ನಂಜನಗೂಡು: ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಅನುಕಂಪದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸ್ವಾಭಿಮಾನದಿಂದ ಚುನಾವಣೆಗೆ ಸ್ಪರ್ಧಿಸಿದ ಹಿರಿಯ ನಾಯಕ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸೋಲು ಕಂಡಿದ್ದಾರೆ.

Written by: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಏಪ್ರಿಲ್ 14 : ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ತಪೋಭೂಮಿಯಲ್ಲಿ ಎದ್ದಿದ್ದ ಕಾಂಗ್ರೆಸ್ ಅಲೆಯಲ್ಲಿ ಬಿಜೆಪಿಯ 'ಸ್ವಾಭಿಮಾನ' ಕೊಚ್ಚಿಕೊಂಡು ಹೋಗಿದೆ. ಸತತ ಸೋಲಿನ 'ಅನುಕಂಪ'ದ ಬಾವುಟ ಹಾರಾಡಿದೆ.

ಆದರೆ, ಉಭಯ ಪಕ್ಷಗಳಿಗೂ ಇಲ್ಲಿನ ಮತದಾರ ಪರೋಕ್ಷ ಎಚ್ಚರಿಕೆಯನ್ನು ರವಾನಿಸಿದ್ದಾನೆ. 'ಅನುಕಂಪ' ವರ್ಸಸ್ 'ಸ್ವಾಭಿಮಾನ'ದ ನಡುವೆ ನಡೆದ ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಎನ್ ಕೇಶವಮೂರ್ತಿ ಅನುಕಂಪದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸ್ವಾಭಿಮಾನದಿಂದ ಚುನಾವಣೆಗೆ ಸ್ಪರ್ಧಿಸಿದ ಮಾಜಿ ಸಚಿವ, ಹಿರಿಯ ನಾಯಕ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸೋಲು ಕಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಡುವಿನ ಪ್ರತಿಷ್ಠೆಯ ಜಿದ್ದಾಜಿದ್ದಿನ ಕಣವಾಗಿದ್ದ ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್ ಕೇಶವಮೂರ್ತಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಕೈ ಮೇಲಾಗಿದ್ದು ಗೆಲುವಿಗೆ ಕಾರಣಗಳು ಇಂತಿವೆ,

ಕಳಲೆಗೆ ವರದಾನವಾದ ವರ್ಚಸ್ಸು

1. ಕಾಂಗ್ರೆಸ್ ಅಭ್ಯರ್ಥಿ ಎರಡು ಬಾರಿ ಸೋಲು ಅನುಭವಿಸಿದ್ದು, ಸರಳ ಸಜ್ಜನ ರಾಜಕಾರಣಿ ಎಂಬ ವರ್ಚಸ್ಸು ಹೊಂದಿದ್ದು ಅವರಿಗೆ ಲಾಭವಾಗಿದೆ.

2. ಜೆಡಿಎಸ್ ಸಂಪ್ರದಾಯಕ ಮತಗಳನ್ನು ಕಾಂಗ್ರೆಸಿಗೆ ಬಂದೂ ಕಳಲೆ ಉಳಿಸಿಕೊಂಡಿದ್ದು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

3. ಶ್ರೀನಿವಾಸ್ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದ ನಂತರ ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಿಎಂ ವಿಶೇಷ ಆಸಕ್ತಿ ವಹಿಸಿ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ವರದಾನವಾಯಿತು.

ಸಿಎಂ ವಾಸ್ತವ್ಯದ ಬಲ

4. ಸಿಎಂ ಸಿದ್ದರಾಮಯ್ಯ ಉಪ ಚುನಾವಣೆಯನ್ನು ಖುದ್ದು ಪ್ರತಿಷ್ಠೆಯಾಗಿ ತೆಗೆದುಕೊಂಡು ಮೈಸೂರಿನಲ್ಲೇ ವಾಸ್ತವ್ಯ ಹೂಡಿ ಚುನಾವಣಾ ನೇತೃತ್ವ ವಹಿಸಿದ್ದು ಗೆಲುವಿಗೆ ಬಲ ನೀಡಿತು.

5. ಸಂಪುಟದ ಸಚಿವರು, ಶಾಸಕರು, ಸಂಸದರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ತಮ್ಮ ಜಾತಿ ಪ್ರಾಬಲ್ಯದ ಕಡೆ ಕೆಲಸ ಮಾಡಿದ್ದು ಗೆಲುವಿಗೆ ಸಹಕಾರಿಯಾಯಿತು.

6. ಕೇಶವಮೂರ್ತಿ ಹಾಗೂ ಸಂಸದ ಧ್ರುವನಾರಾಯಣ್ ಉಪ ಚುನಾವಣೆ ಘೋಷಣೆಗೂ ಮುನ್ನ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದು ಕಾಂಗ್ರೆಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು

ಹಿಂದುಳಿದ ದಲಿತ ಮತಗಳ ಕೊಡುಗೆ

7. ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರ ಯೋಜನೆಗಳ ಮೂಲಕ ಹಣದ ಹೊಳೆಯನ್ನೆ ಹರಿಸಿದ್ದು ಗೆಲ್ಲಲು ಪ್ರಮುಖ ಕಾರಣವಾಯಿತು.

8. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಅಭಿವೃದ್ಧಿ ದೃಷ್ಟಿಯಿಂದ ಕೇಶವಮೂರ್ತಿಗೆ ಮತ ಹಾಕಿದರು. ಇದು ಕಾಂಗ್ರೆಸಿಗೆ ಲಾಭವಾಯಿತು.

9. ಹಿಂದುಳಿದ ಹಾಗೂ ದಲಿತ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕೇಶವಮೂರ್ತಿ ಪಾಲಾಯಿತು ಇದರಿಂದ ಗೆಲುವು ಸುಲಭವಾಯಿತು.

ಬಿಜೆಪಿ ಸೋಲಿಗೆ ಕಾರಣಗಳು

ಇನ್ನೂ ಬಿ.ಎಸ್. ಯಡಿಯೂರಪ್ಪರವರ ಪ್ರತಿಷ್ಠೆ ಹಾಗೂ ಶ್ರೀನಿವಾಸ್ ಪ್ರಸಾದ್ ಸ್ವಾಭಿಮಾನವಾದ ಈ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲು ಕಾರಣಗಳು ಇಂತಿವೆ.

1. ದಲಿತ ಹಾಗೂ ಲಿಂಗಾಯಿತ ಮತಗಳು ಕ್ರೋಢೀಕರಣವಾಗದೇ ಇದ್ದುದರಿಂದ ಯಡಿಯೂರಪ್ಪ ತಂತ್ರ ವಿಫಲವಾಯಿತು.

2. ಅನಾರೋಗ್ಯದ ನಿಮಿತ್ತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸಕ್ರಿಯವಾಗಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸದೇ ಇದ್ದುದು ಬಿಜೆಪಿಗೆ ದೊಡ್ಡ ನಷ್ಟ ಉಂಟು ಮಾಡಿತು

ಸಾಂಪ್ರದಾಯಿಕ ಮತಗಳ ಕೊರತೆ

3. ಸಚಿವರಾಗಿದ್ದಾಗ ಶ್ರೀನಿವಾಸ್ ಪ್ರಸಾದ್ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಮಾಡಿರಲಿಲ್ಲ ಎಂಬುದು ಚುನಾವಣೆ ವೇಳೆ ಬಿಂಬಿತವಾಯಿತು.

4. ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಸಾಂಪ್ರದಾಯಕ ಮತಗಳಿಲ್ಲದೇ ಇರುವುದು ದೊಡ್ಡ ನಷ್ಟ ಉಂಟು ಮಾಡಿತು.

5. ಬಿಜೆಪಿ ಪಕ್ಷದಲ್ಲಿ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸ , ಕಾಂಗ್ರೆಸ್‌ನ್ನು ಅತಿಯಾಗಿ ಟೀಕೆ ಮಾಡಿದ್ದು ಬಿಜೆಪಿಗೆ ಮುಳುವಾಯಿತು.

6. ಸಂಸದ ಪ್ರತಾಪ್ ಸಿಂಹ ವಿವಾದತ್ಮಾಕ ಹೇಳಿಕೆ ನೀಡಿದ್ದು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವಾಗಿದೆ.

ಜೆಡಿಎಸ್ ಪಾತ್ರ ನಿರ್ಣಾಯಕ

ಕ್ಷೇತ್ರದಲ್ಲಿ ಭಾರೀ ಹಿಡಿತ ಹೊಂದಿದ್ದ ಜೆಡಿಎಸ್ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಕಾಂಗ್ರೆಸ್ ಸುಲಭವಾಗಿ ಗೆಲ್ಲುವಂತಾಯಿತು. ಆದರೆ ಗೆಲುವಿನ ಅಂತರ ತೀರಾ ಹೆಚ್ಚಾಗಿಲ್ಲ ಎಂಬುದು ಕಾಂಗ್ರೆಸಿಗೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿದೆ. ಕಾಂಗ್ರೆಸ್-ಜೆಡಿಎಸ್ ನಡೆ ಮುಂದಿನ ಚುನಾವಣೆಯಲ್ಲಿ ಮಹಾಮೈತ್ರಿ ಅಲ್ಲದಿದ್ದರೂ ಹೊಂದಾಣಿಕೆಯ ರಾಜಕಾರಣಕ್ಕೆ ಮುನ್ನುಡಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪ್ರಬಲರಾದ ಸಿಎಂ

ಎರಡು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದಲ್ಲಿ ಮತ್ತಷ್ಟು ಪ್ರಬಲರಾಗಿದ್ದಾರೆ. ಒಂದು ವೇಳೆ ಎರಡರಲ್ಲೂ ಸೋತಿದ್ದರೆ, ಪಕ್ಷದಲ್ಲಿ ಭಿನ್ನಮತ ತಲೆದೋರುವ ಸಾಧ್ಯತೆ ಇತ್ತು. ಆದರೆ, ಈಗ ಅವರ ಮಾತೇ ಅಂತಿಮ ಎಂಬ ಸ್ಥಿತಿ ನಿರ್ಮಾಣವಾಗಲಿದೆ. ಮುಂದಿನ ಟಿಕೆಟ್ ಹಂಚಿಕೆಯಿಂದ ಹಿಡಿದು ಎಲ್ಲದರಲ್ಲೂ ಪರಮಾಧಿಕಾರ ಸಿಗಲಿದೆ. ಈ ಮೂಲಕ ಪಕ್ಷದೊಳಗಿನ ವಿರೋಧಿಗಳ ಬಾಯಿಗೆ ಬೀಗ ಹಾಕಿದ್ದಾರೆ.

ಹೈಕಮಾಂಡ್ ಅಭಿನಂದನೆ

ಉಪ ಚುನಾವಣೆ ಎರಡು ಕ್ಷೇತ್ರಗಳಲ್ಲಿ ಗೆಲುವಿಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಹತ್ತು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಅದರಲ್ಲಿ ಕೇವಲ ಮೂರು ಕಡೆ ಮಾತ್ರ ಕಾಂಗ್ರೆಸ್ ಗೆದ್ದಿದ್ದರೆ, ಎರಡು ಕ್ಷೇತ್ರಗಳು ಕರ್ನಾಟಕದಲ್ಲಿವೆ.

ಹೈಕಮಾಂಡಿಗೆ ಆಶಾಭಾವನೆ

ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ. ಪಂಜಾಬ್ ಹೊರತು ಬೇರೆ ಪ್ರಬಲ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ನಡೆದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎಂಬ ವಿಶ್ವಾಸ ಹೈಕಮಾಂಡ್ ನಲ್ಲಿ ಮೂಡಲು ಈ ಚುನಾವಣೆ ಕಾರಣವಾಗಿದೆ.

ಭಿನ್ನಮತರು ಮೂಲೆಗುಂಪು

ಕಾಂಗ್ರೆಸ್ ನಲ್ಲಿರುವ ಭಿನ್ನಮತೀಯರ ಬಾಯಿ ಮುಚ್ಚಿಸಿ, ಅವರನ್ನು ಮೂಲೆಗುಂಪು ಮಾಡಲು ಸಿದ್ದರಾಮಯ್ಯಗೆ ಇದು ಅಸ್ತ್ರವಾಗಲಿದೆ. ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದ್ದ, ಅವರನ್ನು ಕಟ್ಟಿ ಅರಬ್ಬೀ ಸಮುದ್ರಕ್ಕೆ ಎಸೆಯದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಹೇಳುತ್ತಿದ್ದ ಜನಾರ್ದನ ಪೂಜಾರಿ ಅಂತಹ ಹಿರಿಯ ನಾಯಕರ ಬಾಯಿಯನ್ನು ಈ ಫಲಿತಾಂಶ ಕಟ್ಟಿ ಹಾಕಿದೆ.

ನಾಯಕತ್ವ ಬದಲಾವಣೆ ಹಿನ್ನಡೆ

ಮುಂದಿನ ಚುನಾವಣೆಗೆ ಕಾಂಗ್ರೆಸ್ ನಾಯಕತ್ವದಲ್ಲಿ ಬದಲಾವಣೆಯಾಗಬೇಕು ಎಂಬ ಬೇಡಿಕೆಗಳು ತೆರೆಮರೆಗೆ ಸರಿಯಲಿವೆ. ಸರ್ಕಾರ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಪರ, ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಭಾಗ್ಯದಂತಹ ಯೋಜನೆಗಳಿಗೆ ಜನರು ನೀಡಿದ ಮನ್ನಣೆ ಇದು ಎಂದು ಬಿಂಬಿಸಿಕೊಳ್ಳಲು ಸಿದ್ದರಾಮಯ್ಯಗೆ ಈ ಫಲಿತಾಂಶ ಅನುಕೂಲ ಮಾಡಿಕೊಡಲಿದೆ.

ವಲಸೆಗೆ ತಡೆ

ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಬಿಜೆಪಿ, ಜೆಡಿಎಸ್ ಕಡೆ ವಲಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಕಾಂಗ್ರೆಸ್ ಗೆ ರಾಜ್ಯದಲ್ಲಿ ಇನ್ನೂ ಭವಿಷ್ಯವಿದೆ ಎಂದು ಶಾಸಕರು, ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಭರವಸೆ ಮೂಡಿಸಲು ಇದು ಕಾರಣವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ಸಂಪೂರ್ಣ ಅಧಿಕಾರ ಸಿದ್ದರಾಮಯ್ಯಗೆ ಸಿಗಲಿದೆ.

ಯಡಿಯೂರಪ್ಪಗೆ ಭಾರೀ ಮುಖಭಂಗ

ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಹೈಕಮಾಂಡ್ ಘೋಷಿಸಿರುವ ಯಡಿಯೂರಪ್ಪಗೆ ಇದು ದೊಡ್ಡ ಹಿನ್ನಡೆಯೇ ಸರಿ. ಪಕ್ಷದಲ್ಲಿ ಅವರ ವಿರೋಧಿ ಬಣ ಸಂಭ್ರಮಿಸಲು, ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು ಎಂಬ ಬೇಡಿಕೆ ಮತ್ತಷ್ಟು ತೀವ್ರಗೊಳ್ಳಲಿದೆ. ಲಿಂಗಾಯತರು ನಿರ್ಣಾಯಕ ಮತದಾರರಾಗಿರುವ ಎರಡೂ ಕ್ಷೇತ್ರಗಳ ಪೈಕಿ ಒಂದನ್ನೂ ಗೆಲ್ಲಲಾಗದ ಯಡಿಯೂರಪ್ಪ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಹೇಗೆ ಅಧಿಕಾರಕ್ಕೆ ತಂದಾರು ಎಂಬ ಪ್ರಶ್ನೆಯನ್ನು ಪಕ್ಷದ ಮುಖಂಡರು ಎತ್ತಲು ಈ ಫಲಿತಾಂಶ ಕಾರಣವಾಗಲಿದೆ.

ಹೈಕಮಾಂಡ್ ಅಂಕುಶ

ಪಕ್ಷದ ಹೈಕಮಾಂಡ್ ಹಾಗೂ ಪ್ರಮುಖರ ಗಮನಕ್ಕೆ ತರದೇ ಶ್ರೀನಿವಾಸ ಪ್ರಸಾದ್‌ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ತಪ್ಪು ಎಂದು ಬಿಜೆಪಿ ನಾಯಕರು ಅಭಿಪ್ರಾಯ ಪಟ್ಟಿದ್ದರು. ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರದ ವಿರುದ್ಧ ಅಪಸ್ವರ ತೆಗೆದಿದ್ದರು. ಇದೀಗ ಬೇರೆ ಪಕ್ಷದಿಂದ ಕರೆತರುವ ವಿಷಯದಲ್ಲಿ ಯಡಿಯೂರಪ್ಪ ಕೈಗೊಳ್ಳುತ್ತಿದ್ದ ತೀರ್ಮಾನಕ್ಕೆ ಹೈಕಮಾಂಡ್ ಅಂಕುಶ ಹಾಕಲಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಹಿರಿಯ ನಾಯಕರ ಆಕ್ಷೇಪ ಇನ್ನಷ್ಟು ಪ್ರಖರ ಗೊಳ್ಳಲಿದೆ.

ಕುತೂಹಲದಲ್ಲಿ ರಾಯಣ್ಣ ಬ್ರಿಗೇಡ್

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಹೈಕಮಾಂಡ್ ಗಮನಕ್ಕೆ ಯಡಿಯೂರಪ್ಪ ತಂದಿದ್ದರು. ಈ ಮೂಲಕ ಕೆ.ಎಸ್. ಈಶ್ವರಪ್ಪಗೆ ಮೂಗುದಾರ ಹಾಕಿಸಿದ್ದರು. ಬ್ರಿಗೇಡ್ ಬಲವಾದರೆ ಬಿಜೆಪಿಗೆ ಶಕ್ತಿ ಬರಲಿದೆ ಎಂದು ಬಿಂಬಿಸಿಕೊಳ್ಳಲು, ಮತ್ತೆ ಬ್ರಿಗೇಡ್ ‍ಕಟ್ಟಲು ಈಶ್ವರಪ್ಪ ಹೊರಡಬಹುದು.

ಮುಂದಿನ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವ ತೀರ್ಮಾನವನ್ನು ಯಡಿಯೂರಪ್ಪಗೆ ನೀಡದೇ, ಹೈಕಮಾಂಡ್ ತನ್ನ ಬಳಿಯಲ್ಲಿಯೇ ಇಟ್ಟುಕೊಳ್ಳಲು ಇದು ಕಾರಣವಾಗಬಹುದು.

English summary
After the results of both Nanjanagudu and Gundlupete by-election, the people are now engaged in finding the reasons behind the BJPs loss and Congress's gain. Here, those loss and gains of those parties have been listed on basis of analysis.
Please Wait while comments are loading...