ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಸ್ವಂತ ಸೂರಿಲ್ಲದ ಹುಣಸೂರಿನ ಅಂಗನವಾಡಿಗಳು

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 05 : ಇನ್ನು ಮುಂದೆ ಅಂಗನವಾಡಿ ಮಕ್ಕಳಿಗೂ ಕೆನೆಭರಿತ ಹಾಲು ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಒಂದು ಸುಸಜ್ಜಿತ ಕಟ್ಟಡ ನೀಡಿ ಎಂದು ಹುಣಸೂರು ತಾಲೂಕಿನ ಜಾಬ್‍ಗೆರೆ ಗ್ರಾಮಸ್ಥರು ಕೇಳುತ್ತಿದ್ದಾರೆ.

ಇವರು ಹೀಗೆ ಕೇಳಲು ಕಾರಣವೂ ಇದೆ. ಮರದಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಸಬಾರದು ಎಂಬ ಕಾರಣಕ್ಕೆ ಶಿಥಿಲಗೊಂಡ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ, ಒಂದೊಳ್ಳೆ ಕಟ್ಟಡ ನೀಡಿ ಎನ್ನುವುದು ಗ್ರಾಮಸ್ಥರ ಬೇಡಿಕೆ. ಜಾಬ್‍ಗೆರೆ ಹುಣಸೂರು ತಾಲೂಕಿನ ಕಟ್ಟಕಡೆಯ ಗ್ರಾಮ ಎಂದರೆ ತಪ್ಪಾಗಲಾರದು.[ಅಂಗನವಾಡಿ ಕಾರ್ಯಕರ್ತೆಯರಿಗೆ ಹೆರಿಗೆ ರಜೆ]

No building for anganwadi in Hunsur, Mysuru

ಇಲ್ಲಿ ಸದ್ಯಕ್ಕೆ ಎರಡು ಅಂಗನವಾಡಿ ಕೇಂದ್ರಗಳಿವೆ. ಈ ಎರಡು ಅಂಗನವಾಡಿಯಲ್ಲೂ ಗರಿಷ್ಠ ಮಕ್ಕಳಿದ್ದಾರೆ. ಒಂದರಲ್ಲಿ ಸುಮಾರು 20 ಮಕ್ಕಳಿದ್ದರೆ, ಎರಡನೆಯದರಲ್ಲಿ 25 ಮಕ್ಕಳಿವೆ. ಆದರೆ, ಈ ಎರಡು ಅಂಗನವಾಡಿಗೂ ಸ್ವಂತದ ಕಟ್ಟಡವಿಲ್ಲ.[ಪುಟ್ಟಬಸಮ್ಮನ ಜಗಳದಿಂದ ಅಂಗನವಾಡಿ ಕೂಸು ಬಡ!]

ಒಂದು ಅಂಗನವಾಡಿ ಸಮುದಾಯ ಭವನದಲ್ಲಿ ನಡೆದರೆ ಮತ್ತೊಂದು ಶಿಥಿಲಗೊಂಡ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಸರ್ಕಾರ ಅಂಗನವಾಡಿಯನ್ನು ಗ್ರಾಮಗಳಲ್ಲಿ ತೆರೆದಿದ್ದರೂ ಉತ್ತಮವಾದ ಕಟ್ಟಡದ ವ್ಯವಸ್ಥೆ ಮಾಡದ ಕಾರಣ ಪರದಾಡುವಂತಾಗಿದೆ. ಗ್ರಾಮದಲ್ಲಿರುವ 1ನೇ ಅಂಗನವಾಡಿ ಕೇಂದ್ರ ನಡೆಯುತ್ತಿದ್ದ ಸ್ವಂತ ಕಟ್ಟಡ ಶಿಥಿಲಗೊಂಡಿದ್ದು, ಬೀಳುವ ಹಂತಕ್ಕೆ ಬಂದು ನಿಂತಿದೆ. ಇದು ಯಾವಾಗ ಬೇಕಾದರೂ ಬೀಳಬಹುದು ಎಂಬ ಸ್ಥಿತಿಯಲ್ಲಿದೆ.[ನಂಜನಗೂಡಿನ ಅಂಗನವಾಡಿಯಲ್ಲಿ ಬಣ್ಣದ ಚಿತ್ತಾರ!]

No building for anganwadi in Hunsur, Mysuru

ಕಟ್ಟಡ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲೇ ಇದ್ದ ಸರ್ಕಾರಿ ಶಾಲೆಯಲ್ಲಿ 2 ವರ್ಷ ಅಂಗನವಾಡಿ ನಡೆಸಲಾಯಿತು. ಆದರೆ ಶಾಲಾ ಮಕ್ಕಳ ಸಂಖ್ಯೆ ಜಾಸ್ತಿಯಿದ್ದ ಕಾರಣ ಅಲ್ಲಿಂದ ಖಾಲಿ ಮಾಡಲು ಸೂಚಿಸಲಾಯಿತು. ಇದೀಗ ಗ್ರಾಮದ ಜಾಬೇಶ್ವರ ಸಮುದಾಯಭವನದ ಹೊರಭಾಗದಲ್ಲಿ ನಡೆಸಲಾಗುತ್ತಿದೆ. ಸಮುದಾಯಭವನದವರು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದು ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗುವುದು? ಎಂಬ ದ್ವಂದ್ವಕ್ಕೆ ಕಾರ್ಯಕರ್ತೆ ಕೋಮಲಾಬಾಯಿ ಸಿಲುಕಿದ್ದಾರೆ.

ಇನ್ನು ಎರಡನೆಯ ಅಂಗನವಾಡಿಯ ಕಥೆಯೇ ಬೇರೆ. ಸ್ವಂತ ಕಟ್ಟಡವಿಲ್ಲದ ಕಾರಣದಿಂದಾಗಿ ಮೊದಲಿಗೆ ಒಂದು ವರ್ಷ ಬಾಡಿಗೆ ಮನೆಯಲ್ಲಿ, ಆ ನಂತರ 2 ವರ್ಷ ಮೊದಲ ಅಂಗನವಾಡಿಯೊಂದಿಗೆ ಸೇರಿಕೊಂಡು ನಡೆಸಲಾಯಿತು. ಬಳಿಕ ಪಂಚಾಯಿತಿ ಕಟ್ಟಡಕ್ಕೆ ಅಂಗನವಾಡಿಯನ್ನು ವರ್ಗಾಯಿಸಲಾಯಿತು.

No building for anganwadi in Hunsur, Mysuru

ಆ ನಂತರ ಪಂಚಾಯಿತಿ ಬೇರೆ ಬಾಡಿಗೆ ಮನೆಯನ್ನು ಮಾಡಿಕೊಡುವ ಮೂಲಕ ಪಂಚಾಯಿತಿ ಕಟ್ಟಡದಿಂದ ಅಂಗನವಾಡಿ ಕೇಂದ್ರವನ್ನು ತೆರವುಗೊಳಿಸಿ ಕೈತೊಳೆದು ಕೊಂಡಿದೆ. ಹೀಗಾಗಿ ದನದ ಕೊಟ್ಟಿಗೆಯಂತಿರುವ ಕೊಠಡಿಯಲ್ಲಿ ಅಂಗನವಾಡಿಯನ್ನು ನಡೆಸುವ ಅನಿವಾರ್ಯತೆ ಕಾರ್ಯಕರ್ತೆ ಕುಮಾರಿ ಅವರದ್ದಾಗಿದೆ.

ಅಂಗನವಾಡಿಗಳು ಸ್ವಂತ ಕಟ್ಟಡವಿಲ್ಲದೆ ಕಷ್ಟ ಅನುಭವಿಸುತ್ತಿರುವ ಕುರಿತಂತೆ ಗ್ರಾಮಸ್ಥರು ಅಳಲು ತೋಡಿಕೊಂಡಿರುವುದರಿಂದ ತಾಲೂಕು ಶಿಶು ಅಭಿವೃಧ್ದಿ ಅಧಿಕಾರಿ (ಸಿಡಿಪಿಒ) ನವೀನ್ ಕುಮಾರ್ ಅವರು ತಹಸೀಲ್ದಾರ್ ಅವರಿಗೆ ಗ್ರಾಮದಲ್ಲಿ ಸರ್ವೆ ಜಾಗ ಗುರುತಿಸಿ ಕೊಡಲು ಮನವಿ ಮಾಡಿದ್ದಾರಂತೆ.

No building for anganwadi in Hunsur, Mysuru

ಒಂದು ವೇಳೆ ತಹಸೀಲ್ದಾರ್ ಅವರು ಸ್ಥಳ ನೀಡಿದರೆ ಅಲ್ಲಿ ಕಟ್ಟಡ ಕಟ್ಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಇದೆಲ್ಲವೂ ಸುಲಭದಲ್ಲಿ ಆಗುವ ಕೆಲಸವಲ್ಲ. ಹೀಗಾಗಿ ಅಂಗನವಾಡಿ ಮಕ್ಕಳು ಸಮಸ್ಯೆಯಲ್ಲೇ ಕಾಲ ಕಳೆಯುವುದು ಅನಿವಾರ್ಯವಾಗಿದೆ.

ಸಂಬಂಧಿಸಿದ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸೇರಿದಂತೆ ಅಧಿಕಾರಿಗಳು ಗಮನಹರಿಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಪುಟ್ಟ ಮಕ್ಕಳಿಗೊಂದು ಸೂರು ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಅದು ಯಾವಾಗ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

English summary
Hunsur taluk jabgere village have 2 anganwadi with 20 to 25 children. But, in village there is no building for anganwadi so they are using house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X