ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಸುಣ್ಣ ಬೇಯಿಸುವವರ ಬದುಕು ಬಣ್ಣವಾಗಲಿಲ್ಲ!

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಜೂನ್ 22: ಹುಣಸೂರು ಪಟ್ಟಣದ ಹೊರ ವಲಯದ ಪಿರಿಯಾಪಟ್ಟಣದ ಕಡೆಗೆ ತೆರಳುವ ರಾಜ್ಯಹೆದ್ದಾರಿಯಲ್ಲಿ ಸಾಗುವಾಗ ರಸ್ತೆ ಬದಿಯಲ್ಲಿ ವೃತ್ತಾಕಾರದ ಸುಣ್ಣ ಬೇಯಿಸುವ ಒಲೆಗಳು ಕಾಣಸಿಗುತ್ತವೆ. ಹೊಗೆಯಾಡುವ ಇವುಗಳನ್ನು ಕೆಲವರು ಅಚ್ಚರಿಯಿಂದ ನೋಡುತ್ತಾರೆ.

ಇವತ್ತು ಸುಣ್ಣ ತಯಾರಿಸುವ ಕಾರ್ಖಾನೆಗಳು ಬಹಳಷ್ಟಿವೆ. ಆದರೂ ಇಲ್ಲಿ ಕೆಲವು ಕುಟುಂಬಗಳು ಕಳೆದ ಹಲವು ದಶಕಗಳಿಂದ ಸುಣ್ಣ ಬೇಯಿಸುವ ಕೆಲಸ ಮಾಡುತ್ತಾ ಅದರಿಂದ ದೊರೆಯುವ ಆದಾಯದಿಂದ ಜೀವನ ಸಾಗಿಸುತ್ತಾ ಬಂದಿವೆ. ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಈ ಕೆಲಸವನ್ನು ಮಾಡುತ್ತಿದ್ದರೂ ಇದರಿಂದ ಜೀವನ ಸಾಗಿಸುವುದು ಕಷ್ಟ ಎಂದರಿತ ಹಲವರು ವಿದಾಯ ಹೇಳಿ ಇತರೆ ಕೆಲಸದತ್ತ ಮುಖ ಮಾಡಿದ್ದಾರೆ.

Tragic tale of Mysuru couple

ಅಳಿದುಳಿದ ಕೆಲವರು ಮಾತ್ರ ಹುಣಸೂರು ಹೊರವಲಯದಲ್ಲಿ ಹಾಗೂ ಹುಣಸೂರು ತಾಲೂಕಿನ ಗಾವಡಗೆರೆ ಮುಳ್ಳೂರು ಗ್ರಾಮದಲ್ಲಿ ಸುಣ್ಣ ತಯಾರಿಸುವ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಈ ಕೆಲಸದಿಂದ ಬದುಕು ಅಸಾಧ್ಯ ಎನ್ನುವುದು ಅವರಿಗೂ ಗೊತ್ತಾಗಿದೆ. ಆದರೆ ಬೇರೆ ದಾರಿ ಕಾಣದೆ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಅದರಲ್ಲೂ ಮುಳ್ಳೂರಿನಲ್ಲಿ ಸುಣ್ಣಬೇಯಿಸುವ ಕೆಲಸ ಮಾಡುತ್ತಿರುವ ವೃದ್ಧ ದಂಪತಿಯ ಬದುಕು ಮಾತ್ರ ಶೋಚನೀಯವಾಗಿದೆ. ಚಿಕ್ಕವರಿಂದಲೂ ಇದೇ ಕೆಲಸವನ್ನು ಮಾಡಿಕೊಂಡು ಬಂದಿದ್ದರಿಂದ ಈಗ ಅದನ್ನು ಬಿಟ್ಟು ಬೇರೆ ಕೆಲಸ ಮಾಡುವುದು ಅವರಿಗೆ ಅಸಾಧ್ಯವಾಗಿದೆ. ಹಾಗಾಗಿ ಅದನ್ನೇ ಮಾಡಿಕೊಂಡು ಹೋಗುತ್ತಿದ್ದಾರೆ.

ಮೂರಾಬಟ್ಟೆಯಾದ ವಿಭೂತಿ ತಯಾರಕ ಹಿರೇಮಠ ಜನಾಂಗದ ಬದುಕು!ಮೂರಾಬಟ್ಟೆಯಾದ ವಿಭೂತಿ ತಯಾರಕ ಹಿರೇಮಠ ಜನಾಂಗದ ಬದುಕು!

ಇಳಿ ವಯಸ್ಸಿನಲ್ಲಿ ಅದೇ ಕಾಯಕ
ಇಳಿ ವಯಸ್ಸಲ್ಲೂ ಸುಣ್ಣಬೇಯಿಸುವ ಕೆಲಸ ಮಾಡುತ್ತಾ ಹೊಟ್ಟೆಹೊರೆಯುತ್ತಿರುವ ವೃದ್ಧ ದಂಪತಿಯೇ ಅಣ್ಣಯ್ಯಚಾರಿ(70) ಮತ್ತು ಶಾರದಮ್ಮ(65). ಇವರು ತಮ್ಮ ಗ್ರಾಮದಲ್ಲಿ ಸುಣ್ಣಬೇಯಿಸುತ್ತಾ ಅದರಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಈ ಕೆಲಸದಿಂದ ಅವರಿಗೆ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡುವುದೇ ಕಷ್ಟವಾಗಿದೆ. ಆದರೂ ಮಾಡುವುದು ಅನಿವಾರ್ಯವಾಗಿದೆ.

Tragic tale of Mysuru couple

ಸುಣ್ಣಬೇಯಿಸುವ ಕೆಲಸವನ್ನು ನಮ್ಮ ಹಿರಿಯರು ಮಾಡುತ್ತಿದ್ದರು. ಅದನ್ನು ನಾವು ಕಲಿತಿದ್ದೇವೆ. ಇದನ್ನು ಬಿಟ್ಟು ಈ ಇಳಿ ವಯಸ್ಸಲ್ಲಿ ಬೇರೇನು ಮಾಡಲು ಆಗುತ್ತಿಲ್ಲ. ಹೊಟ್ಟೆಪಾಡಿಗಾಗಿ ಏನಾದರು ಮಾಡಬೇಕಲ್ಲವೆ ಎಂದು ಪ್ರಶ್ನಿಸುವ ಅಣ್ಣಯ್ಯಚಾರಿ ಅವರು ಹಿಂದಿನ ಕಾಲದಲ್ಲಿ ಎಲೆ ಅಡಿಕೆಗೆ ಮತ್ತು ಮನೆಗಳಿಗೆ ಇದೇ ಸುಣ್ಣವನ್ನು ಬಳಸುತ್ತಿದ್ದರು. ಆಗ ಜೀವನಕ್ಕೆ ಕಷ್ಟವಾಗಿರಲಿಲ್ಲ. ಈಗ ಫ್ಯಾಕ್ಟರಿಗಳು ಬಂದಿವೆ. ಎಲ್ಲದಕ್ಕೂ ಕಂಪನಿ ಸುಣ್ಣವನ್ನೇ ಬಳಸುತ್ತಾರೆ. ಕೆಲವರಷ್ಟೆ ನಮ್ಮಿಂದ ಕೊಂಡು ಕೊಳ್ಳುತ್ತಾರೆ. ಅದರಿಂದ ನಮ್ಮ ಜೀವನ ಸಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ಬದುಕು ದೇವರಿಗೇ ಪ್ರೀತಿ!
ಈ ದಂಪತಿಗಳನ್ನು ನೋಡಿಕೊಳ್ಳಲು ಯಾರೂ ಇಲ್ಲ. ಇದ್ದ ಮಗನೂ ತೀರಿಕೊಂಡಿದ್ದಾನೆ. ಹೀಗಾಗಿ ಸುಣ್ಣದ ಕಲ್ಲುಗಳನ್ನು ಪುಡಿ ಮಾಡಿ ಈ ವೃದ್ಧ ದಂಪತಿಗಳೇ ಒಲೆಗೆ ಹಾಕಬೇಕು. ಈ ಸುಣ್ಣದ ಕಲ್ಲುಗಳು ಸ್ಥಳೀಯವಾಗಿ ಸಿಗುವುದಿಲ್ಲ. ಅವುಗಳನ್ನು ಪಿರಿಯಾಪಟ್ಟಣ ತಾಲೂಕಿನ ಅತ್ತಿಗೋಡು ಗ್ರಾಮದಿಂದ ಒಂದು ಟ್ರ್ಯಾಕ್ಟರ್ ಗೆ ಐದು ಸಾವಿರ ರೂ.ನಂತೆ ಹಣಕೊಟ್ಟು ಖರೀದಿಸಬೇಕು.

ಇದನ್ನು ಬೇಯಿಸಿದರೆ 100 ರಿಂದ 110 ಮೂಟೆ ಸುಣ್ಣ ಬರುತ್ತದೆ. ಇದರಲ್ಲಿ ಕಚ್ಚಾ ಸುಣ್ಣ ಕಳೆದು ಶುದ್ದವಾದ ಹರಳು ಸುಣ್ಣ 70 ರಿಂದ 80 ಮೂಟೆ ಸಿಗುತ್ತದೆಯಂತೆ. ಇನ್ನು ಕನಿಷ್ಠ 30 ಮೂಟೆ ಸುಣ್ಣ ಬೇಯಿಸಲು 10 ಪ್ಲ್ಯಾಸ್ಟಿಕ್ ಚೀಲಗಳಷ್ಟು ಸೌದೆ, ಇದ್ದಿಲು ಬೇಕಾಗುತ್ತದೆ. ಎಲ್ಲವನ್ನು ಹಣಕೊಟ್ಟು ಖರೀದಿಸಬೇಕು. ಇತ್ತೀಚೆಗೆ ಸೌದೆಗೆ ತೊಂದರೆಯಾಗಿದೆ. ಮೊದಲೆಲ್ಲ ಹಳ್ಳಿಗಳಲ್ಲಿ ಇದ್ದಿಲು ಸಿಗುತ್ತಿತ್ತು. ಈಗ ಸಿಗುತ್ತಿಲ್ಲ. ಹೀಗಾಗಿ ಎಲ್ಲ ರೀತಿಯಿಂದಲೂ ಸುಣ್ಣಬೇಯಿಸುವ ಕೆಲಸ ಕಷ್ಟವಾಗುತ್ತಿದೆ ಎಂಬುದಾಗಿ ಹೇಳುತ್ತಾರೆ.

ಸುಣ್ಣಕ್ಕಿಲ್ಲ ಬೇಡಿಕೆ
ಇಷ್ಟೆಲ್ಲ ಕಷ್ಟಪಟ್ಟರೂ ಅವರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಮೊದಲಿನಂತೆ ಸುಣ್ಣಕ್ಕೆ ಬೇಡಿಕೆಯಿಲ್ಲದಾಗಿದೆ. ಎಲೆ ಅಡಿಕೆ ತಿನ್ನುವವರು ಮಾತ್ರ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಚಿಕ್ಕ ಪೊಟ್ಟಣ ಮಾಡಿ ರೂ.10ರಂತೆ ಮಾರಾಟ ಮಾಡುತ್ತಾರೆ. ಆದರೂ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಅದರಲ್ಲಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಕೃಷಿಗೆ ಇನ್ನಿತರ ಚಟುವಟಿಕೆಗಳಿಗೆ ಯಾರಾದರೂ ಮೂಟೆಗಟ್ಟಲೆ ಖರೀದಿ ಮಾಡಿದರೆ ಮಾತ್ರ ಇವರ ಮುಖದಲ್ಲಿ ಮಂದಹಾಸ ಮಿನುಗುತ್ತದೆ. ಇಲ್ಲದೆ ಹೋದರೆ ತಯಾರಾದ ಸುಣ್ಣವನ್ನು ಏನಪ್ಪಾ ಮಾಡೋದು ಎಂಬ ಚಿಂತೆ ಇವರನ್ನು ಸದಾ ಕಾಡುತ್ತದೆ. ಬಡತನದಲ್ಲೇ ಜೀವನ ಸಾಗಿಸುವ ಇವರಿಗೆ ಸರ್ಕಾರ 500 ರೂ ವೃದ್ಧಾಪ್ಯ ವೇತನ ನೀಡುತ್ತಿದೆ. ಅದು ಪತಿಗೆ ಮಾತ್ರ. ಪತ್ನಿ ಶಾರದಮ್ಮನಿಗೆ ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ಆದ್ದರಿಂದ ಯಾರಾದರೂ ನಮ್ಮತ್ತ ಕರುಣೆ ತೋರಿಸಿ. ಕನಿಷ್ಠ ನಾವು ಮಾಡುವ ಕೆಲಸಕ್ಕೆ ಅನುಕೂಲವಾಗುವಂತೆ ಸಲಕರಣೆಗಳನ್ನಾದರೂ ಸರ್ಕಾರ ನೀಡಲಿ ಎನ್ನುವುದು ಅವರ ಮನವಿಯಾಗಿದೆ.

English summary
Here is a heartmelting story of a couple, who are trying hard to get their daily meal. The couple reside in Hunsur, Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X