ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀತ್ ಮಿಲನ್‌ ಅವರ ಸಾರ್ಥಕ ಸೇವೆಗೆ ಸಲಾಂ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂನ್ 09 : ಮಹಾನಗರ ಪಾಲಿಕೆಯಿಂದ ಹಿಡಿದು ಸಾಮಾನ್ಯ ಜನರ ತನಕ ಅಭಿವೃದ್ಧಿ ಹೆಸರಿನಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಹಾಕುವವರೇ ಹೆಚ್ಚು. ಆದರೆ, ಮಂಗಳೂರಿನ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿದ್ದಾರೆ. ಮರಗಳನ್ನು ಬೆಳೆಸಿ, ಪರಿಸರ ಕಾಪಾಡುವ ಸೇವೆ ಮಾಡುತ್ತಿದ್ದಾರೆ.

ಇದುವರೆಗೂ ಸಾವಿರಾರು ಗಿಡಗಳನ್ನು ನೆಟ್ಟ ಈ ಸಾಧಕರ ಹೆಸರು ಜೀತ್‌ ಮಿಲನ್ ರೋಶ್. ತಮ್ಮ ದುಡಿಮೆಯ ಅರ್ಧ ಹಣವನ್ನು ಇವರು ಸಸ್ಯ ಸಂಕುಲ ಬೆಳೆಸಲು ಮೀಸಲಾಗಿಟ್ಟಿದ್ದಾರೆ. ಖಾಲಿ ಜಾಗದಲ್ಲಿ ಗಿಡ ನೆಟ್ಟು, ಅದನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಸಹಕಾರ ನೀಡುತ್ತಿದ್ದಾರೆ. [15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?]

jeeth milan roche

ಜೀತ್ ಮಿಲನ್ ರೋಶ್ ಅವರು ಶ್ರೀಮಂತರ ಕಾಕ್‌ಟೈಲ್ ಪಾರ್ಟಿ ಆಯೋಜಿಸುವ ಕೆಲಸ ಮಾಡುತ್ತಾರೆ. ಸಂಪಾದನೆ ಮಾಡಿದ ಹಣದಲ್ಲಿ ಅರ್ಧ ಪರಿಸರ ಸಂರಕ್ಷಣೆಗೆ ಹೋಗುತ್ತದೆ. ಆದ್ದರಿಂದ, ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ. [ಸೇನಾಪಡೆಯಿಂದ ಬೆಂಗಳೂರಲ್ಲಿ ಗಿಡ ನೆಡುವ ಅಭಿಯಾನ]

ಸಸ್ಯಸಂಕುಲ ಬೆಳೆಸುವ ಈ ಕಾರ್ಯಕ್ಕೆ ಜೀತ್ ಮಿಲನ್ ಪುತ್ರ ಶಾನ್‌ ಎಥನ್‌ ರಾಜ್ ಕೈ ಜೋಡಿಸಿದ್ದಾರೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಕೈಯಲ್ಲಿ ಗುದ್ದಲಿ ಹಿಡಿದು ಹೊರಡುವ ಅಪ್ಪ, ಮಗ ಗಿಡ ನೆಡುತ್ತಾರೆ. ಪಡೀಲ್‌ನಿಂದ ಪರಂಗಿಪೇಟೆ ತನಕ ಇವರು ನೆಟ್ಟಿರುವ ಗಿಡಗಳು ಈಗ ಆಳೆತ್ತರಕ್ಕೆ ಬೆಳೆದಿವೆ. ಕೂಳೂರಿಂದ ಮಂಗಳಾದೇವಿ ವರೆಗೆ 3 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. [ಗಿಡ ಬೆಳೆಸಿ, ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯಿರಿ!]

ಮೊದಲು 25 ಗಿಡ ನೆಟ್ಟರು : ನಗರದ ಮೋರ್ಗನ್ ಗೇಟ್ ನಿವಾಸಿ ಜೀತ್ 2003 ರಲ್ಲಿ ಗಿಡ ನೆಡುವ ಕಾಯಕ ಆರಂಭಿಸಿದರು. ಮೊದಲು ನೆಟ್ಟ 25 ಗಿಡಗಳು ಈಗ ಬೆಳೆದು ನಿಂತಿವೆ. ಮಳೆಗಾಲ ಬಂದ ತಕ್ಷಣ ಗಿಡ ನೆಡುವ ಕೆಲಸ ಆರಂಭಿಸುವ ಇವರು ಮೊದಲ ಮೂರು ವರ್ಷ 800 ಗಿಡ ನೆಟ್ಟಿದ್ದಾರೆ. ಈಗ ಪ್ರತಿ ವರ್ಷ ಸಾವಿರಾರು ಗಿಡ ಬೆಳೆಸುತ್ತಿದ್ದಾರೆ. [ಸಾವಿನ ದವಡೆಯಿಂದ ಪಾರಾದ ಮರದಲ್ಲಿ ಮರುಜೀವ!]

ಜೀತ್ ಸರ್ಕಾರಿ ಜಾಗಗಳಲ್ಲಿ ಗಿಡ ನೆಡಲು ಪ್ರಾಶಸ್ತ್ಯ ನೀಡುತ್ತಾರೆ. ರಸ್ತೆ ಬದಿಗಳಲ್ಲಿ, ರೈಲು ಹಳಿಗಳ ಪಕ್ಕದಲ್ಲಿ ಗಿಡ ನೆಡುತ್ತಿದ್ದಾರೆ. ಆರಂಭದಲ್ಲಿ ತೋಟಗಾರಿಕೆ ಇಲಾಖೆಯಿಂದ ಗಿಡ ಖರೀದಿಸಿ ನೆಡುತ್ತಿದ್ದರು. ಇವರ ಸೇವಾ ಕಾರ್ಯ ನೋಡಿ ತೋಟಗಾರಿಕೆ ಇಲಾಖೆಯವರೇ ಈಗ ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಲೆಕ್ಕ ಇಡುವುದೇ ಬಿಟ್ಟಿದ್ದಾರೆ : 'ಆರಂಭದಲ್ಲಿ ಗಿಡ ನೆಡುವಾಗ ಲೆಕ್ಕ ಇಡುತ್ತಿದ್ದೆ. ಈಗ ಲೆಕ್ಕ ಇಡುವುದನ್ನೇ ಬಿಟ್ಟಿದ್ದೇನೆ. ಸುಮಾರು 60 ಸಾವಿರ ಗಿಡ ನೆಟ್ಟಿರಬಹುದು. ಜನರಿಗೆ ಸೆಕೆಗಾಲದಲ್ಲಿ ಮನೆಯೊಳಗೆ ತಂಪಾದ ಗಾಳಿ ಬಿಸುತ್ತಿರಬೇಕು. ಆದರೆ, ಮರಗಳನ್ನು ಕತ್ತರಿಸುವುದನ್ನು ಬಿಡುವುದಿಲ್ಲ. ಗಿಡ ನೆಡುವುದಿಲ್ಲ' ಎನ್ನುತ್ತಾರೆ ಜೀತ್.

ಮಳೆಗಾಲದ ಮೂರು ತಿಂಗಳಲ್ಲಿ ಇಡೀ ದಿನ ಗಿಡ ನೆಡುತ್ತಾರೆ. ವಾರಾಂತ್ಯದಲ್ಲಿ ಮಗ ಜೊತೆ ಸೇರಿಕೊಳ್ಳುತ್ತಾನೆ. ಮಳೆಗಾಲದಲ್ಲಿ ಇವರು ಬ್ಯುಸಿ ಇರುವಾಗ ಸಣ್ಣ ಪುಟ್ಟ ಕಾಕ್‌ಟೈಲ್ ಪಾರ್ಟಿಗಳನ್ನು ಹೆಂಡತಿಯೇ ಆಯೋಜನೆ ಮಾಡುತ್ತಾರೆ.

ಖಾಸಗಿ ಕಾಡು ನಿರ್ಮಾಣ : ಅದ್ಯಪಾಡಿಯಲ್ಲಿ ಜೀತ್ ಮಿಲನ್ ಅವರಿಗೆ ಒಬ್ಬರು 38 ಎಕರೆ ಖಾಲಿ ಗುಡ್ಡದ ಜಾಗದಲ್ಲಿ ಗಿಡ ನೆಡುವಂತೆ ಮನವಿ ಮಾಡಿದ್ದರು. ಆ ಜಾಗದಲ್ಲಿ 6 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಗಂಧ, ಹಲಸು, ಹೆಬ್ಬಲಸು ಸಹಿತ 45 ತಳಿಯ ಗಿಡಗಳು ಬೆಳೆಯುತ್ತಿವೆ.

English summary
Mangaluru City corporation engaged in cutting down trees. Jeeth Milan Roche have planted more than 5000 plants in the city. Since 2003 Jeeth has been planting saplings in public places of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X