ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಕಂಪು ಸೂಸುವ ಶ್ರೀಗಂಧದ ಸಾವಿನ ಕಥೆ!

By ಬಿಎಂ ಲವಕುಮಾರ್, ಮಡಿಕೇರಿ
|
Google Oneindia Kannada News

ಮೂರ‍್ನಾಲ್ಕು ದಶಕಗಳ ಹಿಂದೆ ಕೊಡಗಿನಲ್ಲಿ ಎಲ್ಲೆಂದರಲ್ಲಿ ಗಂಧದ ಮರಗಳು ಸೊಂಪಾಗಿ ಬೆಳೆದು ನೆರಳು ನೀಡುತ್ತಿದ್ದವು. ಅವುಗಳ ಬಗ್ಗೆ ಜನರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಎಲ್ಲ ಮರಗಳಂತೆ ಅವುಗಳು ಕೂಡ ಸಿಕ್ಕ ಸಿಕ್ಕಲ್ಲಿ ಬೆಳೆಯುತ್ತಿದ್ದವು. ಅವತ್ತಿನ ದಿನಗಳನ್ನು ನೆನಪಿಸಿಕೊಳ್ಳುವ ಹಿರಿಯರ ಮನದಲ್ಲಿರುವುದು ಒಂದೇ. ನಾಶವಾದ ಶ್ರೀಗಂಧದ ಮರಗಳ ಬಗ್ಗೆ ವಿಷಾದ!

ಕಳೆದ ಎರಡು ದಶಕಗಳಲ್ಲಿ ನಡೆದ ಗಂಧದ ಮರಗಳ ಮಾರಣ ಹೋಮದಿಂದಾಗಿ ಇವತ್ತು ಗಂಧದ ಮರಗಳನ್ನು ಕಾಣುವುದೇ ಅಪರೂಪವಾಗಿದೆ. ಕಳೆದ ಕೆಲವು ದಶಕಗಳ ಹಿಂದೆ ಹೋದಡೆಯೆಲ್ಲಾ ಬೃಹತ್ ಗಾತ್ರದ ಗಂಧದ ಮರಗಳು ಗೋಚರಿಸುತ್ತಿದ್ದವು. ತೋಟದ ಮಾಲೀಕರು ಅವುಗಳನ್ನು ಕಡಿಯದೆ ಜತನದಿಂದ ಪೋಷಿಸಿಕೊಂಡು ಬಂದಿದ್ದರೆ, ನಂತರ ಅಂತಹ ಮರಗಳು ಗಂಧ ಕಳ್ಳರ ವಕ್ರದೃಷ್ಟಿಗೆ ಬಲಿಯಾಗಿ ಕಣ್ಮರೆಯಾಗಿದ್ದು ದುರಂತ.

ಮೊದಮೊದಲು ಶ್ರೀಗಂಧ ಮರಗಳು ಹೆಮ್ಮರವಾಗಿ ಬೆಳೆದು ನಿಂತು, ಆ ನಂತರ ಒಣಗಿಬಿದ್ದರೂ ಅದರ ಉಪಯೋಗ ಅರಿಯದೆ, ಅದಕ್ಕೆ ಹಣ ದೊರೆಯುತ್ತದೆ ಎಂದರೂ ತಲೆಕೆಡಿಸಿಕೊಳ್ಳದೆ ಜನ ತೆಪ್ಪಗಾಗಿದ್ದರು. ಮರಗಳನ್ನು ನೆಟ್ಟು ಬೆಳೆಸುವ ಅಗತ್ಯವಿರಲಿಲ್ಲ. ಅವುಗಳ ಪಾಡಿಗೆ ಅವು ಬೆಳೆಯುತ್ತಿದ್ದವು. ಇತರ ಮರಗಿಡಗಳ ನಡುವೆ ರಕ್ಷಿಸಿ ಬೆಳೆಸುವುದು ಬೆಳೆಗಾರರಿಗೆ ಕಷ್ಟದ ಕೆಲಸವಾಗುತ್ತಿರಲಿಲ್ಲ. ಎಲ್ಲೆಂದರಲ್ಲಿ ತೋಟ, ಕಾಡು, ಇನ್ನಿತರ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ಶ್ರೀಗಂಧದ ಮರಗಳು ನಂತರದ ದಿನಗಳಲ್ಲಿ ಧರೆಗುರುಳಿ ಅದ್ಯಾವ ರೀತಿಯಲ್ಲಿ ನಾಶವಾಗಿ ಹೋದವು ಎಂಬುದೇ ಗೊತ್ತಾಗಲಿಲ್ಲ. [ಗೋವಾಕ್ಕೆ ಹೆದ್ದಾರಿ, 37 ಸಾವಿರ ಮರ ಕಾಪಾಡೋರು ಯಾರ್ರಿ?]

Tragic death of sandalwood trees in Madikeri district

ಅದಕ್ಕೆ ಕಾರಣವೂ ಇತ್ತು. ಕೇರಳದ ಕಾಸರಗೋಡಿನಲ್ಲಿ ಶ್ರೀಗಂಧದ ಎಣ್ಣೆ ತಯಾರಿಸುವ ಕಾರ್ಖಾನೆಗಳು ಸ್ಥಾಪನೆಗೊಂಡಿದ್ದವು. ಅಲ್ಲಿಗೆ ಶ್ರೀಗಂಧದ ಅಗತ್ಯತೆಯಿತ್ತು. ಅಲ್ಲದೆ ಗಂಧದ ಕಾರ್ಖಾನೆ ಮಾಲೀಕರು ವಾಮಮಾರ್ಗದಲ್ಲಿ ಮಾಲುಗಳನ್ನು ಪಡೆಯಲು ಮುಂದಾಗಿದ್ದರು. ಹೀಗಾಗಿ ಕಾರ್ಖಾನೆಗೆ ಗಂಧವನ್ನು ತಲುಪಿಸಲು ಮಧ್ಯವರ್ತಿಗಳು ಹುಟ್ಟಿಕೊಳ್ಳಲಾರಂಭಿಸಿದರು. ಅವರಿಗೆ ಕಾಣಿಸಿದ್ದು ಕೊಡಗಿನಲ್ಲಿ ಸೊಂಪಾಗಿ ಬೆಳೆದ ಗಂಧದ ಮರಗಳು. ಹಣದ ಆಮಿಷ ತೋರಿದ ಅವರು ಕೊಡಗಿನಲ್ಲಿ ಗಂಧದ ಕಳ್ಳರನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು.

ಯಾವಾಗ ಗಂಧಕ್ಕೆ ಕೆಜಿಗೆ ಇಂತಿಷ್ಟು ಹಣ ಸಿಗುತ್ತದೆ ಎಂಬುದು ಗೊತ್ತಾಯಿತೋ, ಗ್ರಾಮೀಣ ಪ್ರದೇಶಗಳಲ್ಲಿ ಗಂಧದ ಕಳ್ಳರ ಹಾವಳಿ ಹೆಚ್ಚಾಯಿತು. ರಾತ್ರೋರಾತ್ರಿ ಗಂಧದ ಮರಗಳನ್ನು ಕಡಿದು ಸಾಗಿಸಲು ಆರಂಭಿಸಿದರು. ಕೆಲವರು ಮನೆಮನೆಗೆ ಬಂದು ಗಂಧದ ಮರದ ತುಂಡುಕೊಡಿ ಎಂದು ಕೇಳಲಾರಂಭಿಸಿದರು. ಪರಿಣಾಮ ಹಣಕ್ಕಾಗಿ ತಮ್ಮ ತೋಟದಲ್ಲಿದ್ದ ಮರಗಳಿಗೆ ಕೆಲವರು ಕೊಡಲಿಯಿಟ್ಟುಬಿಟ್ಟರು. ಆ ವೇಳೆಗೆ ಗಂಧ ಮಾರಿದರೆ ಹಣ ಸಿಗುತ್ತದೆ ಎಂಬ ವಿಚಾರವು ಜನರಿಗೆ ಗೊತ್ತಾಗತೊಡಗಿತ್ತಲ್ಲದೆ, ಗಂಧದ ಮರ ಕಡಿದು ಶೇಖರಿಸಿ ಹಣ ಮಾಡಲು ಮುಂದಾಗಿಬಿಟ್ಟರು. ಹೀಗಾಗಿಯೇ ಕೊಡಗಿನಲ್ಲಿದ್ದ ಮರಗಳು ಧರೆಗುರುಳಿ ವಾಮಮಾರ್ಗದಲ್ಲಿ ಕೇರಳ ಸೇರಿದವು.

ಅಕ್ರಮ ಗಂಧದ ಸಾಗಾಟದಲ್ಲಿ ತೊಡಗಿದಾಗ ಕೆಲವರು ಪೊಲೀಸರಿಗೆ ಸಿಕ್ಕಿಬಿದ್ದರೆ, ಮತ್ತೆ ಕೆಲವರು ಸಿಕ್ಕಿಕೊಳ್ಳದೆ ದಂಧೆ ಮುಂದುವರೆಸಿದರು. ಅಷ್ಟರಲ್ಲಾಗಲೇ ಅಸಂಖ್ಯಾತ ಗಂಧದ ಮರಗಳು ಧರೆಗುರುಳಿದ್ದವು. ಇನ್ನು ಶ್ರೀಗಂಧ ಮರಗಳಿಗೆ ಉಳಿಗಾಲವಿಲ್ಲ ಎಂದು ತಿಳಿದಾಗ ಸರ್ಕಾರ ಒಂದಷ್ಟು ನಿಬಂಧನೆಗಳನ್ನು ಹೇರಿತು. ಆದರೆ ಕಳ್ಳಸಾಗಾಣಿಕೆದಾರರು ಅದ್ಯಾವುದಕ್ಕೆ ಸೊಪ್ಪು ಹಾಕದೆ ವಾಮಮಾರ್ಗದಲ್ಲಿ ಗಂಧವನ್ನು ಸಾಗಿಸುವ ಕಾಯಕವನ್ನು ಮಾಡುತ್ತಲೇ ಇದ್ದಾರೆ. [ನಾವು ಎಲ್ಲಿ ಹೋಗಿ ಬಿದ್ದು ಸಾಯಬೇಕು? ದಯವಿಟ್ಟು ತಿಳಿಸಿ]

Tragic death of sandalwood trees in Madikeri district

ಒಂದೆಡೆ ಶ್ರೀಗಂಧ ಮರಗಳು ಸಂಪೂರ್ಣ ನಾಶವಾಗಿ ಹೋದರೆ, ಮತ್ತೊಂದೆಡೆ ಹಣದ ದುರಾಸೆಗೆ ಬಿದ್ದ ಕೆಲವರು ಇನ್ನೂ ಬಲಿಯದ ಮರಗಳಿಗೆ ಕೊಡಲಿಟ್ಟು ನಾಶ ಮಾಡಿದರು. ಈ ಕೃತ್ಯ ಈಗಲೂ ಮುಂದುವರೆಯುತ್ತಿದೆ.

ಇನ್ನು ಶ್ರೀಗಂಧ ಗಿಡನೆಟ್ಟು ಬೆಳೆಸಿದರೆ ಅದು ಬೆಳೆದು ಮರವಾದರೆ ಉಳಿಯದು ಎಂದರಿತ ಕೆಲವರು ಅದನ್ನು ಪೋಷಿಸುವ ಬದಲಿಗೆ ಗಿಡದಲ್ಲಿಯೇ ಕಡಿದು ಹಾಕತೊಡಗಿದರು. ಇದೆಲ್ಲದರ ನಡುವೆ ಅಳಿದುಳಿದ ಮರಗಳಿಗೆ ಸ್ಯಾಂಡಲ್ ಸ್ಪೈಕ್ ಎಂಬ ರೋಗವೊಂದು ಕಾಣಿಸಿಕೊಂಡಿತು. ಮೈಕೋ ಪ್ಲಾಸ್ಮಾಟಿಕ್ ಆರ್ಗ್ಯಾನಿಸಂ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ರೋಗಕ್ಕೆ ಬಲಿಯಾದ ಗಿಡಗಳ ತುದಿಭಾಗದ ಎಲೆಗಳು ಮೊದಲಿಗೆ ಒಣಗಿ ಬಳಿಕ ಕೊಂಬೆಗಳು ನಿತ್ರಾಣಗೊಂಡು ಸಾಯುತ್ತಿವೆ.

ಒಂದೆಡೆ ಶ್ರೀಗಂಧ ಕಳ್ಳರು ಇನ್ನೊಂದೆಡೆ ರೋಗಕ್ಕೆ ಸಿಲುಕಿರುವ ಶ್ರೀಗಂಧ ಕೊಡಗಿನಿಂದ ಅಳಿದು ಹೋಗುತ್ತಿದೆ. ಇದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡದೆ ಹೋದರೆ ಮುಂದಿನ ಪೀಳಿಗೆಗೆ ಶ್ರೀಗಂಧದ ಬಗ್ಗೆ ಹೇಳುವಾಗ ಚಿತ್ರದಲ್ಲಿ ತೋರಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಪಡುವಂತಹದ್ದೇನಿಲ್ಲ. [ಸಾವಿನ ದವಡೆಯಿಂದ ಪಾರಾದ ಮರದಲ್ಲಿ ಮರುಜೀವ!]

English summary
It is a sad and tragic story of sandalwood trees in Kodagu district. Once upon a time, the sandalwood trees were abundant in the Madikeri forest. Now, due to greed of people, not many heft left in the forest. The wood is being transported to Kerala through illegal means.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X