ಮೈಸೂರು: ಬಡವರಿಗೆ ಉಚಿತ ರೋಟಿ ನೀಡುವ ರೋಟಿ ಬ್ಯಾಂಕ್

Written by: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಮೇ 15 : ಹಸಿವು ಮುಕ್ತ ಭಾರತವನ್ನಾಗಿಸೋಕೆ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅದರಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬರುವುದು ಮಾತ್ರ ಕೆಲವೇ ಬೆರಳೆಣಿಕೆಯಷ್ಟು ಮಾತ್ರವೇ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಸಾಂಸ್ಕೃತಿಕ ರಾಜಧಾನಿಯಲ್ಲಿ ಒಂದು ಬ್ಯಾಂಕ್ ಆರಂಭವಾಗಿದೆ. ಅದು ನಿಮ್ಮ ಹೊಟ್ಟೆ ತುಂಬಿಸುವ ರೋಟಿ ಬ್ಯಾಂಕ್.

ಹೌದು, ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಬಡವರ ಹಸಿವನ್ನು ನೀಗಿಸಿದೆಯೋ ಇಲ್ಲ ಗೊತ್ತಿಲ್ಲ. ಆದರೆ ಮೈಸೂರಿನ ಚಾರಿಟಿಯೊಂದು ಮಾತ್ರ ಬಡವರ ಹಸಿವನ್ನು ನೀಗಿಸುತ್ತಿದೆ. ಸಮಾನ ಮನಸ್ಕ ಉದ್ಯಮಿಗಳು ಸೇರಿ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪ ಚಂದ್ರಗುಪ್ತ ರಸ್ತೆಯಲ್ಲಿ ಆರಂಭಿಸಿರುವ ರೋಟಿ ಬ್ಯಾಂಕ್ ಪ್ರತಿನಿತ್ಯ ಸುಮಾರು 500 ಬಡವರಿಗೆ ಉಚಿತವಾಗಿ ರೋಟಿ ನೀಡಲಾಗುತ್ತಿದೆ.

ಇದಷ್ಟೇ ಅಲ್ಲದೇ ಪ್ರತಿದಿನ ಬಾತ್ , ಪುಳಿಯೋಗರೆ, ಚಪಾತಿ ದಿನಕ್ಕೊಂದರಂತೆ ನೀಡಲಾಗುತ್ತದೆ. ಇತ್ತಿಚೀಗೆ ಔರಂಗಾಬಾದ್ ನ ಸಮಾಜ ಸೇವಾ ಸಂಸ್ಥೆಯೊಂದು ಆರಂಭಿಸಿದ್ದ ರೋಟಿ ಬ್ಯಾಂಕ್ ನಿಂದ ಪ್ರೇರಣೆ ಪಡೆದ ಬಡವರ ಬಂದು ಚಾರಿಟೇಬಲ್ ಟ್ರಸ್ಟ್ (ಬಿಬಿಸಿ) ಜನವರಿ 26ರ 2016ರಂದು ಶುರುಮಾಡಲಾಗಿದೆ.

ನೂರಾರು ಜನರಿಗೆ ಅನುಕೂಲ

ಈ ರೋಟಿ ಬ್ಯಾಂಕ್ ನಲ್ಲಿ ದಿನನಿತ್ಯ ಮಧ್ಯಾಹ್ನ 12ರಿಂದ 2ಗಂಟೆಯವರೆಗೆ ಹಸಿದು ಬಂದವರಿಗೆ ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ದಿನನಿತ್ಯ ನೂರಾರು ಜನ ಪಡುತ್ತಿರುವುದು ಮಾತ್ರ ವಿಶೇಷವೇ ಸರಿ.

ಸರ್ವರಿಗೂ ಅನುಕೂಲ

ಭಿಕ್ಷುಕರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಹಾಗೂ ಆಟೋ ಚಾಲಕರಿಗೆ ತುಂಬಾ ಅನುಕೂಲವಾಗಿದೆ. ರೋಟಿ ಬ್ಯಾಂಕ್ ಜನರಿಗೆ ನಿಮ್ಮ ಬಡತನ ಸಾಬೀತು ಮಾಡಿ ಅಂತ ಕೇಳುವುದಿಲ್ಲ.

ಬಡವರ ಸೇವೆ ಮಾಡುತ್ತಿರುವ ಟ್ರಸ್ಟ್

ಯಾರೂ ಹಸಿವಿನಿಂದ ಬಳಲಬಾರದು ಮತ್ತು ಬಡವರಿಗೆ ಸಹಾಯವಾಗಲಿ ಎಂಬುದೇ ನಮ್ಮ ಉದ್ದೇಶ ಎಂದು ಟ್ರಸ್ಟ್ ನ ಪದಾಧಿಕಾರಿ ಅನಿಲ್ ಕೋಟಾರಿ ಒನ್ ಇಂಡಿಯಾಗೆ ಸಂತಸದಿಂದಲೇ ತಿಳಿಸುತ್ತಿದ್ದಾರೆ. ಬಡವರು ಗೌರವವದಿಂದ ತಮ್ಮ ಆಹಾರವನ್ನು ಪಡೆಯಬೇಕು ಮತ್ತು ನಮ್ಮ ಬಳಿ ಬರುವ ಬಡವರು ಯಾವುದೇ ಸಂಕೋಚ ಪಡದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಡವರಲ್ಲಿ ಧನ್ಯತಾ ಭಾವ

''ರೋಟಿ ಬ್ಯಾಂಕ್ ಸ್ಥಾಪಕರ ಬಗ್ಗೆ ತುಂಬಾ ಗೌರವ ಇದೆ. ಇಂದಿನ ದಿನಗಳಲ್ಲಿ ಆಹಾರದ ಬೆಲೆ ಗಗನಕ್ಕೇರುತ್ತಿದೆ. ಎಷ್ಟೋ ಬಾರಿ ಹೋಟೆಲ್ ಗೆ ಹೋಗಲು ಸಾಧ್ಯವಾಗದೇ ನಾನು ಹಸಿವಿನಿಂದ ಇಲ್ಲಿ ಬಂದು ತಿಂದಿದ್ದೇನೆ ಎನ್ನುತ್ತಾರೆ'' ಇಲ್ಲಿ ಊಟ ಸೇವಿಸಿದ ಕಾರ್ಮಿಕ ಸಿದ್ಧಯ್ಯ.

ಬೇರೆ ನಗರಗಳಿಗೂ ವಿಸ್ತರಿಸುವ ಆಲೋಚನೆ

50 ಸದಸ್ಯರನ್ನೊಳಗೊಂಡ ಬಿಬಿಸಿ ಆರಂಭದಲ್ಲಿ ತಲಾ 5 ಸಾವಿರ ರುಪಾಯಿ ಬಂಡವಾಳ ಹಾಕಿ ಈ ಟ್ರಸ್ಟ್ ಅನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಬೇರೆ ನಗರಗಳಿಗೂ ವಿಸ್ತರಿಸುವ ಮತ್ತು ಬಟ್ಟೆ ಬ್ಯಾಂಕ್ ಅನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ಕೋಟಾರಿ ಅವರು ತಿಳಿಸಿದ್ದಾರೆ.

ಒಟ್ಟಾರೆ ನೀರು ಕುಡಿಯೋಕೆ ಬಡವರು ನಮ್ಮ ಮನೆ ಬಳಿ ಬಂದರೂ ಅನುಮಾನದಿಂದ ನೋಡುವ ನಾವು ಇಂತಹ ಸಂಘಟನೆಯಿಂದ ಅರಿತುಕೊಳ್ಳುವುದು ಮಾತ್ರ ಬೆಟ್ಟದಷ್ಟಿದೆ ಎಂಬುದರಲ್ಲಿ ತಪ್ಪಿಲ್ಲವೇನೋ..

English summary
Some of like minded businessmen of Mysuru, who have a motive to serve poor people, started Roti Bank in the city. This roti bank serve around 500 rotis to poor people for free of cost.
Please Wait while comments are loading...