ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋರಿಯೇ ಅರಮನೆ, ಎಂಜಲೆಲೆಯೇ ಮೃಷ್ಟಾನ್ನ ಭೋಜನ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 27 : ನಂಜನಗೂಡಿನ ಸಿಂಧುವಳ್ಳಿಯಲ್ಲಿರುವ ಕರುಣಾಲಯ ಅದೆಷ್ಟೋ ನಿರ್ಗತಿಕ ಜೀವಗಳಿಗೆ ಆಸರೆಯಾಗಿದೆ. ಮೈಸೂರು ನಗರದ ಮೋರಿಯೊಂದರ ಕೆಳಗೆ ಬದುಕು ಕಟ್ಟಿಕೊಂಡಿದ್ದ ಮಹಿಳೆಗೆ ಈ ಆಶ್ರಮ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಮೋರಿಯೇ ಅರಮನೆ.. ಎಂಜಲ ಎಲೆಯೇ ಮೃಷ್ಟಾನ ಬೋಜನ.. ಎಂಬಂತೆ ಮೈಸೂರು ನಗರದ ಹೆಬ್ಬಾಳು ಬಡಾವಣೆಯ ಕಲ್ಯಾಣ ಮಂಟಪದ ಬಳಿಯಿರುವ ಮೋರಿ ಕೆಳಗೆ ಸುಮಾರು 55 ವರ್ಷದ ಮಹಿಳೆಯೊಬ್ಬಳು ನಾಲ್ಕೈದು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಳು. ಪಕ್ಕದ ಕಲ್ಯಾಣ ಮಂಟಪದಲ್ಲಿ ತಿಂದುಂಡು ಎಸೆದ ಎಂಜಲ ಎಲೆಯನ್ನು ತಿಂದು, ರಾತ್ರಿಯನ್ನು ಮೋರಿ ಕೆಳಗೆ ಕಳೆಯುತ್ತಿದ್ದಳು.

ಮಾಸಿದ ಬಟ್ಟೆ ಕೆದರಿದ ತಲೆಕೂದಲು ನೋಡುಗರಿಗೆ ಈಕೆ ಮಾನಸಿಕ ಅಸ್ವಸ್ಥಳಂತೆ ಕಾಣುತ್ತಿದ್ದಳು. ಯಾರೂ ಆಕೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆಕೆ ಆಶ್ರಯ ಪಡೆದಿದ್ದ ಮೋರಿ ಸಮೀಪದಲ್ಲೇ ಕಲ್ಯಾಣ ಮಂಟಪ ಇದ್ದುದರಿಂದ ಮದುವೆಯಿದ್ದ ಸಂದರ್ಭದಲ್ಲಿ ಊಟಕ್ಕೇನು ತೊಂದರೆಯಾಗುತ್ತಿರಲಿಲ್ಲ.

ಆಕೆಗೆ ಸಂಗಾತಿಯಾಗಿದ್ದು ಬೀದಿ ನಾಯಿ

ಆಕೆಗೆ ಸಂಗಾತಿಯಾಗಿದ್ದು ಬೀದಿ ನಾಯಿ

ಈಕೆ ತನ್ನ ಒಬ್ಬಂಟಿತನ ಕಳೆಯುವುದಕ್ಕೊಸ್ಕರ ಮತ್ತು ರಕ್ಷಣೆಗಾಗಿ ನಾಯಿಯೊಂದನ್ನು ಸಾಕಿದ್ದಳು. ನೋಡಲು ದಷ್ಟಪುಷ್ಠವಾಗಿದ್ದ ನಾಯಿ ಆಕೆಯೊಂದಿಗೆ ಅದೇ ಮೋರಿಯಲ್ಲಿ ಮಲಗುತ್ತಿತ್ತು. ಕಲ್ಯಾಣ ಮಂಟಪದಲ್ಲಿ ಶ್ರೀಮಂತರ ಮದುವೆ ನಡೆಯುತ್ತಿತ್ತು. ಆದರೆ ಯಾವತ್ತೂ ಈಕೆ ಅದರೊಳಗೆ ಹೋಗಿ ಭಿಕ್ಷೆ ಕೇಳುತ್ತಿರಲಿಲ್ಲ. ತಿಂದುಂಡು ಎಸೆದ ಎಂಜಲು ಎಲೆಯೇ ಇವಳ ಭಕ್ಷ್ಯ ಬೋಜನವಾಗಿತ್ತು.

ಯಾರ ಅನುಕಂಪವನ್ನೂ ಬಯಸಿರಲಿಲ್ಲ

ಯಾರ ಅನುಕಂಪವನ್ನೂ ಬಯಸಿರಲಿಲ್ಲ

ಆಕೆಯ ಬದುಕು ನಿಕೃಷ್ಟವಾಗಿ ನಡೆಯುತ್ತಿತ್ತಾದರೂ ಯಾರೂ ಆಕೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ತಾವುಂಟು ತಮ್ಮ ಲೋಕವುಂಟು ಅಂತ ಬದುಕಿನ ವ್ಯಾಪಾರದಲ್ಲಿ ಎಲ್ಲರೂ ತಲ್ಲೀನರಾಗಿದ್ದರು. ಅದಕ್ಕಿಂತ ಹೆಚ್ಚಾಗಿ ಅವರದ್ದೇ ಆದ ಒತ್ತಡದ ಬದುಕಿನಲ್ಲಿ ಆಕೆಯತ್ತ ಗಮನಹರಿಸುವ ಗೋಜಿಗೂ ಯಾರೂ ಹೋಗುತ್ತಿರಲಿಲ್ಲ. ಆಕೆ ಯಾರ ಅನುಕಂಪವನ್ನು ಬಯಸಿಯೂ ಇರಲಿಲ್ಲ.

ನನ್ನವರು ಯಾರೂ ಇಲ್ಲ, ಯಾರಿಗೆ ಯಾರೂ ಇಲ್ಲ

ನನ್ನವರು ಯಾರೂ ಇಲ್ಲ, ಯಾರಿಗೆ ಯಾರೂ ಇಲ್ಲ

ತನ್ನವರು ಎನ್ನುವವರು ಯಾರೂ ಇರಲಿಲ್ಲವೋ? ಅಥವಾ ಇದ್ದವರು ಬೀದಿಗೆ ತಳ್ಳಿ ತೆಪ್ಪಗಾಗಿದ್ದರೋ ಗೊತ್ತಿಲ್ಲ. ತಮಿಳು ಮಾತನಾಡುತ್ತಿದ್ದ ಈಕೆ ಕರ್ನಾಟಕದವಳಂತೂ ಅಲ್ಲ ಎಂಬುದು ಗೊತ್ತಾಗಿತ್ತು. ಬಹುಶಃ ಯಾರೋ ತಂದು ಬಿಟ್ಟು ಹೋಗಿರಬಹುದೇನೋ? ಆಕೆಗೂ ಆ ಬಗ್ಗೆ ಅರಿವಿಲ್ಲ. ತಾನು ಒಂದು ಹೊತ್ತಿನ ಕೂಳಿಗೂ ಪರದಾಡಬೇಕಾದ ಸ್ಥಿತಿ ಇರುವಾಗಲೂ ಇದ್ದುದರಲ್ಲಿ ನಾಯಿಗೆ ಹಾಕಿ ಅದರ ಹೊಟ್ಟೆಯನ್ನು ತಣ್ಣಗಿಡುತ್ತಿದ್ದ ಕರುಣಾಮಯಿ.

ಮದುವೆಯಿದ್ರೆ ಭೋಜನ, ಇಲ್ಲದಿದ್ರೆ ತಣ್ಣೀರು ಬಟ್ಟೆ

ಮದುವೆಯಿದ್ರೆ ಭೋಜನ, ಇಲ್ಲದಿದ್ರೆ ತಣ್ಣೀರು ಬಟ್ಟೆ

ಕಲ್ಯಾಣಮಂಟಪದಲ್ಲಿ ಕಾರ್ಯಕ್ರಮವಿದ್ದಾಗ ಪುಷ್ಕಳ ಬೋಜನ ಇಲ್ಲಾಂದ್ರೆ ಹೊಟ್ಟೆಗೆ ತಣ್ಣೀರು ಬಟ್ಟೆ. ಈಕೆಯ ಇಂತಹ ದಯನೀಯ ಸ್ಥಿತಿಯನ್ನು ಕಂಡ ಇನ್ಪೋಸಿಸ್ ಉದ್ಯೋಗಿ ಡಿ.ಅನಂತರಾಜು ಎಂಬುವರು ಮರುಗಿದ್ದರು. ಹೇಗಾದರೂ ಮಾಡಿ ಮೋರಿ ಕೆಳಗಿನಿಂದ ಆಕೆಯನ್ನು ಯಾವುದಾದರು ನಿರ್ಗತಿಕರ ಆಶ್ರಮಕ್ಕೆ ಸೇರಿಸುವ ಬಗ್ಗೆ ಯೋಚಿಸಿದ್ದರು. ಆಗ ಅವರ ನೆನಪಿಗೆ ಬಂದಿದ್ದು ನಂಜನಗೂಡಿನಲ್ಲಿರುವ ಕರುಣಾಲಯ ಟ್ರಸ್ಟ್.

ಮಾನವೀಯತೆ ಮೆರೆದ ಇನ್ಫಿಯ ಅನಂತರಾಜು

ಮಾನವೀಯತೆ ಮೆರೆದ ಇನ್ಫಿಯ ಅನಂತರಾಜು

ಕೂಡಲೇ ಕರುಣಾಲಯ ಟ್ರಸ್ಟ್‌ನ ಮುಖ್ಯಸ್ಥರನ್ನು ಸಂಪರ್ಕಿಸಿದ ಅನಂತರಾಜು ಅವರು ಆ ಮಹಿಳೆಯನ್ನು ಟ್ರಸ್ಟ್‌ಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈಗ ಆಕೆ ಚಿಕಿತ್ಸೆ ಪಡೆದು ಎಲ್ಲರೊಂದಿಗೆ ಬದುಕನ್ನು ಸಾಗಿಸುತ್ತಿದ್ದಾಳೆ. ನಿರ್ಗತಿಕ ಮಹಿಳೆಗೆ ಆಶ್ರಯ ಸಿಗುವಂತೆ ಮಾಡಿ ಮಾನವೀಯತೆ ಮೆರೆದ ಅನಂತರಾಜು ಅವರಿಗೆ ಅನಂತಾನಂತ ಧನ್ಯವಾದಗಳು.

English summary
Destitute woman gets shelter at Karunalaya in Nanjangud. The woman from Tamil Nadu had made drainage as palace and left over of rich marriages as sumptous meals. At last, Ananthraju working for Infosys took help of Karunalaya to give her much wanted shelter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X