ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಕ ಜೀವಗಳಿಗೆ ನೀರುಣಿಸುವ ಮೈಸೂರು ಭಗೀರಥರು...

By ಬಿ.ಎಂ.ಲವಕುಮಾರ್
|
Google Oneindia Kannada News

ಮಳೆ ಕಡಿಮೆಯಾಗಿ ಬಿಸಿಲು ಕಾಣಿಸುತ್ತಿದ್ದಂತೆಯೇ ಬಿಸಿಲಿನ ತಾಪಕ್ಕೆ ಸ್ವಲ್ಪ ದೂರ ನಡೆದರೂ ನಮಗೆ ನೀರು ಕುಡಿಯಬೇಕೆನಿಸುತ್ತದೆ. ಹೀಗಿರುವಾಗ ನಗರದಲ್ಲಿ ಅಡ್ಡಾಡುವ ಹಸು, ಕರು, ನಾಯಿ, ಕುದುರೆ ಮುಂತಾದ ಪ್ರಾಣಿಗಳ ಪಾಡೇನು? ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಆದರೆ ಮೈಸೂರು ನಗರಕ್ಕೊಂದು ಸುತ್ತು ಹೊಡೆದರೆ ಮೂಕ ಪ್ರಾಣಿಗಳ ದಾಹ ನೀಗಿಸಲು ಶ್ರಮಿಸುತ್ತಿರುವ ಆಧುನಿಕ ಭಗೀರಥರು ಕಾಣಸಿಗುತ್ತಾರೆ.

ಹಾಗೆನೋಡಿದರೆ ನಗರದ ಹಲವೆಡೆ ದನಗಳಿಗಾಗಿಯೇ ನೀರಿನ ತೊಟ್ಟಿಗಳನ್ನು ಕಟ್ಟಲಾಗಿದೆ. ಆದರೆ ಎಲ್ಲ ಕಡೆಗಳಲ್ಲಿ ಈ ವ್ಯವಸ್ಥೆ ಇಲ್ಲ. ಇದನ್ನು ಮನಗಂಡ ಕೆಲವರು ತಮ್ಮ ಮನೆ ಮುಂದೆ ಅಥವಾ ಅಂಗಡಿ ಮುಂದೆ ಪುಟ್ಟ ತೊಟ್ಟಿಗಳನ್ನು ನಿರ್ಮಿಸಿ ಅಲ್ಲಿ ನೀರು ತುಂಬಿಸಿ ಇಡುತ್ತಾರೆ. ಬಾಯಾರಿದ ದನ, ನಾಯಿ, ಮೇಕೆಗಳು ಇಲ್ಲಿ ನೀರು ಕುಡಿದು ತೆರಳುತ್ತವೆ. ಕೆಲವು ಬೀಡಾಡಿ ದನಗಳಿಗೆ ಇಂತಹದ್ದೇ ಸ್ಥಳದಲ್ಲಿ ನೀರು ಸಿಗುತ್ತದೆ ಎಂದು ತಿಳಿದಿರುವ ಕಾರಣ ನೀರು ಕುಡಿಯಲು ಅಲ್ಲಿಗೆ ಬಂದೇ ಬರುತ್ತವೆ.

ಜನರು ಕೇಳಿದರೆ ನೀರು ಕೊಡಲು ಕಷ್ಟವಾಗಿರುವ ಈ ಕಾಲದಲ್ಲಿ ಪ್ರಾಣಿಗಳಿಗಾಗಿಯೇ ಪ್ರತ್ಯೇಕ ನೀರಿನ ತೊಟ್ಟಿ ಕಟ್ಟಿಸಿ ಪ್ರತಿ ದಿನ ಹಸುಕರುಗಳಿಗೆ ಕುಡಿಯಲು ನೀರು ಪೂರೈಸುವುದು ಸುಲಭದ ಕೆಲಸವಲ್ಲ ಅಥವಾ ಒಂದು ದಿನ ಮಾಡಿ ತೆಪ್ಪಗಾಗುವ ಕೆಲಸವೂ ಅಲ್ಲ. ಆದರೆ ಇಂತಹ ಕಾರ್ಯವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿರುವ ಹಲವು ಪುಣ್ಯಾತ್ಮರು ಮೈಸೂರಿನಲ್ಲಿದ್ದಾರೆ.[ಬೇಸಿಗೆ ದಾಹ ನೀಗಿಸುವ ಕೋಲ್ಡ್ ಪ್ರಿಯರ ಮಣ್ಣಿನ ಫ್ರಿಡ್ಜ್..!]

ಅಗ್ರಹಾರ ಬಳಿಯ ತ್ಯಾಗರಾಜ ರಸ್ತೆಯಲ್ಲಿರುವ ಮಾಣಿಕ್ ಬ್ಯಾಂಕರ್ಸ್ ಅಂಗಡಿ ಮಾಲಿಕ ಲಲಿತ್ ಕುಮಾರ್ ಜೈನ್ ಕಳೆದ 16 ವರ್ಷಗಳಿಂದ ಈ ಪುಣ್ಯದ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ. ಇವರ ಈ ಕಾರ್ಯದಿಂದ ಹಲವಾರು ಪ್ರಾಣಿ, ಪಕ್ಷಿಗಳ ಹೊಟ್ಟೆ ತಂಪಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾಗುವ ದನಕರು, ನಾಯಿ ಮೊದಲಾದ ಪ್ರಾಣಿಗಳಲ್ಲದೆ, ಕಾಗೆ, ಪಾರಿವಾಳದಂತಹ ಪಕ್ಷಿಗಳು ನೀರು ಕುಡಿದು ದಣಿವಾರಿಸಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಭಗೀರಥರಾದವರು ಯಾರ್ಯಾರು?

ಪ್ರಾಣಿಪ್ರಿಯ ಲಲಿತ್ ಕುಮಾರ್ ಜೈನ್

ಪ್ರಾಣಿಪ್ರಿಯ ಲಲಿತ್ ಕುಮಾರ್ ಜೈನ್

ಲಲಿತ್ ಕುಮಾರ್ ಜೈನ್ ಗಿರವಿ ಅಂಗಡಿ ಮಾಲೀಕರಾಗಿದ್ದು, ಪ್ರವೃತ್ತಿಯಲ್ಲಿ ಪ್ರಾಣಿ ಪ್ರೇಮಿಯಾಗಿದ್ದಾರೆ. ಹಾಗಾಗಿ ಮುಂಜಾನೆ 5ಕ್ಕೆ ನಗರದ ಪ್ರಮುಖ ದೇವಾಲಯ, ಮಠ, ಮಂದಿರಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿ ಅಲ್ಲಿರುವ ಪಕ್ಷಿ, ಪ್ರಾಣಿಗಳಿಗೆ ವಿವಿಧ ನಮೂನೆಯ ಆಹಾರ ನೀಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.

ಲಲಿತ್ ಕುಮಾರ್ ಪ್ರಾಣಿಗಳಿಗೆ ಏನೆಲ್ಲಾ ಆಹಾರ ನೀಡ್ತಾರೆ?

ಲಲಿತ್ ಕುಮಾರ್ ಪ್ರಾಣಿಗಳಿಗೆ ಏನೆಲ್ಲಾ ಆಹಾರ ನೀಡ್ತಾರೆ?

ಲಲಿತ್ ಕುಮಾರ್ ಜೈನ್ ಕಾರ್ಯ ಇಷ್ಟಕ್ಕೆ ಮುಗಿಯದೆ ನಿರ್ಗತಿಕರಿಗೆ, ವಯೋವೃದ್ದರಿಗೆ ಪ್ರತಿನಿತ್ಯ ಸುಮಾರು 50 ಪೊಟ್ಟಣದಷ್ಟು ಬಾತು, ನಾಯಿಗಳಿಗೆ ಬಿಸ್ಕೆಟ್, ಹಾಲು, ಕಾಗೆಗಳಿಗೆ ಸಿಹಿ, ಖಾರಬೂಂದಿ, ಇರುವೆಗಳಿಗೆ ಸಕ್ಕರೆ, ರವೆ ಮತ್ತು ದನಕರುಗಳಿಗೆ ಸಿಹಿಲಾಡು, ಬಾಳೆಹಣ್ಣು ನೀಡುತ್ತಾ ಪ್ರಾಣಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಲಲಿತ್ ಕುಮಾರ್ ಗೆ ಸಾಥ್ ನೀಡುತ್ತಿರುವವರು ಯಾರು?

ಲಲಿತ್ ಕುಮಾರ್ ಗೆ ಸಾಥ್ ನೀಡುತ್ತಿರುವವರು ಯಾರು?

ಲಲಿತ್ ಕುಮಾರ್ ಜೈನ್ ಅವರ ಈ ಕಾರ್ಯಕ್ಕೆ ಅಂಗಡಿ ಮಾಲೀಕರಾದ ಭಾಸ್ಕರ್ ರಾವ್ ಸಾಥ್ ನೀಡುತ್ತಿದ್ದು, ಇವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಪ್ರಾಣಿ ಪ್ರಿಯರಾದ ಇವರು ಬೆಳಿಗ್ಗೆ ನೀರಿನ ತೊಟ್ಟಿ ಹಾಗೂ ಪ್ಲಾಸ್ಟಿಕ್ ಡ್ರಮ್‍ ಗಳಿಗೆ ನೀರು ತುಂಬಿಸಿಡುತ್ತಾರೆ.

ಪಡುವಾರಹಳ್ಳಿ ಎಂ.ಬಿ.ಕಮಲಮ್ಮ

ಪಡುವಾರಹಳ್ಳಿ ಎಂ.ಬಿ.ಕಮಲಮ್ಮ

ಪಡುವಾರಹಳ್ಳಿಯಲ್ಲಿ ಎಂ.ಬಿ.ಕಮಲಮ್ಮ ಎಂಬುವರು ಕಳೆದ 48 ವರ್ಷಗಳಿಂದ ಪ್ರಾಣಿ ಪಕ್ಷಿಗಳಿಗೆ ನೀರು ನೀಡುತ್ತಾ ಬಂದಿದ್ದಾರೆ. ಇವರು ಪಡವಾರಹಳ್ಳಿ ನಿವಾಸಿಯಾಗಿದ್ದು, ಮನೆಯ ಮುಂದಿನ ಕಾಂಪೌಂಡ್ ಬಳಿ ದೊಡ್ಡದಾದ ತೆರೆದ ನೀರಿನ ತೊಟ್ಟಿಯನ್ನು ನಿರ್ಮಿಸಿ ಆ ಮೂಲಕ ಎಲ್ಲಾ ಪ್ರಾಣಿ, ಪಕ್ಷಿಗಳ ಬಾಯಾರಿಕೆಯನ್ನು ನೀಗಿಸುತ್ತಾ ಬಂದಿದ್ದಾರೆ. ಮೂಲತಃ ಮಂಡ್ಯದವರಾದ ಇವರ ಪತಿ ರಾ.ಬೋರಯ್ಯನವರು ಅಂದು ವಿಶ್ವವಿದ್ಯಾನಿಲಯ ಕಟ್ಟಡ ನಿರ್ಮಾಣದ ಸಂದರ್ಭ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಯಾವ ಕಾರಣಕ್ಕೆ ನೀರು ನೀಡಲು ಪ್ರಾರಂಭಿಸಿದರು?

ಯಾವ ಕಾರಣಕ್ಕೆ ನೀರು ನೀಡಲು ಪ್ರಾರಂಭಿಸಿದರು?

ಒಮ್ಮೆ ನೀರು ಅರಸಿ ಬಂದ ಕರುವೊಂದು ತಮ್ಮ ಮನೆಯ ನೀರಿನ ಸಂಪ್ ಗೆ ಬಿತ್ತು. ಇದರಿಂದ ಬೇಸರಗೊಂಡ ಅವರು ಇನ್ನು ಮುಂದೆ ಈ ರೀತಿಯ ಘಟನೆ ನಡೆಯಬಾರದು ಹಾಗೂ ಬಾಯಾರಿ ಬರುವ ಪ್ರಾಣಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮನೆಯ ಮುಂದೆ ನೀರಿನ ತೊಟ್ಟಿಯನ್ನು ನಿರ್ಮಿಸಿದರು. ಬೋರಯ್ಯರವರು ನಿಧನರಾದ ನಂತರ ಅವರು ಮಾಡುತ್ತಿದ್ದ ಕಾರ್ಯವನ್ನು ಪತ್ನಿ ಕಮಲಮ್ಮ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಹೀಗೆ ನಗರದಾದ್ಯಂತ ಇಂತಹ ಸಮಾಜ ಸೇವಕರು, ಪ್ರಾಣಿ ಪ್ರಿಯರು ಕಾಣ ಸಿಗುತ್ತಾರೆ. ಬಾಯಾರಿದ ಜೀವಗಳಿಗೆ ನೀರು ನೀಡಿ ಹೊಟ್ಟೆ ತಣಿಸುತ್ತಾ ನೆಮ್ಮದಿ ಕಾಣುತ್ತಿದ್ದಾರೆ.

English summary
Some Mysuru people daily provide water to some animals in Mysuru. Hats off. Continue this journey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X