ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಲಕ್ಷ್ಮಿಸಾಗರದಲ್ಲಿ ಕತ್ತೆಗಳ ಮದುವೆ, ಭರ್ಜರಿ ಮೆರವಣಿಗೆ

ಮಳೆ ಬರಲಿ ಎಂಬ ಕಾರಣಕ್ಕೆ ದೇವರ ಮೊರೆ ಹೋಗುವುದು ಮಾಮೂಲಾಗಿ ಕಂಡುಬರುತ್ತದೆ. ಮಂಡ್ಯ ಜಿಲ್ಲೆಯ ಲಕ್ಷಿಸಾಗರದ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿ, ಮಳೆಗಾಗಿ ಪ್ರಾರ್ಥಿಸಿದ್ದಾರೆ. ಈ ರೀತಿ ಮಾಡುವುದು ಕೂಡ ಹೊಸದೇನಲ್ಲ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಏಪ್ರಿಲ್ 8: ಈಗಾಗಲೇ ಜಿಲ್ಲೆಯ ಕೆಲವೆಡೆ ಮಳೆ ಸುರಿದಿದ್ದರೂ ಪಾಂಡವಪುರ ವ್ಯಾಪ್ತಿಯಲ್ಲಿ ಮಳೆ ಬಾರದೆ ಇರುವುದರಿಂದ ಬರ ತಾಂಡವವಾಡುತ್ತಿದೆ. ಮುಗಿಲಿನತ್ತ ದೃಷ್ಟಿ ನೆಟ್ಟಿರುವ ರೈತರು ಯಾವಾಗ ಮಳೆ ಬರುತ್ತೋ ಎಂದು ಕಾಯುತ್ತಿದ್ದಾರೆ.

ಒಂದೆಡೆ ಜನರು ಮಳೆಗಾಗಿ ದೇವರ ಮೊರೆ ಹೋಗಿದ್ದರೆ, ಪಾಂಡವಪುರ ತಾಲೂಕಿನ ಲಕ್ಷ್ಮಿಸಾಗರದ ಗ್ರಾಮಸ್ಥರು ಕತ್ತೆಗೆ ಮದುವೆ ಮಾಡಿದರೆ ಮಳೆ ಬರಬಹುದೇನೋ ಎಂಬ ನಂಬಿಕೆಯಿಂದ ಗ್ರಾಮದಲ್ಲಿದ್ದ ಕತ್ತೆಗಳಿಗೆ ಮದುವೆ ಮಾಡಿ, ಅವುಗಳ ಮೆರವಣಿಗೆ ನಡೆಸಿದ್ದಾರೆ.[ಹಾಸನದಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ಇಬ್ಬರು ಬಲಿ]

Donkey marriage done by villagers praying for rain

ಮಳೆ ಬಾರದಿದ್ದಾಗ ಗ್ರಾಮದಲ್ಲಿ ಕಪ್ಪೆಗಳಿಗೆ, ಕತ್ತೆಗಳಿಗೆ ಮದುವೆ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ. ಇದು ನಂಬಿಕೆಯೋ, ಮೂಢನಂಬಿಕೆಯೋ ಎಂಬುದನ್ನು ಆಚೆಗಿಟ್ಟು ನೋಡಿದರೆ, ಗ್ರಾಮದ ಜನ ಮಳೆಗಾಗಿ ಏನೆಲ್ಲ ಮಾಡಲು ಸಿದ್ಧರಾಗಿದ್ದಾರೆ ಎಂಬುದು ಮನದಟ್ಟಾಗುತ್ತದೆ. ಹಿಂದೆ ಇಂತಹ ಆಚರಣೆ ಮಾಡಿದ್ದರಿಂದ ಕಾಕತಾಳೀಯ ಎಂಬಂತೆ ಊರಲ್ಲಿ ಮಳೆ ಬಂದಿದ್ದರಿಂದ ಇಂದಿಗೂ ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ಲಕ್ಷ್ಮಿಸಾಗರ ಗ್ರಾಮಸ್ಥರು ಶುಕ್ರವಾರ ಅಲ್ಲಿನ ಹೊಸ ಬಡಾವಣೆಯ ಆಂಜನೇಯ ದೇವಸ್ಥಾನಕ್ಕೆ ತೆರಳಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಿರಿಯರ ಸಮ್ಮುಖದಲ್ಲಿ ಸಂಜೆ 5.15ರ ಶುಭಲಗ್ನದಲ್ಲಿ ಕತ್ತೆಗಳಿಗೆ ಮದುವೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.[ಭೂಮಿ ಬರಿದು ಮಾಡಿದ ನಮಗೆ ಕೊನೆಗೆ ಉಳಿದಿದ್ದು ಭೀಕರ ಬಿಸಿಲು...]

ಬಳಿಕ ಎಲ್ಲರೂ ಒಂದೆಡೆ ಸೇರಿ ಗ್ರಾಮದ ಪಂಚಾಯಿತಿ ಆವರಣದಿಂದ ಎರಡು ಕತ್ತೆಗಳೊಂದಿಗೆ ಪ್ರಮುಖ ಬೀದಿಗಳಲ್ಲೂ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಪ್ರತಿ ಮನೆಯಲ್ಲೂ ಮಹಿಳೆಯರು ಕತ್ತೆಗಳಿಗೆ ಆರತಿ ಎತ್ತಿ, ಪೂಜೆ ಸಲ್ಲಿಸಿದರು. ದಾರಿಯುದ್ದಕ್ಕೂ ತಮಟೆ ಬಡಿಯುತ್ತಾ, ಕುಣಿಯುತ್ತಾ ಯುವಕರು, ಮಕ್ಕಳು ದೇವಾಲಯದ ಬಳಿ ಮೆರವಣಿಗೆ ಕೊನೆ ಮಾಡಿದರು.

ಈ ವೇಳೆ ದೇಗುಲದ ಪೂಜಾರಿ ಅರಿಶಿಣದ ಕೊನೆಯ ತಾಳಿಯನ್ನು ಗ್ರಾಮದ ವ್ಯಕ್ತಿಯೊಬ್ಬನಿಂದ ಕತ್ತೆಗೆ ಕಟ್ಟಿಸುವ ಮೂಲಕ ಮದುವೆ ಮಾಡಿಸಿದರು. ಕತ್ತೆಗಳ ಮದುವೆ ನಡೆಯುವ ಸಂದರ್ಭದಲ್ಲಿ ಮಹಿಳೆಯರು ಸೋಬಾನೆ ಪದ ಹಾಡಿ ಗಮನ ಸೆಳೆದರು. ಗ್ರಾಮಸ್ಥರು ಸಂಭ್ರಮದಿಂದ ಮದುವೆ ಮಾಡಿಸಿದ್ದು, ಇನ್ನಾದರೂ ವರುಣ ಒಲಿಯುತ್ತಾನಾ ಎಂಬುದನ್ನು ಕಾದು ನೋಡುತ್ತಿದ್ದಾರೆ.

English summary
Donkey marriage done by Mandya district, Lakshmisagara villagers praying for rain on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X