ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾವಿಕ' ಅಮೆರಿಕನ್ನಡೋತ್ಸವ ಜ್ಯೋತಿ ಬೆಳಗಿದ ಅಶೋಕ್

By * ಪ್ರಸಾದ ನಾಯಿಕ
|
Google Oneindia Kannada News

R Ashok garlanded by Keshav Babu, Hemachandra Sagar looks on
ಬೆಂಗಳೂರು, ಜು. 9 : 'ನಾವು ವಿಶ್ವ ಕನ್ನಡಿಗರು' ಎಂಬ ಘೋಷವಾಕ್ಯದೊಂದಿಗೆ ಕನ್ನಡ ಮಣ್ಣಿನ ವಾಸನೆಯನ್ನು ಹೀರಿ, ಅಮೆರಿಕದ ಕನ್ನಡ ಕಂಪನ್ನು ಕರ್ನಾಟಕದಲ್ಲಿ ಬೀರುವ ಉದ್ದೇಶದಿಂದ ಬೆಂಗಳೂರಿಗೆ ಬಂದಿರುವ ಉತ್ತರ ಅಮೆರಿಕಾದ 'ನಾವಿಕ' ಸಂಘಟನೆ ಆಯೋಜಿಸಿರುವ 'ಅಮೆರಿಕನ್ನಡೋತ್ಸವ' ರವೀಂದ್ರ ಕಲಾಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ಆರಂಭವಾಯಿತು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ, ಅಮೆರಿಕ ಮತ್ತು ಕರ್ನಾಟಕವನ್ನು ಬೆಸೆಯುವ ಈ ಉತ್ಸವವನ್ನು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಚಿಕ್ಕಪೇಟೆ ಶಾಸಕ ಡಾ. ಹೇಮಚಂದ್ರ ಸಾಗರ ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಸಿದ್ದರು.

ನಂತರ ಮಾತನಾಡಿದ ಅಶೋಕ್, "ಬಂಧು-ಬಾಂಧವರನ್ನು ಬಿಟ್ಟು ಅನ್ಯ ದೇಶದಲ್ಲಿ ಹೋಗಿ ಬದುಕಿಕಟ್ಟಿಕೊಳ್ಳಲು ನಿಜಕ್ಕೂ ಧೈರ್ಯ ಬೇಕು. ಆದರೆ, ತಮ್ಮ ಬೇರುಗಳನ್ನು ಮರೆಯದೆ ಕರ್ನಾಟಕಕ್ಕೆ ಬಂದಿರುವ ಅಮೆರಿಕನ್ನಡಿಗರನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ. ಕರ್ನಾಟಕದ ಅಭಿವೃದ್ಧಿಗಾಗಿ ಕನ್ನಡದ ರಾಯಭಾರಿಗಳಾಗಿ ನೀವು ಇದ್ದೀರಿ. ನಿಮ್ಮ ಮನಸು ಎಂದಿಗೂ ಕರ್ನಾಟಕಕ್ಕೆ ತುಡಿಯುತ್ತಿರಲಿ" ಎಂದರು.

ಮಾತು ಮುಂದುವರಿಸಿ, "ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಇಲ್ಲದಿದ್ದರೆ ನಾವು ವ್ಯಕ್ತಿತ್ವವನ್ನು ಕಳೆದುಕೊಂಡುಬಿಡುತ್ತೇವೆ. ನಿಮ್ಮ ಮುಂದಿನ ಪೀಳಿಗೆಗಳಿಗೂ ಸಂಸ್ಕೃತಿ, ಸಂಬಂಧದ ಮಹತ್ವವನ್ನು ಹೇಳಿಕೊಡಿ. ಇಲ್ಲದಿದ್ದರೆ, ಶೇ.80ರಷ್ಟು ಸಂಬಂಧಗಳು ಮುಂದೆ ಕಳಚಿಕೊಂಡುಬಿಡುವ ಅಪಾಯವಿದೆ" ಎಂದು ಅಶೋಕ್ ಅಮೆರಿಕನ್ನಡಿಗರಿಗೆ ಕಿವಿಮಾತು ಹೇಳಿದರು.

"ಪರದೇಶದಲ್ಲಿ ಕನ್ನಡ ಉದ್ಧಾರವಾಗಲು ಬಿಜೆಪಿ ಸರಕಾರ ಸಾಕಷ್ಟು ಅನುದಾನ ನೀಡಿದೆ. ಅಮೆರಿಕದಲ್ಲಿ ಕೂಡ ಕನ್ನಡಕ್ಕಾಗಿ ಕಟ್ಟಡ ನಿರ್ಮಿಸಲು ಅನುದಾನ ನೀಡಲು ಸರಕಾರ ಸಿದ್ಧವಿದೆ" ಎಂದು ಹೇಳಿ ಅಶೋಕ್ ಚಪ್ಪಾಳೆ ಗಿಟ್ಟಿಸಿದರು. ಇದೇ ಮಾತನ್ನು ಮುಂದುವರಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಕನ್ನಡ ಸಂಬಂಧದ ಕೊಂಡಿ ಕಳಚದ ಹಾಗೆ ಅಮೆರಿಕದಲ್ಲಿ ಕನ್ನಡ 'ಶಕ್ತಿ ಕೇಂದ್ರ'ಗಳಿರಬೇಕು ಎಂದರು.

ಚಿಕ್ಕ ಚೊಕ್ಕ ಮೆರವಣಿಗೆ : ಉದ್ಘಾಟನೆಗೂ ಮೊದಲು ಪುರಭವನದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಪುಟಾಣಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಅಮೆರಿಕನ್ನಡಿಗರ ಜೊತೆ ಆರ್ ಅಶೋಕ್, ಚಂದ್ರು, ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಕ್ಯಾ.ಗಣೇಶ್ ಕಾರ್ನಿಕ್ ಮೊದಲಾದವರು ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

ಸಾಂಪ್ರದಾಯಿಕವಾಗಿ ಉಡುಗೆ ತೊಡಿಗೆಗಳನ್ನು ತೊಟ್ಟ ಅಮೆರಿಕನ್ನಡಿಗರಿಗೆ ಹೇಳಿಕೊಳ್ಳಲಾಗದ ಸಂಭ್ರಮ. ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಿಡಿದು ನಲಿದಾಡಿದರು. ಅಲಂಕಾರ ಮಾಡಿಕೊಂಡ ಪುಟ್ಟಪುಟ್ಟ ಹೆಣ್ಣು ಮಕ್ಕಳಂತೂ ಲಂಗದಾವಣಿ ತೊಟ್ಟು ಮೆರೆದಾಡುತ್ತಿದ್ದರು. ನಾನಾ ಕಲಾವಿದರ ವಾದ್ಯ ಸಂಗೀತಕ್ಕೆ ಹಿರಿಯರು ತಲೆದೂಗುತ್ತಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ : ಬೆಳಿಗ್ಗೆ 11 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿವೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 7.30ಕ್ಕೆ ರಂಗಾಯಣ ತಂಡದಿಂದ 'ಕೃಷ್ಣೇಗೌಡರ ಆನೆ' ನಾಟಕ ಪ್ರದರ್ಶನದೊಂದಿಗೆ ಇಂದಿನ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ. ಭಾನುವಾರ ಕೂಡ ಇಡೀ ದಿನ ಕನ್ನಡ ಸಂಸ್ಕೃತಿಯ ಪ್ರದರ್ಶನ ಮೇಳೈಸಲಿದೆ.

ಆರಂಭದಲ್ಲಿ ಕ್ಯಾ. ಗಣೇಶ್ ಕಾರ್ನಿಕ್ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಕರ್ನಾಟಕ ಸಂಚಾಲಕರಾಗಿರುವ ಯಶವಂತ್ ಸರದೇಶಪಾಂಡೆ ಸ್ವಾಗತಿಸಿದರು. ವೇದಿಕೆಯ ಮೇಲೆ ನಾವಿಕ ಅಧ್ಯಕ್ಷ ಕೇಶವ ಬಾಬು, ಸುರೇಶ್ ರಾಮಚಂದ್ರ, ಡಾ. ರಾಮಪ್ಪ, ಕನ್ನಡ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಬಿವಿ ರಾಜಾರಾಂ ಉಪಸ್ಥಿತರಿದ್ದರು. [ನಾವಿಕ ಅಮೆರಿಕನ್ನಡೋತ್ಸವ ಚಿತ್ರಗಳು]

English summary
Home minister R Ashok kick starts 2 days colorful Navika Americannadotsava at Ravindra Kalakshetra in Bangalore on July 9, 2011. Mukhyamantri Chandru, Ganesh Karnik participated in a brief procession from Town Hall to Ravindra Kalakshetra with America Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X