ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ರಸ್ತೆಯೇ ಒಕ್ಕಣೆ ಕಣ, ಚಾಲಕರ ಪ್ರಾಣ ಹರಣ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ, 05: ಈಗ ಸುಗ್ಗಿಯ ಕಾಲ..ರೈತರು ತಾವು ಬೆಳೆದ ಬೆಳೆಯನ್ನು ಜಮೀನುಗಳಿಂದ ಕಣಕ್ಕೆ ತಂದು ಒಕ್ಕಣೆ ಮಾಡಿ ಮನೆಗೆ ತುಂಬಿಸಿಕೊಳ್ಳುವ ಸಮಯ. ಸಾಮಾನ್ಯವಾಗಿ ಒಕ್ಕಣೆಯನ್ನು ತಮ್ಮ ಜಮೀನುಗಳ ಕಣಗಳಲ್ಲಿ ಅಥವಾ ಸರ್ಕಾರ ನಿರ್ಮಿಸಿಕೊಟ್ಟ ಸಾರ್ವಜನಿಕ ಕಣಗಳಲ್ಲಿ ಮಾಡುತ್ತಾರೆ. ಆದರೆ ಕೆಲವು ರೈತರು ಸ್ವಂತ ಕಣದಲ್ಲಿ ಒಕ್ಕಣೆ ಮಾಡುವ ಬದಲು ಸಾರ್ವಜನಿಕ ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿದ್ದು, ಇದರಿಂದ ವಾಹನದಲ್ಲಿ ಸಂಚರಿಸುವವರು ಪರದಾಡುವಂತಾಗಿದೆ.

ಸ್ವಂತ ಕಣಗಳಲ್ಲಿ ಒಕ್ಕಣೆ ಮಾಡಲು ಹಸುಗಳೋ, ಟ್ರ್ಯಾಕ್ಟರೋ, ಟಿಲ್ಲರ್ ಬೇಕಾಗುತ್ತದೆ. ಬದಲಾಗಿ ವಾಹನಗಳು ಓಡಾಡುವ ಸಾರ್ವಜನಿಕ ರಸ್ತೆಯಲ್ಲೇ ಬೆಳೆಗಳನ್ನು ತಂದು ಹಾಕಿದರೆ ಅದರ ಮೇಲೆ ವಾಹನಗಳು ತೆರಳುವುದರಿಂದ ಒಕ್ಕಣೆ ಯಾವುದೇ ತೊಂದರೆಯಿಲ್ಲದೆ ನಡೆಯುತ್ತದೆ ಎಂಬುದು ರೈತರ ಉದ್ದೇಶವಾಗಿದೆ. ಇದೊಂದು ರೀತಿಯಲ್ಲಿ ರೈತರಿಗೆ ಅನುಕೂಲವಾದರೂ ವಾಹನ ಚಾಲನೆ ಮಾಡುವವರಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ.[ಮಣ್ಣುಪಾಲಾದ ಹುಣಸೂರಿನ ಬೀಜೋತ್ಪಾದನಾ ಕೇಂದ್ರ]

Mysuru

ಹುಣಸೂರು ತಾಲೂಕಿನ ತೆರಕಣಾಂಬಿ-ರಾಮನಾಥಪುರ ರಾಜ್ಯ ಹೆದ್ದಾರಿ 86ರ ರಸ್ತೆಯಲ್ಲಿ ಒಕ್ಕಣೆ ಮಾಡುವುದು ಸಾಮಾನ್ಯವಾಗಿದ್ದು ಇದರಿಂದ ವಾಹನ ಓಡಾಡಲು ಹರಸಾಹಸ ಪಡುವಂತಾಗಿದೆ. ಇನ್ನು ದ್ವಿಚಕ್ರ ವಾಹನ ಸವಾರರಂತು ರಸ್ತೆ ಬದಿಯಲ್ಲೇ ಸಂಚರಿಸುವಂತಾಗಿದೆ.

ಹುಣಸೂರಿನಿಂದ ಹಿರೀಕ್ಯಾತನಹಳ್ಳಿ-ಮಳಲಿ-ಮಾವತ್ತೂರು-ಚುಂಚನಕಟ್ಟೆ ಮಾರ್ಗವಾಗಿ ಹಾದು ಹೋಗಿರುವ ರಸ್ತೆ ಕಿರಿದಾಗಿದೆ. ಈ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿರುವುದರಿಂದ ಕೆಲವು ವಾಹನ ಸವಾರರು ರಸ್ತೆ ಮೇಲೆ ಸಂಚರಿಸಲು ಭಯಪಟ್ಟುಕೊಂಡು ರಸ್ತೆ ಬದಿಯಲ್ಲೇ ತೆರಳುತ್ತಿರುವುದು ಕಂಡು ಬರುತ್ತಿದೆ.

ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಹುರುಳಿ ತೊಗರಿ, ಉದ್ದು, ರಾಗಿ, ಜೋಳ, ಅಲಸಂದೆ ಮೊದಲಾದ ಬೆಳೆಗಳನ್ನು ರಸ್ತೆಯಲ್ಲಿ ಹರಡಿ ಒಕ್ಕಣೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಒಕ್ಕಣೆ ಮಾಡಬಾರದು ಎಂಬ ನಿಯಮವಿದ್ದರೂ ಕೆಲವು ರೈತರಿಗೆ ಅದರ ಅರಿವು ಇದ್ದಂತಿಲ್ಲ. ಈಗಾಗಲೇ ಇದರ ಮೇಲೆ ತೆರಳಿ ಚಕ್ರಕ್ಕೆ ಹುರುಳಿ, ಅಲಸಂದೆ ಬಳ್ಳಿ, ರಾಗಿಯ ಹುಲ್ಲು ಸಿಕ್ಕಿ ಬಿದ್ದು ದ್ವಿಚಕ್ರ ವಾಹನ ಸವಾರರು ಗಾಯಗೊಂಡಿರುವ ಘಟನೆಗಳು ನಡೆದಿವೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]

Mysuru

ಮೊದಲೆಲ್ಲ ರೈತರು ತಮ್ಮ ಜಮೀನು ಅಥವಾ ಮನೆಯ ಬಳಿಯೇ ಕಣಗಳನ್ನು ನಿರ್ಮಿಸಿ ಅದನ್ನು ಸೆಗಣಿಯಿಂದ ಸಾರಿಸಿ ಶುಚಿಗೊಳಿಸಿ ಅಲ್ಲಿ ದನಗಳ ಮೂಲಕ ಒಕ್ಕಣೆ ಮಾಡುತ್ತಿದ್ದರು. ಇತ್ತೀಚೆಗೆ ದನಗಳನ್ನು ಸಾಕುವುದು ಕಡಿಮೆಯಾದ ಮೇಲೆ ಟ್ರ್ಯಾಕ್ಟರ್ ಬಳಸಿ ಒಕ್ಕಣೆ ಮಾಡುವುದು ಕಂಡು ಬರುತ್ತಿದೆ. ಆದರೆ ಕೆಲವು ರೈತರು ಇದ್ಯಾವುದೂ ಬೇಡವೆಂದು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಾರೆ. ಇದೊಂದು ರೀತಿಯಲ್ಲಿ ಅಪಾಯಕಾರಿ ಎಂಬುದು ಗೊತ್ತಿದ್ದರೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ರೈತರಿಗೆ ಒಕ್ಕಣೆ ವಿಷಯದಲ್ಲಿ ಸಹಕಾರಿಯಾದಂತೆ ಕಂಡು ಬಂದರೂ ಇದು ರೋಗ ರುಜಿನಕ್ಕೆ ದಾರಿ ಮಾಡಿಕೊಡುತ್ತದೆ. ಮತ್ತೊಂದು ಕಡೆ ವಾಹನ ಚಾಲಕರ ಪ್ರಾಣಕ್ಕೆ ಕುತ್ತು ತರುತ್ತಿದೆ. ಇದೆಲ್ಲ ಕಣ್ಮುಂದೆ ನಡೆದರೂ ಆಯಾ ಪಂಚಾಯಿತಿ ಅಧಿಕಾರಿಗಳಾಗಲೀ, ಸಂಬಂಧಿಸಿದ ಜನಪ್ರತಿನಿಧಿಗಳಾಗಲೀ ಇದನ್ನು ತಪ್ಪಿಸಲು ಮುಂದಾಗಿಲ್ಲ.[ರೈತರ ಸಮಸ್ಯೆ ನಿವಾರಣೆಗೊಂದು 'ಯೂ ಫಾರ್ಮ್']

ರೈತರು ರಾತ್ರಿ ಸಮಯದಲ್ಲಿ ರಾಗಿ ಹುಲ್ಲನ್ನು ರಸ್ತೆಯಲ್ಲಿ ಹರಡಿ ಹೋಗುತ್ತಿದ್ದು ಇದು ಗೊತ್ತಾಗದೆ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ರೈತರಲ್ಲಿ ಅರಿವು ಮೂಡಿಸಲಿ. ಕಣಗಳು ಇಲ್ಲದ ಗ್ರಾಮಗಳಲ್ಲಿ ಸಾರ್ವಜನಿಕ ಕಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿ.

English summary
Mysuru farmers face the free land problem for tenancy (okkalu)from few days. Many people were skid and killed in road accidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X