ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಗಣ್ಣು , ಒಳಗಣ್ಣು ತೆರೆದು ಪಾವನಳಾದ ಗಾಂಧಾರಿ

By ಡಾ.ಎಚ್‌.ವೈ.ರಾಜಗೋಪಾಲ್‌ ಮೀಡಿಯಾ, ಪೆನ್ಸಿಲ್ವೇನಿಯಾ, ಅಮೆರಿಕ
|
Google Oneindia Kannada News

ಭಾರತದ ಕತೆಯಲ್ಲಿ ನಮಗೆ ಕಾಣುವ ಗಾಂಧಾರಿಯ ಚಿತ್ರ ಒಬ್ಬ ಮಹಾ ಪತಿವ್ರತೆಯದು. ಗಾಂಧಾರ ದೇಶದ ಅರಸು ಸುಬಲನ ಮಗಳಾದ ಅವಳು ಧೃತರಾಷ್ಟ್ರನೊಂದಿಗೆ ಮದುವೆಯಾಗುವ ಮುಂಚೆಯೇ ಮಹಾಶಕ್ತಿ ಸಾಮರ್ಥ್ಯಗಳನ್ನು ಕೇಳಿ ಅವನು ಕುರುಡನೆಂದು ತಿಳಿದಿದ್ದರೂ ಅವನಿಗೇ ತನ್ನ ಮನಸ್ಸನ್ನು ಅರ್ಪಿಸಿದ್ದಳಂತೆ. ಮದುವೆಯಾದಾಗ, ಗಂಡನಿಗೆ ಕಾಣದ ಪ್ರಪಂಚ ತನಗೂ ಬೇಡ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಡೆಯವರೆಗೂ ಹಾಗೆಯೇ ಇದ್ದಳು. ಗಂಡನಿಗಾಗಿ ತನ್ನ ದೃಷ್ಟಿಯನ್ನೇ ತ್ಯಾಗ ಮಾಡಿದ ಆಕೆಯನ್ನು ಲೋಕವೆಲ್ಲ ಕೊಂಡಾಡಿತು. ಆದರ್ಶ ಸ್ತ್ರೀ ಎಂದು ಗೌರವಿಸಿತು.

ತ್ಯಾಗಮಯಿ ಗಾಂಧಾರಿ, ಆದರೆ ಅವಳ ಹೃದಯದಲ್ಲಿ ಬೆಂಕಿ! ಅಷ್ಟು ಮಕ್ಕಳನ್ನು ಹಡೆದರೂ ಅವಳು ಅವರೊಬ್ಬರ ನಗುಮೊಗವನ್ನೂ ಕಾಣಲಿಲ್ಲ . ಆ ಮಕ್ಕಳ ಚಿನ್ನಾಟಗಳನ್ನು ತಾಯಾಗಿ ನೋಡಿ ನಲಿಯಲಿಲ್ಲ . ಅವರು ಬೆಳೆದು ದೊಡ್ಡವರಾಗಿ ಅಷ್ಟು ದೊಡ್ಡ ರಾಜ್ಯದ ಅಧಿಪತಿಗಳಾಗಿದ್ದ ವೈಭವವನ್ನು ಕಣ್ಣಾರೆ ಕಾಣಲಿಲ್ಲ . ದೊಡ್ಡ ಮನೆತನದ ಒಂದು ಪೀಳಿಗೆ ಹುಟ್ಟಿ ಬೆಳೆದು ವಿಜೃಂಭಿಸಿ ಕಡೆಗೆ ನಾಶವಾಗಿ ಹೋಗುತ್ತಿದ್ದರೂ, ಒಂದನ್ನೂ ನೋಡೆನೆಂದು ಕಣ್ಣಿಗೆ ಬಟ್ಟೆ ಬಿಗಿದುಕೊಂಡಿದ್ದಳು.

ಹೀಗೇಕೆ ಮಾಡಿದಳು ಗಾಂಧಾರಿ? ಗಂಡನಿಗೆ ಕಣ್ಣಿಲ್ಲದಿದ್ದರೆ ತಾನೂ ಏಕೆ ಕುರುಡಾಗಬೇಕು? ಕಣ್ಣಿಲ್ಲದ ಅವನಿಗೆ ತಾನೇ ಕಣ್ಣಾಗಿ ಇರುತ್ತೇನೆ. ಅವನ ಭಾರ ಇಳಿಸುತ್ತೇನೆ ಎಂಬ ಮನೋಭಾವ ಏಕೆ ತಳೆಯಲಿಲ್ಲ? ತನ್ನ ಮಕ್ಕಳ ಸುಖ, ಅವರ ಮೇಲ್ಮೆಗಾದರೂ ಅವರನ್ನು ನೋಡುವ ಕಾತುರ ಅವಳ ತಾಯ್ತನಕ್ಕೆ ತೋರಲಿಲ್ಲವೆ? [ಎಂಭತ್ತರ ಎಚ್ ವೈ ಆರ್ ಗೆ ಅಭಿನಂದನೆಗಳ ಮಹಾಪೂರ]

ಈ ಪ್ರಶ್ನೆಗಳಿಗೆ ಸ್ವಲ್ಪವಾದರೂ ಸಮಾಧಾನ ಎಸ್‌.ಎಲ್‌.ಭೈರಪ್ಪನವರ ವೈಶಿಷ್ಟ್ಯಪೂರ್ಣ ಕಾದಂಬರಿ 'ಪರ್ವ’ದಲ್ಲಿ ಸಿಕ್ಕುತ್ತದೆ.

ಪರ್ವದ ಕತೆಯಲ್ಲೂ ಜನರ ಮಟ್ಟಿಗೇ- ಬರೀ ಜನರ ಮಟ್ಟಿಗೆ ಏನು, ಭೀಷ್ಮ, ಧೃತರಾಷ್ಟ್ರ ಮೊದಲಾಗಿ ಎಲ್ಲರಿಗೂ- ಅವಳು ಮಹಾ ಪತಿವ್ರತೆಯೇ. ಇಡೀ ಆರ್ಯಾವರ್ತವೇ ಅವಳನ್ನು ಒಂದು ಆದರ್ಶ ಸ್ತ್ರೀ ಎಂದು ಎಣಿಸಿ ಅವಳನ್ನು ಪೂಜ್ಯಸ್ಥಾನದಲ್ಲಿರಿಸಿದೆ. ಎಲ್ಲರೂ ಅವಳ ಕಾಲು ಮುಟ್ಟಿ ನಮಸ್ಕರಿಸುವವರೇ. ಆದರೆ ಗಾಂಧಾರಿಯ ನಿಜ ಅವಳೊಬ್ಬಳಗೆ ಮಾತ್ರ ಗೊತ್ತು . ವಿಷಾದ, ನೋವು, ಅಶಾಂತಿಗಳೊಂದಿಗೆ ಆ ನಿಜವೂ ಅವಳ ಹೃದಯಾಂತರಾಳದಲ್ಲಿ ಹುದುಗಿಹೋಗಿದೆ. ಆ ನಿಜದ ಸ್ವರೂಪ ಇತರರು ಕಲ್ಪಿಸಿದ ಭ್ರಮೆಯಲ್ಲಿ ಅವಳಿಗೂ ಮಸುಕಾಗಿದ್ದು ಈಗ ಮತ್ತೆ ಕಾಣತೊಡಗಿದೆ- ಭಾರತ ಮಹಾಯುದ್ಧ ತಂದೊಡ್ಡಿದ ಪ್ರಶ್ನೆಗಳು ಕೃಷ್ಣನ ಅನುಕಂಪದಿಂದ, ಇತರರ ಮನಸ್ಸನ್ನೂ ಚೆನ್ನಾಗಿ ಅರಿತುಕೊಳ್ಳುವ ಅವನ ಅಸಾಧಾರಣ ಸಾಮರ್ಥ್ಯದಿಂದ.

Why Gandhari closed her eyes with clothes? : Writes Dr.H.Y.Rajagopal

ಹದಿನೆಂಟು ದಿನಗಳ ಯುದ್ಧ ಮುಗಿದ ಬಳಿಕ ಗಾಂಧಾರಿ ಬಳಿ ಬಂದ ಕೃಷ್ಣ ಆಕೆಯನ್ನು ಸಂತೈಸಿದ ಬಳಿಕ ಪ್ರಶ್ನೆ ಕೇಳಿ...

'ದೇವಿ ಗಾಂಧಾರಿ, ನಿನ್ನ ಕೈಲಿ ಒಂದು ಆಪ್ತ ವಿಷಯ ಮಾತಾಡಬೇಕೆಂದು ಬಹುದಿನಗಳಿಂದ ಆಸೆ ಇದೆ. ನೀನು ನಿಜ ಹೇಳುವೆಯಾದರೆ ಕೇಳುತ್ತೇನೆ. ಏನನ್ನೂ ಮುಚ್ಚಿಡದೆ ನಿಜ ಹೇಳಿಬಿಡುವ ಕಾಲ ಜೀವನದಲ್ಲಿ ಒಮ್ಮೆಯಾದರೂ ಬರಬೇಕು. ನಿನಗೆ ಈಗ ಆ ಮನೋಸ್ಥಿತಿ ಬಂದಿದೆಯೆಂದು ನನಗೆ ಅನ್ನಿಸುತ್ತದೆ... ಮಹಾರಾಜನಂತೂ ಕುರುಡನಾಗಿಯೇ ಹುಟ್ಟಿದ. ಆದರೆ ನೀನೇಕೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೆ?’ ಎಂದು ಕೇಳಿದ.

ಕೃಷ್ಣನ ಪ್ರಶ್ನೆಯಿಂದ ಗಾಂಧಾರಿ ಗಲಿಬಿಲಿಗೊಂಡಳು. ಅದಕ್ಕೆ ಉತ್ತರ ಕೊಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ನಿಜ ಹೇಳಿ ಆಗಬೇಕಾದುದೇನು ಎಂದೂ ಕೇಳಿದಳು. ಕೃಷ್ಣ ನೇರವಾಗಿ ಎರಡು ಮಾತು ಹೇಳಿದ- ಅದರಿಂದ ಭ್ರಮೆ ಕಳೆಯುತ್ತದೆ; ಶಾಂತಿ ಸಿಕ್ಕುತ್ತದೆ. ಆ ಮಾತು ಅವಳಿಗೆ ತಟ್ಟಿತೇನೋ... ಮೇಲೆದ್ದು ಎದ್ದು ಬರಲು ಹವಣಿಸುತ್ತಿದ್ದ ನಿಜವನು ಗಾಂಧಾರಿ ಇನ್ನು ಮುಚ್ಚಿಡಲಾರದೆ ಹೋದಳು. ಅವಳು ಆಗ ಮನಸ್ಸು ಬಿಚ್ಚಿ ಹೇಳತೊಡಗಿದಳು ; ಧೃತರಾಷ್ಟ್ರನೊಂದಿಗೆ ಮದುವೆಯಾಗುವುದು ಗಾಂಧಾರಿಗೆ ಏನೇನೂ ಇಷ್ಟವಿರಲಿಲ್ಲವಂತೆ. ಅವಳು ಬೇಡ ಬೇಡ ಎನ್ನುತ್ತಿದ್ದರೂ ಮದುವೆಯ ನಿಶ್ಚಯ ಆಗಿಯೇ ಹೋಯಿತು. 'ಅಪ್ಪ ಲೋಭಕ್ಕೆ ಪಕ್ಕಾದ. ಅವನ ಎದುರಿಗೇ ನಾನು ಹೊದೆದಿದ್ದ ಮೇಲುವಸ್ತ್ರದ ಸೆರಗನ್ನು ಸರ್ರನೇ ಸೀಳಿ, ಕುರುಡನಿಗೇ ಕೊಡುವುದಾದರೆ ನಾನು ಅವನ ಮುಖ ನೋಡುವುದಿಲ್ಲ ಎಂದು ಎರಡೂ ಕಣ್ಣುಗಳನ್ನೂ ಕಟ್ಟಿಕೊಂಡೆ. ಆಗಲೂ ಅಪ್ಪನ ಅಂತಃಕರಣ ಜಾಗೃತವಾಗಲಿಲ್ಲ . ಹುಡುಗಿಯ ಮೊಂಡುತನ ನಾಲ್ಕು ದಿನದಲ್ಲಿ ಸರಿಹೋಗುತ್ತದೆ ಎಂದು ಭಾವಿಸಿದನೋ! ಹಾಗೆಯೇ ಮೇಲೆ ಹತ್ತಿ ಕಳಿಸಿದ... ಕೃಷ್ಣ ನಾನು ಎಷ್ಟು ಲಕ್ಷಣವಾಗಿದ್ದೆ ಬಲ್ಲೆಯಾ। ಸ್ವಲ್ಪವೂ ಬಗ್ಗಡವಿಲ್ಲದ ನಮ್ಮ ಬೆಟ್ಟದ ಬುಡದ ತಿಳಿ ನೀರಿನಲ್ಲಿ ನನ್ನನ್ನು ನೋಡಿಕೊಂಡು ಹಿಗ್ಗುತ್ತಿದ್ದೆ. ಗೆಳತಿಯರು ನನ್ನನ್ನಾಧರಿಸಿ ಕನಸಿನ ಕತೆ ಹೆಣೆಯುತ್ತಿದ್ದರು. ಅಲ್ಲಿಗೆ ಮುಗಿಯಿತು ನನ್ನ ರೂಪ, ಆನಂತರ ನಾನೂ ನೋಡಿಕೊಳ್ಳಲಿಲ್ಲ . ನೋಡುವಂತಹ ಗಂಡನೂ ಸಿಕ್ಕಲಿಲ್ಲ...’ ಕೃಷ್ಣ ಮಾತು ಮುಂದುವರಿಸುತ್ತ ಕೇಳಿದ : 'ಇಲ್ಲಿಗೆ ಬಂದಮೇಲೆ ನೀನೇಕೆ ಕಣ್ಣು ಪಟ್ಟಿಯನ್ನು ಕಿತ್ತು ಹಾಕಲಿಲ್ಲ ?’ ಈಗ ಗಾಂಧಾರಿ ಹೇಳಿದಳು :'ಕೃಷ್ಣ , ಇದೇ ನಿಜವಾದ ನಿಜ. ಹೇಳಿಬಿಡುತ್ತೇನೆ ಕೇಳು, ಇಲ್ಲಿಗೆ ಬಂದೆನಲ್ಲ , ಭೀಷ್ಮನ ಆದಿಯಾಗಿ ಎಲ್ಲರೂ ನನಗೆ ದೇವಿಯ ಪಟ್ಟ ಕಟ್ಟಿಬಿಟ್ಟರು. ಎಂತಹ ಮಹಾಸಾಧ್ವಿ, ಗಂಡನಿಗಿಲ್ಲದ ದೃಷ್ಟಿಭಾಗ್ಯ ತನಗೂ ಬೇಡವೆಂದು ಕಣ್ಣು ಪಟ್ಟಿ ಕಟ್ಟಿಕೊಂಡಿದ್ದಾಳೆ. ಮಹಾ ಪತಿವ್ರತೆ, ಅವಳು ಕಾಲಿಟ್ಟ ಜಾಗ ಪಾವನ, ಅವಳು ವಾಸಿಸುವ ನಾಡಿನಲ್ಲಿ ಸಂಪತ್ತು ಉಕ್ಕುತ್ತದೆ. ಒಂದೇ ಎರಡೇ ಹೊಗಳಿಕೆ! ಮೊದಮೊದಲು ರೇಗುತ್ತಿತ್ತು . ಆದರೆ ಹೊಗಳಿಕೆಯ ರುಚಿ ಹತ್ತಿತೆಂದು ಕಾಣುತ್ತದೆ. ದೇವಿಯ ಪಟ್ಟ ಕಳೆದುಕೊಳ್ಳಲು ಮನಸ್ಸು ಬರಲಿಲ್ಲ . ನಾನಿರುವ ನಾಡಿನಲ್ಲಿ ಸಂಪತ್ತು ಹರಿಯುತ್ತದೆ. ನಾನಿದ್ದ ಕಡೆ ಜಯ ಉಕ್ಕುತ್ತದೆಂಬ ನಂಬಿಕೆ ಬೆಳೆಯುತ್ತಿತ್ತು . ಬೆಳೆದು ಗಟ್ಟಿಯಾಯಿತು. ಈ ಯುದ್ಧದಲ್ಲಿ ನನ್ನ ಮಕ್ಕಳು, ಮೊಮ್ಮಕ್ಕಳು, ಅಳಿಯ ಎಲ್ಲರೂ ಸತ್ತು , ಅಷ್ಟು ದೊಡ್ಡ ಸೇನೆ ನಾಶವಾಗಿ, ಈ ಅರಮನೆಯಲ್ಲಿ ದಿಕ್ಕಿಲ್ಲದಂತಾಗಿ... ನಾನಿದ್ದ ಜಾಗ ಪಾವನವಾದರೆ ಈ ಬವಣೆ ಬರಬೇಕೆ? ನಾನು ಕಣ್ಣು ಕಟ್ಟಿಕೊಂಡ ನಿಜವಾದ ಕಾರಣವನ್ನೂ ನಾನೇ ಮರೆತು ಈ ಹಸ್ತಿನಾವತಿಯ ಅರಮನೆಯವರು ಆರೋಪಿಸಿದ ಪಾವನತೆಯಲ್ಲಿ ಮುಳುಗಿಬಿಟ್ಟಿದ್ದೆ. ಈ ಯುದ್ಧದಿಂದ ನಿಜ ಮರುಕಳಿಸಿತು. ಇದೇ ಸಮಯದಲ್ಲಿ ನೀನೂ ನನ್ನ ಮನಸ್ಸು ತಟ್ಟಿ ಕೇಳಿದೆ. ಇದುವರೆಗೆ ನನ್ನ ಮಕ್ಕಳಲ್ಲಿ ಯಾರೂ ಕೂಡ 'ಅಮ್ಮ ನೀನೇಕೆ ಹೀಗೆ ಕುರುಡಿಯಾಗಿದ್ದೀಯ ? ನಮ್ಮನ್ನು ನೋಡುವುದಕ್ಕಾದರೂ ಕಣ್ಣು ಬಿಡು’ ಎಂದು ನೀನು ಕೈ ಹಿಡಿದು ಕೇಳಿದ ರೀತಿಯಲ್ಲಿ ಕೇಳಲಿಲ್ಲ. ಹೆಣ್ಣುಮಗಳು ಕೂಡ. ತಾಯಿಯ ಕುರುಡಿನ ಮೇಲೆಯೇ ಪಾವನತೆಯೂ ನಿಂತಿದೆ ಎಂದು ಕಾಲುಮುಟ್ಟಿ ನಮಸ್ಕರಿಸುತ್ತಿದ್ದರು. ಗಾಂಧಾರಿಯ ಅಂತರಂಗದಿಂದ ಬಂದ ಈ ಮಾತನ್ನು ಕೇಳಿ ಎಲ್ಲರೂ ಸ್ತಬ್ಧರಾದರು.

ಕೃಷ್ಣನೆಂದ : ' ತಾಯಿ, ನೀನು ಹುಟ್ಟು ಕುರುಡಿಯೂ ಅಲ್ಲ. ಮೇಲೆ ಅರಿವೆ ಬಿಳಲು ಕಟ್ಟಿಕೊಂಡರೆ ದೃಷ್ಟಿ ನಾಶವಾಗುವುದಿಲ್ಲ. ಈಗಲೂ ಏಕೆ ಅದನ್ನು ತೆಗೆದು ಹಾಕಿ ಸುತ್ತ ಮುತ್ತ ನೋಡಬಾರದು ?’ ಗಾಂಧಾರಿಗೆ ಈಗಲೂ ಅಳುಕು. ಇಷ್ಟು ದಿನವೇ ಇಲ್ಲದಿದ್ದ ದೃಷ್ಟಿ ಈಗೇಕೆ ಎಂಬ ನಿರಾಸೆಯ ಭಾವ. ಕೃಷ್ಣ ಅವಳ ಕಣ್ಣಿನ ಪಟ್ಟಿಗೆ ಕೈ ಹಾಕಿ ಅವಳು ವಿರೋಧಿಸುತ್ತಿದ್ದರೂ ಅದನ್ನು ಮೆಲ್ಲಗೆ ಕಳಚಿದ... ಪಟ್ಟಿ ತೆಗೆದ ಮೇಲೂ ಮುಚ್ಚಿಕೊಂಡೇ ಇದ್ದ ಅವಳ ಕಣ್ಣುರೆಪ್ಪೆಯ ಮೇಲೆ ಮೃದುವಾಗಿ ಸವರಿದ, ಗಾಂಧಾರಿ ಕಣ್ಣು ತೆರೆದಳು.

ಐವತ್ತು ಅರವತ್ತು ವರ್ಷ ಬೆಳಕನ್ನು ಕಾಣದೆ, ಜೀವನವನ್ನೂ ಕಾಣದೆ, ಸತ್ಯವನ್ನೂ ಕಾಣದೆ ಮುಚ್ಚಿಕೊಂಡಿದ್ದ ಕಣ್ಣುಗಳು ನಿಧಾನವಾಗಿ ಹೊಸ ಜಗತ್ತಿಗೆ ಹೊಂದಿಕೊಂಡವು. ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವಾಗ ಇದ್ದ ನಿರ್ಧಾರವೇ ಈಗಲೂ ಮರಳಿ ಬಂದಿದೆ, ಆದರೆ ಬೇರೊಂದು ರೀತಿಯಲ್ಲಿ ಎಂಬಂತೆ ಕಣ್ಣುಗಳನ್ನು ಪ್ರಯತ್ನಪೂರ್ವಕವಾಗಿ ತೆರೆದಿಟ್ಟುಕೊಂಡಳು. ಕೃಷ್ಣ ಸುತ್ತಲಿದ್ದವರನ್ನೆಲ್ಲ ಪರಿಚಯ ಮಾಡಿಸಿದ. ' ಇವನು ಧರ್ಮಜ, ಇವನು ಭೀಮ... ಕುಂತಿ ದ್ರೌಪದಿ...’ ದ್ರೌಪದಿ ಹತ್ತಿರ ಬಂದಾಗ ಗಾಂಧಾರಿ ಅವಳ ತಲೆಯನ್ನೂ ನೇವರಿಸಿ, ಅವಳ ತಲೆಗೂದಲಿನಲ್ಲಿ ಕೈಯಾಡಿಸಿದಳು. ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಹಾಗೇ ಅತ್ತ ತಿರುಗಿ ಗಾಂಧಾರಿ ತನ್ನ ಗಂಡನನ್ನೂ ನೋಡಿದಳು. ಬೊಕ್ಕ ತಲೆ, ಬಿಳಿಯ ಗಡ್ಡ... ತನ್ನ ಕೈಗಳನ್ನೂ ನೋಡಿಕೊಂಡಳು. ಸುಕ್ಕುಗಳು ! ಕಳೆದ ಬಾರಿ ಅವನ್ನು ನೋಡಿಕೊಂಡಿದ್ದಾಗ ಅವುಗಳ ಸೌಂದರ್ಯ ಅವಳಿಗೆ ಎಷ್ಟು ಹೆಮ್ಮೆಯಾಗಿತ್ತು !

ಎಲ್ಲರೂ ಹೊರಟು ಹೋದ ಮೇಲೆ ಆ ಮಧ್ಯಾಹ್ನ ಗಾಂಧಾರಿ ತನ್ನ ಮಕ್ಕಳನ್ನು ಚಿತ್ರಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ನೋಡಿಯೇ ಇರದಿದ್ದ ಅವರ ರೂಪವನ್ನು ಊಹಿಸಿಕೊಳ್ಳಲಾಗಲಿಲ್ಲ. ಪ್ರಯತ್ನಿಸಿದಷ್ಟೂ ಅವಳ ಕಣ್ಣ ಮುಂದೆ ಮೂಡಿಬರುತ್ತಿದ್ದುದು ಪಾಂಡವರ ಮುಖಗಳೇ. ಎಷ್ಟು ಸುಂದರರು ಅವರು, ಕುಂತಿ ಎಂಥ ಪುಣ್ಯವಂತೆ ! ಎಂದುಕೊಂಡಳು. ತನ್ನ ಮಕ್ಕಳೂ ತನ್ನ ಹಾಗೆ ಸುಂದರವಾಗಿದ್ದರೆ ...? ಆ ದಿನ ಅವಳಿಗೆ ಎಲ್ಲಿ ಹೋದರೂ ಏನೋ ಸಿಕ್ಕೀತೆಂಬ ಭಾವ ! ಆದರೆ ದೃತರಾಷ್ಟ್ರನಿಗೆ ಕೃಷ್ಣನ ಬಗ್ಗೆ ಕೋಪ. ಎಂಥ ಮಹಾನ್‌ ವ್ಯಕ್ತಿ ಗಾಂಧಾರಿಯನ್ನೂ ಸಾಮಾನ್ಯ ಸ್ತ್ರೀಯ ಮಟ್ಟಕ್ಕೆ ಇಳಿಸಿಬಿಟ್ಟನಲ್ಲ ಎಂದು. ಜತೆಗೆ ಹೆದರಿಕೆ. ಮಕ್ಕಳೆಲ್ಲ ಸತ್ತರು. ರಾಜ್ಯ ಹೋಯಿತು, ತನಗೆ ಕಣ್ಣು ಬಂತು, ಇನ್ನು ಇವನನ್ನು ಕಟ್ಟಿಕೊಂಡು ಏನಾಗಬೇಕಾಗಿದೆ ಎಂದೆಲ್ಲಿ ಗಾಂಧಾರಿ ತನ್ನ ಕೈಬಿಡುವಳೋ ಎಂಬ ಭಯ. ಬಿಕ್ಕಿ ಬಿಕ್ಕಿ ಅತ್ತ ಧೃತರಾಷ್ಟ್ರ. ಗಾಂಧಾರಿಯೇ ಅವನಿಗೆ ಆಶ್ವಾಸನೆ ನೀಡಿ ಸಮಾಧಾನ ಮಾಡಿದಳು....' ಇಷ್ಟು ವರ್ಷ ನಿನ್ನೊಡನೆ ಇದ್ದ ಮೇಲೆ ನನಗಾದರೂ ಬೇರೆ ದಿಕ್ಕಿಲ್ಲವೆಂಬುದು ನನಗೆ ಗೊತ್ತಲ್ಲವೇ ? ನೀನು ಕಾಡಿಗೆ ಹೋದರೆ ನಾನು ನಿನ್ನ ಹಿಂದೆ ಬರುತ್ತೇನೆ. ನಿನ್ನ ಕಂಬಳಿಯ ಕೊನೆ ಹಿಡಿದು’- ಎಂದು .

ಗಾಂಧಾರಿಗೆ ಈಗ ರಣರಂಗ ನೋಡುವ ಆಸೆ. ತನ್ನ ಮಕ್ಕಳ ಮೃತದೇಹಗಳನ್ನಾದರೂ ನೋಡುವ ಬಯಕೆ. ಕೃಷ್ಣನಿಗೆ ಹೇಳಿ ಕಳಿಸಿ ತನ್ನ ಇಷ್ಟ ತಿಳಿಸುತ್ತಾಳೆ. ರಣರಂಗದಲ್ಲಿ ಬಿದ್ದಿರುವ ನೂರಾರು ಶವಗಳನ್ನು ಯಾರನ್ನು ಗುರ್ತಿಸುವುದೂ ಸಾಧ್ಯವಾಗಲಾರದೆಂದು ಹೇಳಿ ಕೃಷ್ಣ ಅವಳಿಗೆ ಆ ನೋವನ್ನು ತಪ್ಪಿಸಲು ಪ್ರಯತ್ನಿಸುತ್ತಾನೆ. ಆದರೆ ಗಾಂಧಾರಿ ಅಲ್ಲಿಗೆ ಹೋಗಲೇಬೇಕು.

ರಣರಂಗಕ್ಕೆ ಹೋದದ್ದೇನೋ ಆಯಿತು. ಆದರೆ ಕೃಷ್ಣ ಹೇಳಿದ್ದಂತೆ ಅಲ್ಲಿ ಯಾರನ್ನೂ ಗುರ್ತಿಸಲೇ ಆಗಲಿಲ್ಲ. ಹತಾಶಳಾದ ಗಾಂಧಾರಿ ಕೃಷ್ಣನಿಗೆ ಹಿಂತಿರುಗಿ ಹೋಗೋಣವೆಂದಳು. ಮರಳಿ ಬರುವ ದಾರಿಯಲ್ಲಿ ಗಾಂಧಾರಿ ಬಹಳ ಬಳಲಿದ್ದಳು. ಅವಳ ಮನಸ್ಸು ಮುದುಡಿ ಹೋಗಿತ್ತು. ಹಾಗೇ ಜೊಂಪು ಹತ್ತಿ ಮಲಗಿದ್ದವಳು ಮಧ್ಯೆ ಮಧ್ಯೆ ಬಿಕ್ಕುತ್ತಿದ್ದಳು. ಸ್ವಲ್ಪ ಹೊತ್ತಿನ ಬಳಿಕ ರಥ ನಡೆಸುತ್ತಿದ್ದ ಕೃಷ್ಣ ಹಿಂತಿರುಗಿ ನೋಡುವ ಹೊತ್ತಿಗೆ ಗಾಂಧಾರಿ ಎದ್ದು ಕುಳಿತಿದ್ದಳು. ಅವಳ ಕಣ್ಣುಗಳು ತೆರೆದಿವೆ. ರೆಪ್ಪೆಗಳೂ ಅಲುಗಾಡುತ್ತಿವೆ. ಆದರೆ ಮುಖದಲ್ಲಿ ಏನೋ ಭಾವಶೂನ್ಯತೆ- ಏನೂ ಕಾಣಿಸುತ್ತಿಲ್ಲವೇನೋ ಎಂಬ ರೀತಿ. ಗಾಂಧಾರಿ ಕಣ್ಣುಗಳನ್ನು ಹೊಸಕಿ ಹೊಸಕಿ ಮತ್ತೆ ನೋಡುತ್ತಿದ್ದಾಳೆ. ಕೃಷ್ಣ ಏಕೆ, ಏನಾಯಿತು ಎಂದು ವಿಚಾರಿಸುತ್ತಾನೆ. ಆಗ ಅವಳು ಹೇಳುತ್ತಾಳೆ : ' ಇದ್ದಕ್ಕಿದ್ದಂತೆ ಎಚ್ಚರವಾಯಿತು. ಎದ್ದು ಕುಳಿತುಬಿಟ್ಟೆ. ಏನೂ ಕಾಣಿಸುತ್ತಿಲ್ಲ, ನಾನು ನಿಜವಾಗಿಯೂ ಕುರುಡಿಯಾದೆ ಎನ್ನಿಸುತ್ತದೆ... ಕೃಷ್ಣ ನನಗೆ ಮತ್ತೆ ದೃಷ್ಟಿ ಬರುವುದಿಲ್ಲ ಎಂದು ಮನಸ್ಸು ಖಚಿತವಾಗಿ ಹೇಳುತ್ತಿದೆ. ನಾನು ಹೀಗೆಯೇ ಇರುತ್ತೇನೆ. ಧೃತರಾಷ್ಟ್ರನ ಸಂಗಡ. ಅದೂ ಒಂದು ತರದ ನೆಮ್ಮದಿ.’

ಕಣ್ಣು ತೆರೆದಿದ್ದ ಗಾಂಧಾರಿ ಮತ್ತೆ ಹೇಗೆ ಕುರುಡಾದಳು? ಅಷ್ಟು ವರ್ಷ ಬೆಳಕು ಕಾಣದೆ ಇದ್ದು ಈಗ ಒಮ್ಮೆಲೇ ಅದನ್ನು ಕಂಡಿದ್ದು ಕಣ್ಣಿ ಘಾಸಿಯಾಯಿತೇ? ಉತ್ತರವನ್ನು ' ಪರ್ವ’ ನಮ್ಮ ಊಹೆಗೇ ಬಿಡುತ್ತದೆ. ಏನಾದರೇನು, ಈಗ ಅವಳ ಒಳಗಣ್ಣು ತೆರೆದಿದೆ. ನಿಜದ ಬೆಳಕಿನಲ್ಲಿ ಹೊಳೆಯುತ್ತಿದೆ. ಅವಳು ಈಗ ಪಾವನಳಾಗಿದ್ದಾಳೆ.’

English summary
Gandhari is a character in the Hindu epic, the Mahabharata. In the epic, she was an incarnation of Mati, the Goddess of Intelligence, as the daughter of Subala, the king of Gandhara. Gandhari voluntarily blindfolded herself throughout her married life. Her husband Dhritarashtra was born blind and on realizing this, she decided to share the pain of her blind husband. A portrait of Gandhari in Kannada by NRI scholar Dr H Y Rajgopal. Dr. Rajagopal is an engineer by profession. He had his education at N.I.E. Mysore (B.E.), IISc. Bangalore (M.E.) and Penn State Univ (Ph.D). He has served at Villanova University and Raytheon Engineers and Constructions. Prolific writer Rajgopal is a recipient of Kannada Rajyotsava Award ( 2007), lives in Philadelphia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X