ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ!'

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 15 : ಅನಾದಿ ಕಾಲದಿಂದಲೂ ಕಾಡಿನಲ್ಲೇ ಬದುಕು ಸಾಗಿಸುತ್ತಾ ಬಂದಿರುವ ಗಿರಿಜನರು ಮತ್ತು ಅರಣ್ಯ ಇಲಾಖೆ ನಡುವಿನ ಸಂಘರ್ಷ ಹಾಗೆಯೇ ಮುಂದುವರೆಯುತ್ತಿರುವುದರಿಂದ, ಗಿರಿಜನರು ನಮ್ಮನಿಮ್ಮ ನಡುವೆ ಇದ್ದರೂ ಸೌಲಭ್ಯ ವಂಚಿತರಾಗಿ, ಆದಿಮಾನವರಂತೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡು ಕಾಡು ಉತ್ಪನ್ನಗಳನ್ನು ಸಂಗ್ರಹಿಸಿ, ಮಾರಾಟ ಮಾಡಿ ಜೀವನ ಸಾಗಿಸಿಕೊಂಡು ಬಂದಿರುವ ಗಿರಿಜನರನ್ನು ಕಾಡಿನಿಂದ ಒಕ್ಕಲೆಬ್ಬಿಸಿ, ಊರೊಳಗೆ ಪುನರ್ವಸತಿ ಕಲ್ಪಿಸುವ ಉದ್ದೇಶ ಅರಣ್ಯ ಇಲಾಖೆಯದ್ದಾದರೂ, 'ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೇ ಬದುಕಿ ಸಾಯುತ್ತೇವೆ. ನಾವು ಮಾತ್ರ ಊರಿಗೆ ಬರುವುದಿಲ್ಲ' ಎಂಬುದು ಹಾಡಿ ವಾಸಿಗಳ ಒಕ್ಕೊರಲ ಮಾತು.

ಅವರು ಕಾಡಿನಿಂದ ಹೊರಗೆ ಬರದ ಕಾರಣ ಅವರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಕನಸುಗಳಿಗೆ ತಣ್ಣೀರು ಬಿದ್ದಿದೆ. ಅದು ಎಷ್ಟೇ ಕಷ್ಟ ಅನುಭವಿಸಿದರೂ ತೊಂದರೆಯಿಲ್ಲ. ಕಾಡಿನಲ್ಲೇ ಬದುಕುತ್ತೇವೆ ಎನ್ನುವ ಅವರ ಹಠದಿಂದಾಗಿ ಸರ್ಕಾರದ ಯಾವುದೇ ಸೌಲಭ್ಯ ದೊರೆಯದೆ ನಿಕೃಷ್ಟ ಬದುಕನ್ನು ಸಾಗಿಸುವಂತಾಗಿದೆ. [ದುಬಾರೆ ಅರಣ್ಯ ಪ್ರವಾಸಿಗರಿಗೆ ಸ್ವರ್ಗ, ಗಿರಿಜನರಿಗೆ ನರಕ]

Conflict between tribals and forest department in Mysuru district

ಇಲ್ಲಗಳ ನಡುವೆ ಸಾಗುತ್ತಿರುವ ಬದಕು : ಹರಕು ಮುರುಕು ಗುಡಿಸಲು, ಶೌಚಾಲಯವಿಲ್ಲ. ಕುಡಿಯಲು ಕಾಡಿನಲ್ಲಿ ಹರಿಯುವ ತೋಡು ನೀರು, ರಸ್ತೆಯಿಲ್ಲ, ವಿದ್ಯುತ್ ಇಲ್ಲ.. ಹೀಗೆ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಅವರಿಗೊಂದು ನಾಗರಿಕತೆಯ ಬದುಕು ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ.

ಹೆಚ್ಚಿನ ಹಾಡಿಯತ್ತ ನಮ್ಮ ಜನಪ್ರತಿನಿಧಿಗಳು ಸುಳಿಯುತ್ತಿಲ್ಲ. ಅದಕ್ಕೆ ಕಾರಣವಿದೆ. ಅವರದ್ದು ಎಂದು ಹೇಳಿಕೊಳ್ಳಲು ಜಮೀನಿಲ್ಲ. ಇನ್ನು ಸರ್ಕಾರ ಕೇಳುವ ದಾಖಲಾತಿಗಳಿಲ್ಲ. ಅದು ಇಲ್ಲ ಎಂದ ಮೇಲೆ ಮತ ಹಾಕುವಂತೆಯೂ ಇಲ್ಲ. ಗುರುತಿನ ಚೀಟಿ ನೀಡಬೇಕೆಂದರೆ ವಾಸದ ದೃಢೀಕರಣ ನೀಡಬೇಕು, ಜಮೀನಿನ ಹಕ್ಕುಪತ್ರ ಬೇಕು. ಅದು ಅರಣ್ಯ ಇಲಾಖೆ ನೀಡಲು ಸಿದ್ದವಿಲ್ಲ.

ಗಿರಿಜನ ಹಾಡಿಗೆ ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಇಲಾಖೆಯ ತಕರಾರು. ಒಟ್ಟಾರೆ ಯಾವ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವಾಗದ ಸ್ಥಿತಿ. ಇದರಿಂದಾಗಿ ಮಳೆ, ಚಳಿ, ಬೇಸಿಗೆ ಎಲ್ಲ ಕಾಲದಲ್ಲೂ ಕಷ್ಟ ತಪ್ಪಿದಲ್ಲ. [ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು]

Conflict between tribals and forest department in Mysuru district

ಶೋಚನೀಯ ಸ್ಥಿತಿ : ಆಧುನಿಕತೆ ನಾಗಾಲೋಟದಲ್ಲಿರುವ ನಾವು ಒಮ್ಮೆ ಗಿರಿಜನರ ಹಾಡಿಗೆ ಹೋದರೆ ಅವರು ಅನುಭವಿಸುತ್ತಿರುವ ಕಷ್ಟ ನೋಡಿದರೆ ವ್ಯವಸ್ಥೆ ಬಗ್ಗೆಯೇ ಅಸಹ್ಯ ಮೂಡುತ್ತದೆ. ಕುಳಿತಲ್ಲಿಗೆ ಎಲ್ಲ ರೀತಿಯ ಸೌಲಭ್ಯ ಬೇಕೆಂದು ಬಯಸುವ ನಮಗೆ ಅವರ ಸ್ಥಿತಿ ನೋಡಿದರೆ ನೋವಾಗುತ್ತದೆ.

ಗಿರಿಜನರಿಗೆ ಪುನರ್ವಸತಿ ಕಲ್ಪಿಸಿ ಅವರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಬೇಕೆನ್ನುವುದು ಅರಣ್ಯ ಇಲಾಖೆಯ ಉದ್ದೇಶವಾದರೆ, ಪೂರ್ವಜರ ಕಾಲದಿಂದಲೇ ಇಲ್ಲಿಯೇ ಬದುಕಿ ಬಾಳಿ ಬಂದಿದ್ದೇವೆ. ನಾವು ಸಾಯುವುದಾದರೂ ಇಲ್ಲಿಯೇ ಎನ್ನುವುದು ಗಿರಿಜನರ ಹಠವಾಗಿದೆ.

ಹೀಗಾಗಿ ಏನೇ ಕಷ್ಟ ಅನುಭವಿಸಿದರೂ ಅವರು ಕಾಡು ಬಿಟ್ಟು ಹೋಗಲು ತಯಾರಿಲ್ಲ. ಇವತ್ತು ನಾವು ಪಿರಿಯಾಪಟ್ಟಣ ತಾಲೂಕಿನ ಮರಳುಕಟ್ಟೆ ಮತ್ತು ಕರಡಿಕುಪ್ಪೆಯ ಗಿರಿಜನ ಹಾಡಿಯಲ್ಲಿನ ಜನರ ನಿತ್ಯದ ನರಕದ ಬದುಕು ನೋಡಿದರೆ ಬದುಕಲು ಇಷ್ಟೊಂದು ಕಷ್ಟಪಡಬೇಕಾ ಎಂದೆನಿಸದೆ ಇರದು. [ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಕೆಂಚಪ್ಪನ ರೋಚಕ ಕಥೆ!]

Conflict between tribals and forest department in Mysuru district

ಜೀವನ ಹೇಗೆ ಸಾಗಿಸುತ್ತಾರೆ : ಎರಡು ಹಾಡಿಗಳಲ್ಲಿ 40 ಕುಟುಂಬಗಳಿದ್ದು, ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ 200 ಜನರಾಗಬಹುದು. ಅರಣ್ಯಕ್ಕೆ ಹೊಂದಿಕೊಂಡು ಇವರ ಹಾಡಿಯಿದೆ. ಮರಳುಕಟ್ಟೆ ಹಾಡಿಯಲ್ಲಿ ಗಿರಿಜನರು, ಆನೆಚೌಕೂರು ಅರಣ್ಯಕ್ಕೆ ಹೊಂದಿಕೊಂಡಂತೆ ಇದ್ದರೆ, ಕರಡಿಕುಪ್ಪೆ ಹಾಡಿಯ ಗಿರಿಜನರು ದೊಡ್ಡಹರವೆ ಅರಣ್ಯಕ್ಕೆ ಹೊಂದಿಕೊಂಡಂತೆ ಇದೆ. ತಲಾ 2 ಎಕರೆ ವಿಸ್ತೀರ್ಣ ಜಾಗದಲ್ಲಿ ಸಣ್ಣಪುಟ್ಟ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಉಳಿದ ಖಾಲಿ ಜಾಗದಲ್ಲಿ ಶುಂಠಿ, ಮರಗೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ.

ಈ ಹಾಡಿಗೆ ನೀರು ಕೊಡಿಸುತ್ತೇನೆ ಎಂದವರು ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ ವಿದ್ಯುತ್ ಸೌಲಭ್ಯ ಕಲ್ಪಿಸಲು ನೂರೆಂಟು ತಾಪತ್ರಯಗಳಿಂದ ಅದು ನೆನೆಗುದಿಗೆ ಬಿದ್ದಿದೆ. ಹೀಗಾಗಿ ಗಿರಿಜನರೇ ನೆಲವನ್ನು ಅಗೆದು ಬಾವಿ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದು ಶುದ್ಧ ನೀರಂತೂ ಅಲ್ಲವೇ ಅಲ್ಲ. ಆದರೂ ಕುಡಿಯಲೇಬೇಕಾದ ಅನಿವಾರ್ಯತೆ.

ಯಾವುದೇ ವಾಹನಗಳನ್ನು ಈ ಸ್ಥಳಕ್ಕೆ ಬಾರದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯುತ್ತಿರುವುದರಿಂದ ತಮ್ಮ ಬೇಸಾಯಕ್ಕಾಗಲೀ ಅಥವಾ ಮನೆಗೆ ಬೇಕಾದ ಪದಾರ್ಥಗಳನ್ನು ತಲೆ ಮೇಲೆ ಹೊತ್ತು ಸಾಗಿಸಬೇಕಾಗಿದೆ. ಒಟ್ಟಾರೆ ಕಷ್ಟದಲ್ಲೇ ಬದುಕು ಸಾಗಿಸುವ ಇವರ ಬದುಕು ಯಾವಾಗ ಹಸನಾಗುತ್ತದೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. [ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

English summary
Conflict between tribals in Mysuru district and forest department is going for decades without any solutions. Forest dept want to provide facilities by moving them to cities, but tribals are not willing to leave the forest. They want to live in forest till their last breath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X