ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಆಕ್ರೋಶಕ್ಕೆ ಈ ಸರ್ಕಾರದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವೇ?

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಜುಲೈ 28: ಕಳೆದ ಮೂರು ವಾರಗಳಿಂದ ಕೆಆರ್ ಎಸ್ ನಿಂದ ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗುತ್ತಲೇ ಇದೆ. ಒಂದು ವೇಳೆ ಈ ನಡುವೆ ಕೊಡಗಿನಲ್ಲಿ ಭಾರೀ ಮಳೆ ಸುರಿಯದೆ ಹೋಗಿದ್ದರೆ ಇಷ್ಟರಲ್ಲೇ ಜಲಾಶಯ ಖಾಲಿಯಾಗಿ ಬಿಡುತ್ತಿತ್ತೇನೋ?!

ತಮಿಳುನಾಡಿಗೆ ನೀರು ಹರಿಸುತ್ತಿರುವ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆತಮಿಳುನಾಡಿಗೆ ನೀರು ಹರಿಸುತ್ತಿರುವ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ

ಸರ್ಕಾರದ ನಡೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು, ರೈತರು ಮಂಡ್ಯ ಜಿಲ್ಲೆಯ ಮದ್ದೂರಿನ ಮದ್ದೂರಮ್ಮ ಕೆರೆಯಂಗಳದಲ್ಲಿ ನಡೆಸುತ್ತಿರುವ ಪ್ರತಿಭಟನೆ 22ನೇ ದಿನಕ್ಕೇ ಕಾಲಿಟ್ಟಿದೆ. ಸರ್ಕಾರ ಇದ್ಯಾವುದನ್ನೂ ಲೆಕ್ಕಿಸುತ್ತಲೇ ಇಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವುದು ಆಚೆಗಿರಲಿ ರೈತರು ಬೆಳೆಬೆಳೆಯಲಾಗದೆ ಸಾಯುವ ಹಂತಕ್ಕೆ ತಲುಪಿದ್ದಾರೆ, ನಾಲೆಗಾದರೂ ನೀರು ಬಿಡಿ ಎಂಬ ಹೋರಾಟವನ್ನು ರೈತರು ಮಾಡುತ್ತಿದ್ದರೂ ಅದಕ್ಕೆ ಮಂಡ್ಯದಲ್ಲಾಗಲೀ, ಮೈಸೂರಿನಲ್ಲಾಗಲೀ ಕವಡೆ ಕಾಸಿನ ಕಿಮ್ಮತ್ತು ದೊರೆಯದಂತಾಗಿದೆ.

ನಮ್ಮದು ರೈತರಪರ ಸರ್ಕಾರ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ ಸರ್ಕಾರಗಳು ನಂತರ ರೈತರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಸೇರಿದಂತೆ ಹಳೇ ಮೈಸೂರು ವಿಭಾಗದಲ್ಲಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ಬೆಳೆ ಬೆಳೆಯಲಾಗದ ರೈತ ಊರು ಬಿಟ್ಟಿದ್ದಾನೆ. ಮತ್ತೆ ಕೆಲವರು ಸಾಲ ಮಾಡಿಕೊಂಡು ನೆಮ್ಮದಿಯಿಲ್ಲದ ಬದುಕು ಸಾಗಿಸುತ್ತಿದ್ದಾರೆ.

ಹಾರಂಗಿ ಕಟ್ಟೇಪುರ ಗೊರೂರು ನಾಲೆಗೆ ನೀರು ಹರಿಸಲು ಒತ್ತಾಯಹಾರಂಗಿ ಕಟ್ಟೇಪುರ ಗೊರೂರು ನಾಲೆಗೆ ನೀರು ಹರಿಸಲು ಒತ್ತಾಯ

ಬೇರೆ ಎಲ್ಲ ಕ್ಷೇತ್ರದವರು ಬೀದಿಗಿಳಿದರೆ ತಕ್ಷಣವೇ ಅವರಿಗೆ ಸ್ಪಂದಿಸುವ ಸರ್ಕಾರ - ಅಧಿಕಾರಿಗಳು, ರೈತರ ಪ್ರತಿಭಟನೆಯನ್ನು ಕೇವಲವಾಗಿ ಪರಿಗಣಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದಕ್ಕೆ ಕಾರಣಗಳು ರೈತರು ಹಲವು ಸಂಘಟನೆಗಳಲ್ಲಿ ಹಂಚಿಹೋಗಿರುವುದು ಮತ್ತು ಕೆಲವು ರೈತ ಮುಖಂಡರು ಎನ್ನುತ್ತಿರುವರು ರಾಜಕೀಯದ ಹಾದಿ ಹಿಡಿದು ಎಲ್ಲವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿರುವುದು ಎಂದರೆ ತಪ್ಪಾಗಲಾರದು.

ರಾಜಕಾರಣಿಗಳಾಗಿ ಬದಲಾದ ರೈತರು

ರಾಜಕಾರಣಿಗಳಾಗಿ ಬದಲಾದ ರೈತರು

ಹಲವು ಪ್ರಭಾವಿ ರೈತ ಮುಖಂಡರು ರಾಜಕಾರಣಿಗಳಾಗಿ ಬದಲಾಗಿದ್ದಾರೆ. ಹೀಗಾಗಿ ರೈತರು ಒಂದೇ ನಾಯಕತ್ವದಲ್ಲಿ ಮುನ್ನಡೆಯಲಾಗದೆ ಹರಿದು ಹಂಚಿ ಹೋಗಿದ್ದರೆ, ಮತ್ತೊಂದೆಡೆ ಈಗಾಗಲೇ ಹೋರಾಟಕ್ಕಿಳಿದು ಮೈಮೇಲೆ ಕೇಸು ಹಾಕಿಸಿಕೊಂಡು ಕೋರ್ಟ್ ಕಚೇರಿ ಅಂತ ಅಲೆದು ಬಡ ರೈತರು ಸುಸ್ತಾಗಿದ್ದಾರೆ. ಹಾಗಾಗಿ ಅವರು ಅಯ್ಯೋ ಎಲ್ಲರಿಗೂ ಏನಾಗುತ್ತದೆಯೋ ಅದು ನಮಗೂ ಆಗಲಿ ಎಂಬ ಮೆದು ಧೋರಣೆ ತಳೆಯುತ್ತಿದ್ದಾರೆ.

ರಾಜಕಾರಣದ ಅಸ್ತ್ರವಾಗಿದೆ ರೈತರ ಸಂಕಷ್ಟ!

ರಾಜಕಾರಣದ ಅಸ್ತ್ರವಾಗಿದೆ ರೈತರ ಸಂಕಷ್ಟ!

ಈಗಿರುವ ರೈತರ ಪರಿಸ್ಥಿತಿಯನ್ನು ಅರಿತ ನಮ್ಮ ರಾಜಕೀಯ ನಾಯಕರು ಅವರನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಎಲ್ಲಿ ತನಕ ನಮ್ಮ ರೈತರು ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿ ತನಕ ರೈತರ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳೋರು ಇದ್ದೇ ಇರುತ್ತಾರೆ. ಚುನಾವಣೆ ಬಂದಾಗ ಹಳ್ಳಿಗಳಿಗೆ ಹೋಗಿ ನೀರಿನ ಬದಲು ಹಣದ ಹೊಳೆ ಹರಿಸಿದರೆ ಆಕ್ರೋಶಿತ ರೈತರ ಬಾಯಿ ಮುಚ್ಚಿಸಬಹುದು ಎಂಬ ರಾಜಕೀಯ ನಾಯಕರ ಮನೋಭಾವವೇ ಇವತ್ತು ರೈತರ ಹೋರಾಟಕ್ಕೆ ಬೆಲೆ ಇಲ್ಲದಂತೆ ಮಾಡಿದೆ.

ಆಕ್ರೋಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ!

ಆಕ್ರೋಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ!

ಮದ್ದೂರಿನ ಮದ್ದೂರಮ್ಮ ಕೆರೆಯಂಗಳದಲ್ಲಿ ತಮಿಳುನಾಡಿಗೆ ನೀರು ನಿಲ್ಲಿಸಿ ವಿಸಿ ನಾಲೆಗಳಿಗೆ ನೀರು ಹರಿಸುವಂತೆ ನಡೆಸುತ್ತಿರುವ ಆಹೋರಾತ್ರಿ ಧರಣಿ 22ನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈಗಾಗಲೇ ಸರ್ಕಾರದ ಗಮನಸೆಳೆಯುವ ಸಲುವಾಗಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ರೈತರು ತಮ್ಮ ಜಾನುವಾರು, ಎತ್ತಿನ ಗಾಡಿಗಳೊಡನೆ ಆಗಮಿಸಿ ಪ್ರತಿಭಟನೆ ಮಾಡಿದ್ದಲ್ಲದೆ, ಬೈಕ್ ರಾಲಿ ಮಾತ್ರವಲ್ಲದೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರೂ ಸರ್ಕಾರದ ಪರವಾಗಿ ಯಾವ ನಾಯಕರೂ ಇತ್ತ ಬಂದಂತೆ ಕಾಣುತ್ತಿಲ್ಲ.

ಉಪವಾಸ ಸತ್ಯಾಗ್ರಹ

ಉಪವಾಸ ಸತ್ಯಾಗ್ರಹ

ಇದೀಗ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಸೇರಿದಂತೆ ಹರಳಕೆರೆ ಚಂದ್ರು, ಹನುಮೇಗೌಡ, ಪ್ರಸನ್ನಕುಮಾರ್, ಲಿಂಗೇಗೌಡ, ದೇಶಹಳ್ಳಿ ಪ್ರಸಾದ್ ಅವರು ವಿಸಿ ನಾಲೆಗಳಿಗೆ ನೀರು ಬಿಡುಗಡೆಗೊಳಿಸುವವರೆಗೂ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ. ಇಷ್ಟರಲ್ಲೇ ಹಲವು ರೀತಿಯಲ್ಲಿ ಪ್ರತಿಭಟನೆ ಮಾಡಿದರೂ ಸರ್ಕಾರ ಇತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಇನ್ನು ಉಪವಾಸ ಸತ್ಯಾಗ್ರಹಕ್ಕೆ ಜಗ್ಗುತ್ತಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

English summary
Farmers protest against releasing of Cauvery water from KRS to Tamil Nadu is still continuing in Mandya and Mysuru region. But government is not even bothering about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X