ರಾಹುಲ್ ಗಾಂಧಿ ದೇಶದ್ರೋಹಿ, ಗಲ್ಲಿಗೇರಿಸಿ: ಬಿಜೆಪಿ ಶಾಸಕ

By:
Subscribe to Oneindia Kannada

ನವದೆಹಲಿ, ಫೆ. 18: 'ದೇಶದ್ರೋಹಿಗಳ ಪರ ನಿಂತಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಒಬ್ಬ ದೇಶದ್ರೋಹಿ, ಆತನನ್ನು ಗಲ್ಲಿಗೇರಿಸಿ ಇಲ್ಲವೇ ಗುಂಡಿಟ್ಟುಕೊಲ್ಲಿ' ಎಂದು ಬಿಜೆಪಿ ಶಾಸಕ ಕೈಲಾಸ್ ಚೌಧುರಿ ಕೂಗಿ ಹೇಳಿದ್ದಾರೆ.

ದೇಶದ್ರೋಹದ ಆರೋಪದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮುಖಂಡರನ್ನು ಪೊಲೀಸರು ಬಂಧಿಸಿದ ಸಂದರ್ಭ ರಾಹುಲ್‌ಗಾಂಧಿ ವಿವಿ ಆವರಣಕ್ಕೆ ಭೇಟಿ ನೀಡಿದ್ದರು. ದೇಶದ ವಿರುದ್ಧ ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ದೇಶದ್ರೋಹಿಗಳ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. (JNU, ರಣರಂಗವಾದ ಪಟಿಯಾಲ ಕೋರ್ಟ್)

Rahul Gandhi

ಹೀಗಾಗಿ, ರಾಹುಲ್‌ಗಾಂಧಿಗೆ ಭಾರತದಲ್ಲಿ ಬದುಕುವ ಹಕ್ಕೇ ಇಲ್ಲ. ಉಗ್ರ ಅಫ್ಜಲ್‌ಗುರು ಪರ ಇರುವ ದ್ರೋಹಿಗಳಿಗೆ ರಾಹುಲ್‌ಗಾಂಧಿ ಬೆಂಬಲ ನೀಡಿದ್ದಾರೆ ಎಂದು ಕೈಲಾಸ್ ಚೌಧುರಿ ರಾಹುಲ್ ವಿರುದ್ಧ ತೀವ್ರವಾಗಿ ಖಂಡಿಸಿದ್ದಾರೆ.

ರಾಜಸ್ಥಾನದ ಬರ್ಮರ್ ಜಿಲ್ಲೆಯ ಬೇತೂ ವಿಧಾನಸಭಾ ಕ್ಷೇತ್ರದ ಶಾಸಕ ಚೌಧುರಿ ಅವರು ರೈತರ ಸಮಾವೇಶವೊಂದರಲ್ಲಿ ಮಾತನಾಡಿದರು. ದೇಶದ ವಿರುದ್ಧ ಮಾತನಾಡುವವರು ರಾಹುಲ್‌ಗಾಂಧಿ ಆಗಿರಲಿ ಅಥವಾ ಯಾರೇ ಆಗಲಿ ಅವರನ್ನು ಗಲ್ಲಿಗೆ ಹಾಕಬೇಕು ಎಂದು ಕರೆ ನೀಡಿದರು.(ಪತ್ರಕರ್ತರ, ವಕೀಲರ ನಡುವೆ ಜಟಾಪಟಿ)

ದೆಹಲಿಯ ಜವಹರಲಾಲ್‌ನೆಹರು ವಿಶ್ವ ವಿದ್ಯಾನಿಲಯದಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಭೇಟಿ ನೀಡಿ ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದರು. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಮತ್ತು 2001ರ ಸಂಸತ್ ಮೇಲಿನ ದಾಳಿ ಅಪರಾಧಿ ಅಫ್ಜಲ್ ಗುರು ಬೆಂಬಲಿಗರ ಪರ ರಾಹುಲ್ ನಿಂತಿದ್ದಕ್ಕೆ ಭಾರಿ ಆಕ್ಷೇಪ ಕೇಳಿ ಬಂದಿದೆ. ಈ ನಡುವೆ ಶಾಸಕ ಚೌಧುರಿ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಖಂಡಿಸಿದ್ದು, ಬಿಜೆಪಿಯ ನಾಯಕರ ನಾಲಿಗೆಗೆ ಹಿಡಿತವಿಲ್ಲ ಎಂದಿದ್ದಾರೆ.