ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್ 23: ಹುಣಸೂರು ತಾಲೂಕಿನ ನಾಗಪುರದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಗಜಪಯಣದ ಮೂಲಕ ನಾಡ ಹಬ್ಬ ದಸರಾಕ್ಕೆ ಮುನ್ನುಡಿ ಬರೆಯಲಾಗಿದೆ. ನಾಗಪುರದಿಂದ ಹೊರಟ ಆರು ಆನೆ ಮತ್ತು ಮಾವುತರನ್ನೊಳಗೊಂಡ ಗಜಪಡೆ ಈಗಾಗಲೇ ಮೈಸೂರಿಗೆ ಆಗಮಿಸಿ, ಅಲೋಕ ಎಂಬಲ್ಲಿ ವಾಸ್ತವ್ಯ ಹೂಡಿವೆ.

ಆ.26ರಂದು ಅರಮನೆಗೆ ಆಗಮಿಸುವ ಗಜಪಡೆಗೆ ಅರಮನೆ ಮುಂಭಾಗ ಸಾಂಪ್ರದಾಯಿಕ ಸ್ವಾಗತ ನೀಡಿ, ಬರಮಾಡಿಕೊಳ್ಳಲಾಗುತ್ತದೆ. ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುವ ಗಜಪಡೆಗಳು ದಸರಾ ಜಂಬೂ ಸವಾರಿಗೆ ತಾಲೀಮು ನಡೆಸುತ್ತವೆ. ಇದೀಗ ಆಗಮಿಸಿರುವ ಆರು ಆನೆಗಳ ಗಜಪಡೆಗೆ ಮತ್ತೆ ಆರು ಆನೆಗಳು ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿವೆ. ಒಟ್ಟು 12 ಆನೆಗಳಿಗೆ ನಿತ್ಯವೂ ತಾಲೀಮು ನಡೆಯಲಿದೆ.[ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ದಸರಾ ಗಜಪಡೆ]

Abhimanyu

ಬೆಳಗ್ಗೆ, ಸಂಜೆ ತಾಲೀಮು, ನಂತರ ಮಜ್ಜನ, ಆಹಾರ ಸೇವನೆ, ಆರೋಗ್ಯ ತಪಾಸಣೆ ಹೀಗೆ ನಡೆಯುತ್ತವೆ. ಈ ಬಾರಿ ಭಾಗವಹಿಸಲಿರುವ 12 ಆನೆಗಳು ಒಂದೊಂದು ಆನೆ ಶಿಬಿರಗಳಿಂದ ಬಂದಿದ್ದು, ಎಲ್ಲವನ್ನೂ ಜಂಬೂ ಸವಾರಿಗೆ ಸಜ್ಜುಗೊಳಿಸುವುದು ಸುಲಭದ ಕೆಲಸವಲ್ಲ. ಆದರೆ ಕಾವಾಡಿ, ಮಾವುತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾರೆ.

ಮೈಸೂರು ನಗರಕ್ಕೆ ಆಗಮಿಸಿರುವ ಮೊದಲ ತಂಡದಲ್ಲಿ ಕ್ಯಾಪ್ಟನ್ ಅರ್ಜುನ ಸೇರಿದಂತೆ ಆರು ಆನೆಗಳಿದ್ದರೆ, ಎರಡನೇ ತಂಡದಲ್ಲಿ ಹಿರಿಯ ಅರುವತ್ತು ವರ್ಷದ ಪ್ರಶಾಂತ ಸೇರಿದಂತೆ ಆರು ಆನೆಗಳಿರಲಿವೆ. ಜಂಬೂಸವಾರಿಯಲ್ಲಿ ಭಾಗವಹಿಸಿ, ಮೈಸೂರು ದಸರಾಗೆ ಕಳೆ ಕಟ್ಟಲಿರುವ ಹನ್ನೆರಡು ಆನೆಗಳ ಬಗ್ಗೆ ಕುತೂಹಲವಿರಬಹುದಲ್ಲವೆ? ಹಾಗಿದ್ದರೆ ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.[ಮೈಸೂರು ದಸರಾಕ್ಕೆ ಕಳೆಕಟ್ಟಿದ ಗಜಪಯಣ]

Arjuna

ಕ್ಯಾಪ್ಟನ್ ಅರ್ಜುನ: 56ವರ್ಷದ ಅರ್ಜುನ ಗಜಪಡೆಯ ಕ್ಯಾಪ್ಟನ್. 2012ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಬ್ದಾರಿ ವಹಿಸಿಕೊಂಡಿದ್ದಾನೆ. 1968ರಲ್ಲಿ ಎಚ್.ಡಿ.ಕೋಟೆಯ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾದ ಮೂಲಕ ಸೆರೆ ಹಿಡಿಯಲಾಯಿತು. ಬಳ್ಳೆ ಆನೆ ಶಿಬಿರ ಈತನ ವಾಸ್ತವ್ಯದ ಕೇಂದ್ರವಾಗಿದೆ. ಎತ್ತರ 2.95 ಮೀ. ಉದ್ದ 3.75 ಮೀ. ಅಂದಾಜು 5100 ಕೆ.ಜಿ. ತೂಕವಿದ್ದಾನೆ.

ಮೈಸೂರು ದಸರಾದಲ್ಲಿ ಸುಮಾರು 19 ವರ್ಷಗಳಿಂದ ಭಾಗವಹಿಸುತ್ತಾ ಬಂದಿರುವ ಬಲರಾಮ, 14 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ಬರೆದಿದ್ದಾನೆ. 1978ರಲ್ಲಿ ಈತ ಕೊಡಗಿನ ಕಟ್ಟೆಪುರ ಅರಣ್ಯದಲ್ಲಿ ಸೆರೆ ಸಿಕ್ಕಿದ್ದ. ತಿತಿಮತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ವಾಸ್ತವ್ಯವಾಗಿದ್ದು, 58 ವರ್ಷ ವಯಸ್ಸಾಗಿದೆ. 2.7ಮೀ ಎತ್ತರ, 3.70 ಮೀ. ಉದ್ದ, ಸುಮಾರು 4950 ಕೆ.ಜಿ. ತೂಕ ಹೊಂದಿದ್ದಾನೆ.

ವಾದ್ಯ ಸಂಗೀತದ ಗಾಡಿ ಹೊಣೆ: ಜಂಬೂಸವಾರಿಯಲ್ಲಿ 17 ವರ್ಷಗಳ ಕಾಲ ಭಾಗವಹಿಸಿ ಅನುಭವ ಹೊಂದಿರುವ ಅಭಿಮನ್ಯುಗೆ ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಾಬ್ದಾರಿ ನೀಡಲಾಗಿದ್ದು, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿದ್ದಾನೆ. 50 ವರ್ಷದ ಅಭಿಮನ್ಯುವನ್ನು 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು.[ಅರ್ಜುನ, ಬಲರಾಮ, ಅಭಿಮನ್ಯು.. ದಸರಾ ಆನೆಗಳ ಪರಿಚಯ ಇಲ್ಲಿದೆ]

Balarama

ಪುಂಡ ಆನೆಗಳನ್ನು ಸದೆಬಡಿದು ಹೆಡೆಮುರಿಗೆ ಕಟ್ಟುವುದರಲ್ಲಿ ಈತ ನಿಸ್ಸೀಮ. ತಿತಿಮತಿಯ ಮತ್ತಿಗೋಡು ಆನೆಶಿಬಿರದಲ್ಲಿ ಇರುತ್ತಾನೆ. 2.68 ಮೀ ಎತ್ತರ, 3.51 ಮೀ. ಉದ್ದ ಹಾಗೂ ಅಂದಾಜು 4650 ಕೆ.ಜಿ. ತೂಕ ಹೊಂದಿದ್ದಾನೆ.

ಕಾಡಾನೆ ಪಳಗಿಸುವ ನಿಸ್ಸೀಮ: ಸುಮಾರು 61 ವರ್ಷ ಪ್ರಾಯದ ಹಿರಿಯನಾದ ಗಜೇಂದ್ರ ಕಾಡಾನೆಗಳನ್ನು ಪಳಗಿಸುವುದರಲ್ಲಿ ಎತ್ತಿದ ಕೈ. 1987ರಲ್ಲಿ ಕೊಡಗಿನ ಕಟ್ಟೆಪುರ ಅರಣ್ಯದಲ್ಲಿ ಸೆರೆ ಸಿಕ್ಕಿದ್ದು ಚಾಮರಾಜನಗರದ ಕೆ.ಗುಡಿ ಆನೆ ಶಿಬಿರದಲ್ಲಿ ವಾಸ್ತವ್ಯ.2.94ಮೀ. ಎತ್ತರ, 3.80 ಮೀ. ಉದ್ದ ಮತ್ತು ಅಂದಾಜು 4560 ಕೆ.ಜಿ. ತೂಕ ಹೊಂದಿದ್ದಾನೆ. 17 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ಪಟ್ಟದ ಆನೆಯ ಜವಾಬ್ದಾರಿ ಈತನದ್ದಾಗಿರುತ್ತದೆ.

ಗಜಪಡೆಗಳ ಪೈಕಿ ಸಾಧುಸ್ವಭಾವದ ಹೆಣ್ಣು ಆನೆ ವಿಜಯ ಕಳೆದ ಒಂಬತ್ತು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದಾಳೆ. ದುಬಾರೆ ಆನೆ ಶಿಬಿರದಲ್ಲಿರುವ ಈಕೆಯನ್ನು 1963ರಲ್ಲಿ ದುಬಾರೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. 2.29ಮೀ. ಎತ್ತರ, 3.00ಮೀ ಉದ್ದ ಹಾಗೂ ಅಂದಾಜು 3250 ಕೆ.ಜಿ. ತೂಕವನ್ನು ಹೊಂದಿದ್ದಾಳೆ.[ನಾಡಹಬ್ಬ ಮೈಸೂರು ದಸರಾ ಲಾಂಛನ, ವೆಬ್ ಸೈಟ್ ಅನಾವರಣ]

38 ವರ್ಷದ ಕಾವೇರಿ: ಕೊಡಗಿನ ಸೋಮವಾರಪೇಟೆಯ ಅಡನಾಡೂರು ಅರಣ್ಯಪ್ರದೇಶದಲ್ಲಿ 2009ರಲ್ಲಿ ಸೆರೆ ಸಿಕ್ಕಿರುವ ಹೆಣ್ಣಾನೆ ಕಾವೇರಿಗೆ ಈಗ 38 ವರ್ಷ. 2.50ಮೀ ಎತ್ತರ, 3.32ಮೀ ಉದ್ದ ಹಾಗೂ ಅಂದಾಜು 3152 ಕೆ.ಜಿ ತೂಕ ಹೊಂದಿರುವ ಈಕೆ ದುಬಾರೆ ಆನೆ ಶಿಬಿರದವಳು. ಈಕೆಗೆ ಇದು 5ನೇ ಬಾರಿಯ ದಸರಾ ಮಹೋತ್ಸವವಾಗಿದೆ.

ಇನ್ನು ಎರಡನೇ ತಂಡದ ಗಜಪಡೆ ಕೆಲವೇ ದಿನಗಳಲ್ಲಿ ಅರಮನೆ ಆವರಣವನ್ನು ಪ್ರವೇಶಿಸಲಿದೆ. ಇದರಲ್ಲಿ ಪ್ರಶಾಂತ ಹಿರಿಯನಾಗಿದ್ದು, 60ವರ್ಷ ವಯಸ್ಸಾಗಿದೆ. ಈತನನ್ನು 1993ರಲ್ಲಿ ಕೊಡಗಿನ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ದುಬಾರೆಯಲ್ಲಿ ವಾಸ್ತವ್ಯ ಹೂಡಿದ್ದಾನೆ. 2.61ಮೀ ಎತ್ತರ, 3.46 ಮೀ ಉದ್ದ ಮತ್ತು 4329ಕೆಜಿ ತೂಕ ಹೊಂದಿದ್ದಾನೆ. ಬೇರೆ ಬೇರೆ ಸಮಾರಂಭಗಳಲ್ಲಿ ಭಾಗವಹಿಸಿ ಅನುಭವ ಇರುವ ಈತ, 10ನೇ ಬಾರಿಗೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.

Gaja 2

ದುರ್ಗಾಗೆ ನಾಲ್ಕನೇ ದಸರಾ: ಹೆಣ್ಣಾನೆ ದುರ್ಗಾಪರಮೇಶ್ವರಿಗೆ 49ವರ್ಷ. 1972ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಗುಂಡಿಗೆ ಬೀಳಿಸಿ, ಸೆರೆ ಹಿಡಿಯಲಾಗಿದೆ. 2.40ಮೀ ಎತ್ತರ, 3.20 ಮೀ. ಉದ್ದ ಅಲ್ಲದೆ ಅಂದಾಜು 3500 ಕೆ.ಜಿ. ತೂಕ ಹೊಂದಿದೆ. ಇದು ನಾಲ್ಕನೇ ಬಾರಿಯ ದಸರಾವಾಗಿದೆ.[ದಸರಾ ಆಚರಣೆಗೆ ಆದ್ಯತೆ: ಮೈಸೂರು ಹೊಸ ಡಿಸಿ ರಣದೀಪ್]

5ನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿರುವ ಗೋಪಾಲಸ್ವಾಮಿ ತಿತಿಮತಿಯ ಮತ್ತಿಗೋಡು ಆನೆ ಶಿಬಿರದವನಾಗಿದ್ದು, ಶಾಂತ ಸ್ವಭಾವದ ಬಲಶಾಲಿ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆಹಿಡಿಯಲಾಗಿದೆ. 2.62 ಮೀ. ಎತ್ತರ, 3.42ಮೀ. ಉದ್ದ ಅಂದಾಜು 3242 ಕೆ.ಜಿ. ತೂಕ ಹೊಂದಿದ್ದಾನೆ.

ವಿಕ್ರಮನಿಗೆ 12ನೇ ದಸರಾ: ವಿಕ್ರಮನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ದುಬಾರೆ ಆನೆ ಶಿಬಿರದಲ್ಲಿ ವಾಸ್ತವ್ಯ. 43ವರ್ಷ ವಯಸ್ಸು, 2.60ಮೀ. ಎತ್ತರ, 3.43ಮೀ ಉದ್ದ ಹಾಗೂ ಅಂದಾಜು 3820ಕೆಜಿ ತೂಕ ಹೊಂದಿದೆ. 12ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸುವ ಜವಾಬ್ದಾರಿ ನೀಡಲಾಗುತ್ತದೆ.[ದಸರೆಗೆ ಮೈಸೂರಲ್ಲಿ ವಿಮಾನಯಾನ ಮತ್ತೆ ಶುರು ಮಾಡಿ: ಪ್ರತಾಪ್ ಸಿಂಹ]

1993ರಲ್ಲಿ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆ ಹಿಡಿಯಲಾದ ಗೋಪಿ ದುಬಾರೆ ಆನೆ ಶಿಬಿರದವನು. ಅಲ್ಲಿ ಸಫಾರಿ ಕಾರ್ಯ ನಿರ್ವಹಿಸುತ್ತಾನೆ. 34ವರ್ಷ, ಎತ್ತರ 2.92 ಮೀ. ಉದ್ದ 3.42 ಮೀ. ಅಂದಾಜು ತೂಕ 3710 ಕೆ.ಜಿ. ಇದು ಈತನಿಗೆ 6ನೇ ದಸರಾ ಆಗಿದೆ.

14ನೇ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಹರ್ಷನಿಗೆ ಈಗ 49 ವರ್ಷ. 2.55 ಮೀ ಎತ್ತರ, 3.40 ಮೀ ಉದ್ದ ಅಂದಾಜು 3290ಕೆಜಿ ತೂಕವನ್ನು ಹೊಂದಿದ್ದಾನೆ. ದುಬಾರೆ ಆನೆ ಶಿಬಿರದವನಾದ ಈತನನ್ನು 1990ರಲ್ಲಿ ದೊಡ್ಡಬೆಟ್ಟದಲ್ಲಿ ಸೆರೆಹಿಡಿಯಲಾಗಿದೆ. ಈತ ಬಲಶಾಲಿ ಎಂಬುದರಲ್ಲಿ ಎರಡು ಮಾತಿಲ್ಲ.

English summary
6 Elephenats participating in Mysuru dasara jambu savari started journey from Hunsur taluk. 6 more elephants will join soon. Here complete details of elaphants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X