ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾ.ಶಿ.ಮ. ಜೊತೆಗೊಂದು ಸುಮಧುರ ಸಂಜೆ

By Staff
|
Google Oneindia Kannada News

*ಜ್ಯೋತಿ ಮಹದೇವ, ‘ಸುಪ್ತ ದೀಪ್ತಿ’, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾ

ಮೊನ್ನೆ ಆಗಸ್ಟ್‌ 5 ರ ಸಂಜೆ ಕನ್ನಡದ ಹಿರಿಯ ಕವಿ ಡಾ.ಜಿ.ಎಸ್‌.ಶಿವರುದ್ರಪ್ಪ , ಇಲ್ಲಿ ನಮ್ಮ ನಡುವೆ, ಕುತೂಹಲಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದಣ ಹೆಜ್ಜೆಯನರಿಯಲಾಗದು...’ಎಂಬ ಅಲ್ಲಮ ಪ್ರಭುವಿನ ವಚನವನ್ನು ಉದ್ಗರಿಸಿದರು. ಆ ಮಾತಿನ ಪ್ರಾಯೋಗಿಕ ಪ್ರಯೋಜನ ಎರಡು ವಾರಗಳೊಳಗೆ ಲಭಿಸಿದ್ದು ನಮ್ಮ ಸೌಭಾಗ್ಯ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ 800, 1000 ವರ್ಷಗಳ ಹಿಂದೆ ಮೂಡಿದ, ಎಂದೂ ಮರೆಯಲಾಗದ ಎರಡು ಹೆಜ್ಜೆ ಗುರುತುಗಳ ಪರಿಚಯ ನಮಗಾಯಿತು. ಆ. 18 ರ ಸಂಜೆ ಸನ್ನಿವೇಲ್‌ ಹಿಂದೂ ಮಂದಿರದ ಸಮುದಾಯ ಕೇಂದ್ರದ ಒಳ ಸಭಾಂಗಣದಲ್ಲಿ . ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಬಳಗದ ಸಂಘತ್ವದಲ್ಲಿ , ಹರಿಹರೇಶ್ವರ ಅವರ ನೇತೃತ್ವದಲ್ಲಿ , ಅಪರಾಹ್ನ 3 ರಿಂದ 5 ರವರೆಗೆ ನಡೆದ ಈ ಸಾಹಿತ್ಯ ಗೋಷ್ಠಿಯಲ್ಲಿ ಸಹೃದಯರು ಸಾಹಿತ್ಯ ಸಿಂಚನದಿಂದ ಪುಳಕಿತರಾದರು. ಸಮಕಾಲೀನ ಕನ್ನಡ ಸಾರಸ್ವತ ಲೋಕದ ದಿಗ್ಗಜಗಳಲ್ಲೊಬ್ಬರಾದ ಡಾ.ಸಾ.ಶಿ.ಮರುಳಯ್ಯನವರು ಪಂಪ ಭಾರತವೆಂದು ಹೆಸರಾದ ವಿಕ್ರಮಾರ್ಜುನ ವಿಜಯ ಮತ್ತು ಗದುಗಿನ ಭಾರತವೆಂದು ಕರೆಯಲ್ಪಡುವ ಕರ್ಣಾಟ ಭಾರತ ಕಥಾಮಂಜರಿ ಇವೆರಡರ ತುಲನಾತ್ಮಕ ಪರಿಚಯ ಮಾಡಿಕೊಟ್ಟರು.

ಲಲಿತ ರಾಘವೇಂದ್ರ ಅವರ ಪ್ರಾರ್ಥನೆಯಾಂದಿಗೆ ಸುಮಾರು ನೂರು ಶೋತೃಗಳ ಅನೌಪಚಾರಿಕ ಕಾರ್ಯಕ್ರಮದ ಪ್ರಾರಂಭಕ್ಕೆ ಹರಿಹರೇಶ್ವರ ಅವರು ಮುಖ್ಯವಾಗಿ ಪಂಪನ ಹಾಗೂ ಸಾಂದರ್ಭಿಕವಾಗಿ ಕುಮಾರವ್ಯಾಸನ ಮಹಾಕಾವ್ಯಗಳಲ್ಲಿ ಬರುವ ಪ್ರಾರ್ಥನಾ ಪದ್ಯಗಳ ಪರಿಚಯ ನೀಡಿದರು. ಕುಮಾರವ್ಯಾಸನ ನಾಂದಿಪದ್ಯಗಳಲ್ಲಿ ಬಹು ಸುಂದರವಾದ ಎರಡು ಪದ್ಯಗಳನ್ನು (ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನಪಿತನೆ... ಕಾವುದಾತನ ಜನವ ಗದುಗಿನ ವೀರನಾರಯಣ।। ಸರಸಿಜಾನನೆ ಸಕಲ ಶಾಸ್ತ್ರ ವಿಚಾರದುದ್ಭವೆ, ... ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ।।)

ಕೃಷ್ಣಕತೆಯ ಹೇಳುವೆನು

ಸುಲಲಿತವಾಗಿ ಹಾಡಿ ಹರಿಹರೇಶ್ವರ ಅವರು ‘‘ ತಿಳಿಯ ಹೇಳುವೆ ಕೃಷ್ಣ ಕತೆಯನು’’ ಎನ್ನುವ ಭಾಗವತೋತ್ತಮನಾದ ಕುಮಾರವ್ಯಾಸನ ನಾಂದಿಯು ‘ಹೀಗೆ ಸೊಗಸಾಗಿ ತನ್ನ ಇಷ್ಟ ದೈವ ಗದುಗಿನ ವೀರನಾರಾಯಣ ಮತ್ತು ವಿದ್ಯಾಮಾತೆ ಸರಸ್ವತಿಯವರ ಪ್ರಾರ್ಥನೆಯಾಂದಿಗೆ ಪ್ರಾರಂಭವಾಗುತ್ತದೆ’ ಎಂದು ಸೂಚಿಸಿದರು. ‘‘ ಇದಕ್ಕೆ ಪರ್ಯಾಯವಾಗಿ, ಪಂಪನು ಜೈನ ಮತಾನುಯಾಯಿಯಾದರೂ ವಿಷ್ಣು , ಶಿವ, ಸೂರ್ಯ ಮುಂತಾದ ದೇವರುಗಳನ್ನು ಪಾರ್ಥಿಸುವ ಪದ್ಯಗಳನ್ನು ಉದ್ಧರಿಸಿದರು. ಆದರೆ ಆ ಪದ್ಯಗಳಲ್ಲಿ ಬರುವ ‘ಉದಾತ್ತ ನಾರಾಯಣ’, ‘ಉದಾರ ಮಹೇಶ್ವರ’, ‘ಪ್ರಚಂಡ ಮಾರ್ತಾಂಡ’ ಇತ್ಯಾದಿಗಳು ಪಂಪನ ಆಶ್ರಯದಾತ, ಸ್ನೇಹಿತ ಅರಿಕೇಸರಿ ಮಹಾರಾಜನಿಗೆ ಬಿರುದುಗಳಾಗಿಯೂ ಇರುವುದರಿಂದ ಇಲ್ಲಿ ದೊರೆಯ ಗುಣಗಾನ ಮಾಡಿದಂತೆಯೂ ತೋರುತ್ತದೆ. ಆಶ್ರಿತ ಕವಿಯ ಈ ಲಕ್ಷಣ ಕುಮಾರವ್ಯಾಸನಲ್ಲಿ ಕಂಡು ಬರುವುದಿಲ್ಲ. ಆತ ಸ್ವತಂತ್ರ. ವೀರನಾರಾಯಣನೆಂಬ ಕವಿಗೆ ತಾನೊಬ್ಬ ಲಿಪಿಕಾರ, ಅಷ್ಟೆ ’’ ಎಂದರು. ‘‘ ಪಂಪನಲ್ಲಿ ಮುಂದೆ ವಾಙ್ಮಯ ಸ್ವರೂಪ ಮತ್ತು ಸರಸ್ವತಿಯ ಸ್ಮರಣೆ ಮತ್ತೊಂದು ಸುಂದರ ಪದ್ಯದಲ್ಲಿ ಮೂಡಿ ಬಂದಿದೆ. ಹಾಗೇನೇ, ಗಣೇಶ ಸ್ತುತಿಯನ್ನೂ ದುರ್ಗಾ ಮಾತೆಯ ಸ್ತುತಿಯನ್ನೂ ಮಾಡಿದ್ದಾನೆ ಆದಿಕವಿ ಪಂಪ. ’’

ಕಾವ್ಯವೆಂದರೆ ಏನು?

ಕಾವ್ಯ ಹೇಗಿರಬೇಕು ಎನ್ನುವ ಬಗ್ಗೆ ಸುಂದರ ಪದ್ಯವೊಂದರಲ್ಲಿ ಆ ಕಾಲಕ್ಕೂ ಈ ಕಾಲಕ್ಕೂ ಸಲ್ಲುವ ಹಾಗೆ ಸಾರ್ವಕಾಲಿಕ ಮಾರ್ಗದರ್ಶಕವಾಗಿ ಹೇಳಿದ್ದಾನೆ. ಇದು ದೇಸಿ ಶೈಲಿ ಮತ್ತು ಸಂಸ್ಕೃತದ ಮಾರ್ಗ ಶೈಲಿಗಳೆರಡಕ್ಕೂ ಸ್ವತಃ ಉದಾಹರಣೆಯಾಗಿ ನಿಂತ ಸುಂದರ ಪದ್ಯ. ಹಾಗೇ ಮುಂದಕ್ಕೆ ಹೋದಾಗ, ಕವಿ ತಾನೆಂತಹ ಕವಿಯೆನಿಸಿಕೊಳ್ಳಬೇಕು, ತನ್ನ ಕಾವ್ಯ ರಚನೆಗೆ ಕಾರಣ, ಕುಕವಿ ನಿಂದೆ ಇತ್ಯಾದಿ ವಿಷಯಗಳ ಬಳಿಕ ತನ್ನ ಅಹಂಕಾರ ಖಂಡನೆಯನ್ನೂ ಒಂದು ಪದ್ಯದಲ್ಲಿ ಮಾಡಿಕೊಂಡಿದ್ದಾನೆ, ಇದು ಕುಮಾರವ್ಯಾಸನಲ್ಲಿ ಕಾಣ ಸಿಗುವುದಿಲ್ಲ. ಇಲ್ಲಿ ಕವಿಗೆ ತಾನು ಆ ಮಹಾಭಾರತವನ್ನು ‘ ಪುಲಿಗರೆಯ ಸಿರಿಗನ್ನಡದಲ್ಲಿ ’ಹೇಳಹೊರಟರೂ ‘ ಮಹಾಕವಿ ವ್ಯಾಸ ತಾನೆಂಬ ಗರ್ವ ತನಗಿಲ್ಲ’ ಎಂಬ ಮಾತು ಗಮನಾರ್ಹ.

ನಾಂದಿ ಪದ್ಯಗಳ ಕೊನೆಯಲ್ಲಿ ಪಂಪ ತನ್ನ ಇನ್ನೊಂದು ಕಾವ್ಯ ‘ ಆದಿಪುರಾಣ’ದ ಬಗ್ಗೆಯೂ ಹೇಳಿಕೊಳ್ಳುತ್ತಾ ತಾನು ಭಾರತವನ್ನು, ಲೌಕಿಕವನ್ನು ಬೆಳಗುವುದಕ್ಕಾಗಿಯೂ ಆದಿಪುರಾಣವನ್ನು ಜಿನಾಗಮವನ್ನು ಬೆಳಗುವುದಕ್ಕಾಗಿಯೂ ಬರೆದಿರುವುದಾಗಿ ತಿಳಿಸುತ್ತಾನೆ’ ಎಂದು ಪದ್ಯಗಳನ್ನು ನಿರರ್ಗಳವಾಗಿ ಉದಾಹರಿಸುತ್ತಾ ಹರಿಹರೇಶ್ವರ ಅವರು ಪಂಪನ ಕಾವ್ಯದತ್ತ ಒಂದು ಇಣುಕು ನೋಟ ಬೀರಿ, ಮುಖ್ಯಭಾಷಣಕಾರ ಡಾ. ಸಾ. ಶಿ. ಮರುಳಯ್ಯನವರನ್ನು ಮಾತನಾಡಲು ಕೋರಿದರು.


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X