ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ.ಎನ್.ಕೆ. ತಿಂಗಳಾಯಗೆ 2016 'ಕರಾವಳಿ ಗೌರವ' ಪ್ರಶಸ್ತಿ

|
Google Oneindia Kannada News

ಮಂಗಳೂರು , ಜನವರಿ. 02 : ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಸಮಿತಿ ಪ್ರತಿವರ್ಷ ನೀಡುವ 'ಕರಾವಳಿ ಗೌರವ' ಪ್ರಶಸ್ತಿಯನ್ನು 2016ನೇ ಸಾಲಿನ ಪ್ರಶಸ್ತಿಗೆ ಆರ್ಥಿಕ ತಜ್ಞ ಡಾ.ಎನ್.ಕೆ. ತಿಂಗಳಾಯ ಅವರನ್ನು ಆಯ್ಕೆ ಮಾಡಿದೆ.

ಪಣಂಬೂರು ಬೀಚ್ ನಲ್ಲಿ ಭಾನುವಾರ ಸಂಜೆ ನಡೆದ ಕರಾವಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆರ್ಥಿಕ ತಜ್ಞ ಡಾ.ಎನ್.ಕೆ. ತಿಂಗಳಾಯರಿಗೆ 'ಕರಾವಳಿ ಗೌರವ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕರಾವಳಿ ಗೌರವ ಪ್ರಶಸ್ತಿಯನ್ನು ಡಾ.ಎನ್.ಕೆ. ತಿಂಗಳಾಯರಿಗೆ ಪ್ರದಾನ ಮಾಡಿದರು. ಸಿಂಡಿಕೇಟ್ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿರುವ ಡಾ.ಎನ್.ಕೆ. ತಿಂಗಳಾಯ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಹಾಗೂ ಆರ್ಥಿಕ ಕ್ಷೇತ್ರದ ಪ್ರಗತಿಗಾಗಿ ನೀಡಿದ ವಿಶಿಷ್ಟ ಕೊಡುಗೆಗಳನ್ನು ಪರಿಗಣಿಸಿ ಕರಾವಳಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

2016 Karavali honorary award to economic expert Dr. N.K Thingalaya

ಈ ಪ್ರಶಸ್ತಿಯನ್ನ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಸಮಿತಿ ಪ್ರತಿವರ್ಷ ನೀಡುತ್ತಾ ಬರುತ್ತಿದೆ.

ಡಾ.ಎನ್.ಕೆ. ತಿಂಗಳಾಯ ಯಾರು? : ಮಂಗಳೂರಿನ ಹೊಯಿಗೆ ಬಜಾರಿನ ಜ್ಞಾನೋದಯ ಸಮಾಜ ಮಂದಿರ ಬಳಿಯ ಮನೆಯಲ್ಲಿ ಜನಿಸಿದ ಡಾ. ಎನ್.ಕೆ.ತಿಂಗಳಾಯ, 1937ರಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಗಾಂಧೀಜಿಯವರ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಕುಟುಂಬದ ಹಿನ್ನೆಲೆಯುಳ್ಳವರು.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಿಂದ ಪದವಿ ಶಿಕ್ಷಣವನ್ನು, ಮುಂಬಯಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು, 1966 ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿ.ಹೆಚ್‍ ಡಿ ಪದವಿಯನ್ನು ಪಡೆದ ಡಾ. ತಿಂಗಳಾಯರು ಸಿಂಡಿಕೇಟ್ ಬ್ಯಾಂಕಿನ ಮಣಿಪಾಲದ ಪ್ರಧಾನ ಕಛೇರಿಯಲ್ಲಿ ಆರ್ಥಿಕ ಸಲಹೆಗಾರರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.

2016 Karavali honorary award to economic expert Dr. N.K Thingalaya

ಸಿಂಡಿಕೇಟ್ ಬ್ಯಾಂಕ್ ಹೊಸದಾಗಿ ಆರಂಭಿಸಿದ ಆರ್ಥಿಕ ಅಭಿವೃದ್ಧಿ ವಿಭಾಗದ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಿದ ಅವರು ಬ್ಯಾಂಕಿನ ಸಂಶೋಧನ ವಿಭಾಗಕ್ಕೆ ಹೊಸ ಆಯಾಮವನ್ನು ತಂದು ಕೊಟ್ಟರು. ಸಿಂಡಿಕೇಟ್ ಬ್ಯಾಂಕಿನ 'ಪಿಗ್ಮಿ ಇಕಾನಮಿಕ್ ರಿವ್ಯೂ' ಮಾಸ ಪತ್ರಿಕೆಯ ಸಂಪಾದಕರಾಗಿ 31 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ.

ಭಾರತ ಸರ್ಕಾರದಿಂದ 1993 ರಲ್ಲಿ ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹಾಗೂ 1995 ರಲ್ಲಿ ಬ್ಯಾಂಕಿನ ಅತ್ಯುನ್ನತ ಹುದ್ದೆಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಯುತರು 1997 ರಲ್ಲಿ ಕೆನರಾ ಬ್ಯಾಂಕಿನ ಕೇನ್ ಬ್ಯಾಂಕ್ ಇನ್ವೆಸ್ಟ್ ಮೆಂಟ್ ಮ್ಯಾನೇಜ್‍ ಮೆಂಟ್ ಸೇವೆಯ ಅಧ್ಯಕ್ಷರಾಗಿ ಆರು ವರ್ಷ ಸೇವೆ ಸಲ್ಲಿಸಿರುತ್ತಾರೆ.

ಪ್ರಸ್ತುತ ಡಾ. ಎನ್.ಕೆ ತಿಂಗಳಾಯರು ಜಸ್ಟಿಸ್ ಕೆ.ಎಸ್. ಹೆಗ್ಡೆ ಮ್ಯಾನೇಜ್‍ ಮೆಂಟ್ ಸಂಸ್ಥೆಯ ಎಮಿರೆಟಸ್ ಪ್ರೊಫೆಸರ್ ಮತ್ತು ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್‍ ನ ಆರ್ಥಿಕ ಅಭಿವೃದ್ಧಿ ಪ್ರತಿಷ್ಥಾನದ ಟ್ರಸ್ಟಿಯಾಗಿ ಕ್ರಿಯಾಶೀಲ ಸೇವೆ ಸಲ್ಲಿಸುತ್ತಿದ್ದಾರೆ.

2016 Karavali honorary award to economic expert Dr. N.K Thingalaya

ವಿಶ್ವ ಬ್ಯಾಂಕ್‍ ನ ಸಂಶೋಧನಾ ಯೋಜನೆಯ ಸಮಾಲೋಚಕರಾಗಿ, ಇಂಡೋ ಹಾಂಕಾಂಗ್ ಅಂತರಾಷ್ಟ್ರೀಯ ಫೈನಾನ್ಸ್ ಲಿಮಿಟೆಡ್, ನೆಗರಾ ಮಲೇಶಿಯಾದ ಸೆಮಿನಾರ್, ನೇಪಾಳ ಬ್ಯಾಂಕ್ ಕಟ್ಮಂಡು, ಕೇಟ್ ಟೌನ್‍ ನ ಆಪ್ರೋ ಏಶ್ಯನ್ ಬ್ಯಾಂಕಿಂಗ್ ಸ್ಕೂಲ್ ಇಂತಹ ಅನೇಕ ಪ್ರತಿಷ್ಠಿತ ಆರ್ಥಿಕ ಸಂಸ್ಥೆಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಭಾರತೀಯ ಬ್ಯಾಂಕ್ ಅಸೋಸಿಯೇಶನ್ ವತಿಯಿಂದ ಥಾಯ್ಲೆಂಡ್, ತೈವಾನ್, ದಕ್ಷಿಣ ಕೊರಿಯ, ಇಂಡೋನೇಷ್ಯಾ ಮತ್ತು ಮಲೇಶಿಯಾಗಳ ಆರ್ಥಿಕ ಸುಧಾರಣೆಗಳ ಪರಿಣಾಮಗಳ ಅಧ್ಯಯನದ ಸಮಿತಿಯಲ್ಲಿ ತಜ್ಞರಾಗಿ ಕಾರ್ಯನಿರ್ವಹಿಸಿರುತ್ತಾರೆ.

ಗ್ರಾಮೀಣ ಬ್ಯಾಂಕ್ ಮತ್ತು ಕೃಷಿ ಸಂಬಂಧೀ ಆರ್ಥಿಕತೆಯಲ್ಲಿ ವಿಶೇಷ ಪ್ರಾವೀಣ್ಯತೆ ಹೊಂದಿದವರಾಗಿದ್ದು ಭಾರತೀಯ ರಿಸರ್ವ್ ಬ್ಯಾಂಕ್ 1995-1997 ರಲ್ಲಿ ರಚಿಸಿದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ ಗಳ ತಜ್ಞರ ಸಮಿತಿಯ ಅಧ್ಯಕ್ಷರಾಗಿ, ಕೃಷಿ ಅಭಿವೃದ್ಧಿಯ ಅಂತಾರಾಷ್ಟ್ರೀಯ ನಿಧಿಯ ನಿಗಮ ಗ್ರಾಮೀಣ ಸಾಲ ಯೋಜನೆಯ ಪರಿಶೀಲನಾ ತಂಡದ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.

ಖ್ಯಾತ ಸಂಶೋಧಕ ಮತ್ತು ಬರಹಗಾರರಾಗಿ ಗುರುತಿಸಿಕೊಂಡಿರುವ ಡಾ. ಎನ್.ಕೆ ತಿಂಗಳಾಯರು ಕರ್ನಾಟಕದಲ್ಲಿ ಬ್ಯಾಂಕ್‍ ಗಳ ಹುಟ್ಟು ಮತ್ತು ಬೆಳವಣಿಗೆ (1986), ಊರಿಗೆ ಬಂತು ವೈಭವ (1999), ನಮ್ಮ ಗ್ರಾಮೀಣ ಬ್ಯಾಂಕ್‍ ಗಳು(2001) ಬ್ಯಾಂಕ್‍ ಗಳ ಆರ್ಥಿಕತೆ, ಗ್ರಾಮೀಣ ಬ್ಯಾಂಕ್‍ ಗಳು, ಕೃಷಿ ಕಾರ್ಮಿಕರು ಮತ್ತು ಬಡ ರೈತರು, ಕರಾವಳಿಯ ಕೃಷಿಯ ಅಧ್ಯಯನ, ಸಣ್ಣ ಬ್ಯಾಂಕ್‍ ಗಳ ಸವಾಲುಗಳು ಇಂತಹ ವಿಷಯಗಳ ಕುರಿತು ಸಾಕಷ್ಟು ಗ್ರಂಥಗಳನ್ನು ಹಾಗೂ ಲೇಖನಗಳನ್ನು ರಚಿಸಿದ್ದಾರೆ.

ಮಂಗಳೂರಿನ ಜನವಾಹಿನಿ ಕನ್ನಡ ದಿನಪತ್ರಿಕೆಯಲ್ಲಿ 'ಸುಲ್ತಾನ ಬತ್ತೇರಿಯಲ್ಲಿ' ಎಂಬ ಶೀರ್ಷಿಕೆಯಲ್ಲಿ 1999-2000 ದ ಅವಧಿಯಲ್ಲಿ ಸುಮಾರು ನೂರರಷ್ಟು ಅಂಕಣ ಬರಹಗಳನ್ನು ಬರೆದಿದ್ದಾರೆ.

ಇಂಗ್ಲೀಷ್ ನಲ್ಲಿ ಸಹ ಹಲವು ಕೃತಿಗಳನ್ನ ಸಹ ಬರೆದಿದ್ದಾರೆ. ಕಳೆದ ಹಲವು ದಶಕಗಳಿಂದ ಆರ್ಥಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಈ ಇಳಿವಯಸ್ಸಿನಲ್ಲೂ ಅಧ್ಯಯನ, ಸಂಶೋಧನೆ, ಮಾರ್ಗದರ್ಶನ, ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ.

ಗಾಂಧೀ ಆದರ್ಶದ ಜೀವಂತ ನಿದರ್ಶನವಾಗಿ ಕರಾವಳಿಯ ಹೆಮ್ಮೆಯ ಸಾಧಕರಾಗಿರುವ ಡಾ. ಎನ್.ಕೆ. ತಿಂಗಳಾಯರ ಸಾಧನೆಗಳನ್ನು ಪರಿಗಣಿಸಿ 2016-17ನೇ ಸಾಲಿನ ಪ್ರತಿಷ್ಠಿತ ಕರಾವಳಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

English summary
B Ramanath Rai, minister for forest, environment and ecology and DK district in-charge conferred Karavali Gaurava award 2016 on former chairman and managing director of Syndicate Bank Dr.N.K Thingalaya on Karavali Utsav occasion at Panambur beach on January 01.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X