ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

90 ಮೆಟ್ಟಿಲ ಬೆಟ್ಟದಲ್ಲಿ ವಿರಾಜಮಾನನಾದ ಮೈಸೂರು ಗೊಮ್ಮಟೇಶ್ವರ

By ಬಿ.ಎಂ.ಲವಕುಮಾರ್
|
Google Oneindia Kannada News

ಶ್ರವಣಬೆಳಗೊಳದಲ್ಲಿರುವ ಅಜಾನುಬಾಹು ಗೊಮ್ಮಟೇಶ್ವರ ವಿಗ್ರಹದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಮೈಸೂರು ಜಿಲ್ಲೆಯಲ್ಲೂ ಅಂತಹದ್ದೇ ಒಂದು ಗೊಮ್ಮಟೇಶ್ವರ ವೀರಾಜಮಾನನಾಗಿ ಕಂಗೊಳಿಸುತ್ತಾ ಭಕ್ತರ ಮನತಣಿಸುತ್ತಿರುವ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎನಿಸುತ್ತದೆ. ಹೌದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಬಳಿ ಬೆಟ್ಟದೂರು ಗ್ರಾಮ ಪಂಚಾಯಿತಿಗೆ ಸೇರುವ ಶ್ರೀ ಗೊಮ್ಮಟಗಿರಿ ಬೆಟ್ಟದಲ್ಲಿ ನೆಲೆ ನಿಂತಿರುವ ಗೊಮ್ಮಟೇಶ್ವರ ಜೈನರ ಆರಾಧ್ಯ ದೈವನಾಗಿ ಪೂಜಿಸಲ್ಪಡುತ್ತಾ ಭಕ್ತರ ಸೆಳೆಯುತ್ತಿದ್ದಾನೆ.

ಈ ಗೊಮ್ಮಟೇಶ್ವರನಿಗೆ 66ನೇ ವರ್ಷದ ಮಹಾಮಸ್ತಕಾಭಿಷೇಕ ಭಾನುವಾರ ನವೆಂಬರ್ 29ರಂದು ನೆರವೇರಿದೆ. ಈ ತಾಣ ಶ್ರವಣಬೆಳಗೊಳದಂತೆ ಪ್ರಖ್ಯಾತ ಹೊಂದಿಲ್ಲದಿದ್ದರೂ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಇಲ್ಲಿರುವ ಗೊಮ್ಮಟೇಶ್ವರ ಮೂರ್ತಿಗೆ ಸುಮಾರು ಎಂಟು ಶತಮಾನಗಳ ಇತಿಹಾಸ ಇದೆ ಎನ್ನಲಾಗುತ್ತದೆ.[ಮಸ್ತಾಭಿಷೇಕದಲ್ಲಿ ಮಿಂದ ನಂದಿ ಸೌಂದರ್ಯಕ್ಕೆ ಸರಿಸಾಟಿ ಯಾರು?]

Gommatagiri is one of the tourist place of Mysuru

ಸುಮಾರು 200 ಅಡಿ ಎತ್ತರ, 250 ಅಡಿ ಅಗಲದ ಹೆಬ್ಬಂಡೆಯಲ್ಲಿ 16 ಅಡಿ ಎತ್ತರದ ಏಕಶಿಲೆಯಲ್ಲಿ ಗೊಮ್ಮಟೇಶ್ವರನನ್ನು ಕೆತ್ತಲಾಗಿದೆ. ಈ ಮೂರ್ತಿಯನ್ನು ತಲುಪಬೇಕಾದರೆ ಹೆಬ್ಬಂಡೆಯ ಸುಮಾರು 90 ಮೆಟ್ಟಿಲನ್ನು ಹತ್ತಿ ಸಾಗಬೇಕು. ಹೀಗೆ ಸಾಗಿದ ಮೇಲೆ ಹತ್ತಿರದಿಂದ ಕಾಣುವ ಗೊಮ್ಮಟೇಶ್ವರನ ಮೂರ್ತಿ ನಿಜಕ್ಕೂ ನೋಡುಗರ ಆಯಾಸವನ್ನು ತಣಿಸಿ ಮನಸ್ಸು ಪ್ರಶಾಂತಗೊಳಿಸುತ್ತದೆ.

ಈ ಗೊಮ್ಮಟೇಶ್ವರನ ನಿರ್ಮಾಣದ ಕುರಿತಂತೆ ಯಾವುದೇ ಶಾಸನಗಳು ಲಭ್ಯವಾಗಿಲ್ಲ. ಹೀಗಾಗಿ ಕೆಲವರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ ಈ ಭಾಗದಲ್ಲಿದ್ದ ಗಂಗ ಅರಸರು ಈ ಮೂರ್ತಿಯನ್ನು ನಿರ್ಮಿಸಿರಬಹುದೆಂದು ಹೇಳಿದರೆ, ಮತ್ತೆ ಕೆಲವರು ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿ ಕೆತ್ತಿದ ಚಾವುಂಡರಾಯನೇ ಇದನ್ನು ಕೆತ್ತಿರಬಹುದೆಂದು ಹೇಳುತ್ತಾರೆ.[ಮೈಸೂರಿನಲ್ಲಿ ಎನ್ ಫೀಲ್ಡ್ ಬೈಕ್ ಬಾಡಿಗೆ ಪಡೆದು ನಗರ ಸುತ್ತಾಡಿ]

ರಟ್ನಳ್ಳಿ ಬ್ರಹ್ಮದೇವರ ದೇವಾಲಯಕ್ಕೂ ಮೈಸೂರಿನ ಗೊಮ್ಮಟ ವಿಗ್ರಹಕ್ಕೂ ಸಂಬಂಧವಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಅದೇನೇ ಇರಲಿ. ಜೈನತೀರ್ಥಂಕರರ ಸಾಂಪ್ರದಾಯಿಕ ಚಿಹ್ನೆಯಾದ ಹಾವು ಬಾಹುಬಲಿಯ ಪಾದದಿಂದ ಮುಡಿಯವರೆಗೆ ಆವರಿಸಿದೆ. ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿರುವ ಮೂರ್ತಿ ಆಕರ್ಷಕವಾಗಿದೆ. ಬೆಟ್ಟದ ತಪ್ಪಲಿನ ಬಲಭಾಗದಲ್ಲಿ ವರ್ಧಮಾನ ಕಾಲದ 24 ಜೈನ ತೀರ್ಥಂಕರರ ಕೂಟಗಳು ಎಡಭಾಗದಲ್ಲಿ ಕುಂದಾಚಾರ್ಯರ ದ್ವಿಸಹಸ್ರಾಬ್ದಿ ಜ್ಞಾಪಕಾರ್ಥವಾಗಿ ನಿರ್ಮಿಸಿರುವ ಪಾದ ಕೂಟ, ಹಾಗೂ ಪಕ್ಕದಲ್ಲೇ ಜಲಮಂದಿರವನ್ನು ಕಾಣಬಹುದಾಗಿದೆ.

Gommatagiri is one of the tourist place of Mysuru

ಸರ್ಕಾರ ಈ ತಾಣವನ್ನು ಅಭಿವೃದ್ಧಿ ಮಾಡಿದ್ದೇ ಆದರೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಕಾರಣ ಇಲ್ಲಿನ ಪ್ರಕೃತಿ ಸೌಂದರ್ಯ ತಾಣಕ್ಕೆ ಮೆರಗು ನೀಡುತ್ತದೆ. ಒಂದೆಡೆ ಅರಬ್ಬಿ ತಿಟ್ಟು ಅರಣ್ಯದ ಹಸಿರು ಹಚ್ಚಡ, ಮತ್ತೊಂದೆಡೆ ಕೆಆರ್ ಎಸ್ ಜಲಾಶಯದ ಹಿನ್ನೀರ ನೋಟ, ನಿಸರ್ಗ ಪ್ರೇಮಿಯೊಬ್ಬ ಕುಣಿದು ಕುಪ್ಪಳಿಸಲು ಇದಕ್ಕಿಂತ ಇನ್ನೇನು ಬೇಕು?[ಮೈಸೂರು ಕಲಾವಿದನ ಕೈಯಲ್ಲಿ ಅರಳುತ್ತಿವೆ ಸ್ವರ್ಣ ದೇವರ ಮೂರ್ತಿ]

ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗೊಮ್ಮಟಗಿರಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕ್ರಮ ಕೈಗೊಂಡಿದ್ದರು. ಈ ತಾಣವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾರ್ಪಡಿಸಲು ಅರಣ್ಯ ಇಲಾಖೆಗೆ 25 ಎಕರೆ ಭೂಮಿ ನೀಡುವಂತೆಯೂ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಅವರ ಆಶಯ ಇನ್ನೂ ಈಡೇರಿಲ್ಲ. ಸರ್ಕಾರ ಗಮನಹರಿಸಿದ್ದೇ ಆದಲ್ಲಿ ಗೊಮ್ಮಟೇಶ್ವರ ಕ್ಷೇತ್ರ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.

English summary
Gommatagiri is an acclaimed Jain centre. The 700-year-old statue of Bahubali is erected atop a 50 meter tall hillock called 'Shravana Gudda'. Gommatagiri is about 20 km from Mysore. Gommatagiri is situated in Bilikere hobli of Hunsur taluk in Mysore district in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X