ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೆಸ್ಸೆಸ್ ಶರತ್ ಮಡಿವಾಳ ಶವ ಯಾತ್ರೆಯ ಗ್ರೌಂಡ್ ರಿಪೋರ್ಟ್

|
Google Oneindia Kannada News

ಮಂಗಳೂರು, ಜುಲೈ 9: ಹಲ್ಲೆಗೊಳಗಾಗಿ ಜೀವತೆತ್ತ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಅಂತ್ಯಕ್ರಿಯೆ ಶನಿವಾರ ನಡೆಯಿತು. ಮಂಗಳೂರಿ ಎಜೆ ಆಸ್ಪತ್ರೆಯಿಂದ ಶರತ್ ಮನೆಯವರೆಗೆ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ತರಲಾಯಿತು.

ಸಾವಿರಾರು ಪೊಲೀಸರ ಮಧ್ಯೆ ಅಪಾರ ಜನಸಾಗರವೇ ಮೆರವಣಿಗೆಗೆ ನೆರೆದಿತ್ತು. ಮೆರವಣಿಗೆಯಲ್ಲಿ ಕೆಲವೆಡೆ ಕಲ್ಲು ತೂರಾಟ ನಡೆದಿದ್ದರೆ, ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಶನಿವಾರ ಹೇಗಿತ್ತು ಎನ್ನುವುದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಶಾಂತವಾಗಿ ಹೊರಟ ಅಂತಿಮಯಾತ್ರೆ

ಶಾಂತವಾಗಿ ಹೊರಟ ಅಂತಿಮಯಾತ್ರೆ

ಶನಿವಾರ ಬೆಳಗ್ಗೆ 10:15ಕ್ಕೆ ನಗರದ ಎ.ಜೆ ಆಸ್ಪತ್ರೆಯಿಂದ ಶರತ್ ಮಡಿವಾಳ ಶವಯಾತ್ರೆ ಹುಟ್ಟೂರಿಗೆ ಹೊರಟು ನಂತೂರು, ಪಡೀಲ್, ಫರಂಗಿಪೇಟೆ ತುಂಬೆ ಮಾರ್ಗವಾಗಿ 12 ಗಂಟೆಗೆ ಬಿ.ಸಿರೋಡ್ ತಲುಪಿತು.

ಪೊಲೀಸರು ಮೊದಲಿಗೆ ಶರತ್ ಶವಯಾತ್ರೆಯ ವಾಹನ ತದನಂತರ ದ್ವಿಚಕ್ರ ವಾಹನಗಳು ಕೊನೆಯಲ್ಲಿ ಉಳಿದ ವಾಹನಗಳು ತೆರಳುವಂತೆ ಮಾಡಿದರು.ಈ ಸಂದರ್ಭ ಸಾಥ್ ನೀಡಿದ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಮಾತಿನ ಚಕಮಕಿ

ಮಾತಿನ ಚಕಮಕಿ

ಶವಯಾತ್ರೆಗೆ ಪೊಲೀಸರ ವಿಶೇಷ ತುಕಡಿಗಳು ಬಿಗಿ ಬಂದೋಬಸ್ತ್ ವಹಿಸಿದ್ದವು. ಬಿ.ಸಿ ರೋಡ್‍ನ ಶರತ್ ಲಾಂಡ್ರಿ ತಲುಪುತ್ತಿದ್ದಂತೆ ಹಿಂದೂ ಮುಖಂಡರು ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಭದ್ರತೆ ದೃಷ್ಟಿಯಿಂದ ಮೃತದೇಹವನ್ನು ಕೆಳಗಿಳಿಸದೇ ನೇರವಾಗಿ ಹುಟ್ಟೂರಿಗೆ ಕೊಂಡೊಯ್ಯಲು ಹೊರಟಾಗ ಪೊಲೀಸರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಮಾನವೀಯ ಮೌಲ್ಯ ಎತ್ತಿ ಹಿಡಿದ ಕಣ್ಣೀರು

ಮಾನವೀಯ ಮೌಲ್ಯ ಎತ್ತಿ ಹಿಡಿದ ಕಣ್ಣೀರು

ಮಂಗಳೂರಿನಿಂದ ಹೊರಟ ಶವಯಾತ್ರೆಯನ್ನು ಹೆದ್ದಾರಿಯ ಇಕ್ಕೆಲಗಳಲ್ಲಿ ಜಾತಿ, ಧರ್ಮವೆನ್ನದೆ ನಿಂತ ಜನರು ವೀಕ್ಷಿಸುತ್ತಿದ್ದುದು ಕಂಡು ಬಂತು. ಅಂತಿಮ ಯಾತ್ರೆ ಫರಂಗಿಪೇಟೆ ತಲುಪಿ ಮುಂದೆ ಸಾಗುತ್ತಿದ್ದಂತೆ ಸಾಲಾಗಿ ನಿಂತಿದ್ದ ಮಹಿಳೆಯರು ಕೈಮುಗಿದು ಬೀಳ್ಕೊಟ್ಟರು. ಆಗ ಮಹಿಳೆಯರ ಕಣ್ಣಲ್ಲಿ ನೀರು ಜಿನುಗುತಿತ್ತು. ಆ ಕಣ್ಣೀರಿಗೆ ಯಾವುದೇ ಧರ್ಮ, ಜಾತಿ ಇರಲಿಲ್ಲ. ಮಾನವೀಯತೆ ಮಾತ್ರ ಆ ಕಣ್ಣೀರಿನಲ್ಲಿ ನೆಲೆಯಾಗಿತ್ತು.

ಕಲ್ಲು ತೂರಾಟ, ಪ್ರಕ್ಷುಬ್ದ ವಾತಾವರಣ

ಕಲ್ಲು ತೂರಾಟ, ಪ್ರಕ್ಷುಬ್ದ ವಾತಾವರಣ

ಶವ ಹೊತ್ತ ವಾಹನ ಬಿ.ಸಿರೋಡ್ ತಲುಪುವ ವೇಳೆ ಕೊನೆಯಲ್ಲಿದ್ದ ವಾಹನಗಳು ಕೈಕಂಬದಲ್ಲಿದ್ದವು. ಇದೇ ಸಮಯದಲ್ಲಿ ಏಕಾ ಏಕಿ ಕಲ್ ಲುತೂರಾಟ ನಡೆಯಿತು. ತಕ್ಷಣವೇ ಮೆರವಣಿಗೆಯಲ್ಲಿದ್ದವರು ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟು, ವಾಹನಗಳಿಗೆ ಕಲ್ಲುತೂರಾಟ ನಡೆಸಿದರು.

ಕಲ್ಲುತೂರಾಟದಲ್ಲಿ ಕೆನರಾಬ್ಯಾಂಕ್‍ನ ಎಟಿಎಂ ಸೇರಿ ಹಲವು ಕಟ್ಟಡಗಳು, ರಸ್ತೆ ಬದಿಯಲ್ಲಿದ್ದ ವಾಹನಗಳು ಜಖಂಗೊಂಡವು. ಈ ವೇಳೆ ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಸಂಶಯದ ಮೇಲೆ ಕೆಲವರನ್ನು ಬಂಧಿಸಿದರು.

ಸಾವಿನಲ್ಲೂ ಬೇಳೆ ಬೇಯಿಸುವವರು

ಸಾವಿನಲ್ಲೂ ಬೇಳೆ ಬೇಯಿಸುವವರು

ಮತ್ತೆ ಹುಟ್ಟೂರು ಸಜಿಪ ತಲುಪುವ ಮಾರ್ಗ ಮಧ್ಯೆ ಮತ್ತೆ ಮೂರು ಬಾರಿ ಕಲ್ಲುತೂರಾಟ ನಡೆಯಿತು. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಈ ವೇಳೆ ಕೆಲವು ಕಿಡಿಗೇಡಿಗಳು ವಾಹನಗಳಿಗೆ ರಸ್ತೆಯಿಂದ ಕಲ್ಲುತುಂಬಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಮಾನವನ ಅಮಾಣವೀಯ ನಡವಳಿಕೆಗೆ ಸಾಕ್ಷಿ ನುಡಿಯುತ್ತಿತ್ತು.

ಮಿನಿ ಕಾಶ್ಮೀರ

ಮಿನಿ ಕಾಶ್ಮೀರ


"ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂದು ಹೇಳಲಾಗುತ್ತಿಲ್ಲ. ಇಡೀ ಜಿಲ್ಲೆ ಮಿನಿ ಕಾಶ್ಮೀರವಾಗಿದೆ. ಪೊಲೀಸರು ಏನು ಮಾಡುತ್ತಿದ್ದಾರೆ. ರಾಜ್ಯ, ಕೇಂದ್ರ ಸರಕಾರ ನೋಡಿಕೊಂಡು ಮಜಾ ಅನುಭವಿಸುತ್ತಿದೆ. ದಿನಕ್ಕೊಂದಂರಂತೆ ಹೆಣಗಳು ಬೀಳುತ್ತಿವೆ. ಯಾರಿಗೆ ಹೇಳೋಣ ನಮ್ಮ ಸಮಸ್ಯೆಯನ್ನು" ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸಾರ್ವಜನಿಕ ಲೊಕೇಶ್

 ಬಂಧಿತರ ಬಿಡುಗಡೆಗೆ ಪೊಲೀಸರಿಗೇ ಬ್ಲ್ಯಾಕ್ ಮೇಲ್

ಬಂಧಿತರ ಬಿಡುಗಡೆಗೆ ಪೊಲೀಸರಿಗೇ ಬ್ಲ್ಯಾಕ್ ಮೇಲ್

ಕಲ್ಲೇಟಿನಿಂದ ಇನೋಳಿ ನಿವಾಸಿ ಲೋಹಿತ್ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಗಳು ಬಿ.ಸಿ. ರೋಡ್‍ಗೆ ಬಂದಿಳಿದವು. ಜತೆಗೆ 6 ಜನರನ್ನು ಬಂಟ್ವಾಳ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು.
ತಕ್ಷಣ ಠಾಣೆಗೆ ಮುತ್ತಿಗೆ ಹಾಕಿದ ಸಂಘಟಕರು ತಮ್ಮ ಕಾರ್ಯಕರ್ತರನ್ನು ಬಿಟ್ಟು ಬಿಡಿ ಇಲ್ಲದಿದ್ದರೆ ಗಲಾಟೆ ಮುಂದುವರಿಸುತ್ತೇವೆ ಎಂದು ಬೆದರಿಕೆಯೊಡ್ಡಿದರು. ಇದಕ್ಕೆ ಬೆದರಿದ ಪೊಲೀಸರು ಇಬ್ಬರನ್ನು ತಮ್ಮಲ್ಲಿರಿಸಿ ಉಳಿದವರನ್ನು ಬಿಟ್ಟು ಬಿಟ್ಟರು. ಮತ್ತೆ ಶವಯಾತ್ರೆ ಹುಟ್ಟೂರು ಕಡೆ ತೆರಳಿತು.

ಕಿಡಿಗೇಡಿಗಳ ಬೇಟೆಗೆ ವಿಡಿಯೋ ಚಿತ್ರೀಕರಣ

ಕಿಡಿಗೇಡಿಗಳ ಬೇಟೆಗೆ ವಿಡಿಯೋ ಚಿತ್ರೀಕರಣ

ಅಂತಿಮಯಾತ್ರೆಯ ಸಂಪೂರ್ಣ ಭಾಗವನ್ನು ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ತಿಳಿಸಿದ್ದಾರೆ. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ದಾಖಲಾಗಿದೆ. ಹತ್ತು ಜನರನ್ನು ಬಂಧಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಸೆರೆಹಿಡಿಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಾರ್ಥಿವ ಶರೀರದ ಅಂತಿಮ ದರ್ಶನ

ಪಾರ್ಥಿವ ಶರೀರದ ಅಂತಿಮ ದರ್ಶನ

ಸಂಜೆ 2 ಗಂಟೆ ಹೊತ್ತಿಗೆ ಸಾವಿರಾರು ವಾಹನಗಳ ಯಾತ್ರೆಯ ಮೂಲಕ ಮೃತದೇಹ ಹುಟ್ಟೂರು ಸಜಿಪದ ಕಂದೂರು ಮನೆಗೆ ತಲುಪಿತು. ಅಂತಿಮ ದರ್ಶನ ಪಡೆಯುವಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಆರ್‍ಎಸ್‍ಎಸ್ ಮುಖಂಡರು ಸೇರಿ ಹಲವರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ವ್ಯವಸ್ಥೆ ಬಗ್ಗೆ ಕಿಡಿಕಾರಿದ ತಂದೆ

ವ್ಯವಸ್ಥೆ ಬಗ್ಗೆ ಕಿಡಿಕಾರಿದ ತಂದೆ

ಸಮಯಕ್ಕೆ ಸರಿಯಾಗಿ ಅಂತಿಮ ವಿಧಿವಿಧಾನ ಪೂರೈಸಿ ಮನೆಯ ಎದುರಿನ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ ತನಿಯಪ್ಪ ಮಡಿವಾಳ "ನನ್ನ ಕಣ್ಣೇದುರಿಗೆ ಬೆಳೆದ ಮಗನ ದೇಹಕ್ಕೆ ಕೊಳ್ಳಿ ಇಡುವ ಪರಿಸ್ಥಿತಿ ಬರುತ್ತದೆಂದು ಅಂದುಕೊಂಡಿರಲಿಲ್ಲ. ನನ್ನ ಮಗನ ಕೊಂದ ಆರೋಪಿಗಳ ಶಿಕ್ಷೆ ಬಗ್ಗೆ ಮಾತನಾಡಲ್ಲ. ಯಾಕಂದ್ರೆ ಪೊಲೀಸರು ನಿಜವಾದ ಕಟುಕರನ್ನು ಹಿಡಿಯುವುದಿಲ್ಲ. ಒಂದೊಮ್ಮೆ ಹಿಡಿದರೂ 6 ತಿಂಗಳಲ್ಲಿ ಮತ್ತೆ ಹೊರಬರುತ್ತಾರೆ" ಎಂದು ವ್ಯವಸ್ಥೆ ಮೇಲೆ ಕಿಡಿಕಾರಿದರು.

ಆಸೆಯಾಗಿಯೇ ಉಳಿದ ಅಂಗಾಂಗ ದಾನ

ಆಸೆಯಾಗಿಯೇ ಉಳಿದ ಅಂಗಾಂಗ ದಾನ

ಹಲ್ಲೆಗೊಳಗಾಗಿದ್ದ ಶರತ್‍ನನ್ನು ಉಳಿಸಲು ವೈದ್ಯರ ತಂಡ ಹರಸಾಹಸಪಟ್ಟಿತ್ತು. ಈ ವೇಳೆ ತಂದೆ ತನಿಯಪ್ಪ ಹಾಗೂ ಕುಟುಂಬಸ್ಥರು ಒಂದು ವೇಳೆ ತೀರಿಕೊಂಡರೆ ಅಂಗಾಂಗ ದಾನ ಮಾಡುವ ಆಸೆ ವ್ಯಕ್ತಪಡಿಸಿದರು. ಆದರೆ ಜು.7ರಂದು ಮರಣದ ಸುದ್ದಿಗೊತ್ತಾದ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣಗಳಿಂದ ಅಂಗಾಂಗ ದಾನ ಕೈಬಿಡಬೇಕಾಯಿತು. ಒಂದೊಮ್ಮೆ ಮೊದಲೇ ಗೊತ್ತಾಗುತ್ತಿದ್ದರೆ ಇನ್ನೊಬ್ಬರ ಬಾಳಿಗೆ ಆಸರೆಯಾಗುತ್ತಿದ್ದ ಎನ್ನುತ್ತಾರೆ ತಂದೆ.

ಸಂಜೆ ಉಳ್ಳಾಲದಲ್ಲಿ ತಲವಾರು ಇರಿತ

ಸಂಜೆ ಉಳ್ಳಾಲದಲ್ಲಿ ತಲವಾರು ಇರಿತ

ಕಲ್ಲು ತೂರಾಟದ ನಂತರದಲ್ಲಿ ಜಿಲ್ಲೆ ತಣ್ಣಗಾಗುತ್ತಿದ್ದಂತೆ ರಾತ್ರಿ ಹೊತ್ತಲ್ಲಿ ಉಳ್ಳಾಲದ ರಾಣಿಪುರ ಎಂಬಲ್ಲಿ ಯುವಕನ ಮೇಲೆ ತಲವಾರು ದಾಳಿ ನಡೆದಿದೆ. ಹಲ್ಲೆಗೊಳಗಾದವನನ್ನು ಚಿರಂಜೀವಿ (24) ಎಂದು ಗುರುತಿಸಲಾಗಿದೆ. ಕುತ್ತಾರಿನಲ್ಲಿ ಜಿಮ್ ಮುಗಿಸಿ ಮನೆ ಕಡೆ ಬೈಕಿನಲ್ಲಿ ತೆರಳುತ್ತಿದ್ದಾಗ ಕಪ್ಪುಬಣ್ಣದ ಸ್ಕಾರ್ಪಿಯೋದಲ್ಲಿ ಬಂದ ಆಗಂತುಕರು ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಚಿರಂಜೀವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾವಾಗ ಏನಾಗುತ್ತೋ ಬಲ್ಲವರು ಯಾರು

ಯಾವಾಗ ಏನಾಗುತ್ತೋ ಬಲ್ಲವರು ಯಾರು

ಸದ್ಯ ಸಂಪೂರ್ಣ ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಗಲಭೆ ನಡೆಯುವ ಎಲ್ಲಾ ಮುನ್ಸೂಚನೆಗಳು ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಭದ್ರತೆ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ಕಾವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.

English summary
Complete report of all cruel incidents that took place during the funeral procession of Sharath Madiwala by ‘Oneindia Kannada’. A complete package report from Mangaluru city to Bantwal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X