ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರೋಪಾಡಿ ಜಲೀಲ್ ಹತ್ಯೆ, ಆಕ್ರೋಶಿತರಿಂದ ರಮಾನಾಥ ರೈಗೆ ಘೇರಾವ್

ಹಾಡ ಹಗಲೇ ದುಷ್ಕರ್ಮಿಗಳಿಂದ ಕರೋಪಾಡಿ ಜಲೀಲ್ ಹತ್ಯೆಯಾಗಿದ್ದರು. ಹತ್ಯೆಯಾಗಿ 7 ದಿನ ಕಳೆದರೂ ಹಂತಕರನ್ನು ಪೊಲೀಸರು ಬಂಧಿಸಿಲ್ಲ. ಈ ಸಿಟ್ಟಿನಲ್ಲಿದ್ದ ಸ್ಥಳೀಯರು ರಮಾನಾಥ ರೈರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 29: ಹಾಡಹಗಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಕರೋಪಾಡಿ ಜಲೀಲ್ ಮನೆಗೆ ಆಗಮಿಸಿದ ಸಚಿವ ರಮಾನಾಥ ರೈಯವರನ್ನು ಸಾರ್ವಜನಿಕರು ಅಡ್ಡಗಟ್ಟಿ, ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಡಹಗಲೇ ದುಷ್ಕರ್ಮಿಗಳಿಂದ ಕರೋಪಾಡಿ ಜಲೀಲ್ ಹತ್ಯೆಯಾಗಿದ್ದರು. ಅವರ ಹತ್ಯೆಯಾಗಿ ಏಳು ದಿನ ಕಳೆದರೂ ಹಂತಕರನ್ನು ಪೊಲೀಸ್ ಇಲಾಖೆ ಬಂಧಿಸಿಲ್ಲ. ಈ ಸಿಟ್ಟಿನಲ್ಲಿದ್ದ ಸ್ಥಳೀಯರು ರಮಾನಾಥ ರೈಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.[ಮಂಗಳೂರಿನಲ್ಲಿ ಗ್ರಾಪಂ ಉಪಾಧ್ಯಕ್ಷನ ಹತ್ಯೆ ಪ್ರಕರಣ: ತನಿಖೆ ಚುರುಕು]

ಶುಕ್ರವಾರ ಜಲೀಲ್ ಅವರ ಕರೋಪಾಡಿ ಮನೆಯಲ್ಲಿ ನಡೆಯುತ್ತಿದ್ದ ಮೃತರ ಶಾಂತಿಗೆ ಸಚಿವ ರಮಾನಾಥ ರೈ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಸಂದರ್ಭ ಮನೆಯ ಆವರಣದಲ್ಲೇ ಸಚಿವರ ಕಾರನ್ನು ಅಡ್ಡಗಟ್ಟಿದ ಸಾರ್ವಜನಿಕರ ಗುಂಪೊಂದು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದೆ.

Karopadi Jalil Murder: People staged protest against Ramanath Rai

"ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. ನೀವು ನಮ್ಮ ಸಚಿವರಾಗಿದ್ದೀರಿ. ನಮ್ಮ ಗ್ರಾಮದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ನಮ್ಮದೇ ಪಕ್ಷದ ಜಲೀಲ್ ರನ್ನು ಬರ್ಬರವಾಗಿ ಹತ್ಯೆಗೈದು ಏಳು ದಿನಗಳು ಕಳೆಯಿತು. ಈವರೆಗೂ ನಿಜವಾದ ಹಂತಕರನ್ನು ಮತ್ತು ಹತ್ಯೆಗೆ ಸಂಚು ಹೂಡಿದವರನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ," ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

"ನಿಮಗೆ ಬೇಕಾಗಿರುವುದು ಕೇವಲ ಓಟು ಮಾತ್ರ. ನಿಮ್ಮ ಶಿಷ್ಯನೊಬ್ಬನ ಬರ್ಬರ ಹತ್ಯೆ ಮಾಡಿದವರನ್ನೂ ಬಂಧಿಸಲಾಗದ ಪೊಲೀಸ್ ಇಲಾಖೆ ಮತ್ತು ಕಾಂಗ್ರೆಸ್ ಸರಕಾರ ನಮ್ಮಂತಹ ಬಡ ಜನರ ಪ್ರಾಣಕ್ಕೆ ರಕ್ಷಣೆ ಕೊಡಲು ಸಾಧ್ಯವೇ," ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ ಮತ್ತಷ್ಟು ಮುಂದುವರಿದು ಧಿಕ್ಕಾರ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಲು ಮುಂದಾದರು. ಈ ಸಂದರ್ಭ ಸಾರ್ವಜನಿಕರ ಪ್ರಶ್ನೆಗೆ ಏರು ಧ್ವನಿಯಲ್ಲಿ ಉತ್ತರಿಸಿದ ಸಚಿವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಕೆಲಸ ಪೊಲೀಸರು ಮಾಡುತ್ತಾರೆ ಎನ್ನುತ್ತಿದ್ದಂತೆ ಜನರ ಆಕ್ರೋಶ ಇಮ್ಮಡಿಯಾಗಿತ್ತು.

"ವಿಟ್ಲ ಠಾಣೆಯ ಮೂವರು ಕೋಮುವಾದಿ ಪೊಲೀಸರು ನಮಗೆ ನ್ಯಾಯ ಸಿಗಲು ಬಿಡುತ್ತಿಲ್ಲ. ಈ ಹಿಂದೆಯೇ ನಿಮ್ಮಲ್ಲಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕ್ರಿಮಿನಲ್ ಜೊತೆ ಹೆಗಲ ಮೇಲೆ ಕೈಹಾಕುತ್ತಿರುವ ಪೊಲೀಸರಿಂದ ನಮಗೆ ರಕ್ಷಣೆ ದೊರೆಯಲು ಸಾಧ್ಯವೇ," ಎಂದು ಮತ್ತೆ ಸಚಿವರನ್ನು ಜನ ಪ್ರಶ್ನಿಸಿದ್ದಾರೆ.

"ಕನ್ಯಾನ, ಕರೋಪಾಡಿಯಲ್ಲಿ ಇನ್ನೆಷ್ಟು ಜನರ ನೆತ್ತರು ಹರಿಯಬೇಕು? ಕಳೆದ ಐದಾರು ವರ್ಷಗಳಿಂದ ನಡೆಯುತ್ತಿರುವ ಕೊಲೆ, ಕೊಲೆ ಯತ್ನ, ಹಲ್ಲೆ, ಅಪಹರಣ, ಅತ್ಯಾಚಾರ, ಕಳ್ಳತನ
ಮತ್ತು ದರೋಡೆಗಳಿಂದ ಬದುಕುವುದು ಅಸಾಧ್ಯವಾಗಿದೆ," ಎಂದು ಜನ ಸಚಿವರ ಮುಂದೆ ಏರಿದ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಗುಂಪಿನ ಆವೇಶ ನೋಡುತ್ತಿದ್ದ ಜಲೀಲ್ ಕುಟುಂಬಸ್ಥರು ಬಳಿಕ ಜನರನ್ನು ಚದುರಿಸಿ ಸಚಿವರ ವಾಹನ ತೆರಳಲು ಅನುವು ಮಾಡಿದ್ದಾರೆ.

English summary
People of Karopadi in Mangaluru staged protest against Ramanath Rai by stopping his car when he came to visit Karopadi Jalil's house on Friday, April 28th, for the negligence of the cops in finding the culprits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X