ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪು ಚುಕ್ಕೆಯ ಮೇಲೊಂದು ಕಪ್ಪು ಚುಕ್ಕೆ!

By ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

ಸಿಂಗಪುರ ಅಂದ್ರೆ ಸಿಕ್ಕಾಪಟ್ಟೆ ಸ್ಟ್ರಿಕ್ಟು, ರಸ್ತೆಯಲ್ಲಿ ಕಸ ಎಸೆದರೂ ದಂಡ ಹಾಕ್ತಾರೆ, ಅಲ್ಲಿ ಭ್ರಷ್ಟಾಚಾರ ಅನ್ನೋದೇ ಇಲ್ಲ, ಸಿಂಗಪುರ ನೋಡುಗರ ಸ್ವರ್ಗ, ಅಲ್ಲಿ ಹೆಚ್ಚಾಗಿ ತಮಿಳರೇ ಬೀಡುಬಿಟ್ಟಿದ್ದಾರೆ ಇತ್ಯಾದಿ ಇತ್ಯಾದಿ ಎಲ್ಲರಿಗೂ ತಿಳಿದಿರುವ ಸಂಗತಿ. ಅಂತಹ ಸುದ್ದಿಯನ್ನು ತಾನಾಗೇ ಮಾಡದ ದೇಶ ಸಿಂಗಪುರ. ಇಂಥ ದೇಶದಲ್ಲಿ ಭಾನುವಾರ ರಾತ್ರಿ ನಡೆದ ಅಪಘಾತ, ಗಲಭೆ ಭಾರೀ ಸುದ್ದಿಯನ್ನೂ ಮಾಡಿತು. ದಿನನಿತ್ಯ ಇಂತಹ ಘಟನೆಗಳನ್ನು ನೋಡುವವರಿಗೆ ಇದೇನು ಸುದ್ದಿ ಎಂದನಿಸಿದರೂ ಅಚ್ಚರಿಯಿಲ್ಲ. ಆದರೆ, ಭಾರತೀಯರು ನಡೆಸಿದ ಹಿಂಸಾಚಾರವೇಕೆ ದೊಡ್ಡ ಸುದ್ದಿಯಾಗುತ್ತದೆ, ಅಲ್ಲಿನ ವಾತಾವರಣವಾದರೂ ಎಂಥದು ಎಂಬ ಸಂಗತಿಗಳನ್ನು ಅಲ್ಲೇ ವಾಸಿಸುತ್ತಿರುವ ಕನ್ನಡಿಗ ಗಿರೀಶ್ ಜಮದಗ್ನಿ ಅವರು ಸುಂದರವಾಗಿ ವರ್ಣಿಸಿದ್ದಾರೆ.

***

ಇಂದು ಬೆಳಿಗ್ಗೆ ನನ್ನ ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ದಿಗ್ಭ್ರಮೆಯಾಗಿತ್ತು. ಮೊದಲು ಇದು ಯಾರೋ ಮಾಡಿದ ತಮಾಷೆಯೋ ಅಥವಾ ಪೋಲೀಸರು ಆಗಾಗ್ಗೆ ನಡೆಸುವ ಅಣಕು ತಾಲೀಮು (mock drill) ಇರಬಹುದೆಂದು ಉದಾಸೀನತೋರಿದೆ. ಆದರೆ, ಇಲ್ಲಿನ ಪ್ರಮುಖ ಪತ್ರಿಕೆಯ ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ ಮುಖಕ್ಕೆ ರಾಚುವಂತಿದ್ದ ಸುದ್ದಿ, ನಡೆದದ್ದು ನಿಜವೆಂದು ಹೇಳುತ್ತಿತ್ತು. ಒಂದಿಬ್ಬರು ಸ್ನೇಹಿತರನ್ನು ಸಂಪರ್ಕಿಸಿ ಚರ್ಚಿಸಿದ್ದೂ ಆಯಿತು. ಸಿಂಗಪುರದಲ್ಲಿ ಅಪರೂಪದಲ್ಲಿ ಅಪರೂಪವಾದ ಗಲಭೆ, ಹಿಂಸಾಚಾರ ನಡೆದು ಹೋಗಿತ್ತು. ಅದೂ ಭಾರತೀಯರು ಹೆಚ್ಚಾಗಿ ಅಡ್ಡಾಡುವ ಲಿಟಲ್ ಇಂಡಿಯಾ ಪ್ರದೇಶದಲ್ಲಿ. ಹೆಚ್ಚು ಮಾಹಿತಿಗಳು ಹೊರಬೀಳುತ್ತಿದ್ದಂತೆ ವಿಷಯ ಸ್ಪಷ್ಟವಾಗುತ್ತಾ ಹೋಯಿತು. ಖಾಸಗಿ ಬಸ್ಸಿನ ಚಕ್ರಕ್ಕೆ ಭಾರತೀಯನೊಬ್ಬ ಸಿಕ್ಕಿ ಮೃತಪಟ್ಟಿದ್ದು, ಅದರಿಂದ ರೊಚ್ಚಿಗೆದ್ದ ಭಾರತೀಯ ಮೂಲದ ಜನ, ಹಿಂಸಾಚಾರಕ್ಕೆ ಇಳಿದದ್ದು, ಗಲಭೆ ಹತೋಟಿಗೆ ತರಲು ಬಂದಿದ್ದ ವಿಶೇಷ ದಳದ ಮೇಲೆ ದೊಂಬಿಕೋರರು ಮುಗಿಬಿದ್ದದ್ದು, ಇದೆಲ್ಲದರ ಮಧ್ಯೆ ಐದಾರು ಪೋಲಿಸ್ ವಾಹನಗಳು ಭಸ್ಮವಾದದ್ದು.... [ಸಿಂಗಪುರದಲ್ಲಿ ಭುಗಿಲೆದ್ದ ಹಿಂಸಾಚಾರ]

A black spot on Red Dot Singapore

ರೆಡ್ ಡಾಟ್ (ಕೆಂಪು ಚುಕ್ಕೆ) ಎಂದು ಕರೆಸಿಕೊಳ್ಳುವ ಸಿಂಗಪುರದಲ್ಲಿನ ನನ್ನ ಹತ್ತು ವರ್ಷದ ವಸತಿಕಾಲದಲ್ಲಿ ಇಂತಹ ಘಟನೆ ನಡೆದದ್ದು ಇದೇ ಮೊದಲು. ಹತ್ತು ವರ್ಷದಲ್ಲೇನು, 1969ರಲ್ಲಿ ನಡೆದ ಜನಾಂಗೀಯ ಗಲಭೆಯ ನಂತರ ಇಲ್ಲಿ ಗಲಭೆ, ದೊಂಬಿ ನಡೆದೇ ಇಲ್ಲ! ವಲಸೆ ಬಂದ ಚೀನಿಯರು ಮತ್ತು ಮಲಯ ಜನಾಂಗದವರ ನಡುವೆ ಅಂದು ನಡೆದ ಹಿಂಸಾತ್ಮಕ ಗಲಭೆಯಲ್ಲಿ ನಾಲ್ಕು ಜನ ಮೃತಪಟ್ಟು ನೂರಕ್ಕೂ ಹೆಚ್ಚು ಗಾಯಗೊಂಡಿದ್ದರು. ಅದು ಸಿಂಗಪುರ ಸ್ವತಂತ್ರ ರಾಷ್ಟ್ರವಾದ ನಂತರ ನಡೆದ ಮೊದಲ ಭಾರಿ ಪ್ರಮಾಣದ ಗಲಭೆಯಾಗಿತ್ತು. ಮಲೇಶಿಯದಿಂದ ಬೇರ್ಪಡುವ ಮೊದಲು ಸಿಂಗಪುರ ಪ್ರಾಂತ್ಯ, 1950ರ ನಂತರ ಹಲವು ದೀರ್ಘ ಮತ್ತು ಹಿಂಸಾತ್ಮಕ ಗಲಭೆಗಳನ್ನು ಕಂಡಿತ್ತು. ಇದರಿಂದ ಪಾಠ ಕಲಿತ ಸಿಂಗಪುರ, ಗಲಭೆಯನ್ನು ಹತ್ತಿಕ್ಕಲು ಹಲವು ನಿರ್ದಿಷ್ಟ ಹಾಗು ಕಠಿಣ ಕಾನೂನನ್ನು ಜಾರಿಗೊಳಿಸಿದ್ದಲ್ಲದೆ ಅದನ್ನು ವಿಧಿವತ್ತಾಗಿ ಅನುಷ್ಠಾನಗೊಳಿಸಿದೆ.

ಗಲಭೆಗಳು ಇಲ್ಲಿ ತೀರ ಅಪರೂಪ : ಯಾವುದೇ ಒಂದು ಕೋಮು, ಸಮುದಾಯ ಅಥವಾ ದೇಶಿಗರು ಒಂದೇ ಜಾಗದಲ್ಲಿ ಗುಂಪಾಗಿ ನೆಲೆಹೂಡದೆ, ಎಲ್ಲರೊಂದಿಗೆ ಬೆರೆತು ಜೀವಿಸಲು ಅನುಕೂಲವಾಗುವಂತೆ ಸರ್ಕಾರದ ನಿಯಂತ್ರಣವಿದೆ. ಸಿಂಗಪುರದ 80 ಪ್ರತಿಶತ ಜನರು ವಾಸಿಸುವ ಸರ್ಕಾರದ ಪ್ರತೀ ಬಹುಮಹಡಿ ವಸತಿ ಸಂಕೀರ್ಣದಲ್ಲಿ ಇಂತಿಷ್ಟೇ ಚೀನಿಯರು, ಮಲಯರು, ಭಾರತೀಯರು ಇರಬೇಕೆಂಬ ಕಟ್ಟುಪಾಡುಗಳಿವೆ. ಇಂತಹ ಹಲವು ಸಕಾರಾತ್ಮಕ, ದೂರದೃಷ್ಟಿ ಹೊಂದಿದ ಕ್ರಮಗಳೇ ಶಾಂತಿ ಮತ್ತು ಏಳ್ಗೆಯನ್ನು ಕಂಡಿರುವ ಸಿಂಗಪುರದ ಸಫಲತೆಯ ಸೂತ್ರ. ಸುಮಾರು 44 ವರ್ಷಗಳ ದೀರ್ಘಕಾಲ, ಯಾವುದೇ ತರಹದ ಹಿಂಸಾತ್ಮಕ ಗಲಭೆ ನಡೆಯದೆ, ಬಹುಮತೀಯ, ಬಹುಜನಾಂಗೀಯರಲ್ಲಿ ಸೌಹಾರ್ದತೆ, ಶಾಂತಿ ಕಾಪಾಡಿಕೊಂಡಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಸಿಂಗಪುರವೂ ಒಂದು. ಅದಕ್ಕೆ ನಿನ್ನೆ ನಡೆದ ಘಟನೆ ಎಲ್ಲರಿಗೂ ದಿಗ್ಭ್ರಮೆ ತರಿಸಿದ್ದು ಮತ್ತು ಇಷ್ಟು ಪ್ರಮಾಣದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವುದು. [ದೆಹಲಿ ಅತ್ಯಾಚಾರದ ಬಗ್ಗೆ ಗಿರೀಶ್ ಅಭಿಮತ]

ತಮಿಳು ವಲಸೆಗಾರರ ನೆಲೆಹೂಡಿಕೆಯಿಂದ ಬೆಳೆದುಬಂದ ಲಿಟಲ್ ಇಂಡಿಯ ಪ್ರದೇಶ ಭಾರತೀಯರು ಹೆಚ್ಚು ಭೇಟಿ ನೀಡುವ ಪ್ರದೇಶ. ಭಾರತೀಯ ಮೂಲದವರ ಎಲ್ಲಾ ಅವಶ್ಯಕತೆಗಳು ಬಹಳ ಅನುಕೂಲವಾಗಿ ದೊರೆಯುವ ಜಾಗ ಅದು. ಇಲ್ಲಿ ಭಾರತದ ವಿವಿಧ ರಾಜ್ಯಗಳ ವಿಧ-ವಿಧ ತಿಂಡಿ ತಿನಿಸುಗಳು ಸಿಗುವ ನೂರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಬೆಂಗಳೂರಿನ MTR ಕೂಡ ಇತ್ತೀಚೆಗೆ ಇಲ್ಲಿ ಒಂದು ಶಾಖೆಯನ್ನು ಪ್ರಾರಂಭಿಸಿ, ನಮ್ಮೂರಿನ ರುಚಿಯನ್ನು ಇಲ್ಲಿನವರಿಗೆ ಪರಿಚಯಿಸುತ್ತಿದ್ದಾರೆ. ಆಸ್ತಿಕರಿಗೆ ಸುಂದರವಾದ ದೇವಸ್ಥಾನಗಳಿವೆ, ಮಸೀದಿ ಇದೆ, ಗುರುದ್ವಾರವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸಿಗರಿಗೆ ಪ್ರಿಯವಾದ, ದಿನದ 24 ಗಂಟೆಯೂ ತೆರೆದಿರುವ "ಮುಸ್ತಾಫ಼" ವ್ಯಾಪಾರ ಮಳಿಗೆಯಿದೆ. ದಾರಿಯುದ್ದಕ್ಕೂ ನಮ್ಮೂರಿನ ಬೆಂಡೇಕಾಯಿ, ಹುರಳೀಕಾಯಿ, ಇನ್ನಿತರ ತಾಜಾ ತರಕಾರಿಗಳನ್ನು ಮಾರುವ ಅಂಗಡಿಗಳಿವೆ. ಹೂವು, ಹಣ್ಣು, ವೀಳೆಯದೆಲೆ ಸಿಗುವ ರಸ್ತೆಬದಿಯ ಗೂಡಂಗಡಿಗಳಿವೆ. [ಎಂಟಿಆರ್ ಮಾಲೀಕರ ಸಂದರ್ಶನ]

ಮಿನಿ ಭಾರತ ಲಿಟ್ಲ್ ಇಂಡಿಯಾ : ಇದೆಲ್ಲಾ ಇರುವುದರಿಂದಲೇ ಲಿಟಲ್ ಇಂಡಿಯಾಗೆ ಹೋದರೆ ನಮ್ಮ ದೇಶ, ನಮ್ಮ ಊರೇ ತಟ್ಟನೆ ನೆನಪಿಗೆ ಬಂದುಬಿಡುತ್ತದೆ. ವಾರಾಂತ್ಯ ಬಂತೆಂದರೆ ಅಲ್ಲಿನ ರಸ್ತೆ, ಗಲ್ಲಿ, ಅಂಗಡಿಗಳೆಲ್ಲಾ ನಮ್ಮವರಿಂದಲೇ ತುಂಬಿಹೋಗಿರುತ್ತದೆ. ವಾರವೆಲ್ಲಾ, ವಿವಿಧ ಕಷ್ಟ ಕಾರ್ಯಗಳಲ್ಲಿ ಬೆವರಿಳಿಸಿ, ಶ್ರಮಿಸಿ, ದಣಿಯುವ ಕೂಲಿ, ಕೆಲಸಗಾರರಿಗೆ ವಾರಾಂತ್ಯದಲ್ಲಿ ಸಮಯ ಕಳೆಯಲು ಲಿಟಲ್ ಇಂಡಿಯ ಬಹಳ ಆಪ್ಯಾಯಮಾನವಾದ ಜಾಗ. ರಜಾದಿನ ಬಂತೆಂದರೆ ಭಾರತ, ಬಾಂಗ್ಲಾದೇಶ ಮೂಲದ ಸಾವಿರಾರು ಕಾರ್ಮಿಕರು ಲಿಟಲ್ ಇಂಡಿಯದಲ್ಲಿ ಇರುವ ಮೈದಾನಗಳಲ್ಲಿ, ಸಿಗುವ ಮುಕ್ತ ಜಾಗಗಳಲ್ಲೂ ಜಮಾಯಿಸಿಬಿಡುತ್ತಾರೆ. ಗುಂಪುಗುಂಪಾಗಿ ಬಿಡಾರ ಹೂಡುತ್ತಾರೆ. ತಮ್ಮ ಸ್ನೇಹಿತರೊಂದಿಗೆ, ಒಂದಷ್ಟು ಹೊತ್ತು ಬಿರಿಯಾನಿ ತಿನ್ನುತ್ತಲೋ, ಟೈಗರ್ ಬಿಯರ್ ಹೀರುತ್ತಲೋ, ಶಾಪಿಂಗ್ ಮಾಡುತ್ತಲೋ ತಮ್ಮ ಒಂಟಿತನವನ್ನು ಮರೆಯಲೆತ್ನಿಸುತ್ತಾರೆ.

ಸಿಂಗಪುರದಲ್ಲಿ ಗುಂಪುಗಾರಿಕೆ, ಪ್ರತಿಭಟನೆಗಳೆಲ್ಲಾ ನಿಷಿದ್ಧ. ಪ್ರತಿಭಟನೆ ಮಾಡಲೂ ನಿರ್ದಿಷ್ಟ ಜಾಗವಿದೆ, ಅಲ್ಲದೇ ಮುಂಗಡವಾಗಿ ಅನುಮತಿ ಪಡೆದಿರಬೇಕು. ಅಂತಹದರಲ್ಲಿ, ಲಿಟಲ್ ಇಂಡಿಯದಲ್ಲಿ ಅಷ್ಟೊಂದು ಜನ ಒಟ್ಟಿಗೆ ಸೇರುವುದನ್ನು ಯಾಕೆ ತಡೆಯುವುದಿಲ್ಲ ಎನ್ನುವುದು ಸ್ಥಳೀಯರ ಪ್ರಶ್ನೆ. ಹಾಗೇನಾದರೂ ಮಾಡಿದರೆ, ಲಿಟಲ್ ಇಂಡಿಯಾದ ಸಾವಿರಾರು ಅಂಗಡಿಗಳಲ್ಲಿ ವಾರಾಂತ್ಯದಲ್ಲಿನ ವ್ಯಾಪಾರ/ವಹಿವಾಟಿಗೆ ಅಸಾಧ್ಯ ಹೊಡೆತ ಬಿದ್ದು ತಮಗೆ ಭಾರಿ ನಷ್ಟವುಂಟಾಗುವುದೆಂಬ ಭಯ ಅಲ್ಲಿನ ವರ್ತಕರದು. ಆದರೆ, ಸ್ತಳೀಯರ ಕಾಳಜಿಯಲ್ಲಿ ಹುರುಳಿಲ್ಲದಿಲ್ಲ. ವಾರಾಂತ್ಯಕ್ಕೆ ಬಂದು ಸೇರುವ ಜನರು ಅಲ್ಲಲ್ಲೇ ಬಿಟ್ಟು, ಎಸೆದು ಹೋಗುವ ಕಸದಿಂದ ಲಿಟಲ್ ಇಂಡಿಯ ಪ್ರದೇಶ, ಸಿಂಗಪುರದ ಇತರ ಸ್ವಚ್ಛ ಉಪನಗರಗಳಿಗಿಂತ ಗಲೀಜಾಗಿ ಕಾಣುವುದು ಸುಳ್ಳಲ್ಲ. ಬಯಲಿನಲ್ಲಿ ಜಾಗಸಿಗದವರು, ಅಲ್ಲೇ ಇರುವ ಬಹುಮಹಡಿ ವಸತಿ ಕಟ್ಟಡದ ಟೆರೇಸ್‌ನಲ್ಲೋ, ಖಾಲಿ ಜಾಗದಲ್ಲೋ ಅನೈತಿಕ, ಕಾನೂನು ಬಾಹಿರ ಕೆಲಸಗಳನ್ನೂ ಮಾಡುತ್ತಿದ್ದಾರೆನ್ನುವ ಗಂಭೀರ ಆರೋಪ ಕೂಡ ಇದೆ.

ಅಪಘಾತಕ್ಕೆ ಕಾರಣ? : ಸಿಂಗಪುರದಲ್ಲಿ, ದಾರಿಗಾಗಿ ವಾಹನಗಳು ಹಾರ್ನ್ ಮಾಡುವುದು ಲಿಟಲ್ ಇಂಡಿಯದಲ್ಲಿ ಮಾತ್ರವೇನೋ! ಎಲ್ಲೆಂದರಲ್ಲಿ, ಅಡ್ಡಾದಿಡ್ಡಿಯಾಗಿ, ನಮ್ಮೂರಿನಲ್ಲಿ ನಡೆದಾಡುವಂತೆ ಜನ ರಸ್ತೆ ದಾಟಿ ಹೋಗುತ್ತಾರೆ. ಈ ಬೇಜವಾಬ್ದಾರಿ ನಡವಳಿಕೆಯಿಂದಲೇ ಆಗಾಗೊಮ್ಮೆ ಇಲ್ಲಿ ಪಾದಚಾರಿಗಳೊಂದಿಗೆ ಅಪಘಾತಗಳಾಗುವುದು. ನಿನ್ನೆ ನಡೆದದ್ದೂ ಇಂತಹುದೇ ಒಂದು ದುರದೃಷ್ಟಕರ ಅಪಘಾತ. ಪಾದಚಾರಿ ಶಕ್ತಿವೇಲ್ ಕುಮಾರಸ್ವಾಮಿ, ಕೆಲಸಕ್ಕಾಗಿ ವಲಸೆ ಬಂದ ಕಾರ್ಮಿಕ, ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಅಪಘಾತದ ನಂತರ ನಡೆದದ್ದು ಅತ್ಯಂತ ಖೇದಕರ, ಖಂಡನೀಯ. ಅದರಲ್ಲೂ ಪ್ರಪಂಚದಾದ್ಯಂತ ಶಾಂತಿಪ್ರಿಯರೆಂದು ಕರೆಸಿಕೊಳ್ಳುವ ಭಾರತೀಯರು ಇಂತಹ ಕೃತ್ಯದಲ್ಲಿ ಭಾಗಿಯಾದದ್ದು ನಿಜವಾಗಲೂ ನಾಚಿಗೆಯುಂಟುಮಾಡುವ ವಿಷಯ.

ಕಾರಣಗಳೇನೇ ಇರಲಿ, ಪ್ರಚೋದನೆ ಹಲವಿರಲಿ, ಅತಿಥೇಯ ದೇಶದ ಕಾಯ್ದೆ, ಕಾನೂನನ್ನು ಪಾಲಿಸಿಕೊಂಡು ಹೋಗುವುದು ಈ ದೇಶದ ಅತಿಥಿಗಳಾಗಿರುವ ನಮಗೆ ಕ್ಷೇಮ ಮತ್ತು ಉಚಿತ. ಹಲವು ವರ್ಷಗಳಿಂದ ಸಿಂಗಪುರದಲ್ಲಿ ಬಂದು ನೆಲಸಿ, ಈ ದೇಶದ ಅಭಿವೃದ್ಧಿಗೆ ಶ್ರಮಿಸಿ, ಹೆಸರು ಮಾಡಿರುವ ಹಲವಾರು ಭಾರತೀಯರ ಉದಾಹರಣೆಗಳು ನಮ್ಮ ಮುಂದಿವೆ. ಅಂತಹ ಮಹಾನುಭಾವರು ಮತ್ತು ಅವರ ಸಾಧನೆ ನಮಗೆ ಪ್ರೇರಣೆಯಾಗಲಿ. ನಿನ್ನೆಯ ಘಟನೆ, ವಿಕಾರ ರೂಪ ತಳೆಯದೇ, ಮತ್ತಷ್ಟು ಹಿಂಸೆಗೆ ನಾಂದಿಯಾಗದೆ, ಇಷ್ಟಕ್ಕೇ ಮುಗಿದುಹೋಗುತ್ತದೆ ಎನ್ನುವ ಆಶಯ ಇಲ್ಲಿ ನೆಲಸಿರುವ ಎಲ್ಲ ಭಾರತೀಯರದು ಮತ್ತು ಸ್ಥಳೀಯರದೂ ಕೂಡ.

English summary
Singapore is one of the world's leading commercial hubs, with the fourth-biggest financial centre and one of the five busiest ports. Many sounth Asians including Indians are residing in Singapore for many decades. In this peace loving country an incident has put black spot on its reputation. Girish Jamadagni, a Kannadiga residing in Singapore explains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X