ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಮಂಗಳಮುಖಿಯರ ಶೌಚಾಲಯ, ದೇಶದಲ್ಲೇ ಪ್ರಥಮ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 23 : ಪ್ರತ್ಯೇಕ ಶೌಚಾಲಯವಿಲ್ಲದೆ ಕಿರಿಕಿರಿ, ಮುಜುಗರ ಅನುಭವಿಸುತ್ತಿದ್ದ ಮಂಗಳಮುಖಿಯರಿಗೆ ಮೈಸೂರಿನಲ್ಲಿ ಪರಿಹಾರ ಸಿಕ್ಕಿದೆ. ಅವರಿಗಾಗಿಯೇ ಪ್ರತ್ಯೇಕವಾದ ಮತ್ತು ಸುಸಜ್ಜಿತವಾದ ಶೌಚಾಲಯವನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಪ್ರಥಮ!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಅಡ್ಡಾಡುವ ಇವರು ಶೌಚದ ವಿಚಾರಕ್ಕೆ ಬಂದಾಗ ಮಾತ್ರ ಯಾತನೆ ಅನುಭವಿಸುವಂತಾಗಿತ್ತು. ನಗರದಲ್ಲಿ ಹಲವು ಶೌಚಾಲಯಗಳಿದ್ದರೂ ಅತ್ತ ಪುರುಷರ, ಇತ್ತ ಮಹಿಳೆಯರ ಶೌಚಾಲಯಕ್ಕೆ ಹೋಗಲಾಗದೆ ತಳಮಳ, ನೋವು ಅನುಭವಿಸುತ್ತಿದ್ದರು.

ಮಹಿಳೆಯರ ಶೌಚಾಲಯಕ್ಕೆ ಹೋದರೆ ಮುಜುಗರಗೊಳ್ಳುತ್ತಿದ್ದ ಮಹಿಳೆಯರು ಬೈದು ಹೊರಗೆ ಅಟ್ಟುತ್ತಿದ್ದರು. ಗಂಡಸರ ಶೌಚಾಲಯದೊಳಗೆ ಹೋದರೆ ಮಂಗಳಮುಖಿಯರೇ ಮಾನಸಿಕ ಹಿಂಸೆ ಅನುಭವಿಸಬೇಕಾಗಿತ್ತು. ಶೌಚಾಲಯದ ನಿರ್ವಹಣೆ ಹೊತ್ತವರು ತೃತೀಯ ಲಿಂಗಿಗಳು ಶೌಚಾಲಯದತ್ತ ಸುಳಿಯದಂತೆ ನೋಡಿಕೊಳ್ಳುತ್ತಿದ್ದರು. ಇದೆಲ್ಲದರ ತೊಂದರೆಯಿಂದಾಗಿ ಮಂಗಳಮುಖಿಯರು ನಿರ್ಜನ ಪ್ರದೇಶ ಹುಡುಕಿಕೊಂಡು ಹೋಗಿ ಅಲ್ಲಿ ದೇಹಬಾಧೆಯನ್ನು ನೀಗಿಸಿಕೊಳ್ಳುತ್ತಿದ್ದರು. ['ನಾವು ಮನುಷ್ಯರು, ನಮ್ಮನ್ನು ಘನತೆಯಿಂದ ಬದುಕಲು ಬಿಡಿ']

Public toilets for transgenders in Mysuru

ಇಡೀ ದೇಶದಾದ್ಯಂತ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಜನರಿಗೆ ಶೌಚಾಲಯದ ಅರಿವು ಮೂಡಿಸುತ್ತಿದ್ದರೆ, ಇತ್ತ ತೃತೀಯ ಲಿಂಗಿಗಳಿಗೆ ಎಲ್ಲೂ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮತ್ತು ಆ ವಿಚಾರದಲ್ಲಿ ಅನುಭವಿಸುತ್ತಿರುವ ತೊಂದರೆ ಬಗ್ಗೆ ಮಂಗಳಮುಖಿಯರು ಜಿಪಂ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಶೌಚಾಲಯದ ವ್ಯವಸ್ಥೆಯನ್ನು ಮಾಡಿಕೊಡುವಂತೆ ಜಿಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ ಜಿಪಂ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕ ಸ್ಥಳವಾದ ಬಸ್ ಮತ್ತು ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ಮಿಸುವ ಕಾರ್ಯಕ್ಕೆ ಮುಂದಾದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅದನ್ನು ಪೂರ್ಣಗೊಳಿಸಿ ಮಂಗಳಮುಖಿಯರ ಉಪಯೋಗಕ್ಕೆ ನೀಡಿದ್ದಾರೆ.

ಈ ಸೌಲಭ್ಯದಿಂದ ಮಂಗಳಮುಖಿಯರು (ಲೈಂಗಿಕ ಅಲ್ಪಸಂಖ್ಯಾತರು) ಖುಷಿಯಾಗಿದ್ದಾರೆ. ಗ್ರಾಮಾಂತರ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿಯೂ ನಿರ್ಮಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. [ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5]

ಈಗಾಗಲೇ ಮೈಸೂರಿನಲ್ಲಿ ಸುಮಾರು 3 ಸಾವಿರ ಮಂಗಳಮುಖಿಯರಿದ್ದು ಅವರ ಪೈಕಿ 1250 ಮಂದಿ ಮೈಸೂರು ನಗರದಲ್ಲೇ ವಾಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿರುವುದು ಪ್ರಶಂಸನೀಯ. ಅದು ಏನೇ ಇರಲಿ ಇದುವರೆಗೆ ಮಂಗಳಮುಖಿಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ ಎಂಬ ಕೊರಗು ಮೈಸೂರಿನಲ್ಲಿ ನೀಗಿದಂತಾಗಿದೆ.

English summary
Separate public toilets for transgenders (sexual minorities) has been inaugurated in Mysuru recently. It is probably first time in India toilet has been constructed by transgenders. Eunuchs numbers are increasing in Mysuru, but they were not permitted to use public toilets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X