ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಜೈಲಿನಲ್ಲಿ ಹತ್ಯೆಯಾದವರು ಯಾರು?

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ನವೆಂಬರ್ 02 : ಎರಡು ದಿನಗಳಿಂದ ಮಂಗಳೂರು ಜೈಲಿನಲ್ಲಿ ನಡೆಯುತ್ತಿದ್ದ ಸಣ್ಣ ಮಟ್ಟದ ಘರ್ಷಣೆ ಇಂದು ಇಬ್ಬರು ಕೈದಿಗಳ ಹತ್ಯೆಯಿಂದಾಗಿ ಅಂತ್ಯವಾಗಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಕುಖ್ಯಾತ ರೌಡಿ ಮಾಡೂರು ಯೂಸೂಬ್‌ನನ್ನು ಜೈಲಿನಲ್ಲಿಯೇ ಸೋಮವಾರ ಕೊಲೆ ಮಾಡಲಾಗಿದೆ.

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಬೆಳಗ್ಗೆ ನಡೆದ ಮಾರಾಮಾರಿಯಲ್ಲಿ ಇಬ್ಬರು ಕೈದಿಗಳು ಹತ್ಯೆಯಾಗಿದ್ದು, 6 ಮಂದಿ ಕೈದಿಗಳು ಗಾಯಗೊಂಡಿದ್ದಾರೆ. ತಲ್ವಾರ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು, ಜೈಲಿನೊಳಗೆ ತಲ್ವಾರ್ ಹೋಗಿದ್ದು ಎಲ್ಲಿಂದ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. [ಮಂಗಳೂರು ಜೈಲಿನಲ್ಲಿ ಮಾರಾಮಾರಿ]

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಕುಖ್ಯಾತ ರೌಡಿ ಮಾಡೂರು ಯೂಸೂಬ್ (42) ಹಾಗೂ ವಿಚಾರಣಾಧೀನ ಕೈದಿ ಗಣೇಶ್ ಶೆಟ್ಟಿ (47) ಕೊಲೆಯಾದವರು. ಭೂಗತ ಲೋಕದಲ್ಲಿ ಸಕ್ರಿಯನಾಗಿ ತೊಡಗಿಕೊಂಡಿರುವ ಪಾತಕಿ ವಿಕ್ಕಿ ಶೆಟ್ಟಿಯ ಸಹಚರ ರೌಡಿ ಶೀಟರ್ ಆಕಾಶ್ ಭವನ್ ಶರಣ್ ತಂಡ ಇಬ್ಬರನ್ನು ಹತ್ಯೆ ಮಾಡಿದೆ.

mangaluru jail

ಹೇಗೆ ನಡೆಯಿತು ಮಾರಾಮಾರಿ : ಕಳೆದ ಎರಡು ಮೂರು ದಿನಗಳಿಂದ ಎರಡು ತಂಡಗಳ ನಡುವೆ ಕ್ಷುಲ್ಲಕ ಕಾರಣಗಳಿಗಾಗಿ ನಡೆಯುತ್ತಿದ್ದ ಗಲಾಟೆ ಇಂದು ಕೊಲೆಯಲ್ಲಿ ಅಂತ್ಯಗೊಂಡಿದೆ. ಎರಡು ದಿನಗಳ ಹಿಂದೆ ಮಾಡೂರು ಯೂಸೂಫ್ ಗ್ಯಾಂಗ್ ಆಕಾಶ್ ಭವನ್ ಶರಣ್ ಮೇಲೆ ಹಲ್ಲೆ ನಡೆಸಿತ್ತು.

ಇದಕ್ಕೆ ಪ್ರತೀಕಾರವಾಗಿ ಸೋಮವಾರ ಬೆಳಗ್ಗೆ ಉಪಹಾರಕ್ಕೆ ಹೋಗುವ ಸಂದರ್ಭದಲ್ಲಿ ಜಗಳ ನಡೆದಿದ್ದು, ಗಲಾಟೆ ಮಿತಿಮೀರಿ ಹೋದಾಗ ಮಾರಕಾಸ್ತ್ರಗಳಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆಯಾದ ಕೈದಿ ಗಣೇಶ್ ಶೆಟ್ಟಿ ಇಬ್ಬರ ನಡುವಿನ ಜಗಳ ಬಿಡಿಸಲು ಹೋಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಾಂತರ ಮಾಡುವ ಆಲೋಚನೆ ಇತ್ತು : ಎರಡು ದಿನದ ಹಿಂದೆ ಗಲಾಟೆ ನಡೆದ ನಂತರ ಆಕಾಶ್ ಭವನ್ ಶರಣ್ ಅನ್ನು ಮೈಸೂರು ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಇಂದು ಬೆಳಗ್ಗೆ 11 ಗಂಟೆಗೆ ಮಾಡೂರು ಯೂಸೂಫ್ ಹಾಗೂ ಗಣೇಶ್ ಶೆಟ್ಟಿಯನ್ನು ಬಳ್ಳಾರಿ ಅಥವಾ ಬೆಳಗಾವಿಗೆ ಸ್ಥಳಾಂತರ ಮಾಡಲು ಜೈಲಿನ ಅಧಿಕಾರಿಗಳು ನಿರ್ಧರಿಸಿದ್ದರು.

ಆಯುಕ್ತರು ಹೇಳುವುದೇನು? : ಜೈಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರು, 'ಜೈಲಿನಲ್ಲಿ ಎರಡು ರೌಡಿ ತಂಡಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತ ಪಟ್ಟಿದ್ದಾರೆ. ಇದು ಯಾವುದೇ ರೀತಿಯ ಕೋಮು ಸಂಘರ್ಷದಿಂದ ಉಂಟಾದ ಕೊಲೆಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

jail

'ಜೈಲಿನೊಳಗೆ ತಲ್ವಾರ್ ಬಂದ ಬಗ್ಗೆ ಪರಿಶೀಲನೆ ಮಾಡಲಾಗುವುದು. ಕೆಲವು ದುಷ್ಕರ್ಮಿಗಳು ಮಾರಾಕಸ್ತ್ರಗಳನ್ನು ಹೊರಗಿನಿಂದ ಜೈಲಿನ ಗೋಡೆ ಮೇಲಿನಿಂದ ಎಸೆದಿರುವ ಸಾಧ್ಯತೆ ಕೂಡ ಇದ್ದು, ಈ ಬಗ್ಗೆ ಕೂಡ ತನಿಖೆ ನಡೆಸಲಾಗುವುದು' ಎಂದು ಮುರುಗನ್ ತಿಳಿಸಿದರು.

ಮಾಡೂರು ಯೂಸೂಫ್ : ಮಾಡೂರು ಯೂಸೂಫ್‌ನನ್ನು 2010ರಲ್ಲಿ ಇಂಟರ್‌ಪೋಲ್ ಸಹಾಯದೊಂದಿಗೆ ರಿಯಾದ್‌ನಲ್ಲಿ ಬಂಧಿಸಿ ಮಂಗಳೂರಿಗೆ ಕರೆತರಲಾಗಿತ್ತು. ಅಂದಿನಿಂದ ಈತ ಮಂಗಳೂರು ಜೈಲಿನಲ್ಲಿದ್ದ. ಈತನ ಮೇಲೆ ಬಿಜೆಪಿ ಮುಖಂಡ ಸುಖನಂದ್ ಶೆಟ್ಟಿ ಕೊಲೆ, ಕ್ಯಾಂಡಲ್ ಸಂತು ಕೊಲೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದವು.

ಗಣೇಶ್ ಶೆಟ್ಟಿ : ಶಾರ್ಪ್‌ಶೂಟರ್ ಆಗಿರುವ ಗಣೇಶ್ ಶೆಟ್ಟಿಯನ್ನು 1994ರಲ್ಲಿ ನಡೆದ ಮಹೇಂದ್ರ ಪ್ರತಾಪ್ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 2010ರಲ್ಲಿ ಬಂಧಿಸಲಾಗಿತ್ತು.

dakshina kannada
English summary
Two jail inmates were killed and 6 injured in a fight at Mangaluru district jail on Monday, November 2. The deceased are Madoor Yusuf and Ganesh Shetty. Injured inmates were admitted to Wenlock Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X