಹುದಾಗಿತ್ತು. ನುರಿತ ಪಟುಗಳ ಗುಂಡುಗಳು ರಭಸದಿಂದ ಮುನ್ನುಗ್ಗಿ ಬೋಲಿಂಗ್ ಪಿನ್‌ಗಳನ್ನು ಛಿದ್ರಗೊಳಿಸಿ ಕೇಕೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದವು. ಹೊಸದಾಗಿ ಸಿಂಗಪುರಕ್ಕೆ ಬಂದ ಸದಸ್ಯರು ಇತರೆ ಸ್ಥಳೀಯ ಕನ್ನಡಿಗರ ಜೊತೆ ಒಡನಾಟ, ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿರುವ ದೃಶ್ಯ, ಕನ್ನಡ ಸಂಘವು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವನ್ನು ಎತ್ತಿ ಹಿಡಿಯುವಂತಿತ್ತು. ಮಕ್ಕಳೂ ಸಹ ನಾವೇನು ಕಡಿಮೆ ಎಂಬಂತೆ ತಮ್ಮ ಬೋಲಿಂಗ್ ಕೌಶಲ್ಯವನ್ನು ಮೆರೆದು ತೋರುತ್ತಿದ್ದರು.

Bowling competition by Singapore Kannada Sangha

ಕೊನೆಯ ಸುತ್ತಿನಲ್ಲಿ ಎಲ್ಲರ ಕಣ್ಣು ಅತೀ ಹೆಚ್ಚು ಅಂಕ ಪಡೆದ ತಂಡದೆಡೆಗೆ ನಾಟಿತ್ತು. ಮೂರು ಸುತ್ತುಗಳು ಮುಗಿದ ನಂತರ, ಅರವಿಂದ್ ನಿಂಬರ್ಗಿ, ವಿನಯ್ ಅಡಿಗ, ವಿಕ್ರಮ್ ಹೆಗ್ಡೆ ಹಾಗೂ ದೀಪ ಅವರು 1460 ಅಂಕಗಳೊಂದಿಗೆ ಮೊದಲನೆಯ ಸ್ಥಾನಕ್ಕೆ ಲಗ್ಗೆ ಹಾಕಿದರೆ, ರವೀಂದ್ರ ಅಡಿಗ, ಕನಕೇಶ್, ಶಿವಪ್ರಸಾದ್ ಭಟ್ ಹಾಗೂ ನಂದಿನಿ ದಯಾಲನ್ ಅವರ ತಂಡ 1438 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿ ತೃಪ್ತಿಗೊಳ್ಳಬೇಕಾಯಿತು. ವೈಯಕ್ತಿಕವಾಗಿ ಅತ್ಯಧಿಕ ಅಂಕಗಳನ್ನು ಪಡೆದವರ ಪಟ್ಟಿಯಲ್ಲಿ ಪುರುಷರ ವಿಭಾಗದಲ್ಲಿ ಶ್ರೀರಾಮ್ (496), ರವೀಂದ್ರ ಅಡಿಗ(476), ಶಾಮೇಂದ್ರ ಶಿವಣ್ಣ ಹಾಗೂ ನವೀನ್ ಹೆಗ್ಡೆ (427) ಮತ್ತು ಮಹಿಳೆಯರ ವಿಭಾಗದಲ್ಲಿ ದೀಪಾ (270), ಕವಿತಾ ರಾಘವೇಂದ್ರ (261) ಹಾಗೂ ಸ್ಪೂರ್ತಿ ಸುಮಂತ್ (245) ಅಗ್ರರೆನಿಸಿದರು.

ಮಕ್ಕಳ ವಿಭಾಗದಲ್ಲಿ ಭಾಗವಹಿಸಿದ ಎಲ್ಲರೂ ವಿಜೇತರೆನ್ನಬಹುದು! ಮನೋಜ್ಞ ನರಸಿಂಹ (243) ಮೊದಲ ಸ್ಥಾನ, ನಿಹಾರಿಕ (221) ಎರಡನೆಯ ಸ್ಥಾನ ಹಾಗೂ ಪ್ರಜ್ವಲ ಕನಕೇಶ್ (220) ಮೂರನೆಯ ಸ್ಥಾನವನ್ನು ಗಳಿಸಿದರು. ಎಲ್ಲ ವಿಜೇತರಿಗೆ ಕನ್ನಡ ಸಂಘ (ಸಿಂಗಪುರ) ನವೆಂಬರಿನಲ್ಲಿ ಆಯೋಜಿಸಲಿರುವ 'ಕನ್ನಡ ರಾಜ್ಯೋತ್ಸವ'ದ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು. ಇದೇ ರೀತಿಯಲ್ಲಿ ಕನ್ನಡ ಸಂಘದ ಮುಂಬರುವ ಸ್ಪರ್ಧೆಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಘದ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕೆಂದು ವಿನಂತಿಸಿಕೊಳ್ಳಲಾಯಿತು.

ವರದಿ- ವೆಂಕಟ್
ಛಾಯಚಿತ್ರ : ಗಿರೀಶ್ ಜಮದಗ್ನಿ

English summary
Singapore Kannada Sangha had organized Bowling 2014 competition on 13th September, 2014. The prizes will be distributed during Kannada Rajyotsava in November. Report by Venkat. Photos by Girish Jamadagni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X