'ಈಶ್ವರಪ್ಪ ಅವರೇ ಡಿ.30ರ ತನಕ ಕಾಯಿರಿ'

Written by: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 28 : ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆ ಮೈಸೂರಿನಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಿದರು.

ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಖಾಸಗಿ ಕಾರಿನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾನ ಮಾಡಿದರು. ನಂತರ ಮಾತನಾಡಿದ ಅವರು, 'ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲಿದೆ' ಎಂದು ಹೇಳಿದರು. [ಎಂಎಲ್ಸಿ ಚುನಾವಣೆ ಶೇ 95 ಮತದಾನದ ಅಂದಾಜು]

ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಅವರು, 'ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಚ್ಚು ಸ್ಥಾನ ಪಡೆದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಎಂದು ಸವಾಲು ಹಾಕಿರುವ ಈಶ್ವರಪ್ಪ ಅವರಿಗೆ ಡಿ.30ಕ್ಕೆ ಫಲಿತಾಂಶ ಉತ್ತರ ನೀಡಲಿದ್ದು, ಈಶ್ವರಪ್ಪ ಮಾತಿಗೆ ತಕ್ಕಂತೆ ಸನ್ಯಾಸ ಸ್ವೀಕರಿಸಲು ಸಿದ್ಧರಾಗಿರಲಿ' ಎಂದರು. [18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಜಗದೀಶ್ ಶೆಟ್ಟರ್ ವಿಶ್ವಾಸ]

ಸಿದ್ದರಾಮಯ್ಯ ಅವರು ಮೈಸೂರಿಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆ ಸೇರಿದಂತೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಕ್ರಮ ನಡೆಯದಂತೆ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಮತದಾನದ ಚಿತ್ರಗಳು ಇಲ್ಲಿವೆ....

ಖಾಸಗಿ ಕಾರಿನಲ್ಲಿ ಬಂದು ಮತ ಹಾಕಿದ ಸಿಎಂ

ಮೈಸೂರು ನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಖಾಸಗಿ ಕಾರಿನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಮತದಾನ ಮಾಡಿದರು.

ಅವರಿಗೆ ಮಾಹಿತಿ ಕೊರತೆ ಇದೆ

ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಅವರು ಮಾತನಾಡಿದರು. 'ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 'ಯಡಿಯೂರಪ್ಪಗೆ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ಕೊರತೆಯಿದೆ' ಎಂದು ಹೇಳಿ ಮುಂದೆ ನಡೆದರು.

ಸಂದೇಶ್ ನಾಗರಾಜ್ ಮತದಾನ

ಮೈಸೂರು-ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂದೇಶ್ ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿ ಆರ್.ಧರ್ಮಸೇನಾ, ಸಚಿವ ಎಚ್.ಸಿ.ಮಹದೇವಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಮತದಾನ ಮಾಡಿದರು.

ಗೋ.ಮಧುಸೂದನ್ ಮತದಾನ

ಶಾಸಕರಾದ ಎಂ.ಕೆ.ಸೋಮಶೇಖರ್, ತನ್ವೀರ್ ಸೇಠ್, ವಾಸು, ಚಿಕ್ಕಮಾದು, ಗೋ.ಮಧುಸೂದನ್, ವಿಜಯ್‍ಶಂಕರ್, ಮರಿತಿಬ್ಬೇಗೌಡ, ಮೇಯರ್ ಭೈರಪ್ಪ ಮುಂತಾದವರು ಮತದಾನ ಮಾಡಿದರು.

ವಾಟಾಳ್ ನಾಗರಾಜ್ ಮತದಾನ

ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಚಾಮರಾಜನಗರದಲ್ಲಿ ಮತ ಚಲಾಯಿಸಿದರು.

English summary
Karnataka Chief minister Siddaramaiah on Sunday, December 27th cast his vote in the Legislative Council elections at his native Mysuru.
Please Wait while comments are loading...