ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎತ್ತಿನಹೊಳೆ ಯೋಜನೆಯಲ್ಲಿ ಹಣದ ಹೊಳೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ನೇತ್ರಾವತಿ ಕರಾವಳಿಯ ಪ್ರಮುಖ ನದಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಿಗೆ ಹಾಗು ನಗರವಾಸಿಗಳಿಗೆ ಇದು ಜೀವನದಿ. 148 ಕಿ.ಮೀ ಉದ್ದದ ಹಾಗೂ 4,25,680 ಚದರ ಕಿ.ಮೀ ವ್ಯಾಪ್ತಿಯಷ್ಟು ಜಲಾನಯನ ಪ್ರದೇಶ ಹೊಂದಿರುವ ನೇತ್ರಾವತಿ ನದಿಯು ತುಳುನಾಡಿನ ಜೀವನಾಡಿ.

ಕರಾವಳಿ ಜಿಲ್ಲೆಯೆಂದರೆ ಒಂದು ಕಡೆ ಪಶ್ಚಿಮ ಘಟ್ಟಗಳ ಸರದಿ, ಇನ್ನೊಂದು ಕಡೆ ಅರಬ್ಬಿ ಶರಧಿ, ಇವರೆಡರ ನಡುವೆ ನೈಸರ್ಗಿಕ ಸಂಬಂಧವಾಗಿರುವುದೇ ನೇತ್ರಾವತಿ ನದಿ. ನೇತ್ರಾವತಿ ನದಿಗೆ ಒಟ್ಟು 9 ಉಪನದಿಗಳಿದ್ದು ಇವೆಲ್ಲವೂ ಪಶ್ಚಿಮ ಘಟ್ಟದ ಅಡವಿಯ ಹಲವು ಮೂಲಗಳಿಂದ ಉಗಮಿಸಿ ಝರಿ, ತೊರೆಗಳಾಗಿ ಹರಿದು ನೇತ್ರಾವತಿ ನದಿಯ ಜೀವಂತಿಕೆಗೆ ಇಂಬು ಕೊಡುತ್ತವೆ.

ಈ 9 ಉಪನದಿಗಳಿಗೆ 42 ಕಿರುನದಿಗಳಿದ್ದು ಇವೆಲ್ಲವೂ ನೇತ್ರಾವತಿಯ ನರನಾಡಿಗಳಂತೆ ಪ್ರವಹಿಸುತ್ತಿವೆ. ಈ ಉಪನದಿಗಳಲ್ಲಿ ಕಿರು ಝರಿಗಳಲ್ಲಿ ಯಾವುದೇ ಒಂದು ಭಾಗಕ್ಕೆ ಗಾಯವಾದರೂ ನೇತ್ರಾವತಿಯ ನೆಮ್ಮದಿಗೆ ಭಂಗವಾಗುತ್ತದೆ. ಈ ಉಪನದಿಗಳು ಹರಿಯುವ ಅಡವಿ, ಪರ್ವತ, ಕಣಿವೆ ಭಾಗಕ್ಕೆ ತೊಂದರೆಯಾದರೂ ನೇತ್ರಾವತಿ ಸೌಖ್ಯವನ್ನು ಕಳೆದುಕೊಳ್ಳುತ್ತದೆ. [ಚಿತ್ರಗಳು : ನೇತ್ರಾವತಿ ಉಳಿಸಲು ಬೃಹತ್ ಪ್ರತಿಭಟನೆ]

We need clarifications on Yettinahole drinking water project

ಎಳನೀರು ಬಂಗ್ರಬಲಿಕೆ ಕಣಿವೆಯಿಂದ ಹರಿದು ಬರುವ ಎಳನೀರು ಹೊಳೆ, ದುರ್ಗದಬೆಟ್ಟದಿಂದ ಹರಿದುಬರುವ ಬಂಡಾಜೆ ಹೊಳೆ, ಮಧುಗುಂಡಿಯಿಂದ ಹರಿದು ಬರುವ ಮೃತ್ಯುಂಜಯ ಹೊಳೆ, ಚಾರ್ಮಾಡಿ ಘಾಟಿಯ ಹೊರಟ್ಟಿಯಿಂದ ಬರುವ ಅಣಿಯೂರುಹೊಳೆ, ಶಿರಾಡಿ ಘಾಟಿಯ ಓಂಗ್ರಾಲ ಕಣಿವೆಯಿಂದ ಬರುವ ಕೆಂಪು ಹೊಳೆ, ಭೈರಾಪುರ ಘಾಟಿಯ ಎತ್ತಿನಭುಜ ಕಣಿವೆಯಿಂದ ಬರುವ ಕಪಿಲಾ ಹೊಳೆ, ಕುಮಾರ ಪರ್ವತದಿಂದ ಬರುವ ಕುಮಾರಧಾರ ಹೊಳೆ ಇವುಗಳು ನೇತ್ರಾವತಿಯ ಪ್ರಮುಖ ಉಪನದಿಗಳು. ['ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ಬರಿದಾಗುತ್ತೆ']

ಈ ಎಲ್ಲಾ ನದಿಗಳು ಕುದುರೆಮುಖ, ಕಡ್ತಕಲ್, ಚಾರ್ಮಾಡಿ, ಶಿರಾಡಿ, ಬಿಸಿಲೆ, ಬೈರಾಪುರ ಘಾಟಿಗಳ ಅರಣ್ಯದಲ್ಲಿ ಸಂಚರಿಸುತ್ತವೆ. ಈ ನದಿಮೂಲ ಮತ್ತು ನದಿಹರಿವಿನ ತಾಣಗಳಲ್ಲೆಲ್ಲಾ ಗಿರಿ, ಕಂದರ, ಕಣಿವೆ ಪ್ರತಾಪಗಳಿವೆ. ಧುಮ್ಮುಕ್ಕಿ ಹರಿಯುವ ಜಲಪಾತಗಳಿವೆ ಇವೆಲ್ಲವೂ ನದಿಯ ಅವಯವಗಳಾಗಿದ್ದು. ನದಿಯ ಜೀವಂತಿಕೆಗೆ ಪಾತ್ರಧಾರಿಗಳಾಗಿದ್ದು ಸೂತ್ರಧಾರಿಗಳಾಗಿವೆ.

ನದಿ ಹರಿದು ಸಾಗರವನ್ನು ಸೇರುವುದು ನಿಸರ್ಗ ನಿಯಮ. ಈ ನಿಯಮದ ಹಕ್ಕು ಸ್ವಾಮ್ಯವನ್ನು ಪಡೆದು ನದಿಯ ಮೇಲೆ ಅಧಿಪತ್ಯ ಸ್ಥಾಪಿಸಲು ಯಾರಿಗೂ ಹಕ್ಕಿಲ್ಲ. ಸಹಜ ಹರಿವಿನ ನದಿಯ ಮೇಲೆ ಆಧುನಿಕ ತಂತ್ರಜ್ಞಾನದ ಮಾನವ ಹಸ್ತಕ್ಷೇಪವಾದರೆ ನದಿಯು ತನ್ನ ನೆಮ್ಮದಿಯನ್ನು ಕಳೆದುಕೊಂಡು ಪ್ರಾಕೃತಿಕ ದುರಂತವಾಗುವುದಂತೂ ಸ್ಪಷ್ಟ. ಯಾವುದೇ ನದಿಯಲ್ಲಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎನ್ನುವುದೇ ಅರ್ಥಹೀನ ಮಾತು. [ಎತ್ತಿನಹೊಳೆ ಯೋಜನೆಯ ಟೆಂಡರ್ ಪಾರದರ್ಶಕವಾಗಿದೆ]

ವಿರುದ್ಧ ದಿಕ್ಕಿಗೆ ಹರಿಯುತ್ತದೆಯೇ? : ನೇತ್ರಾವತಿ ನದಿಯು ಪಶ್ಚಿಮಘಟ್ಟದಿಂದ ಕೆಳಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ಕೆಳಮುಖವಾಗಿ ಹರಿಯುವ ನೀರನ್ನು ಅದರ ವಿರುದ್ಧ ದಿಕ್ಕಿಗೆ ಅಂದರೆ ಮೇಲ್ಮುಖವಾಗಿ ಹರಿಸುವುದು ಈ ಯೋಜನೆಯ ಉದ್ದೇಶ. ಮೇಲ್ನೋಟಕ್ಕೆ ಇದು ತೀರಾ ಅವೈಜ್ಞಾನಿಕ, ಅಸಂಬದ್ಧ ಯೋಜನೆ ಎಂದು ಮನದಟ್ಟಾಗುತ್ತಿದೆ. ನೇತ್ರಾವತಿಯ ನದಿ ಮೂಲದ ಒಂದು ನಿರ್ದಿಷ್ಟ ಅಂತರದಲ್ಲಿ ಅಣೆಕಟ್ಟು ಕಟ್ಟಿ ನೀರನ್ನು ತಡೆಹಿಡಿದು ಗುರುತ್ವಾಕರ್ಷಣ ಬಲದಿಂದ ನೀರನ್ನು ಮೇಲಕ್ಕೆತ್ತಿ ಪೈಪ್‍ಗಳ ಮೂಲಕ ಬಯಲು ಸೀಮೆಯ ಕಡೆಗೆ ಹರಿಸುವುದು ಯೋಜನೆಯ ಲೆಕ್ಕಾಚಾರ.

ಅಣೆಕಟ್ಟು ಕಟ್ಟುವಾಗ ನದಿಗೆ ನೀರನ್ನು ಒದಗಿಸುವ ಮಳೆಕಾಡು ಸಂಪೂರ್ಣ ಮುಳುಗಡೆಯಾದಾಗ ಮತ್ತೆ ಮಳೆಗೆ ಹಾಗೂ ನದಿಯ ತುಂಬುವಿಕೆಗೆ ಮೂಲ ಯಾವುದು?. ಕಾಮಗಾರಿ ಮಾಡುವಾಗ, ಬೃಹತ್ ಪೈಪುಗಳನ್ನು ಬೆಟ್ಟ ಕೊರೆದು ಅಳವಡಿಸುವಾಗ ಅಪಾರ ಮಣ್ಣನ್ನು ರಾಶಿ ಹಾಕುವಾಗ ನೀರಿನ ಚಿಕ್ಕ ಒರತೆಗಳು ಮುಚ್ಚಿ ಹೋಗಬಹುದು. ನೇತ್ರಾವತಿಯ ನದಿ ಹರಿವಿನ ಜಾಗದಲ್ಲಿ ಲ್ಲಿಯೂ ಸಮತಟ್ಟಾದ ಜಾಗವಿರದೆ ಪರ್ವತ, ಪ್ರಪಾತ, ಅಡವಿ, ಕಣಿವೆಗಳಿದ್ದು ಇಂತಹ ಜಾಗದಲ್ಲಿ ಅಣೆಕಟ್ಟು ನಿರ್ಮಿಸಲು ಸಾಧ್ಯವೇ?.

ಹಲವಾರು ಗೊಂದಲಗಳಿರುವ ಈ ಯೋಜನೆ ಬಗ್ಗೆ ತದ್ವಿರುದ್ದ ಹೇಳಿಕೆಗಳನ್ನು ನೀಡುತ್ತಾ, ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸದೇ ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸುತ್ತಿರುವುದು ಸರಿಯಲ್ಲ. ಪರಮಶಿವಯ್ಯ ಅವರ ಪ್ರಕಾರ ಇದು ನೇತ್ರಾವತಿ ನದಿ ತಿರುಗಿಸುವ ಯೋಜನೆಯಾಗಿದ್ದರೆ ಸರ್ಕಾರದ ಪ್ರಕಾರ ಇದು ಕೇವಲ ಎತ್ತಿನಹೊಳೆ ಯೋಜನೆ.

ಈ ಯೋಜನೆ ಬಗ್ಗೆ ನಮ್ಮ ಸರ್ಕಾರ ಏಕೆ ಸ್ಪಷ್ಟೀಕರಣ ನೀಡುತ್ತಿಲ್ಲ?. ಕೆಲವು ಮಾಹಿತಿಗಳ ಪ್ರಕಾರ ಈಗ ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತಗೊಳಿಸಿ ಇದರ ಎರಡನೇ ಹಂತದ ಕಾಮಗಾರಿಯಾಗಿ ನೇತ್ರಾವತಿ ನದಿ ನೀರು ತಿರುವು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

English summary
Karnataka Neeravari Nigam Limited (KNNL) announced that, 24 TMC of water is available on Yettinahole drinking water project. But Dakshina Kannada people need clarifications about the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X