ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿಸಿಕೊಂಡಿರುವ ವರುಣ ಮಹಾಶಯನಿಗಾಗಿ ಕತ್ತೆಗಳ ಮದುವೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 15 : ರೈತರಿಂದ ಆರಂಭವಾಗಿ ಜನಸಾಮಾನ್ಯರು ಕೂಡ ಮುಗಿಲತ್ತ ದೃಷ್ಟಿ ನೆಟ್ಟಿದ್ದಾರೆ. ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾದು ಸುಸ್ತಾಗಿದ್ದಾರೆ. ಯುಗಾದಿಗೆ ಹುಯ್ಯೋ ಹುಯ್ಯೋ ಮಳೆರಾಯ ಅಂತ ಹಾಡಿದರೂ ಪ್ರಯೋಜನವಾಗಿಲ್ಲ.

ವಾತಾವರಣದ ಉಷ್ಣಾಂಶ ಕೂಡ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ. ಅಯ್ಯೋ ಒಂದಾದ್ರೂ ಮಳೆ ಬರಬಾರದಿತ್ತೇ ಎಂದು ಮಾತನಾಡಿಕೊಳ್ಳುವಂತಾಗಿದೆ. ದೇವಸ್ಥಾನ ಸೇರಿದಂತೆ ಹಲವೆಡೆ ಮಳೆಗಾಗಿ ಪೂಜೆಯೂ ನಡೆಯುತ್ತಿದೆ. ಕಳೆದ ವರ್ಷ ಈ ಹೊತ್ತಿನಲ್ಲಿ ಸಾಕಷ್ಟು ಮಳೆ ಸುರಿದಿತ್ತು. ಆದರೆ ಈ ವರ್ಷ ವರುಣ ಮುನಿಸಿಕೊಂಡಿದ್ದಾನೆ.

ಹಿಂದಿನ ಕಾಲದಲ್ಲಿ ಮಳೆ ಬಾರದಿದ್ದಾಗ ಕಪ್ಪೆಗೆ, ಕತ್ತೆಗೆ ಮದುವೆ ಮಾಡಿಸುವ ಸಂಪ್ರದಾಯವಿತ್ತು. ಅದರಂತೆ ಎಲ್ಲ ರೀತಿಯ ಪೂಜೆ ಮಾಡಿದರೂ ಮಳೆ ಬಾರದ್ದರಿಂದ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದಲ್ಲಿ ಕತ್ತೆಗಳಿಗೆ ಮದುವೆ ಮಾಡಿ ಮಳೆ ಕರೆಯುವ ಪ್ರಯತ್ನವನ್ನು ಮಾಡಲಾಗಿದೆ. [ಕತ್ತಿ ಲಗ್ನಾ ಮಾಡಿದ್ರ... ಮಳಿ ಹೆಂಗ ಬರತದ?]

Villagers perform marriage of donkeys for rain

ಹಿಂದಿನ ಕಾಲದಲ್ಲಿ ಇಂತಹ ಆಚರಣೆಗಳು ಇತ್ತಾದರೂ ಅದನ್ನು ಕೆಲವೇ ಸಂದರ್ಭಗಳಲ್ಲಿ ಮಾಡುತ್ತಿದ್ದರು. ಬದಲಾದ ಕಾಲದಲ್ಲಿ ಇದೊಂದು ಮೂಢನಂಬಿಕೆ ಎಂದು ಕುಹಕವಾಡುವವರೂ ಇದ್ದಾರೆ. ಮಂತ್ರಕ್ಕೆ ಮಾವಿನಕಾಯಿ ಉದುರುತ್ತಾ ಅಂತ ನಗಾಡುವವರಿದ್ದಾರೆ. ಆಡುವವರು ಆಡಿಕೊಳ್ಳಲಿ.

ಅಂತೂ ಕತ್ತೆಗಳ ಮದುವೆಯಾಗಿದೆ. ಯಾರ್ಯಾರು ನೆಂಟರು ಬಂದಿದ್ದರೋ, ಯಾರು ಪೌರೋಹಿತ್ಯ ವಹಿಸಿದ್ದರೋ, ಕತ್ತೆಗಳಿಗಾದರೂ ಕನಿಷ್ಠಪಕ್ಷ ಊಟ ಹಾಕಿಸಿದರೋ ಬಿಟ್ಟರೋ? ಕತ್ತೆಗೆ ಮಳೆಗೂ ಎಲ್ಲಿಂದ ಎಲ್ಲಿಯ ಸಂಬಂಧವೋ ಗೊತ್ತಿಲ್ಲ, ಒಟ್ಟಿನಲ್ಲಿ ಮದುವೆಯಾಗಿದೆ. [ಉರಿ ಸೆಕೆಯ ಹಳೆ ದಾಖಲೆ ಸುಟ್ಟುಹಾಕಿದ ಬೆಂಗಳೂರು]

ಪರಿಸರ ನಾಶವಾಗುತ್ತಿರುವ ಇಂದಿನ ದಿನಗಳಲ್ಲಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೊಲ ಗದ್ದೆಗಳು ಬಡಾವಣೆಗಳಾಗಿ ಮಾರ್ಪಾಡುಗೊಳ್ಳುತ್ತಿವೆ. ಹೀಗಾಗಿ ಮಳೆ ಕಡಿಮೆಯಾಗಿದೆ. ಆದ್ದರಿಂದ ಕತ್ತೆಗೆ ಮದುವೆ ಮಾಡಿದರೆ ಮಳೆಯಾಗುತ್ತದೆಯೋ ಎಂಬುದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೂ ತಮ್ಮ ನಂಬಿಕೆಯನ್ನು ಗ್ರಾಮಸ್ಥರು ಸಾಕಾರಗೊಳಿಸಿದ್ದಾರೆ. ಇನ್ನಾದರೂ ಮಳೆ ಬರುತ್ತೋ ಕಾದು ನೋಡೋಣ.

ಬರುವ ಮುಂಗಾರು ಚೆನ್ನಾಗಿರುತ್ತದೆ, ಸರಾಸರಿಗಿಂತ ಜಾಸ್ತಿ ಮಳೆಯಾಗುವ ಸಂಭವನೀಯತೆ ಇದೆ, ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಅಲ್ಲಿಯವರೆಗೆ ಕಾಯಬೇಕಲ್ಲ? ಜನರ ನಂಬಿಕೆಗಳಿಗೆ ಲಾಜಿಕ್ಕುಗಳಿರುವುದಿಲ್ಲ. ಆದರೆ, ಮಳೆ ಬಂದು ಮ್ಯಾಜಿಕ್ ಆಗಬೇಕಾಗಿದೆ. [ಕತ್ತೆ ಮೇಲೆ ಕೂರಿಸಿ ಮಹಿಳೆ ಬೆತ್ತಲೆ ಮೆರವಣಿಗೆ]

English summary
Villagers of Arakere in Srirangapatna taluk in Mysuru district performed marriage of donkeys for rain. You may treat it as superstition, but there is a custom of marrying donkeys when rain completely fails. This year Karnataka is facing severe drought. Hope it rains as early as possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X