ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಸ್ಕಾಂ ಪಿಡಬ್ಲ್ಯೂಡಿ ಕಿತ್ತಾಟದ ನಡುವೆ ರಸ್ತೆ ಅನಾಥ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 02 : ಸೆಸ್ಕಾಂ ವಿದ್ಯುತ್ ಕಂಬ ತೆರವಿಗೆ ಮುಂದಾಗದ ಕಾರಣ ರಸ್ತೆಗೆ ಡಾಂಬರೀಕರಣ ಮಾಡಬೇಕಾದ ಲೋಕೋಪಯೋಗಿ ಇಲಾಖೆ ಕೈಕಟ್ಟಿ ಕುಳಿತಿರುವುದರಿಂದಾಗಿ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮೀಣ ಜನ ಪರದಾಡುವಂತಾಗಿದೆ.

ನಂಜನಗೂಡು ತಾಲೂಕಿನ ಚುಂಚನಹಳ್ಳಿ ಬಳಿ ಆರಂಭಿಸಲಾಗಿದ್ದ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ. ಪರಿಣಾಮವಾಗಿ ಕಾಮಗಾರಿ ನಡೆಸಲು ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲುಗಳು ಮೇಲೆದ್ದು ಬಂದು ಚಾಲಕರು ವಾಹನವನ್ನು ಅದರ ಮೇಲೆ ಚಲಿಸಿಕೊಂಡು ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಹೆದ್ದಾರಿ 57 ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ರಸ್ತೆಯ ಚುಂಚನಹಳ್ಳಿ ಗ್ರಾಮದ ಹತ್ತಿಕೆರೆ ಹಳ್ಳದ ಬಳಿ ನಾಲ್ಕು ತಿಂಗಳ ಹಿಂದೆ ಸೇತುವೆ ಮತ್ತು ರಸ್ತೆ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆರಂಭದ ಶೂರತನ ಎಂಬಂತೆ ಜಲ್ಲಿ ಸುರಿದು ರಸ್ತೆಯ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು. [ಮರಳಿ ಶಾಲೆಗೆ : ಇಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!]

Road left unrepaired as Sescom and PWD clash in Nanjangud

ಆದಾದ ಬಳಿಕ ಕಾಮಗಾರಿ ಆಮೆಗತಿಯಲ್ಲಿ ಸಾಗತೊಡಗಿತು. ರಸ್ತೆಗೆ ಹಾಕಿರುವ ಜಲ್ಲಿಕಲ್ಲುಗಳು ಮೇಲೆದ್ದು ಬರತೊಡಗಿದವು. ಜನ ಸಂಚಾರಕ್ಕೆ ಇದೇ ರಸ್ತೆ ಅನಿವಾರ್ಯವಾಗಿರುವುದರಿಂದಾಗಿ ವಾಹನಗಳು ಇದರ ಮೇಲೆಯೇ ಸಾಗತೊಡಗಿದವು. ಇದರಿಂದ ರಸ್ತೆ ಹಾಳಾಗಿದ್ದು ದ್ವಿಚಕ್ರ ವಾಹನ ಸವಾರರು ಜೀವವನ್ನು ಕೈಯ್ಯಲ್ಲಿಡಿದು ಸರ್ಕಸ್ ಮಾಡುತ್ತಾ ಸಾಗಬೇಕಾಗಿದೆ.

ಈ ರಸ್ತೆಯಲ್ಲಿದ್ದ ಹಳೆಯ ಸೇತುವೆಯನ್ನು ತೆರವು ಮಾಡಿ ಹೊಸ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಆದರೆ ಅಷ್ಟರಲ್ಲೇ ರಸ್ತೆಯನ್ನೂ ಕಿತ್ತು ಹಾಕಿ ಜಲ್ಲಿ ಕಲ್ಲುಗಳನ್ನು ಹರಡಲಾಗಿದೆ. ಈ ರಸ್ತೆಯಲ್ಲಿ ಈಗಾಗಲೇ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇದರಿಂದಾಗಿ ಭಯಗೊಂಡು ಬೇರೊಂದು ರಸ್ತೆಯಲ್ಲಿ ಸುತ್ತಿಬಳಸಿ ಹೋಗುತ್ತಿದ್ದಾರೆ. [ನಂಜನಗೂಡಿನ ಅಂಗನವಾಡಿಯಲ್ಲಿ ಬಣ್ಣದ ಚಿತ್ತಾರ!]

ಕಾಮಗಾರಿ ಆರಂಭಿಸಿ ರಸ್ತೆಯನ್ನು ಕಿತ್ತು ಹಾಕಿರುವ ಬಗ್ಗೆ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಸೂಚನಾ ಫಲಕವೂ ಇಲ್ಲಿ ಇಲ್ಲ. ಧಾರ್ಮಿಕ ಸ್ಥಳಗಳಾದ ಮಹದೇಶ್ವರ ಬೆಟ್ಟ ಮತ್ತು ಪ್ರವಾಸಿ ತಾಣ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿರುವುದರಿಂದ ದೂರದ ಊರುಗಳಿಂದ ಪ್ರವಾಸಿಗರು ಇದೇ ಮಾರ್ಗವಾಗಿ ಬರುತ್ತಿದ್ದು, ರಸ್ತೆಯ ದುಃಸ್ಥಿತಿ ನೋಡಿ ಹಿಡಿ ಶಾಪಹಾಕಿಕೊಂಡು ಹೋಗುತ್ತಾರೆ.

ರಸ್ತೆಗೆ ಡಾಂಬರು ಮಾಡಲು ಮೀನಮೇಷ ಎಣಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ರಸ್ತೆಯನ್ನು ಮರು ನಿರ್ಮಾಣ ಮಾಡಿದ ಸಂದರ್ಭ ಎತ್ತರವಾಗಿದ್ದು, ಇದರಿಂದ ಬದಿಯಲ್ಲಿರುವ ವಿದ್ಯುತ್ ತಂತಿಗಳಿಗೆ ವಾಹನಗಳಿಗೆ ತಗಲುವ ಅಪಾಯವಿದೆ. ಆದ್ದರಿಂದ ಸೆಸ್ಕಾಂಗೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮನವಿ ಮಾಡಲಾಗಿದೆ. ಅವರು ತೆರವುಗೊಳಿಸಿದ ತಕ್ಷಣವೇ ಡಾಂಬರೀಕರಣ ಪ್ರಾರಂಭಿಸಲಾಗುವುದು ಎಂಬ ಉತ್ತರಗಳು ಲೋಕೋಪಯೋಗಿ ಇಲಾಖೆಯ ಮೂಲಗಳಿಂದ ಕೇಳಿ ಬರುತ್ತವೆ. ಇತ್ತ ಸೆಸ್ಕಾಂ ವಿದ್ಯುತ್ ಕಂಬ ತೆರವುಗೊಳಿಸುತ್ತಿಲ್ಲ. ಅತ್ತ ಲೋಕೋಪಯೋಗಿ ಇಲಾಖೆ ಡಾಂಬರೀಕರಣ ಮಾಡುತ್ತಿಲ್ಲ. ಜನರು ಬವಣೆ ಪಡುವುದು ತಪ್ಪಿಲ್ಲ. [ವಿದ್ಯುತ್ ಉಳಿಸಿ, ಮಿತವಾಗಿ ಬಳಿಸಿ, ಮನುಕುಲವನ್ನು ಬೆಳೆಸಿ]

English summary
Road left unrepaired as Sescom and PWD clash in Nanjangud. Sescom is refusing the shift the electric pole and due to this PWD is not taking up repair work at Chunchanahalli village in Nanjangud taluk in Mysuru district. Because of this laxity the two wheelers are suffering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X