ಅರಮನೆಯಲ್ಲಿ ಯದುವೀರ್ ವಿವಾಹ ಸಂಭ್ರಮ ಆರಂಭ

Written by: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 24 : ಐತಿಹಾಸಿಕ ಮೈಸೂರು ಅರಮನೆಯಲ್ಲಿ ಯದುವೀರ್ ಮತ್ತು ತ್ರಿಷಿಕಾ ವಿವಾಹದ ಸಂಭ್ರಮ ಶುಭ ಶುಕ್ರವಾರದಿಂದ ಆರಂಭವಾಗಿದೆ. ಸುಮಾರು 40 ವರ್ಷದ ಬಳಿಕ ನಡೆಯುತ್ತಿರುವ ರಾಜವಂಶಸ್ಥರ ಮನೆಯ ಮದುವೆ ನಡೆಯುತ್ತಿರುವುದು ಅರಮನೆಯಲ್ಲಿ ಸಂಭ್ರಮ ಅಂಬರ ಮುಟ್ಟಿದೆ, ಎಲ್ಲರ ಕುತೂಹಲವನ್ನು ಇಮ್ಮಡಿಕೊಳಿಸಿದೆ.[ಯದುವೀರ್-ತ್ರಿಷಿಕಾ ವಿವಾಹಕ್ಕೆ ಮೈಸೂರು ಅರಮನೆ ಸಿಂಗಾರ]

ಈಗಾಗಲೇ ಮದುವೆಯ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗಿದ್ದು, ಶುಕ್ರವಾರದಿಂದ(ಜೂ.24) ವಿವಾಹಕ್ಕೆ ಸಂಬಂಧಿಸಿದ ಹೋಮ ಹವನ ವಿಧಿವಿಧಾನಗಳು ನೆರವೇರಲಿದೆ. ಜೂ.28ರವರೆಗೆ ಸುಮಾರು ಐದು ದಿನಗಳ ಕಾಲ ವಿವಾಹ ಮಹೋತ್ಸವದ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಲಿವೆ. ಹೀಗಾಗಿ ಈ ದಿನಗಳಲ್ಲಿ ಅರಮನೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

ಇಂದು ಬೆಳಗಿನ ಜಾವ 4.30ರಿಂದಲೇ ಮದುವೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಅರಮನೆಯ ಕಲ್ಯಾಣ ಮಂಟಪದಲ್ಲಿ ಆರಂಭವಾಗಿದೆ. ಸಂಪ್ರದಾಯದಂತೆ ವರ ಯದುವೀರ್ ಒಡೆಯರ್, ರಾಜಪುರೋಹಿತರ ಅಣತಿಯಂತೆ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸುತ್ತಿದ್ದಾರೆ. ರಾಜ ಪುರೋಹಿತರು ಮತ್ತು ಕುಲಪುರೋಹಿತರು ಅಷ್ಟ ದೇವಾಲಯದ ಅರ್ಚಕರು ಉಪಸ್ಥಿತರಿದ್ದಾರೆ. [ರಾಜವೈಭೋಗದ ಯದುವೀರ್ ಮದುವೆಗೆ ಅರಮನೆ ಸನ್ನದ್ಧ!]

ತದನಂತರ ಐದು ದಿನಗಳ ಕಾಲ ವಿಧಿವಿಧಾನಗಳು ಹೇಗಿರಲಿವೆ ಎಂಬ ವಿವರಗಳನ್ನು ಮುಂದಿನ ಪುಟಗಳಲ್ಲಿ ನೋಡಿರಿ. [ಯದುವಂಶದ ಸಂಪ್ರದಾಯದಲ್ಲಿ ಯದುವೀರ್ ವಿವಾಹ]

ಜೂನ್ 25ರಂದು ಚಪ್ಪರಶಾಸ್ತ್ರ

ಅರಮನೆಯಲ್ಲಿ ಮದುವೆ ಕಾರ್ಯಗಳ ಸಂಬಂಧ ಹೋಮ ಹವನ ಇನ್ನಿತರೆ ಸಂಪ್ರದಾಯಗಳೊಂದಿಗೆ ವಿವಾಹ ಮಹೋತ್ಸವ ಆರಂಭವಾಗಲಿದೆ. ಜೂ.25(ಶನಿವಾರ)ರಂದು ಅರಮನೆ ಮುಂಭಾಗದಲ್ಲಿ ಚಪ್ಪರದ ಶಾಸ್ತ್ರ ನಡೆಸಲಾಗುತ್ತಿದ್ದು, ಬಳಿಕ ಮದುಮಗ ಯದುವೀರ್‌ಗೆ ಎಣ್ಣೆ ಸ್ನಾನದ ಶಾಸ್ತ್ರ ನಡೆಯಲಿದೆ. ಇದಾದ ಬಳಿಕ ಅರಿಶಿಣ ಎಣ್ಣೆ ಸ್ನಾನ, ಆ ನಂತರ ಕಂಕಣ ಕಟ್ಟಲಾಗುವುದು. ಇದೆಲ್ಲ ಮುಗಿದು ಅರಮನೆಯ ಕಲ್ಯಾಣ ಮಂಟಪದಲ್ಲಿ ಹೋಮ-ಹವನ ನೆವೇರಿಸಲಾಗುತ್ತದೆ.

ಅರಮನೆ ದೇವರ ಶುದ್ಧೀಕರಣ

ಇದರೊಂದಿಗೆ ಅರಮನೆಯ ಉಗಮ ದೇವಸ್ಥಾನ ಶ್ರೀ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿ ದೇಗುಲದ ಸಮೀಪವಿರುವ ಬಾವಿಯಿಂದ ನೀರನ್ನು ಕಳಸದೊಂದಿಗೆ ತಂದು ಈ ನೀರಿನಿಂದ ಅರಮನೆಯ ಮನೆ ದೇವರನ್ನು ಶುದ್ಧೀಕರಣಗೊಳಿಸಲಾಗುತ್ತದೆ. ಇದೆಲ್ಲ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಚಪ್ಪರ ಸಮಾರಂಭದ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಆರಂಭ ದೊರೆಯಲಿದೆ. ಇದೇ ದಿನ ಕುಲ ಗುರುಗಳಾದ ಪರಕಾಲ ಶ್ರೀಗಳ ಪಾದ ಪೂಜೆ ಮಾಡಲಾಗುತ್ತದೆ. ಆ ನಂತರ ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಉಟೋಪಚಾರ ನಡೆಯಲಿದೆ.

ಎಲ್ಲಾ ದೇವಾಲಯಗಳ ತೀರ್ಥ ಪ್ರಸಾದ

26(ಭಾನುವಾರ)ರಂದು ನಾಡ ದೇವತೆ ಹಾಗೂ ಕುಲದೇವತೆ ಚಾಮುಂಡಿ ಬೆಟ್ಟ, ಮೇಲುಕೋಟೆ, ಉತ್ತನಹಳ್ಳಿ, ನಂಜನಗೂಡು, ಶ್ರೀರಂಗಪಟ್ಟಣ, ಶೃಂಗೇರಿ, ಮಹದೇಶ್ವರ ಬೆಟ್ಟ ಸೇರಿದಂತೆ ಅರಮನೆ ಒಳಗಿರುವ ಎಲ್ಲಾ ದೇವಾಲಯಗಳಿಂದ ತಂದ ತೀರ್ಥ ಪ್ರಸಾದದಿಂದ ದೇವತಾ ಕಾರ್ಯ ನಡೆಯಲಿದೆ. ದೇಗುಲಗಳ ತೀರ್ಥ ಪ್ರಸಾದವನ್ನು ಮದುಮಗ ಯದುವೀರ್ ಸ್ವೀಕರಿಸಲಿದ್ದಾರೆ.

ಜೂ.27ರಂದು ಯದುವೀರ್ ತ್ರಿಷಿಕಾ ಮದುವೆ

27(ಸೋಮವಾರ)ರಂದು ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ಅವರ ವಿವಾಹವೂ ಅರಮನೆಯ ಕಲ್ಯಾಣ ಮಂಟಪದಲ್ಲಿ 9.05ರಿಂದ 9.30ರವರೆಗೆ ಕರ್ಕಾಟಕ ಲಗ್ನ, ಸಾವಿತ್ರಿ ಮಹೂರ್ತದಲ್ಲಿ ನಡೆಯಲಿದೆ. ಅಂದು ಸಂಜೆ ಉರುತೆನೆ ಉಯ್ಯಾಲೆ ಶಾಸ್ತ್ರ ನಡೆಯಲಿದ್ದು, ಸಂಜೆ ನಾಗವಲ್ಲಿ ಶಾಸ್ತ್ರ ಸಹ ನಡೆಯಲಿದೆ.

ತ್ರಿಷಿಕಾಗೆ ಎರಡನೇ ತಾಳಿಧಾರಣೆ ಭಾಗ್ಯ

ಇಲ್ಲಿ ತ್ರಿಷಿಕಾ ಕುಮಾರಿ ಸಿಂಗ್‌ಗೆ ಎರಡನೇ ತಾಳಿಧಾರಣೆ ನಡೆಯುತ್ತದೆ. (ಇದು ಒಡೆಯರ್ ಕುಟುಂಬದಲ್ಲಿ ಇರುವ ವಿಶಿಷ್ಟ ಪದ್ಧತಿಯಾಗಿದೆ. ಮದುವೆಯಾದ ತ್ರಿಷಿಕಾ ಕುಮಾರಿಗೆ ಯದುವೀರ್ ಬೆಳಗ್ಗೆ ಒಂದು ತಾಳಿ ಧಾರಣೆ ಮಾಡಿದರೆ, ಸಂಜೆ ನಾಗವಲ್ಲಿ ಶಾಸ್ತ್ರದ ಮೂಲಕ ಮತ್ತೊಂದು ದೇವರ ತಾಳಿ ಧಾರಣೆ ಮಾಡಲಿದ್ದಾರೆ.)

ದರ್ಬಾರ್ ಹಾಲ್‌ನಲ್ಲಿ ಆರತಕ್ಷತೆ

28(ಮಂಗಳವಾರ)ರಂದು ಅರಮನೆಯ ದರ್ಬಾರ್ ಹಾಲ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. 29(ಬುಧವಾರ)ರಂದು ದರ್ಶನಕ್ಕೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಯದುವೀರ್ ಕಾರಿನಲ್ಲಿ ಅರಮನೆಗೆ ಪ್ರದಕ್ಷಿಣೆ ಬರಲಿದ್ದಾರೆ.

ಅಂಗರಕ ಧರಿಸಲಿದ್ದಾರೆ ಯದುವೀರ್

ಜು.2ರಂದು ಬೆಂಗಳೂರು ಅರಮನೆಯಲ್ಲಿ ಆರತಕ್ಷತೆ ನಡೆಯಲಿದೆ. ವಿವಾಹದ ಐದೂ ದಿನಗಳು ಹಿಂದಿನ ಮಹಾರಾಜರು ಧರಿಸುತ್ತಿದ್ದ ಅಂಗರಕ(ಲಾಂಗ್‌ಕೋಟ್)ವನ್ನು ಯದುವೀರ್ ಧರಿಸಲಿದ್ದು, ಇದು ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ರಾಜಮಾತೆ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ಸಿದ್ಧವಾಗಿವೆ.

English summary
Marriage rituals of Yaduveer Urs and Trishika Kumari Singh began at Mysuru palace on Friday, June 24, 2016. Royal marriage is being conducted at palace after 40 years. The royal marriage will take place on June 27 and reception on June 28.
Please Wait while comments are loading...