ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮೂಹಿಕ ಜನಗಣಮನ ಗಾಯನದ ಸಮ್ಮೋಹನ

By ಉಷಾ ಪ್ರಸನ್ನ ಕುಮಾರ್; ನ್ಯೂಜೆರ್ಸಿ
|
Google Oneindia Kannada News

ಆಮೇಲಿನ ಒಂದು ಕ್ಷಣವಿದೆ ನೋಡಿ. ಅದು ಬಣ್ಣನೆಗೆ ನಿಲುಕದ್ದಾದರೂ ಒಂದು ಪ್ರಯತ್ನ ಮಾಡುತ್ತೇನೆ. ಅಮೆರಿಕದ ರಾಷ್ಟ್ರಗೀತೆಯಾದ ಮೇಲೆ ಭಾರತದ ರಾಷ್ಟ್ರಗೀತೆ. ಜನಗಣಮನ. ನಾನು ಚಿಕ್ಕ ಹುಡುಗಿಯಿದ್ದಾಗಿನಿಂದಲೂ ರಾಷ್ಟ್ರಗೀತೆ ಹೇಳುವಾಗೆಲ್ಲ ರೋಮಾಂಚನಗೊಂಡಿದ್ದೇನೆ. ಆದರೆ ಇವತ್ತು, ಅಲ್ಲಿ ನಾವು ಇಪ್ಪತ್ತು ಸಾವಿರದಷ್ಟು ಸಂಖ್ಯೆಯ ಭಾರತೀಯರು ಒಂದೇ ಸೂರಿನಡಿ ಸೇರಿ, ನಮ್ಮ ನೆಚ್ಚಿನ ಪ್ರಧಾನಿಯವರ ಸಮಕ್ಷಮದಲ್ಲಿ, ಕವಿತಾ ಕೃಷ್ಣಮೂರ್ತಿಯವರೊಡನೆ ದನಿಗೂಡಿಸಿ, ಎಲ್ಲರೂ ಎದ್ದುನಿಂತು ಜನಗಣಮನ ಹಾಡಿದೆವಲ್ಲ... ಆ ದಿವ್ಯ ಅನುಭೂತಿಯನ್ನು ಅನುಭವಿಸಬೇಕಷ್ಟೇ ಹೊರತು ಮಾತಿನಲ್ಲಿ, ಅಕ್ಷರಗಳಲ್ಲಿ, goose bumps/ ರೋಮಾಂಚನ ಮುಂತಾದ ಪದಗಳಲ್ಲೂ ಹೇಳುವುದು ಸಾಧ್ಯವಿಲ್ಲ ಬಿಡಿ. ಇದು ನನ್ನೊಬ್ಬಳ ಕತೆಯಲ್ಲ. ಎಷ್ಟು ಜನರು ಅಲ್ಲಿ ಭಾವುಕರಾಗಿ ಗದ್ಗದಿತ ಕಂಠದಿಂದ ಮಾತನಾಡಲಾರದೆ ಹೋದರೋ, ಬಳಬಳನೆ ಕಣ್ಣೀರು ಸುರಿಸಿದರೋ ನಾನರಿಯೆ.

ಆಮೇಲೆ ಮೋದಿಯವರ ಭಾಷಣ. ಅದನ್ನಂತೂ ಏನೆಂದು ಹೇಳಲಿ! ಹಿತಾನುಭವ ಒದಗಿಸಿ ಕೇಳುಗನ ಮನಮುಟ್ಟುವ ಕಲೆ ಅವರಿಗೇನು ಹೊಸತೇ? ಅವರಾಡಿದ ಒಂದೊಂದು ಮಾತು ಸಹ ನಮ್ಮ ಕಿವಿಗಳೊಳಗೆ ಹೊಕ್ಕುವ ಮೊದಲೇ ನಮ್ಮ ಹೃದಯಗಳನ್ನು ತಟ್ಟಿ ಆಗಿರುತ್ತಿತ್ತು! ಹಾಗಂತ ಅವರು ಬರೀ ಮಾತಿನ ಗಾಳಿಗೋಪುರ ಕಟ್ಟಲಿಲ್ಲ. ಕರಗುವ ಮೇಣದ ಗೊಂಬೆಗಳನ್ನಾಗಿಸಲು ನಮ್ಮೊಡನೆ ಭಾವಲಹರಿ ಬಿಚ್ಚಲಿಲ್ಲ. ಹಾವಿನೆದುರು ಪುಂಗಿ ಊದುವಂತೆ ಊದಲಿಲ್ಲ. ಮೋದಿಯವರ ಒಂದೊಂದು ಆಲೋಚನೆಯೂ ಎಷ್ಟು ಪ್ರಾಕ್ಟಿಕಲ್ ಆಗಿರುತ್ತದೆ ಎಂದು ಯೋಚಿಸಿದರೇನೇ ಮೈಝುಮ್ಮೆನ್ನುತ್ತದೆ.

American Indian at Mad Madison Square Garden - NY (part 3)

ಹೌದು, ನಮ್ಮಲ್ಲಿ ಎಷ್ಟೋ ಜನ ಭಾರತದೇಶ ಬಿಟ್ಟು ಇಲ್ಲಿಗೆ ಬಂದದ್ದು ಅಲ್ಲಿ ಬಡತನವಿದೆ ಅಂತ ಅಲ್ಲ. ಗಲೀಜಿದೆ ಅಂತ ಅಲ್ಲ. ಸರಳ ಸೌಹಾರ್ದ ಜೀವನ ನಡೆಸುವುದಕ್ಕೆ, ಪ್ರತಿಭೆಗೆ ತಕ್ಕ ಅವಕಾಶ ಸಿಗುವುದಕ್ಕೆ ನೂರೆಂಟು ಕಾನೂನು-ಕಂಟಕಗಳಿರುವನ್ನು ನೋಡಿ ರೋಸಿಹೋಗಿ ಬಂದವರೇ ಹೆಚ್ಚು. ಅಂಥ ಕಂಟಕದ ಕಾನೂನುಗಳನ್ನೆಲ್ಲ ನಿರ್ಮೂಲ ಮಾಡುವೆನೆನ್ನುತ್ತಾರೆ ಮೋದಿ. ಗಂಗಾನದಿಯನ್ನು ಸ್ವಚ್ಛಗೊಳಿಸೋಣ ಎನ್ನುತ್ತಾರೆ. ಅಲ್ಲಿ ಗಂಗಾನದಿ ಸಾಂಕೇತಿಕ ಅಷ್ಟೇ. ನಮ್ಮನಮ್ಮ ವಠಾರಗಳನ್ನು, ಮನೆಗಳನ್ನು, ಮನಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಒಬ್ಬೊಬ್ಬ ಭಾರತೀಯನ ಭಾವಗಂಗೆಯೂ ಸ್ವಚ್ಛವಾದಂತೆಯೇ ಅಲ್ಲವೇ?

ಭಾರತದ, ಭಾರತೀಯತೆಯ ಹೆಮ್ಮೆಯನ್ನು ವಿಶ್ವಕ್ಕೆಲ್ಲ ಮತ್ತೊಮ್ಮೆ ಎದೆತಟ್ಟಿ ಹೇಳೋಣ ಎನ್ನುವ ನೇತಾರನೊಬ್ಬ ಕೊನೆಗೂ ನಮಗೆ ಸಿಕ್ಕನಲ್ಲ! ಚಿಕ್ಕಚಿಕ್ಕ ಸಾಧನೆಗಳಿಂದಲೇ ಆರಂಭಿಸೋಣ ಎಂದು ಹೇಳುತ್ತ "ನಾನಂತೂ ಚಹ ಮಾರಿಕೊಂಡು ಬಂದ ಸಾಮಾನ್ಯರಲ್ಲಿ ಅತಿಸಾಮಾನ್ಯ ಎಂದರಲ್ಲ ಮೋದಿ, ಅದನ್ನು ಕೇಳಿದಾಗಂತೂ ಎಲ್ಲರೂ ಭಾವೋದ್ವೇಗದಿಂದ ಎದ್ದುನಿಂತು ಚಪ್ಪಾಳೆ ತಟ್ಟಿದ ದೃಶ್ಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ!

English summary
Chorus to Indian National Anthem in US - Usha Prasanna Kumar, President Brindavana Kannada Koota New Jersey records her one of the most memorable experiences - visit to Madison Square Garden, New york to attend Public reception to visiting India PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X