ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿತ್ತಾಡುತ್ತಿರುವ ಬಿಜೆಪಿ ನಾಯಕರಿಗೆ ನೊಂದ ಕಾರ್ಯಕರ್ತನ ಮುಕ್ತಪತ್ರ

ತಮ್ಮ ಸಮಸ್ಯೆಯನ್ನೇ ಕುಳಿತು ಪರಿಹರಿಸಿಕೊಳ್ಳದವರು ರಾಜ್ಯದ ಸಮಸ್ಯೆಯನ್ನು ಹೇಗೆ ಪರಿಹರಿಸಿಯಾರು ಎಂಬ ಪ್ರಶ್ನೆ ಜನತೆಯ ಮನದಲ್ಲಿ ಬಲವಾಗಿ ಬೇರೂರುವುದಕ್ಕೆ ಮುನ್ನ ಎಚ್ಚರಗೊಳ್ಳಿ ಎಂದು ಮಂಡ್ಯದ ಬಿಜೆಪಿ ಕಾರ್ಯಕರ್ತ ಪತ್ರ ಬರೆದಿದ್ದಾರೆ.

By ಸಿ.ಟಿ ಮಂಜುನಾಥ್, ಮಂಡ್ಯ
|
Google Oneindia Kannada News

ಕರ್ನಾಟಕದ ಭಾರತೀಯ ಜನತಾ ಪಕ್ಷ ಗೊಂದಲದ ಗೂಡಾಗಿದೆ. ಇಬ್ಬರು ಉಚ್ಚ ನಾಯಕರಾದ ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ಅವರ ಕಿತ್ತಾಟದಿಂದ ಪಕ್ಷಕ್ಕಾಗಿ ಅಹರ್ನಿಶಿ ದುಡಿಯುವ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಇಂಥ ಸಂದರ್ಭದಲ್ಲಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡು ಮಂಡ್ಯದ ಕಾರ್ಯಕರ್ತರೊಬ್ಬರು ನೊಂದು ಮುಕ್ತಪತ್ರ ಬರೆದಿದ್ದಾರೆ. ಸಾಧ್ಯವಾದರೆ ನಾಯಕರು ಓದಲಿ ಮತ್ತು ತಿದ್ದಿಕೊಳ್ಳಲಿ.

ಮಾನ್ಯರೇ,

ನಾನೊಬ್ಬ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತ. ಕಳೆದೊಂದು ದಶಕದಿಂದ ಪಕ್ಷದ ಕಾರ್ಯವನ್ನು ನನ್ನ ಇತಿಮಿತಿಯಲ್ಲಿ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಪಕ್ಷದಲ್ಲಿ ದೊಡ್ಡ ಸ್ಥಾನಮಾನವೇನೂ ಇಲ್ಲ. ನಾನು ಬಯಸಿಯೂ ಇಲ್ಲ. ಚುನಾವಣೆಗೆ ಟಿಕೆಟ್ ಸಹ ಕೇಳಿಲ್ಲ.

An open letter to BJP leaders by worker in Mandya

ಆದರೆ ನೀವುಗಳು ಕೊಟ್ಟ ಕಾರ್ಯಕ್ರಮಗಳಲ್ಲಿ, ಹೋರಾಟಗಳಲ್ಲಿ ತಪ್ಪದೇ ಭಾಗವಹಿಸಿದ್ದೇನೆ. ಪಕ್ಷದ ಸದಸ್ಯತಾ ನೊಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ಚುನಾವಣೆಗಳಲ್ಲಿ ಪೋಸ್ಟರ್ ಅಂಟಿಸಿದ್ದೇನೆ. ಮನೆ-ಮನೆಗೆ ಹೋಗಿ ಮತಭಿಕ್ಷೆ ಬೇಡಿದ್ದೇನೆ. ಬೇರೆ ಪಾರ್ಟಿಗಳ ಕಾರ್ಯಕರ್ತರು ನಮ್ಮ ನಾಯಕರನ್ನು ಬೈದಾಗ ಜಗಳವಾಡಿದ್ದೇನೆ. ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಾಗ ನಾನೇ ಗೆದ್ದಂತೆ ಹಿಗ್ಗಿದ್ದೇನೆ. ಸೋತಾಗ ವಾಜಪೇಯಿಯವರು ನಮಗೆ ಕಲಿಸಿರುವಂತೆ 'ನ ದೈನ್ಯಂ, ನ ಪಲಾಯನಂ' (ದೈನ್ಯತೆಯನ್ನೂ ತೋರುವುದಿಲ್ಲ, ರಣರಂಗದಿಂದ ಪಲಾಯನವೂ ಮಾಡುವುದಿಲ್ಲ) ಎಂದುಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ತೀರ್ಮಾನ ಮಾಡಿ ಮತ್ತೆ ಕೆಲಸ ಮಾಡಿದ್ದೇನೆ. ನನ್ನಂತೆಯೇ ನಮ್ಮ ಪಕ್ಷದ ಹಲವಾರು ಕಾರ್ಯಕರ್ತರು.[ಯಡಿಯೂರಪ್ಪನವರೇ ಹೆಣ್ಣಿನ ಮಾತನ್ನು ಕೇಳಿದ್ರೆ ಸರ್ವನಾಶವಾಗ್ತೀರಾ]

ಕೆಲವು ಕ್ಷೇತ್ರಗಳಲ್ಲಂತೂ ಗೆಲುವು ಸಿಕ್ಕಿಲ್ಲ. ಆದರೆ ನಮ್ಮ ಕಾರ್ಯಕರ್ತರ ಉತ್ಸಾಹಕ್ಕೆ ಅದೆಂದಿಗೂ ಅಡ್ಡಿಯಾಗಿಲ್ಲ. 2007ರಲ್ಲಿ ಜನತಾ ದಳದವರ ವಚನಭ್ರಷ್ಟತೆಯಿಂದ ನಮ್ಮ ಪಕ್ಷ ಅಧಿಕಾರವಂಚಿತವಾದಾಗ ಕಣ್ಣೀರು ಹಾಕಿದ್ದೇನೆ. 2008ರಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಾಗ ವಿಧಾನಸೌಧದ ಎದುರಿಗೆ ದೂರದಲ್ಲಿ ನಿಂತು ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡು ಆನಂದದ ಕಣ್ಣೀರು ಸುರಿಸಿದ್ದೇನೆ.

ಆ ಅವಧಿಯಲ್ಲಿ ಎಂದಿಗೂ ನನ್ನ ಸ್ವಂತ ಕೆಲಸಕ್ಕೆ ನನ್ನ ಶಾಸಕರ ಬಳಿಗೆ, ಸಂಸದರ ಮನೆಗೆ ಹೋಗಿಲ್ಲ. ಯಾವುದೇ ಲಾಭವನ್ನು ನನ್ನ ಸ್ವಂತಕ್ಕೆ ಪಡೆದಿಲ್ಲ. ಮತ್ತೆ ನಮ್ಮ ಸರ್ಕಾರದ ಸಮಯದಲ್ಲಿ ತಾವು ಕೊಟ್ಟ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಶ್ರಮ ವಹಿಸಿದ್ದೇನೆ. ಅದೇ ಸಮಯದಲ್ಲಿ ಸರ್ಕಾರವನ್ನು ದುರ್ಬಲಗೊಳಿಸಲು ನಡೆದ ರೆಸಾರ್ಟ್ ರಾಜಕೀಯವನ್ನು ಕಂಡು ಮಮ್ಮಲ ಮರುಗಿದ್ದೇನೆ.[ಬಿಜೆಪಿ ಅಸಮಾಧಾನ ಸ್ಫೋಟ, ಬಿಎಸ್ವೈ ಬಗ್ಗೆ 2 ಪುಟಗಳ ಪತ್ರ ಬರೆದ ನಾಯಕರು]

ಇಷ್ಟೆಲ್ಲ ಹೇಳಿದ ಮೇಲೆ ನಾನೆಂತಹ ಕಾರ್ಯಕರ್ತನೆಂದು ನಿಮಗೆ ಗೊತ್ತಾಗಿರಬಹುದು. ನನ್ನಂತಹ ಸಾವಿರಾರು ಕಾರ್ಯಕರ್ತರು ರಾಜ್ಯಾದ್ಯಂತ ಇದ್ದಾರೆ. ನಮ್ಮಂತಹವರನ್ನು ಮನದಲ್ಲಿ ಇಟ್ಟುಕೊಂಡೇ ಪ್ರಾಯಶಃ ಯಡಿಯೂರಪ್ಪನವರು ದೇವದುರ್ಲಭ ಕಾರ್ಯಕರ್ತರೆಂದು ವರ್ಣಿಸಿರುವುದೇನೋ? ಆದರೆ ಇಂದು ನನ್ನಂತಹ ಕಾರ್ಯಕರ್ತನ ಪರಿಸ್ಥಿತಿ-ಮನಸ್ಥಿತಿ ಹೇಗಿದೆ ಎಂಬುದನ್ನು ಒಂದು ಘಳಿಗೆ ಯೋಚಿಸುವ ಉದಾರತೆ ತೋರುವಿರಾ? ನಮ್ಮ ಮಂಡ್ಯದಲ್ಲಿ ಇಂದು ನಾನು ನಗೆಪಾಟಲಿನ ವಸ್ತುವಾಗಿ ಬಿಟ್ಟಿದ್ದೇನೆ. ಪ್ರತಿ ಬೆಳಗ್ಗೆ ಸಿಗುವ ನಮ್ಮೂರಿನ ರಾಜಕೀಯ ಪಂಡಿತರೆಲ್ಲ ಹಿಂದಿನ ದಿನದ ಟಿವಿ ನ್ಯೂಸ್ ನೋಡಿ ಬಳಿಕ ಎಸೆಯುವ ತೀಕ್ಷ್ಣ ಬಾಣಗಳಿಗೆ ನಾನು ಜಝುರಿತನಾಗುತ್ತೇನೆ. ನಾನು ಬಿಜೆಪಿ ಕಾರ್ಯಕರ್ತನಾಗಿ ಅಪಹಾಸ್ಯದ ಸರಕಾಗಿದ್ದೇನೆ.

An open letter to BJP leaders by worker in Mandya

ಅಷ್ಟೇ ಅಲ್ಲ, ರಾಜ್ಯದ ಬಿಜೆಪಿ ವಿದ್ಯಮಾನ ಕುರಿತು ನನ್ನನ್ನು ಅವಹೇಳನ ಮಾಡುವವರೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು! ಮೊನ್ನೆ ನಮ್ಮೂರಿನ ಹಿರಿಯ ಕಾಂಗ್ರೆಸ್ ನಾಯಕರು ಸಿಕ್ಕಿ ಹೇಳಿದ್ದೇನು ಗೊತ್ತೇ?[ಬಿಜೆಪಿಯಲ್ಲಿ ಮುಗಿಯದ ರಗಳೆ: ಬಿಎಸ್ವೈ ವಿರುದ್ದ ಹೊಸ ಹೋರಾಟಕ್ಕೆ ನಾಂದಿ]

"ನೋಡಪ್ಪಾ, ನಾನು ರಾಜಕೀಯವಾಗಿ ಕಟ್ಟುನಿಟ್ಟಾಗಿ ಕಾಂಗ್ರೆಸ್ ಪಕ್ಷದವನು. ನಮ್ಮ ಕುಟುಂಬವೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ. ಆದರೆ ನಾನು ವೈಯಕ್ತಿಕವಾಗಿ ನರೇಂದ್ರ ಮೋದಿಯವರ ಅಭಿಮಾನಿ. ಅವರು ಮಾಡುತ್ತಿರುವ ಪ್ರತಿಯೊಂದು ಕಾರ್ಯದಿಂದ ದೇಶಕ್ಕೆ ಹಿಂದೆಂದಿಗಿಂತ ಹೆಚ್ಚು ಶಕ್ತಿ-ಗೌರವ ಬರುತ್ತಿದೆ ಎಂಬುದು ನನ್ನ ಬಲವಾದ ಅನಿಸಿಕೆ. ಅಂತಹ ಎತ್ತರದ ನಾಯಕನನ್ನು ಹೊಂದಿರುವ ನಿಮ್ಮ ಪಕ್ಷ ರಾಜ್ಯದಲ್ಲಿ ಹೋಗುತ್ತಿರುವ ದಿಕ್ಕೇನು? ನಮ್ಮ ಕಾಂಗ್ರೆಸ್ ಪಕ್ಷದ ನಾಯಕರಿಗೆ ನಿಮ್ಮ ಪಕ್ಷದ ವಿದ್ಯಮಾನಗಳನ್ನು ಕಂಡು ಹಾಲು ಕುಡಿದಷ್ಟು ಸಂತೋಷವಾಗಿದೆ. ರಾಜ್ಯದಲ್ಲಿ ಕೆಟ್ಟ ಆಡಳಿತವಿದ್ದರೂ ಅದನ್ನು ಜನ ಮರೆಯುವಂತೆ ಮಾಡುತ್ತಿರುವುದು ನಿಮ್ಮ ಪಕ್ಷದ ನಾಯಕರ ನಡವಳಿಕೆ" ಎಂದು ನೋವಿನಿಂದ ಮೂದಲಿಸಿದಾಗ ನನ್ನ ಸ್ಥಿತಿ ಹೇಗಾಗಿರಬಹುದು ಒಂದು ಕ್ಷಣ ಯೋಚಿಸಿ.

ನಾಯಕರಾದ ನಿಮಗೆ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಎಂತಹ ಪ್ರಶ್ನೆ ಕೇಳಿದರೂ ಅದರಿಂದ ತಪ್ಪಿಸಿಕೊಳ್ಳುವ ಜಾಣ್ಮೆ ಕರಗತವಾಗಿರುತ್ತದೆ. ಅದಕ್ಕೇ ಅಲ್ಲವೇ ನಿಮ್ಮನ್ನು ನಾಯಕರು ಎಂದು ಕರೆಯುವುದು! ಆದರೆ ನಮ್ಮಂತಹ ಸಾಧಾರಣ ಕಾರ್ಯಕರ್ತರಿಗೆ ಆ ರೀತಿಯ ಜಾಣ್ಮೆ ಪ್ರದರ್ಶಿಸಿ ತಪ್ಪಿಸಿಕೊಳ್ಳುವ ಸೌಭಾಗ್ಯವಿಲ್ಲ. ಮತ್ತೆ-ಮತ್ತೆ ಅವಮಾನಕ್ಕೀಡಾಗುವುದು ನಮ್ಮ ದೌರ್ಭಾಗ್ಯವಾಗಿಬಿಟ್ಟಿದೆ. 2013ರ ಚುನಾವಣೆಯಲ್ಲಿ ನಮ್ಮ ನಡುವಿನ ಜಗಳದ ಸಂಪೂರ್ಣ ಲಾಭ ಪಡೆದ ಕಾಂಗ್ರೆಸ್ ಕೆಟ್ಟ ಆಡಳಿತದ ಮೂಲಕ ಜನಹಿತವನ್ನು ಮರೆತಿರುವುದಕ್ಕೆ ಮುಖ್ಯ ಕಾರಣ ನಮ್ಮ ಪಕ್ಷವೇ. ಈಗಲೂ ಜನ ಹೇಳುತ್ತಾರೆ, ನಿಮ್ಮ ನಡುವೆ ಸಾಮರಸ್ಯವಿದ್ದಿದ್ದರೆ ರಾಜ್ಯಕ್ಕೆ ಇಂತಹ ಕೆಟ್ಟ ಗತಿ ಬರುತ್ತಿರಲಿಲ್ಲವೆಂದು.[ಬ್ರಿಗೇಡ್: ಯಡ್ಡಿ-ಈಶು ಜಗಳ, ಬಿಜೆಪಿ ಸದಸ್ಯರು ವಿಲವಿಲ]

An open letter to BJP leaders by worker in Mandya

ಕೆಜೆಪಿ ಮತ್ತೆ ಬಿಜೆಪಿ ಜೊತೆ ಬಂದು ಸೇರಿದಾಗ ನನ್ನಂತಹ ಕಾರ್ಯಕರ್ತರಿಗೆ ಖುಷಿಯೋ ಖುಷಿ. ಇದರ ಪರಿಣಾಮ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತು. ಕಳೆದ ವರ್ಷ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯಂದು ರಾಜ್ಯ ಬಿಜೆಪಿ ಕಾರ್ಯಕರ್ತರಿಗೆ ಡಬಲ್ ಧಮಾಕಾ. ಯಡಿಯೂರಪ್ಪನವರು ಅಂದೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅಂದು ಬೆಂಗಳೂರು ಅರಮನೆಯ ಆವರಣದಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ನಾನೂ ನಮ್ಮ ಮಂಡ್ಯದ ಉಳಿದೆಲ್ಲ ಕಾರ್ಯಕರ್ತರ ಜೊತೆ ಬಂದು ಭಾಗಿಯಾದೆ.

ಅಂದಹಾಗೆ, ಓರ್ವ ಕಾರ್ಯಕರ್ತನಿಗೆ ದೂರದ ಊರಿನಿಂದ ಬೆಂಗಳೂರಿಗೆ ಇಂತಹ ಕಾರ್ಯಕ್ರಮಕ್ಕೆ ಬರಲು ಅದೆಷ್ಟು ಹಣ, ಶ್ರಮ ಖರ್ಚಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಆದರೆ ಒಮ್ಮೆಯೂ ಈ ಕಾರ್ಯಕರ್ತರು ಗೊಣಗುವುದಿಲ್ಲ. ತಮ್ಮ ಕಷ್ಟ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಯಾಕೆಂದರೆ ಇದು ನಮ್ಮ ಕಾರ್ಯಕ್ರಮವೆಂದು ಮನದಾಳದಿಂದ ಒಪ್ಪಿಕೊಂಡಿದ್ದೇವಲ್ಲವೇ?

ಏಪ್ರಿಲ್ 14ರಂದು ನಮಗೆ ಚೈತನ್ಯ ಕೊಟ್ಟ ಆ ಕಾರ್ಯಕ್ರಮದ ನಂತರ ನಾವು (ಸಾಮಾನ್ಯ ಕಾರ್ಯಕರ್ತರು) ಎಷ್ಟು ಎದೆ ಉಬ್ಬಿಸಿ ನಮ್ಮೂರುಗಳಲ್ಲಿ ನಡೆದಿದ್ದೆವು ಗೊತ್ತೆ? ಅದೇ ಹೊತ್ತಿಗೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಕೆಟ್ಟದಾಗಿದೆ ಅಂತ ಜನ ಹೇಳುವುದಕ್ಕೆ ಶುರುಮಾಡಿ, ಮುಂದಿನ ಸರ್ಕಾರ ಬಿಜೆಪಿಯದು ಎನ್ನತೊಡಗಿದರು. ಅದಕ್ಕೆ ಪೂರಕವಾಗಿ ನಮ್ಮ ನಾಯಕರು ಕೊಟ್ಟ 'ಮಿಷನ್ 150' ಕರೆಯು ನಮಗೆ ವಿಪರೀತ ಶಕ್ತಿ ತಂದೊದಗಿಸಿತು.

An open letter to BJP leaders by worker in Mandya

ಇತ್ತೀಚಿನ ದಿನಗಳಲ್ಲಿ ನಾಯಕರುಗಳ ನಡುವೆ ವಿವಾದಗಳು ಆರಂಭಗೊಂಡಿದ್ದು ನಮ್ಮನ್ನೆಲ್ಲ ಮಂಕು ಮಾಡಿದೆ. ಏಕೋ, ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಆವರಿಸತೊಡಗಿದೆ. 'ದೇಶ ಮೊದಲು, ಪಕ್ಷ ನಂತರ, ಸ್ವಹಿತ ಕೊನೆಯದು' ಎಂದು ನಮಗೆಲ್ಲ ತಿಳಿಹೇಳಿದ್ದು ನೀವೇ ಅಲ್ಲವೇ? ಆದರೆ ನಮಗೆ ತಿಳಿಹೇಳಿದವರಿಗೇ ಈ ಶ್ರೇಷ್ಠ ಘೊಷಣೆಯ ಕುರಿತು ಪ್ರಾಮಾಣಿಕ ನಂಬಿಕೆ ಇತ್ತೇ? ಎಂಬ ಸಂಶಯ ಮೂಡಲು ಆರಂಭವಾಗಿದೆ.

ದೆಹಲಿಯಲ್ಲಿ ನೋಡಿದರೆ ಪ್ರಧಾನಿ ಮೋದಿಯವರು ಊಟ-ನಿದ್ರೆ ಬಿಟ್ಟು ದೇಶದ ಸರ್ವಾಂಗೀಣ ಅಭಿವೃದ್ಧಿ ಬಲುಬೇಗ ಆಗಬೇಕೆಂದು ಕಾರ್ಯಮಗ್ನರಾಗಿದ್ದಾರೆ. ಅವರನ್ನು ನೋಡಿಯಾದರೂ ರಾಜ್ಯದಲ್ಲಿ ಪರಿಸ್ಥಿತಿ ಬದಲಾಗಿರಬೇಕಿತ್ತಲ್ಲವೇ? ಇಲ್ಲ, ನಮ್ಮ ನಾಯಕರು ತಮ್ಮದೇ ಕಲ್ಪಿತ ಲೋಕದಲ್ಲಿದ್ದಾರೆ. ಅವರಿಗೆ ಕಾರ್ಯಕರ್ತರ ಮನಸ್ಥಿತಿ ಅರ್ಥವಾಗುವುದು ಬೇಕಿಲ್ಲ. ಜನರ ಭಾವನೆಯಿಂದ ಬಹುದೂರ ವಿಹರಿಸುತ್ತಿದ್ದಾರೆ. ಮೋದಿಯವರ ಹೆಸರೇ ರಕ್ಷಾಕವಚ ಎಂದುಕೊಂಡಿದ್ದಾರೆ. ನೀವುಗಳೇ ದಿನನಿತ್ಯ ಮಾಧ್ಯಮಗಳ ಮೂಲಕ ಪಕ್ಷದ ಮಾನವನ್ನು ಹರಾಜು ಹಾಕುತ್ತಿದ್ದಾರೆ, ಸಾಮಾನ್ಯ ಕಾರ್ಯಕರ್ತ ಸರಿಯಿರಬೇಕೆಂದು ಹೇಗೆ ಬಯಸುತ್ತೀರಾ?

ಇಲ್ಲ. ಅದು ಸಾಧ್ಯವಿಲ್ಲ. ಜನತೆ ಎರಡೂ ಕೈಗಳಿಂದ ಅಧಿಕಾರವನ್ನು ನೀಡಲು ತುದಿಗಾಲಿನಲ್ಲಿರುವಾಗ ನಾಯಕರು ತಮ್ಮ ಇಷ್ಟಾನಿಷ್ಟಗಳ ಸುಳಿಯಲ್ಲಿ ಸಿಲುಕುವುದು ಮುತ್ಸದ್ಧಿತನವಲ್ಲ. ಒಂದು ಬಾರಿ ಬಲವಾದ ಏಟು ತಿಂದ ನಂತರವೂ ಮತ್ತೊಮ್ಮೆ ಅದೇ ತಪ್ಪು ಮಾಡಲು ತೀರ್ವನಿಸುವುದು ಬುದ್ಧಿವಂತ ನಾಯಕರ ಲಕ್ಷಣವಲ್ಲ. ಅದು ನಿಜವಾದ ಜನವಿರೋಧಿ ನಡವಳಿಕೆ. ಓರ್ವ ಕಾರ್ಯಕರ್ತನಾಗಿ, ಬಿಜೆಪಿಯ ಅಭ್ಯುದಯ ಬಿಟ್ಟು ಬೇರೇನೂ ಯೋಚಿಸದವನಾಗಿ ನಿಮ್ಮಲ್ಲಿ ಕಳಕಳಿಯ ಪ್ರಾರ್ಥನೆ. ನಿಮ್ಮ ನಡುವಿನ ವೈಯಕ್ತಿಕ ಸಮಸ್ಯೆ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ, ಒಂದು ಕೊಠಡಿಯಲ್ಲಿ ರ್ಚಚಿಸಿ ಬಗೆಹರಿಸಿಕೊಳ್ಳಿ.

ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳು ಹಾದಿರಂಪ-ಬೀದಿರಂಪವಾಗಿ ಟಿವಿ ಚಾನೆಲ್​ಗಳಿಗೆ ಸುಗ್ರಾಸ ಭೋಜನವಾಗುವುದು ಇನ್ನಾದರೂ ನಿಲ್ಲಲಿ. ತಮ್ಮ ಸಮಸ್ಯೆಯನ್ನೇ ಕುಳಿತು ಪರಿಹರಿಸಿಕೊಳ್ಳದವರು ರಾಜ್ಯದ ಸಮಸ್ಯೆಯನ್ನು ಹೇಗೆ ಪರಿಹರಿಸಿಯಾರು ಎಂಬ ಪ್ರಶ್ನೆ ಜನತೆಯ ಮನದಲ್ಲಿ ಬಲವಾಗಿ ಬೇರೂರುವುದಕ್ಕೆ ಮುನ್ನ ಎಚ್ಚರಗೊಳ್ಳಿ. ನಮಗೂ ನಮ್ಮೂರುಗಳಲ್ಲಿ ಆಗುತ್ತಿರುವ ನಿತ್ಯ ಮುಖಭಂಗ ನಿಲ್ಲುವಂತೆ ಮಾಡಿ. ಪಕ್ಷದ ತೇಜೋವಧೆ ಮಾಡಲು ಯಾವುದೇ ನಾಯಕರಿಗೂ ನಾವು ಕಾರ್ಯಕರ್ತರು ಅಧಿಕಾರ ಕೊಟ್ಟಿಲ್ಲ, ಕೊಡುವುದಿಲ್ಲ. ಇದು ಪ್ರಾಯಶಃ ರಾಜ್ಯದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಮನದಾಳದ ಮಾತು. ಇದನ್ನೂ ಧಿಕ್ಕರಿಸಿ, 'ನಾವು ನಡೆಯುವುದು ಹೀಗೆಯೇ' ಎಂದು ನೀವು ಮುಂದಡಿಯಿಟ್ಟರೆ, ದೇವರೂ ಕಾಪಾಡುವುದಿಲ್ಲ. ಇದೇ ತಿಳಿವಳಿಕೆ ನಿಮ್ಮ ಸುತ್ತಲೂ ಇರುವ ನಿಮ್ಮ ಅನುಯಾಯಿಗಳಿಗೂ ಬರಲಿ.

ಸದಾ ಭಾರತೀಯ ಜನತಾ ಪಾರ್ಟಿಯ ಸೇವೆಯಲ್ಲಿ....

ಸಿ.ಟಿ ಮಂಜುನಾಥ್
ಭಾ ಜ ಪಾ ಕಾರ್ಯಕರ್ತ, ಮಂಡ್ಯ.

English summary
Everyone knows what is happening in Karnataka BJP. Fight between BS Yeddyurappa and KS Eshwarappa has left the common workers utterly disappointed. Top leaders should know that workers are the strength of the party. Manjunath, a BJP worker has written an open letter to BJP leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X