ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾಸ್ಕರ್ ಶೆಟ್ಟಿ ಹೆಂಡತಿ, ಮಗ 16ರ ವರೆಗೆ ಪೊಲೀಸ್ ಕಸ್ಟಡಿಗೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಉಡುಪಿ, ಆಗಸ್ಟ್ 13: ಉದ್ಯಮಿ ಭಾಸ್ಕರ್ ಶೆಟ್ಟಿ (52) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತ್ನಿ ರಾಜೇಶ್ವರಿ (48) , ಪುತ್ರ ನವನೀತ್ ಶೆಟ್ಟಿ (24)ಗೆ ವಿಧಿಸಿದ್ದ ಪೊಲೀಸ್ ಕಸ್ಟಡಿಯನ್ನು ಉಡುಪಿ ನ್ಯಾಯಾಲಯವು ಆ.16ರ ತನಕ ವಿಸ್ತರಿಸಿದೆ. [ಶಾಕಿಂಗ್ : ಪತಿಯನ್ನು ಯಜ್ಞಕುಂಡದಲ್ಲಿ ಹಾಕಿ ಸುಟ್ಟಳೇ ಪತ್ನಿ]

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಆರೋಪಿಗಳಿಬ್ಬರನ್ನೂ ಪೊಲೀಸರು ಶುಕ್ರವಾರ ಹಾಜರುಪಡಿಸಿದರು. ಆರೋಪಿಗಳ ವಿಚಾರಣೆಗಾಗಿ ಒಂದು ವಾರದ ಕಾಲ ಪೊಲೀಸ್ ಕಸ್ಟಡಿಗೆ ನೀಡಲು ಮನವಿ ಮಾಡಲಾಗಿತ್ತು. ಆದರೆ ಕೇವಲ 3 ದಿನಗಳ ಅವಕಾಶ ನೀಡಿದ ನ್ಯಾಯಾಧೀಶ ರಾಜೇಶ್ ಕರ್ಣಂ, ಆರೋಪಿಗಳನ್ನು ಆ.16ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶಿಸಿದರು. [ಆತ ಗಂಡನಂತೆ ಎಲ್ಲಿದ್ದ ಎಂದು ಕೆಂಡಕಾರಿದ ಹೆಂಡತಿ!]

court

ಜು. 29ರಂದು ದಾಖಲಾದ ಭಾಸ್ಕರ ಶೆಟ್ಟಿ ನಾಪತ್ತೆ ಪ್ರಕರಣವು ಬಳಿಕ ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿತ್ತು. ಪೊಲೀಸರಿಂದ ತೊಂದರೆಯಾಯಿತೆ ಎನ್ನುವ ನ್ಯಾಯಾಧೀಶರ ಪ್ರಶ್ನೆ ಆರೋಪಿಗಳಿಗೆ ಸರಿಯಾಗಿ ಕೇಳಿಸದಿದ್ದರೂ 'ಇಲ್ಲ' ಎಂದು ಉತ್ತರಿಸಿದರು. 'ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಬೇಕಾ?' ಎಂದಾಗ, 'ಈಗಾಗಲೇ ಹೋಗಿ ಬಂದಿದ್ದೇವೆ' ಎನ್ನುವ ಉತ್ತರ ಜತೆಯಾಯಿತು. ವೈದ್ಯಕೀಯ ಪರೀಕ್ಷೆ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದವರ ಸಹಿತ ಆದೇಶ ಪತ್ರಕ್ಕೆ ಆರೋಪಿಗಳಿಂದ ಸಹಿ ಪಡೆಯಲಾಯಿತು.

ನ್ಯಾಯಾಲಯ ಸಭಾಂಗಣದೊಳಗೆ ಕುತೂಹಲಿ ನ್ಯಾಯವಾದಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು. ಸಭಾಂಗಣದ ಹೊರಗೆ, ನ್ಯಾಯಾಲಯದ ಹೊರಗೂ ಆರೋಪಿಗಳನ್ನು ನೋಡಲು ನೂರಾರು ಮಂದಿ ಸೇರಿದ್ದರು. ಸಂಜೆ 4ಕ್ಕೆ ಆರೋಪಿಗಳನ್ನು ಕರೆ ತರುತ್ತೇವೆ ಎಂದಿದ್ದ ಪೊಲೀಸರು ನ್ಯಾಯಾಲಯದ ಎದುರು ಮುತ್ತಿಗೆ ಹಾಕಿದ್ದ ಜನರನ್ನು ಅತ್ತಿತ್ತ ಸರಿಸಿದರೂ ಮತ್ತೆ ಗುಂಪು ಗೂಡಿದರು. [ಭಾಸ್ಕರ್ ಶೆಟ್ಟಿ ಕೊಲೆ ತನಿಖೆಗಾಗಿ ಮೂರು ತಂಡ ರಚನೆ]

ನ್ಯಾಯಾಲಯದ ಹಿಂಬಾಗಿಲಲ್ಲಿ ಆರೋಪಿಗಳನ್ನು ಕರೆದೊಯ್ಯಲಾಗುತ್ತಿದೆ ಎನ್ನುವ ಸುದ್ದಿ ಬಂದಾಗ ಮಾಧ್ಯಮದ ಮಂದಿ ಸಹಿತ ಸಾರ್ವಜನಿಕರು ದಡಬಡನೆ ಅತ್ತ ಓಡಿ, ನಿರಾಶೆಯಿಂದ ಮರಳಿದರು. ಬೆಳಿಗ್ಗೆ 11 ಕ್ಕೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆತರುವ ಸುದ್ದಿ ಕೇಳಿ ಸೇರಿದ್ದ ಸಾರ್ವಜನಿಕರು, ಪೊಲೀಸರಿಗೆ ಅಡ್ಡಿಯಾದರು.

ನ್ಯಾಯಾಲಯದ ರಸ್ತೆ, ಎದುರಿನ ಕಟ್ಟಡದಲ್ಲೂ ಕುತೂಹಲದ ಕಣ್ಣುಗಳಿದ್ದವು. ಯುವ ರೆಡ್ ಕ್ರಾಸ್ ಸಂಸ್ಥೆಯ ವಿದ್ಯಾರ್ಥಿನಿಯರು ನಿಧಿ ಸಂಗ್ರಹಕ್ಕೆ ಡಬ್ಬಿ ಹಿಡಿದು ಬಂದಾಗ ನ್ಯಾಯವಾದಿಗಳ ಸಹಿತ ಹಲವರು ದುಡ್ಡು ಹಾಕಿದರೆ, ಇನ್ನೂ ಕೆಲವರು ಜಾಗ ಖಾಲಿ ಮಾಡಿದರು. ನ್ಯಾಯಾಲಯದ ಎದುರೇನು ಇಷ್ಟು ಜನ, ಪ್ರತಿಭಟನೆ ಆಗಿರಬಹುದಾ ಅಥವಾ ಮುಷ್ಕರವಾ ಎನ್ನುವುದು ಕೋರ್ಟ್‌ಗೆ ಬಂದ ಅಮಾಯಕರ ಪ್ರಶ್ನೆಯಾಗಿತ್ತು.

ಆರೋಪಿಗಳ ಪರ ಯಾವ ವಕೀಲರು ವಾದಕ್ಕೆ ಮುಂದಾಗುತ್ತಾರೆ, ಹಿಂದುತ್ವದ ಬಗ್ಗೆ ದೊಡ್ಡ ದೊಡ್ಡು ಮಾತನಾಡುವ ಹಿಂದೂ ಸಂಘಟನೆಗಳು ಯಾಕೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿಲ್ಲ. ಪ್ರತಿಭಟನೆ ಮಾಡಿಲ್ಲ ಎನ್ನುವ ಮಾತೂ ನ್ಯಾಯಾಲಯದ ಹೊರಗೆ ಸಾರ್ವಜನಿಕರಿಂದ ವ್ಯಕ್ತವಾಯಿತು.

English summary
Bhaskar Shetty's sensational murder case accused, his wife Rajeshwari and Navaneeth handed over to police custody only for 3 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X