ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು : ಗೊರವನಹಳ್ಳಿ ದೇವಾಲಯ ಜಿಲ್ಲಾಡಳಿತದ ವಶಕ್ಕೆ

|
Google Oneindia Kannada News

ತುಮಕೂರು, ಮಾ.8 : ತುಮಕೂರು ಜಿಲ್ಲೆಯ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ. ಮಧುಗಿರಿ ಉಪವಿಭಾಗಾಧಿಕಾರಿ ಅನಿತಾ ಲಕ್ಷ್ಮೀ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ದೇವಾಲಯದ ನಿರ್ವಹಣೆ ಕುರಿತು ಭಕ್ತರು ಮತ್ತು ಟ್ರಸ್ಟ್ ನಡುವೆ ಕೆಲವು ದಿನಗಳಿಂದ ಜಟಾಪಟಿ ನಡೆದಿತ್ತು.

ತುಮಕೂರು ಜಿಲ್ಲಾಧಿಕಾರಿ ಸತ್ಯಮೂರ್ತಿ ಅವರು ದೇವಾಲಯದ ಟ್ರಸ್ಟ್‌ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ಸ್ಥಿರಾಸ್ತಿ ಹಾಗೂ ಚರಾಸ್ಥಿಗಳನ್ನು ವಶಕ್ಕೆ ಪಡೆದು ಆದೇಶ ಹೊರಡಿಸಿದ್ದಾರೆ. ದೇವಾಲಯದ ಆಡಳಿತಾಧಿಕಾರಿ ಅನಿತಾ ಲಕ್ಷ್ಮೀ ಹಾಗೂ ಕೊರಟಗೆರೆ ತಹಶೀಲ್ದಾರ್ ಏಕೇಶ್‌ ಬಾಬು ನೇತೃತ್ವದ ತಂಡ ಶನಿವಾರ ದೇವಾಲಯಕ್ಕೆ ಭೇಟಿ ನೀಡಿತ್ತು.

Temple

ದೇವಾಲಯದ ಆಡಳಿತ ಕಚೇರಿ ಬೀಗವನ್ನು ಪಡೆದುಕೊಂಡಿರುವ ಆಡಳಿತಾಧಿಕಾರಿಗಳು ಹುಂಡಿಯನ್ನು ಒಡೆದು ಎಣಿಕೆ ಕಾರ್ಯ ಮಾಡಿದ್ದಾರೆ. ಶನಿವಾರ ಸುಮಾರು 14 ಲಕ್ಷ ರೂ. ಹಣ ಮತ್ತು 8.14 ಕೆಜಿ ಚಿನ್ನ, 90 ಕೆಜಿ ಬೆಳ್ಳಿ ಪತ್ತೆಯಾಗಿದೆ. ಸರ್ಕಾರದ ಅಧಿಕೃತ ಮೌಲ್ಯಮಾಪಕ ವೇದಮೂರ್ತಿ ಆಚಾರ್ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯುತ್ತಿದೆ. [ಗೊರವನಹಳ್ಳಿ ದೇವಸ್ಥಾನ ಮುಜರಾಯಿ ಇಲಾಖೆಗೆ?]

ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ : ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ವಶಕ್ಕೆ ಪಡೆದಿರುವ ಜಿಲ್ಲಾಡಳಿತದ ವಿರುದ್ಧ ದೇವಾಲಯದ ಟ್ರಸ್ಟ್ ಅಧ್ಯಕ್ಷ ಶ್ರೀರಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ನೋಟಿಸ್‌ ನೀಡದೆ ಏಕಾಏಕಿ ಈ ಕ್ರಮ ಕೈಗೊಂಡಿರುವುದು ಕಾನೂನುಬಾಹಿರ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. [ಈಡೇನಹಳ್ಳಿ ಗ್ರಾಮಸ್ಥರನ್ನು ಒಂದುಗೂಡಿಸಿದ ಹನುಮಂತ]

ದೇವಾಲಯದ ವಿವಾದವೇನು : ಸುಮಾರು 30 ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. 14 ಮಂದಿ ಧರ್ಮದರ್ಶಿಗಳನ್ನು ಒಳಗೊಂಡ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. [ಮಠಗಳಿಗೆ ನಿಯಂತ್ರಣ ಹಾಕುವ ವಿಧೇಯಕ ವಾಪಸ್]

ಆದರೆ, ಟ್ರಸ್ಟ್‌ನಲ್ಲಿ ಸ್ಥಳೀಯರು ಕಡಿಮೆ ಇದ್ದು, ಬೆಂಗಳೂರು ಮತ್ತು ತುಮಕೂರಿನ ವ್ಯಕ್ತಿಗಳು ಧರ್ಮದರ್ಶಿಗಳಾಗಿದ್ದಾರೆ. ಸ್ಥಳೀಯರು ಕಟ್ಟಿ ಬೆಳೆಸಿದ ದೇವಾಲಯವನ್ನು ಪ್ರಭಾವಿ ಮಠವೊಂದಕ್ಕೆ ಹಸ್ತಾಂತರ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ಸ್ಥಳೀಯರು ಮತ್ತು ಟ್ರಸ್ಟ್ ನಡುವೆ ಈ ವಿಚಾರದಲ್ಲಿ ಗಲಾಟೆಗಳು ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಟ್ರಸ್ಟ್‌ ವಿರುದ್ಧ ಅವ್ಯವಹಾರದ ಆರೋಪಗಳೂ ಕೇಳಿ ಬಂದಿತ್ತು. ಆದ್ದರಿಂದ ತಿಂಗಳ ಹಿಂದೆ ದೇವಸ್ಥಾನದ ಆಡಳಿತ ಕಚೇರಿಗೆ ಸ್ಥಳೀಯ ಗ್ರಾಮಸ್ಥರು ಬೀಗ ಹಾಕಿದ್ದರು.

ಈ ಎಲ್ಲಾ ಆರೋಪಗಳ ಹಿನ್ನಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳು ದೇವಾಲಯವನ್ನು ವಶಕ್ಕೆ ಪಡೆದು, ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಈ ಕ್ರಮವನ್ನು ಖಂಡಿಸಿದೆ.

English summary
Karnataka : Tumakuru district administration takes over famous Goravanahalli Mahalakshmi temple after allegations of massive corruption by the temple trust. Madhugiri subdivisional officer Anitha Lakshmi appointed as temple administrator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X