ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಕಾರಂಜಿಕೆರೆಯಲ್ಲಿ ನಿತ್ಯ ಪ್ರೇಮೋತ್ಸವ

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರಿನಲ್ಲೊಂದು ಪ್ರೇಮಿಗಳ ಕೆರೆಯಿದೆ. ಅದು ಪ್ರೇಮಿಗಳಿಗಾಗಿ ನಿರ್ಮಿಸಲಾದ ಕೆರೆಯಲ್ಲವಾದರೂ ಸದಾ ಪ್ರೇಮಿಗಳು ಪ್ರೇಮದ ಕಾರಂಜಿಯನ್ನು ಚಿಮ್ಮಿಸುವುದರಿಂದಾಗಿ ಕಾರಂಜಿಕೆರೆ ಇವತ್ತು ಪ್ರೇಮಿಗಳ ಕೆರೆಯಾಗಿ ಮಾರ್ಪಾಡಾಗುತ್ತಿದೆ.

ಸಾಮಾನ್ಯವಾಗಿ ಜನರ ಗೌಜುಗದ್ದಲದಿಂದ ದೂರವಿದ್ದು ಒಂದಷ್ಟು ಹೊತ್ತು ಮಾತನಾಡುತ್ತಾ, ಲಲ್ಲೆಗೆರೆಯುತ್ತಾ, ಪ್ರೇಮಚೇಷ್ಟೆಗಳನ್ನಾಡುತ್ತಾ ಏಕಾಂತದಲ್ಲಿ ಕಾಲ ಕಳೆಯುವ ಪ್ರೇಮಿಗಳು ಈ ಕೆರೆಯತ್ತ ಹೆಜ್ಜೆ ಹಾಕುವುದರಿಂದಾಗಿ ಕಾರಂಜಿಕೆರೆಯಲ್ಲಿ ಕೇವಲ ಪ್ರೇಮಿಗಳ ದಿನದಂದು ಮಾತ್ರವಲ್ಲ ನಿತ್ಯವೂ ಪ್ರೇಮೋತ್ಸವವೇ..

ಕಾರಂಜಿಕೆರೆಯಲ್ಲಿ ಒಂದೆಡೆ ವಲಸೆ ಬಂದ ಹಕ್ಕಿಗಳ ಚಿಲಿಪಿಲಿ ಕೇಳಿದರೆ, ಮತ್ತೊಂದೆಡೆ ಪ್ರೇಮಹಕ್ಕಿಗಳ ಪಿಸುಮಾತು ಕೇಳುತ್ತದೆ. ಮೈಸೂರಿನಲ್ಲಿ ಹತ್ತಾರು ಉದ್ಯಾನ, ಕೆರೆಗಳಿದ್ದರೂ ಅಲ್ಲಿ ಪ್ರೇಮಿಗಳ ಪ್ರಣಯಕ್ಕೆ ಅವಕಾಶವಿಲ್ಲ. ಜತೆಗೆ ಪಟ್ಟಣದ ನಡುವೆ ಇರುವುದರಿಂದ ಯಾರಾದರೂ ನೋಡಿ ಬಿಟ್ಟಾರು ಎಂಬ ಭಯ. ಆದರೆ ಈ ಕಾರಂಜಿಕೆರೆ ಪ್ರೇಮಿಗಳನ್ನು ಈ ಭಯದಿಂದ ದೂರ ಮಾಡುತ್ತದೆ.

ಪ್ರೇಮಿಗಳ ಕೆರೆಯಾಗಿ, ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿರುವ ಮೈಸೂರಿನ ಕಾರಂಜಿಕೆರೆ ಮೊದಲಿಗಿಂತಲೂ ಸಾಕಷ್ಟು ಬದಲಾಗಿದೆ. ಈ ಮೊದಲು ಈ ಕೆರೆ ಗಬ್ಬೆದ್ದು ನಾರುತ್ತಿತ್ತು. ಹಾಗಾಗಿ ಈ ಕೆರೆಯತ್ತ ಸುಳಿಯುವವರ ಸಂಖ್ಯೆಯೂ ಕಡಿಮೆಯಿತ್ತು. ಆದರೆ ಈಗ ಸೌಂದರ್ಯ ಸೊಬಗು ಮೈಗೂಡಿಸಿಕೊಂಡಿರುವ ನೋಡೋಣ ಬನ್ನಿ.[ಮೈಸೂರು ಶಿಡ್ಲು ಬೆಟ್ಟದಲ್ಲಿ ಹರಿಯುವ ನೀರು ಎಂದೂ ಬತ್ತೋದಿಲ್ಲ!]

ಕಾರಂಜಿ ಪಾರ್ಕಿನಲ್ಲಿ ಮೊದಲು ನಿರ್ಮಾಣವಾಗಿದ್ದು ಚಿಟ್ಟೆ ಪಾರ್ಕ್

ಕಾರಂಜಿ ಪಾರ್ಕಿನಲ್ಲಿ ಮೊದಲು ನಿರ್ಮಾಣವಾಗಿದ್ದು ಚಿಟ್ಟೆ ಪಾರ್ಕ್

ಸುಮಾರು 90 ಎಕರೆಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿದ್ದ ಕೆರೆ ಮೊದಲೆಲ್ಲ ರೈತರಿಗೆ ಆಶ್ರಯವಾಗಿತ್ತಾದರೂ ಬಳಿಕ ನಗರ ಬೆಳೆದಂತೆಲ್ಲಾ ಸುತ್ತಮುತ್ತಲಿನ ಕೊಳಕು, ಹೂಳು ತುಂಬಿ ಕೆರೆ ಕಲ್ಮಶವಾಯಿತು. ಬಳಿಕ ಈ ಕೆರೆ 1967ರಲ್ಲಿ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂತು. ಒಂದಷ್ಟು ವರ್ಷಗಳ ಹಿಂದೆ ಕಾರಂಜಿಕೆರೆಯ ಬಳಿ ಚಿಟ್ಟೆಗಳು ವಾಸ್ತವ್ಯ ಹೂಡಿದ್ದನ್ನು ಕಂಡು ಚಿಟ್ಟೆ ಪಾರ್ಕ್ ಸ್ಥಾಪನೆ ಮಾಡಲಾಯಿತು. ವಿಶ್ವವಿದ್ಯಾಲಯದ ಸದಾನಂದ ಎಂಬುವರು ಈ ಚಿಟ್ಟೆ ಪಾರ್ಕ್ ಗೆ ಜೀವ ತುಂಬಿದರು. ಚಿಟ್ಟೆ ಪಾರ್ಕ್ ಸ್ಥಾಪನೆಯಾದರೂ ಕೆರೆ ಖ್ಯಾತಿಯಾಗಲಿಲ್ಲ.

ಕಾರಂಜಿ ಪಾರ್ಕಿನ ಅಭಿವೃದ್ಧಿಕಾರರು ಯಾರು?

ಕಾರಂಜಿ ಪಾರ್ಕಿನ ಅಭಿವೃದ್ಧಿಕಾರರು ಯಾರು?

ಕೆರೆಯಲ್ಲಿ ಅಭಿವೃದ್ಧಿಯ ಕಾರಂಜಿ ಚಿಮ್ಮಿಸಿದವರು ಪ್ರಾಧಿಕಾರದ ಆಗಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂ ಮನೋಜ್‍ಕುಮಾರ್. ಅವರು ಕಾರಂಜಿಕೆರೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತರು. ಕೆರೆಯಲ್ಲಿ ತುಂಬಿದ್ದ ಹೂಳು ತೆಗೆದು ಕೊಳಚೆ ನೀರನ್ನು ಇಂಗುಗುಂಡಿಯ ಮೂಲಕ ಇಂಗಿಸಿ ತಿಳಿನೀರು ಮಾತ್ರ ಕೆರೆಯತ್ತ ಹರಿಯುವಂತೆ ಮಾಡಿದರು. ಕೆರೆಗಳ ಮಧ್ಯೆ ಕೃತಕ ದ್ವೀಪಗಳನ್ನು ನಿರ್ಮಿಸಿ ಅಲ್ಲಿ ಮರ ಬೆಳೆಸಿ ವಲಸೆ ಬರುವ ಹಕ್ಕಿಗಳಿಗೆ ನೆಲೆ ಕಲ್ಪಿಸಿಕೊಟ್ಟರು.

ಕಾರಂಜಿ ಕೆರೆಯ ಹೆಸರೇನು?

ಕಾರಂಜಿ ಕೆರೆಯ ಹೆಸರೇನು?

ಕೆರೆಯ ನೀರಲ್ಲಿ ಸವಾರಿ ಮಾಡಲು ಬರುವವರಿಗೆ ದೋಣಿಗಳ ವ್ಯವಸ್ಥೆ ಮಾಡಿ, ಮರಗಿಡಗಳನ್ನು ಬೆಳೆಸಿದರು. ಓಡಾಡಲು ಅನುಕೂಲವಾಗುವಂತೆ ಕಾಲುದಾರಿಗಳನ್ನು, ಜೊತೆಗೆ ಪ್ರವೇಶ ದ್ವಾರ ನಿರ್ಮಿಸಲಾಯಿತು. ಹೀಗೆ ನವೀಕರಣಗೊಂಡ ಕೆರೆಗೆ "ಕಾರಂಜಿ ಪ್ರಕೃತಿ ಉದ್ಯಾನವನ" ಎಂಬ ಹೆಸರನ್ನಿಟ್ಟು 2004 ಜನವರಿ 25 ರಂದು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು. ಅಲ್ಲಿಂದ ಇಲ್ಲಿಯ ತನಕ ಕಾರಂಜಿಕೆರೆ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತಾ ಸೆಳೆಯುತ್ತಾ ಬಂದಿದೆ.

ಕಾರಂಜಿ ಕೆರೆಯಲ್ಲಿ ಎಷ್ಟು ಪಕ್ಷಿ, ಚಿಟ್ಟೆ ಬೀಡು ಬಿಟ್ಟಿವೆ?

ಕಾರಂಜಿ ಕೆರೆಯಲ್ಲಿ ಎಷ್ಟು ಪಕ್ಷಿ, ಚಿಟ್ಟೆ ಬೀಡು ಬಿಟ್ಟಿವೆ?

ಇವತ್ತು ಕಾರಂಜಿಕೆರೆಯಲ್ಲಿ ಮೀನು, ಮೊಸಳೆಯಂತಹ ಜಲಚರಗಳು, ಬ್ಲೂಜೆ, ಪೇಂಟೆಡ್ ಸ್ಟಾರ್ಕ್, ವೈಟ್ ಐಬೀಸ್, ಕಾಜಾಣಗಳಂತಹ ಬಾನಾಡಿಗಳು ಬೀಡು ಬಿಟ್ಟಿವೆ. ಸುಮಾರು ಎಪ್ಪತ್ತು ಪ್ರಭೇದದ ಚಿಟ್ಟೆಗಳು ವಾಸ್ತವ್ಯ ಹೂಡಿವೆ. ಔಷಧಿವನ, ಶ್ರೀಗಂಧದ ಮರಗಳು ಇಲ್ಲಿವೆ. ಪಕ್ಷಿಗಳ ಹಾರಾಟವನ್ನು ವೀಕ್ಷಿಸಲೆಂದೇ 'ವಾಚ್‍ಟವರ್'ನ್ನು ನಿರ್ಮಿಸಲಾಗಿದೆ. ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಉಯ್ಯಾಲೆ ಇನ್ನಿತರ ಆಟದ ವ್ಯವಸ್ಥೆ ಮಾಡಲಾಗಿದೆ.

ಕಾರಂಜಿ ಕೆರೆ ಬಳಿ ಒಬ್ಬರು ಎಷ್ಟು ಗಂಟೆ ಕುಳಿತುಕೊಳ್ಳಬಹುದು?

ಕಾರಂಜಿ ಕೆರೆ ಬಳಿ ಒಬ್ಬರು ಎಷ್ಟು ಗಂಟೆ ಕುಳಿತುಕೊಳ್ಳಬಹುದು?

ಮೊದಲೆಲ್ಲಾ ಬೆಳಿಗ್ಗೆ ಟಿಕೆಟ್ ಪಡೆದು ಒಳ ಹೋದರೆ ಸಂಜೆಯಾದರೂ ಹೊರಬರುತ್ತಿರಲಿಲ್ಲ. ಇದರ ತಡೆಗೆ ಇದೀಗ ಒಬ್ಬರಿಗೆ 4ಗಂಟೆ ಕಾಲಾವಕಾಶ ಮಾತ್ರ ನಿಗದಿಮಾಡಲಾಗಿದೆ. ಪ್ರೇಮಿಗಳು ಪ್ರೇಮ ಸಲ್ಲಾಪ ಮಾಡಲು ಬಂದರೆ ಮತ್ತೆ ಕೆಲವರು ಉದ್ಯಾನ ವೀಕ್ಷಣೆಗೆ ಬರುತ್ತಾರೆ. ಇನ್ನು ಕೆಲವರು ಜಂಜಾಟವನ್ನು ಬದಿಗೊತ್ತಿ ಒಂದಷ್ಟು ಸಮಯವನ್ನು ನೆಮ್ಮದಿಯಾಗಿ ಯಾವುದೇ ಒತ್ತಡವಿಲ್ಲದೆ ಪ್ರಕೃತಿ ಮಡಿಲಲ್ಲಿ ಕಳೆಯಲು ಆಗಮಿಸುತ್ತಾರೆ. ಯಾರೆ ಬರಲಿ ಎಲ್ಲರನ್ನೂ ಕಾರಂಜಿಕೆರೆ ಆಕರ್ಷಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

English summary
Mysuru Karanji lake is located in the Mysuru. It is heaven for birds, butterflies and lovers. The lake surrounded by a nature park consisting of a butterfly park and walk through aviary, This avairy is the biggest 'walk through avairy in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X