ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಣಸೂರಿನ ಹೊಲದಲ್ಲಿ ಚೆಂಡು ಹೂ ಬೆಳೆದ ಚೆಂದದ ಕಥೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 02 : ಮೈಸೂರು ಜಿಲ್ಲೆಯ ಕೆ.ಆರ್.ನಗರ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುವ ತಂಬಾಕು ಕೃಷಿ ಇತ್ತೀಚೆಗೆ ರೈತರ ಪಾಲಿಗೆ ಜೂಜಾಟವಾಗುತ್ತಿದೆ.

ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಹಣ ತರುವ ಬೆಳೆ ಎಂದೇ ನಂಬಿಕೊಂಡು ಬಂಡವಾಳ ಹಾಕಿ ಆದಾಯ ತೆಗೆಯುವ ಬೆಳೆಯಾಗಿ ಬಿಂಬಿಸುತ್ತಾ ಹಿಂದಿನಿಂದಲೂ ಬರಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ತಂಬಾಕು ಬೆಳೆದು ಉದ್ದಾರವಾದ ರೈತರಿದ್ದರು. ಆದರೆ ಬರಬರುತ್ತಾ ಅದು ರೈತರಿಗೆ ಮರಣಪಾಶವಾಗುತ್ತಿದೆ.

ಸಾಲ ಮಾಡಿ ತಂಬಾಕು ಬೆಳೆಯಲು ರೈತರು ರೈತರು ಸರಿಯಾಗಿ ಇಳುವರಿ ಬಾರದೆ, ಒಂದು ವೇಳೆ ಇಳುವರಿ ಬಂದರೂ ಸೂಕ್ತ ದರ ಸಿಗದೆ ನಷ್ಟಕ್ಕೊಳಗಾಗುತ್ತಾ, ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ತಂಬಾಕು ನಂಬಿ ಕೃಷಿಗೆ ಇಳಿದ ರೈತ ಇವತ್ತು ಲಕ್ಷ ಲಕ್ಷ ಸಾಲ ಮಾಡಿಕೊಂಡು ತಲೆ ಮರೆಸಿ ಓಡಾಡುವ ಸ್ಥಿತಿಗೆ ತಲುಪಿದ್ದಾನೆ. ಮತ್ತೆ ಕೆಲವರು ಸಾಲ ತೀರಿಸಲಾಗದೆ, ಸಮಸ್ಯೆ ಎದುರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. [ಬಾಯಿಗೆ ಬರದ ತುತ್ತು, ತಂಬಾಕು ಬೆಳೆಗಾರರಿಗೆ ಕುತ್ತು]

Hunsur farmers give up tobacco crop, grow Marigold

ತಂಬಾಕಿಗೆ ಪರ್ಯಾಯ ಬೆಳೆ : ತಂಬಾಕು ಕೃಷಿಯ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡು ನರಳಾಡುತ್ತಿರುವ ರೈತರು ಅದನ್ನು ಬಿಟ್ಟು ಬೇರೆ ಕೃಷಿಗೆ ಹೊರಳಲು ಸಾಧ್ಯವಿಲ್ಲವೆ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇದರ ನಡುವೆಯೇ 2020ರ ವೇಳೆಗೆ ತಂಬಾಕನ್ನು ನಿಷೇಧಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದಕ್ಕೆ ರೈತರು ಕೂಡ ಮಾನಸಿಕವಾಗಿ ತಯಾರಾಗಬೇಕಾಗಿದೆ. ತಂಬಾಕಿಗೆ ಪರ್ಯಾಯವಾಗಿ ಮತ್ತೆ ಯಾವುದಾದರು ಬೆಳೆಯನ್ನು ಬೆಳೆಯಲು ಮುಂದಾಗಬೇಕು. ಈಗಿನಿಂದಲೇ ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಆದರೆ ಬಹಳಷ್ಟು ರೈತರು ತಂಬಾಕು ಕೃಷಿಯಿಂದ ಹೊರಬರುತ್ತಿಲ್ಲ.

ಆದರೆ ಇವರ ನಡುವೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ, ಮಾಚಬಾಯನಹಳ್ಳಿ, ಮುಳ್ಳೂರು ಗ್ರಾಮಗಳಲ್ಲಿ ಕೆಲವು ರೈತರು ತಂಬಾಕಿಗೆ ವಿದಾಯ ಹೇಳಿ ಚೆಂಡು ಹೂವಿನತ್ತ ಒಲವು ತೋರಿದ್ದಾರೆ. ಇದು ಒಂದು ರೀತಿಯ ಸಂತಸದ ವಿಚಾರ ಎಂದರೆ ತಪ್ಪಾಗಲಾರದು.

ಮೊದಲೆಲ್ಲ ರೈತರು ತಮ್ಮ ಮನೆ ಸುತ್ತಮುತ್ತ ಪೂಜೆ ಪುರಸ್ಕಾರಕ್ಕಷ್ಟೆ ಚೆಂಡು ಹೂ ಬೆಳೆಯುತ್ತಿದ್ದವರು, ಅದನ್ನೇ ಕೃಷಿ ಮಾಡಿ ಆರ್ಥಿಕವಾಗಿ ಸುಧಾರಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಸದ್ಯ ಚೆಂಡು ಹೂ ಬೆಳೆದವರನ್ನು ಮಾತನಾಡಿಸಿ ನೋಡಿದರೆ ಅವರಿಗೆ ಒಂದಷ್ಟು ಆದಾಯ ಬರುತ್ತಿರುವ ಬಗ್ಗೆ ನೆಮ್ಮದಿಯಿದೆ. ಈಗಾಗಲೇ ಸ್ವಲ್ಪ ಪ್ರಮಾಣದಲ್ಲಿ ಬೆಳೆದ ರೈತರು ಅದನ್ನು ಇನ್ನಷ್ಟು ವಿಸ್ತರಿಸುವ ಮಟ್ಟಕ್ಕೂ ಧೈರ್ಯ ಮಾಡುತ್ತಿದ್ದಾರೆ. ಹೀಗಾಗಿ ಚೆಂಡು ಹೂ ರೈತನ ಕೈಹಿಡಿಯುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ. [ಚೆಂಡು ಹೂ ಸಂಸ್ಕರಣಾ ಘಟಕದ ವಿರುದ್ಧ ಸಿಡಿದೆದ್ದ ರೈತರು]

Hunsur farmers give up tobacco crop, grow Marigold

ಚೆಂಡು ಹೂ ಬೆಳೆಗಾರರ ಯಶೋಗಾಥೆ

ತಂಬಾಕು ಬೆಳೆ ಬೆಳೆದು ಸಾಲಗಾರರಾಗಿದ್ದ ರೈತರು ಚೆಂಡು ಹೂ ಬೆಳೆಯಲು ಮುಂದಾಗಿದ್ದೇ ಯಶೋಗಾಥೆ. ಯಾವ ಕೃಷಿ ಮಾಡುವುದಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ದ ರೈತರಿಗೆ ವರದಾನವಾಗಿ ಬಂದಿದ್ದು ನ್ಯಾಚುರಲ್ ಪ್ರಾಡಕ್ಟ್ ಲಿಮಿಟೆಡ್ ಎಂಬ ಕಂಪನಿ.

ಕಂಪನಿಯ ಅಧಿಕಾರಿಗಳು ರೈತರನ್ನು ಸಂಪರ್ಕಿಸಿ ಚೆಂಡು ಹೂ ಬೆಳೆಯಿರಿ. ಅದಕ್ಕೆ ಬೇಕಾದ ಬೀಜ, ಗೊಬ್ಬರ, ರಾಸಾಯನಿಕ ಔಷಧಿಯನ್ನು ಸಾಲದ ರೂಪದಲ್ಲಿ ನೀಡಿ ಬಳಿಕ ಫಸಲನ್ನು ಕೂಡ ತಾವೇ ಖರೀದಿಸುವ ಮತ್ತು ನೀಡಿದ ಸಾಲವನ್ನು ಹಂತಹಂತವಾಗಿ ಪಡೆಯುವ ವಾಗ್ದಾನ ಮಾಡಿದರು. ಜೊತೆಗೆ ಚೆಂಡು ಹೂವಿಗೆ ಹೆಚ್ಚಿನ ಬೇಡಿಕೆಯಿದೆ. ಬಣ್ಣ ಮತ್ತು ಔಷಧಿಗೆ ಬಳಕೆಯಾಗುವುದರಿಂದ ನೀವು ಬೆಳೆದ ಬೆಳೆಗೆ ಮಾರುಕಟ್ಟೆಯ ತೊಂದರೆ ಕಾಣಿಸುವುದಿಲ್ಲ ಎಂದು ಮಾಹಿತಿ ನೀಡುವ ಮೂಲಕ ಮನವೊಲಿಸಿದರು. [ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ]

Hunsur farmers give up tobacco crop, grow Marigold

ಮೊದಲಿಗೆ ರೈತರು ಹಿಂದೇಟು ಹಾಕಿದರಾದರೂ, ಏನಾದರಾಗಲಿ ನೋಡಿಯೇ ಬಿಡೋಣ ಎಂದು ಚೆಂಡು ಹೂವಿನ ಕೃಷಿಗೆ ಇಳಿದೇ ಬಿಟ್ಟರು. ಮೂರೂವರೆ ಅಡಿ ಅಂತರದಲ್ಲಿ ಸಾಲು ಮಾಡಿ ಕಾಲು ಅಡಿ ಅಂತರದಲ್ಲಿ ನಾಟಿ ಮಾಡಿದರು. ಒಂದು ಎಕರೆಗೆ ಸುಮಾರು 15ರಿಂದ 16 ಸಾವಿರ ಸಸಿಗಳು ಬೇಕಾಯಿತು. ನಾಟಿ ಮಾಡಿದ ಬಳಿಕ ಜತನದಿಂದ ಆರೈಕೆ ಮಾಡಿದ ರೈತರು ನಂತರ ಡಿಎಪಿ ಪೊಟ್ಯಾಷ್ ಗೊಬ್ಬರವನ್ನು ಮೊದಲಿಗೆ ನೀಡಿದರು. ಆ ನಂತರ ಎರಡನೇ ಬಾರಿಗೆ 17-17 ಗೊಬ್ಬರವನ್ನು ಹಾಕಿದರು. ಇದೀಗ ಗಿಡಗಳು ಬೆಳೆದು ಹೂಗಳನ್ನು ಬಿಡಲಾರಂಭಿಸಿವ. ಈಗ ರೈತರ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ.

ಚೆಂಡು ಹೂ ಬೆಳೆಯಲು ಪ್ರೋತ್ಸಾಹಿದ ಸಂಸ್ಥೆಯೇ ಹೂವನ್ನು ಕೆಜಿಗೆ 5.35 ರೂ. ನೀಡಿ ವಾರಕ್ಕೊಮ್ಮೆ ರೈತರ ಜಮೀನಿಗೆ ಬಂದು ಖರೀದಿಸುತ್ತಿದೆ. ಇದರಿಂದ ಅರ್ಧ ಎಕರೆ ಪ್ರದೇಶದಲ್ಲಿ ಕೃಷಿ ಮಾಡಿದ ರೈತನಿಗೂ ವಾರಕ್ಕೆ ಸುಮಾರು ನಾಲ್ಕು ಸಾವಿರ ರೂ.ನಷ್ಟು ಆದಾಯ ಸಿಗುತ್ತಿದೆ. [ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಹೂಗಳ ದುರ್ವಾಸನೆ!]

Hunsur farmers give up tobacco crop, grow Marigold

ಸಂಸ್ಥೆಯ ಅಧಿಕಾರಿಗಳ ಹೇಳುವಂತೆ ಎಕರೆಗೆ 15ರಿಂದ 20 ಟನ್ ಬೆಳೆ ಬೆಳೆಯಬಹುದು. ಒಮ್ಮೆ ಕೃಷಿ ಮಾಡಿದರೆ 8ರಿಂದ 12 ಬಾರಿ ಕೊಯ್ಲು ಮಾಡಬಹುದು. ಗಾವಡಗೆರೆ ಹೋಬಳಿಯಲ್ಲಿ ಸುಮಾರು 35ರಿಂದ 40 ಎಕರೆಯಲ್ಲಿ ಚೆಂಡು ಹೂ ಬೆಳೆದಿದ್ದು 15ರಿಂದ 20 ಟನ್ ಹೂ ಮಾರಾಟವಾಗುತ್ತಿದೆ.

ಕಳೆದ ಒಂದೂವರೆ ದಶಕಗಳಿಂದ ತಂಬಾಕು ಬೆಳೆದು ಕೈಸುಟ್ಟುಕೊಳ್ಳುತ್ತಾ ಪರ್ಯಾಯ ಬೆಳೆಯಾಗಿ ಯಾವುದನ್ನು ಬೆಳೆಯೋದು ಎಂದು ಯೋಚಿಸುತ್ತಿದ್ದ ರೈತರಿಗೆ ಇದೀಗ ಚೆಂಡು ಹೂ ಮನಸ್ಸಿಗೆ ನೆಮ್ಮದಿ ಹಾಗೂ ಮೊಗದಲ್ಲಿ ಮಂದಹಾಸ ಮೂಡಿಸಿದೆ. [ನೋಡುಗರ ಮನವನ್ನೂ ಅರಳಿಸುವ ಬ್ರಹ್ಮ ಕಮಲ!]

English summary
Success story of farmers in Hunsur taluk in Mysuru district, who gave up tobacco crop and grew Marigold. It was not an easy task for the company which persuaded the farmers to grow Marigold instead of tobacco. Ultimately farmers have some money in their hands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X