ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮೇಲೆ, ಭಾರತದಲ್ಲಿ ಪ್ರತಿಯೊಬ್ಬರೂ ವಿಐಪಿಯೇ..!

ಗೂಟದ ಕಾರಿಗೆ ಗುಡ್ ಬೈ ಹೇಳಿದ ಕೇಂದ್ರ ಸರ್ಕಾರದ ಕ್ರಮದಿಂದ ವಿಐಪಿ ಸಂಸ್ಕೃತಿ ನಿರ್ಮೂಲನೆಯಾಗುತ್ತಾ..? ಹಾಗೊಂದು ಚರ್ಚೆ ಟ್ವಿಟ್ಟರ್ ನಲ್ಲಿ ಹುಟ್ಟಿಕೊಂಡಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 19: ಇನ್ಮೇಲೆ ಭಾರತದಲ್ಲಿ ಜನಸಾಮಾನ್ಯರಿಗೂ, ಮಂತ್ರಿಗಳಿಗೂ ಯಾವ ವ್ಯತ್ಯಾಸವೂ ಇರೋಲ್ಲ... ಯಾಕಂದ್ರೆ ಭಾರತದಲ್ಲಿ ಎಲ್ಲರೂ ವಿಐಪಿಗಳೇ!

ವಿಐಪಿ ಸಂಸ್ಕೃತಿಗೆ ಮಂಗಳ ಹಾಡುವ ಸಲುವಾಗಿ ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗಣ್ಯ ವ್ಯಕ್ತಿಗಳ ಕಾರಿಗೆ ಕೆಂಪು ಅಥವಾ ನೀಲಿ ದೀಪ (ಗೂಟದ ಕಾರು) ಬಳಸುವುದನ್ನು ನಿಷೇಧಿಸಿದ ಕ್ರಮ ಸದ್ಯಕ್ಕೆ ಎಲ್ಲೆಡೆ ಚರ್ಚೆಯಾಗುತ್ತಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಗೂಟದ ಕಾರನ್ನು ಬಳಸುವಂತಿಲ್ಲ ಎಂದು ತೆಗೆದುಕೊಂಡ ಈ ಮಹತ್ವದ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಚರ್ಚೆ ನಡೆಯುತ್ತಿದೆ.[ಕೆಂಪು ದೀಪದ ಕಾರು ನಿಷೇಧ ನಿರ್ಧಾರ ಸ್ವಾಗತಿಸಿದ ರಾಜ್ಯ ನಾಯಕರು]

ಪೊಲೀಸ್, ಅಗ್ನಿ ಶಾಮಕ ದಳ, ಅಂಬುಲೆನ್ಸ್, ತುರ್ತುಸೇವೆಗಳಿಗೆ ನೀಲಿ ದೀಪವನ್ನು ಬಳಸಬಹುದು. ಆದರೆ ಕೇಂದ್ರ ಮತ್ತು ರಾಜ್ಯದ ಯಾವ ಸಚಿವರೂ ಕೆಂಪು ಅಥವಾ ನೀಲಿ ದೀಪದ ಕಾರನ್ನು ಬಳಸುವಂತಿಲ್ಲ! ಈ ಬಗ್ಗೆ EveryoneVIPinNewIndia ಎಂಬ ಹ್ಯಾಶ್ ಟ್ಯಾಗ್ ನಲ್ಲಿ ನೂರಾರು ಟ್ವೀಟ್ ಗಳು ಹರಿದಾಡುತ್ತಿವೆ.

ಭಾರತದ ಪ್ರಮುಖ ಸಮಸ್ಯೆ ಎನ್ನಿಸಿದ್ದ ಈ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವುದಾದರೆ ಅದಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಚುನಾವಣೆ ಗೆಲ್ಲುವ ವರೆಗೂ ಅತಿ ವಿನಯ ತೋರಿ, ಗೆದ್ದ ಮೇಲೆ ದುರಹಂಕಾರದಿಂದ ಬೀಗುವ ರಾಜಕಾರಣಿಗಳ ಗುರುತಿನ ಸೂಚಕವಾಗಿದ್ದ ಈ ನೀಲಿ ಮತ್ತು ಕೆಂಪು ದೀಪಗಳು ಇನ್ಮುಂದೇ ಮಂತ್ರಿಗಳ ಕಾರಲ್ಲಿ ಮಿನುಗೋಲ್ಲ! ಭಾರತದಲ್ಲಿ ಸಾಮಾನ್ಯ ಮನುಷ್ಯ ಮತ್ತು ರಾಜಕಾರಣಿಗಳ ನಡುವಲ್ಲಿ ತಾರತಮ್ಯದ ಗೆರೆ ಎಳೆದಿದ್ದ ವಿಐಪಿ ಸಂಸ್ಕೃತಿಯ ನಿರ್ಮೂಲನೆಗೆ ಇದು ಮೊದಲ ಹೆಜ್ಜೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಬಗ್ಗೆ ಟ್ವಿಟ್ಟರ್ ನಲ್ಲೇನಿದೆ? ನೀವೇ ನೋಡಿ...[ಗೂಟದ ಕಾರುಗಳಿಗೆ, ವಿಐಪಿ ಸಂಸ್ಕೃತಿಗೆ ಗುಡ್ ಬೈ!]

ಮೋದಿಯವರಿಗೆ ನನ್ನ ಬೆಂಬಲವಿದೆ

ಭಾರತದಲ್ಲಿ ಪ್ರತಿಯೊಬ್ಬರೂ ವಿಐಪಿಗಳೇ ಎಂಬುದನ್ನು ನಂಬುವ ಯಾವ ಮಂತ್ರಿಯೂ ಕೆಂಪು ದೀಪದ ಕಾರನ್ನು ಬಳಸುವುದಿಲ್ಲ. ನರೇಂದ್ರ ಮೋದಿಯವರ ಈ ನಡೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಕೇಂದ್ರ ಸಚಿನ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ಮಲ್ಯಗೂ ವಿಐಪಿ ಸವಲತ್ತಿಲ್ಲ!

ತಾನು ವಿಐಪಿಯಾಗಿರುವುದರಿಂದ ತಮಗೆ ವಿಶೇಷ ಸವಲತ್ತು ಸಿಗುತ್ತದೆಂದು ವಿಜಯ ಮಲ್ಯ ಏನಾದರೂ ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ಇದು ಕಾಂಗ್ರೆಸ್ ಸರ್ಕಾರವಲ್ಲ! ಇನ್ನು ಮೇಲೆ ವಿಐಪಿ ಸಂಸ್ಕೃತಿ ಇರೋಲ್ಲ! ಎಂದು ಸ್ಮಿತಾ ದತ್ ಟ್ವೀಟ್ ಮಾಡಿದ್ದಾರೆ.

ಎಲ್ಲರೂ ವಿಐಪಿಗಳೇ

ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ. ಇನ್ನು ಮೇಲೆ ಭಾರತದ ಪ್ರತಿಯೊಬ್ಬ ಪ್ರಜೆಯೂ ವಿಐಪಿಯೇ! ಎಂದು ಮಿತೇಶ್ ಜೈನ್ ಟ್ವೀಟ್ ಮಾಡಿದ್ದಾರೆ.

ಮೋದಿ ನಿಜವಾದ ಆಮ್ ಆದ್ಮಿ

ಅತ್ತ ಕೇಜ್ರಿವಾಲ್ ತಾವು ಆಮ್ ಆದ್ಮಿ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೆ, ಇತ್ತ ನರೇಂದ್ರ ಮೋದಿ ಕೆಂಪು ದೀಪವನ್ನು ನಿಷೇಧಿಸುವ ಮೂಲಕ ತಾವೇ ನಿಜವಾದ ಆಮ್ ಆದ್ಮಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅಂಜಲಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಲಾಲ್ ಬತ್ತಿ ಸಂಸ್ಕೃತಿಗೆ ಮಂಗಳ

ತಮ್ಮ ಅಧಿಕಾರ ದರ್ಪವನ್ನು ತೋರಲು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದ 'ಲಾಲ್ ಬತ್ತಿ' ಸಂಸ್ಕೃತಿಯನ್ನು ಕೊನೆಗಾಣಿಸಲು ಮೋದಿ ಸರ್ಕಾರ ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದು ಆಶಿಶ್ ಮಿಶ್ರಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ವಿಐಪಿಗಳಲ್ಲ ಸೇವಕರು

ರಾಜಕಾರಣಿಗಳು ಜನರ ವಿದೇಯ ಸೇವಕರು ಎಂಬುದನ್ನು ನೆನಪಿಸುವುದಕ್ಕಾಗಿ ಈ ಸರ್ಕಾರ ತೆಗೆದುಕೊಂಡ ಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಬಿಶಾಲ್ ಚಕ್ರಬೋರ್ತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
After historic step by central cabinet of banning red beacons so many people are praising the move of government. This is a great step to eradicate VIP culture in India, so many peole told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X