ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಪ್ರೀಂ ಕೋರ್ಟ್ ತೀರ್ಪಿಗೆ ಭುಗಿಲೆದ್ದ ಆಕ್ರೋಶ: ಮಂಡ್ಯ ಧಗಧಗ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 6:ಮಂಡ್ಯದ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ವಿವಿಧ ರೀತಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸಕ್ಕರೆನಾಡು ಅಕ್ಷರಶಃ ಕುದಿಯುತ್ತಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ರೈತ ಹಿತರಕ್ಷಣಾ ಸಮಿತಿ ಮಂಗಳವಾರ ಕರೆ ನೀಡಿದ್ದ ಮಂಡ್ಯ ಜಿಲ್ಲಾ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಸ್ಥಗಿತವಾಗಿತ್ತು. ಬೆಳ್ಳಂಬೆಳಗ್ಗೆ ಸಾರಿಗೆ ನಿಗಮದ ಬಸ್ಸುಗಳು, ಖಾಸಗಿ ಬಸ್ಸುಗಳು ವಿರಳವಾಗಿ ಸಂಚಾರ ನಡೆಸುತ್ತಿದ್ದವು.['ಬಸ್ಸು ಸುಟ್ಟರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ']

ಬೆಳಗ್ಗೆ 7ರ ಬಳಿಕ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಆಟೋರಿಕ್ಷಾ ಮತ್ತು ಟ್ಯಾಕ್ಸಿ ರಸ್ತೆಗೆ ಇಳಿಯಲಿಲ್ಲ. ಜೆ.ಸಿ. ವೃತ್ತದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಜಯ ಕರ್ನಾಟಕ ಸಂಘಟನೆಯ ವಿನಯ್ ಎಂಬ ಕಾರ್ಯಕರ್ತ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ತಕ್ಷಣ ಜಾಗೃತರಾದ ಪೊಲೀಸರು ಆತನನ್ನು ಎಳೆದೊಯ್ದು, ಅನಾಹುತವನ್ನು ತಪ್ಪಿಸಿದರು.

ಸರ್ಕಾರಿ ಕಚೇರಿಗೆ ಬೀಗ ಜಡಿದರು: ನಗರದ ಆರ್‍ಎಪಿಸಿಎಂಎಸ್ ಡಿಸಿಸಿ ಬ್ಯಾಂಕ್, ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಪ್ರತಿಭಟನಾನಿರತರು ಮುತ್ತಿಗೆ ಹಾಕಿದರು. ಬಳಿಕ ಕಚೇರಿ ಒಳಗೆ ನುಗ್ಗಿದ ಕಾರ್ಯಕರ್ತರು ಸಿಬ್ಬಂದಿ, ನೌಕರರನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಕಚೇರಿ ಬಾಗಿಲಿಗೆ ಬೀಗ ಜಡಿದು, ಪ್ರತಿಭಟನೆ ನಡೆಸಿದರು.

ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್. ಪೇಟೆ, ಪಾಂಡವಪುರ ತಾಲೂಕು ಕೇಂದ್ರಗಳಲ್ಲೂ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಬೂದನೂರು, ಹನಕೆರೆ, ಗೆಜ್ಜಲಗೆರೆ, ಮದ್ದೂರು, ಕೆ.ಎಂ.ದೊಡ್ಡಿ, ಮಳವಳ್ಳಿ ಹಾಡ್ಲಿ ವೃತ್ತ, ಕಾಗೇಪುರ, ಅರಕೆರೆ, ಇಂಡುವಾಳು, ಬೆಳಗೊಳ, ಕೆ.ಆರ್.ಎಸ್, ಕೆನ್ನಾಳು, ತಗ್ಗಹಳ್ಳಿ, ಚಿಕ್ಕಮಂಡ್ಯ, ಸಾತನೂರು, ಕಾರಸವಾಡಿ, ಪಣಕನಹಳ್ಳಿ, ಹುಲಿವಾನ, ದೊಡ್ಡಗರುಡನಹಳ್ಳಿ, ಮಾದರಹಳ್ಳಿ, ಸುಂಡಹಳ್ಳಿ, ಯಲಿಯೂರು, ಕೊತ್ತತ್ತಿ, ಬೇವಿನಹಳ್ಳಿಗಳಲ್ಲಿ ಪ್ರತಿಭಟಿಸಿದರು.[ಮಂಡ್ಯದಲ್ಲಿ ಪ್ರತಿಭಟನೆ: ಕಬಿನಿ ಜಲಾಶಯಕ್ಕೆ ಪೊಲೀಸ್ ಭದ್ರತೆ]

ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ರಜೆ ಘೋಷಿಸಿ, ಆದೇಶ ಹೊರಡಿಸಿದ್ದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ರೈತರ ಸಂಘದ ಮುಖಂಡರಾದ ಕೋಣಸಾಲೆ ನರಸರಾಜು, ಹನಿಯಂಬಾಡಿ ನಾಗರಾಜು, ರಾಮಕೃಷ್ಣೇಗೌಡ, ಶಂಭೂನಹಳ್ಳಿ ಸುರೇಶ್, ಕರವೇ ಎಚ್.ಡಿ.ಜಯರಾಂ, ಎಸ್. ನಾರಾಯಣ್, ಕೆ.ಟಿ.ಶಂಕರೇಗೌಡ, ಮಂಜುನಾಥ್, ಬಿಜೆಪಿಯ ಅರವಿಂದ್, ಸಿದ್ದರಾಜುಗೌಡ ಸೇರಿದಂತೆ ನೂರಾರು ರೈತರು, ವಿವಿಧ ಸಂಘಟನೆ ಮುಖಂಡರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

950 ಅರೆ ಸೇನಾ ಪಡೆಯ ಸಿಬ್ಬಂದಿ, ನಾಲ್ವರು ಡಿವೈಎಸ್ಪಿ, 8 ಸಿಪಿಐ, 13 ಪಿಎಸ್‍ಐ, 104 ಎಎಸ್‍ಐ, 1300 ಪೊಲೀಸ್ ಸಿಬ್ಬಂದಿ ಸೇರಿ 2400 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 4 ಕೆಎಸ್ ಆರ್ ಪಿ ಮೀಸಲು ಪಡೆಯ ತುಕಡಿಗಳು ಬೀಡು ಬಿಟ್ಟಿವೆ. 100 ಕ್ಷಿಪ್ರ ಪಡೆಗಳು ಆಗಮಿಸುವ ಸಾಧ್ಯತೆಗಳಿವೆ.[ರಸ್ತೆ ತಡೆದು, ಜಯಲಲಿತಾ ಪ್ರತಿಕೃತಿ ದಹಿಸಿ ಪ್ರತಿಭಟನೆ]

ಇಬ್ಬರು ಕಿಡಿಗೇಡಿಗಳ ಬಂಧನ: ಕಾವೇರಿ ಪ್ರತಿಭಟನೆ ಸಂದರ್ಭ ಶಾಂತಿ ಕದಡಲು ಯತ್ನಿಸಿದ ಇಬ್ಬರು ಕಿಡಿಗೇಡಿಗಳನ್ನು ಪಶ್ಚಿಮ ಠಾಣಾ ಪೊಲೀಸರು ಬಂಧಿಸಿದರು.

ಇಂಡುವಾಳುವಿನಲ್ಲಿ ರಸ್ತೆಯಲ್ಲೇ ಅಡುಗೆ

ಇಂಡುವಾಳುವಿನಲ್ಲಿ ರಸ್ತೆಯಲ್ಲೇ ಅಡುಗೆ

ಮಂಡ್ಯ: ಜಿಲ್ಲಾ ಬಂದ್ ಬೆಂಬಲಿಸಿದ ತಾಲೂಕಿನ ಇಂಡುವಾಳು ಗ್ರಾಮದ ರೈತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಧರಣಿ ಕುಳಿತು, ರಾಜ್ಯ ಸರ್ಕಾರ ಹಾಗೂ ಸುಪ್ರೀಂ ನಿರ್ದೇಶನವನ್ನು ಖಂಡಿಸಿದರು.

ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ಟೈರ್ ಹಾಗೂ ಸೌದೆಗೆ ಬೆಂಕಿ ಹಚ್ಚಿ, ಧರಣಿ ಕುಳಿತಿದ್ದರಿಂದ ಬೆಂಗಳೂರಿನಿಂದ ಮೈಸೂರು ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳು ಮಧ್ಯಾಹ್ನದ ವರೆಗೂ ನಿಂತಲ್ಲೇ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.

ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಧರಣಿಯಲ್ಲಿ ಭಾಗವಹಿಸಲು ಮಂಡ್ಯ ನಗರಕ್ಕೆ ಬರುತ್ತಿದ್ದರು. ಇದೇ ಸಮದಯಲ್ಲಿ ಇಂಡುವಾಳುವಿನಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸಿದ ಪುಟ್ಟಣ್ಣಯ್ಯ ಅವರನ್ನು ರೈತರು ಹಾಗೂ ಸಾರ್ವಜನಿಕರು ನಮಗೆ ನ್ಯಾಯ ದೊರಕಿಸಿಕೊಡಲು ಆಗದಿದ್ದರೆ ನೀವು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಪಟ್ಟುಹಿಡಿದರು. ಇದರಿಂದಾಗಿ ಪೀಕಲಾಟಕ್ಕೆ ಸಿಲುಕಿದ ಶಾಸಕ ಪುಟ್ಟಣ್ಣಯ್ಯ ಅವರು ರೈತರ ಪ್ರಶ್ನೆಗಳಿಗೆ ಉತ್ತರಿಸದೆ ಸ್ಥಳದಿಂದ ಪಲಾಯನಗೈದರು.

ರಮ್ಯಾ ಭಾವಚಿತ್ರಕ್ಕೆ ಬೆಂಕಿ:

ರಮ್ಯಾ ಭಾವಚಿತ್ರಕ್ಕೆ ಬೆಂಕಿ:

ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಮಾಜಿ ಸಂಸದೆ ರಮ್ಯಾ ಅವರು ಸುಪ್ರೀಂ ಕೋರ್ಟ್ ನಿರ್ದೇಶನದ ಬಗ್ಗೆ ಏನನ್ನೂ ಮಾತನಾಡದಿರುವುದು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು, ರಮ್ಯಾ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರ ಗುಂಪು ಕಚೇರಿಯಲ್ಲಿದ್ದ ರಾಜಕಾರಣಿಗಳ ಫ್ಲೆಕ್ಸ್ ಗಳನ್ನು ಹರಿದು ಹಾಕಿ, ಬೆಂಕಿ ಹಚ್ಚಿತು. ಜಾತ್ರೆ ರಾಣಿ ರಮ್ಯಾ, ಸಂತೆ ರಮ್ಯಾಗೆ ಧಿಕ್ಕಾರ ಎಂದು ಕೂಗಿತು.

ಕಾಲ್ಕಿತ್ತ ಮಹಿಳಾ ಸೇನಾ ಪಡೆ

ಕಾಲ್ಕಿತ್ತ ಮಹಿಳಾ ಸೇನಾ ಪಡೆ

ಮಹಿಳಾ ಪ್ರತಿಭಟನಾಕಾರರನ್ನು ಚದುರಿಸಲು ಸ್ಥಳಕ್ಕೆ ಧಾವಿಸಿದ ಮಹಿಳಾ ಸೇನಾ ಪಡೆ ವಿರುದ್ಧವೇ ಮಹಿಳೆಯರು ತಿರುಗಿಬಿದ್ದರು. ಜೆ.ಸಿ. ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಪ್ರತಿಭಟನೆಯನ್ನು ಹತ್ತಿಕ್ಕಲು ಮಹಿಳಾ ಸೇನಾ ಪಡೆ ಸಿಬ್ಬಂದಿ ಪ್ರಯತ್ನಿಸಿದರು. ಇದರಿಂದ ಕೆರಳಿದ ಮಹಿಳೆಯರು ಸೇನೆ ವಿರುದ್ಧವೇ ತಿರುಗಿಬಿದ್ದರು. ಇದರಿಂದಾಗಿ ದಿಕ್ಕು ತೋಚದ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತರು.

ರೈಲು ನಿಲ್ದಾಣಕ್ಕೆ ಮುತ್ತಿಗೆ

ರೈಲು ನಿಲ್ದಾಣಕ್ಕೆ ಮುತ್ತಿಗೆ

ಸುಪ್ರೀಂ ನಿರ್ದೇಶನವನ್ನು ಖಂಡಿಸಿ ರೈಲ್ವೆ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ, ಪ್ರತಿಭಟಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ರೈಲ್ವೆ ನಿಲ್ದಾಣದ ಒಳಗೆ ನುಗ್ಗಲು ಯತ್ನಿಸಿದಾಗ, ಅರೆಸೇನಾ ಪಡೆ ಹಾಗೂ ರೈಲ್ವೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.

ಬೃಂದಾವನ ಪ್ರವೇಶ ಇಲ್ಲ

ಬೃಂದಾವನ ಪ್ರವೇಶ ಇಲ್ಲ

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಸುಪ್ರೀಂ ನಿರ್ದೇಶನ ವಿರೋಧಿಸಿ ಮಂಡ್ಯ ಜಿಲ್ಲಾ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೃಷ್ಣರಾಜಸಾಗರ ಜಲಾಶಯದ ಬೃಂದಾವನಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರಿಗೆ ನಿಷೇಧ ವಿಧಿಸಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ.

ಧಿಕ್ಕಾರ ಧಿಕ್ಕಾರ

ಧಿಕ್ಕಾರ ಧಿಕ್ಕಾರ

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಧಾನ ಅಂಚೆ ಕಚೇರಿ, ಬಿಎಸ್‍ಎನ್‍ಎಲ್ ಕಚೇರಿ ಮುಂದೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಉರುಳಿದ ಕಾರ್ಯಕರ್ತರು

ಉರುಳಿದ ಕಾರ್ಯಕರ್ತರು

ಕಸ್ತೂರಿ ಜನಪರ ವೇದಿಕೆ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಉರುಳು ಸೇವೆ ನಡೆಸಿದರು. ಬಿಜೆಪಿ ಕಾರ್ಯಕರ್ತರು,

ಅರೆಬೆತ್ತಲೆ ಮೆರವಣಿಗೆ

ಅರೆಬೆತ್ತಲೆ ಮೆರವಣಿಗೆ

ಜಯಕರ್ನಾಟಕ, ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯ ಎಲ್ಲಿದೆ?

ನ್ಯಾಯ ಎಲ್ಲಿದೆ?

ಮಂಡ್ಯ ಯೂತ್ ಗ್ರೂಪ್ ನ ಪದಾಧಿಕಾರಿಗಳು ನ್ಯಾಯ ಎಲ್ಲಿದೆ ಎಂಬ ಘೋಷ ವಾಕ್ಯದಡಿ ನ್ಯಾಯ ದೇವತೆಯ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ಅಣಕ ಮಾಡಿದರು.

ಪೊಲೀಸ್ ಬಂದೋಬಸ್ತ್

ಪೊಲೀಸ್ ಬಂದೋಬಸ್ತ್

ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ಜಿಲ್ಲೆಯಾದ್ಯಂತ ಆಕ್ರೋಶ, ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಟೈರ್ ಗೆ ಬೆಂಕಿ

ಟೈರ್ ಗೆ ಬೆಂಕಿ

ನಗರದ ಜೆಸಿ ವೃತ್ತದಲ್ಲಿ ಪ್ರತಿಭಟಿಸುತ್ತಿದ್ದ ವಿವಿಧ ಸಂಘಟನೆ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಕಟೌಟ್ ಗಳಿಗೆ ಬೆಂಕಿ

ಕಟೌಟ್ ಗಳಿಗೆ ಬೆಂಕಿ

ಆಕ್ರೋಶಗೊಂಡ ಪ್ರತಿಭಟನಾನಿರತರು ಸಂಜಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ ಹ್ಯಾಪಿ ಬರ್ತ್ ಡೇ ಸಿನಿಮಾಕ್ಕೆ ಹಾಕಿದ್ದ ಅಂಬರೀಶ್, ನಾಯಕ ನಟ ಸಚಿನ್ ಕಟೌಟ್ ಗಳನ್ನು ಕಿತ್ತು ಬೆಂಕಿ ಹಚ್ಚಿದರು.

ಫ್ಲೆಕ್ಸ್ ಗೆ ಬೆಂಕಿ

ಫ್ಲೆಕ್ಸ್ ಗೆ ಬೆಂಕಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾಗ್ವಾರ್ ಚಿತ್ರದ ಫ್ಲೆಕ್ಸ್ ಗಳನ್ನು ಕಿತ್ತು ಬೆಂಕಿ ಹಚ್ಚಿ, ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಜಯಲಲಿತಾ ಪ್ರತಿಕೃತಿಗೆ ಬೆಂಕಿ

ಜಯಲಲಿತಾ ಪ್ರತಿಕೃತಿಗೆ ಬೆಂಕಿ

ಕೆ.ಆರ್.ಎಸ್.ನಿಂದ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರತಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಭಾವಚಿತ್ರಗಳನ್ನು ಪ್ರತಿಭಟನಾಕಾರು ಸುಟ್ಟು ಹಾಕಿದರು.

English summary
Mandya district bandh turned into voilence. People angry on Supreme court direction on cauvery issue. Politicians flex, cut outs targeted by protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X