ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುಂಡ ಆನೆಯ ಪೊಗರು ಇಳಿಸಲು ಕೊಡಗಿನಲ್ಲಿ ತರಬೇತಿ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 23 : ಚಾಮರಾಜನಗರದ ಕಾಡಿನಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಾ ಆಗಾಗ್ಗೆ ನಾಡಿಗೆ ಬಂದು ಜನರಿಗೆ ಉಪಟಳ ನೀಡುತ್ತಾ ಮೆರೆದಾಡುತ್ತಿದ್ದ ಕಾಡಾನೆಯೊಂದನ್ನು ಸೆರೆಹಿಡಿದು ಕೊಡಗಿನಲ್ಲಿ ಪಳಗಿಸುವ ಕಾರ್ಯ ನಡೆಯುತ್ತಿದೆ.

ಚಾಮರಾಜನಗರದ ಕೆ. ಗುಡಿ, ಬಿಳಿಗಿರಿ ರಂಗನಬೆಟ್ಟ ಮೊದಲಾದ ಕಡೆ ದಾಂಧಲೆ ನಡೆಸುತ್ತಾ ರೈತರ ಪ್ರಾಣಕ್ಕೆ ಸಂಚಕಾರ ತಂದಿದ್ದ ಆನೆಯನ್ನು ಇತ್ತೀಚೆಗೆ ಸೆರೆಹಿಡಿಯಲಾಗಿತ್ತು. ಬಳಿಕ ಅದನ್ನು ಕೊಡಗಿನ ಗೋಣಿಕೊಪ್ಪಲು ಬಳಿಯಿರುವ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸಾಗಿಸಲಾಗಿತ್ತು.

Rogue elephant being trained in Mattigodu forest in Madikeri

ಇದೀಗ ಬೃಹತ್ ಮರದ ದಿಮ್ಮಿಗಳಿಂದ ನಿರ್ಮಿಸಲಾಗಿರುವ ದೊಡ್ಡಿಯಲ್ಲಿ ಬಾಲ ಮುದುರಿಕೊಂಡು ನಿಲ್ಲುವಂತಾಗಿದೆ. ಭಾರೀ ಗಾತ್ರದ ಈ ಆನೆಯನ್ನು ಪಳಗಿಸುವುದು ಸುಲಭದ ಕಾರ್ಯವಾಗಿ ಉಳಿದಿಲ್ಲ. ಹೀಗಾಗಿ ಅದರ ಗರ್ವ ಕಡಿಮೆ ಮಾಡಿ ಸಾಧು ಮಾಡಲು ಏನೆಲ್ಲ ತಂತ್ರವಿದೆಯೋ ಅದೆಲ್ಲವನ್ನು ಮಾಡಲಾಗುತ್ತಿದೆ.

ಸದ್ಯ ಅದನ್ನು ಕೇವಲ 8 ಮತ್ತು 10 ಅಡಿ ಸುತ್ತಳತೆಯ ಮರದ ದೊಡ್ಡಿಯಲ್ಲಿ ಕೂಡಿ ಹಾಕಲಾಗುತ್ತಿದ್ದು, ಸಾಕಾನೆಗಳ ಸಹಾಯದಿಂದ ಅದಕ್ಕೆ ಮೇವು ಹಾಕಲಾಗುತ್ತಿದೆ. ಬಾಲ ಬಿಚ್ಚಿದರೆ ಅವುಗಳ ಮೂಲಕ ಏಟು ಹೊಡೆಸಲಾಗುತ್ತಿದೆ. ಮೊದಮೊದಲಿಗೆ ಮಾವುತರು ಹತ್ತಿರ ಹೋದರೆ ಒಳಗಿನಿಂದಲೇ ಎಗರುತ್ತಿದ್ದ. ದೊಡ್ಡಿಯೊಳಗೆ ಕೂಡಿ ಹಾಕಿ ಶಿಕ್ಷೆ ನೀಡುತ್ತಿರುವುದರಿಂದ ನಿಧಾನವಾಗಿ ಪಳಗುತ್ತಿದೆ.

Rogue elephant being trained in Mattigodu forest in Madikeri

ಅಡ್ಡಾಡಲಾಗದೆ ನಿಂತಲ್ಲೇ ನಿಂತು ಮಲಗುತ್ತ್ತಾಕಾಲ ಕಳೆಯುತ್ತಿದೆ ಮದಗಜ. ಇದನ್ನು ಪಳಗಿಸುವಲ್ಲಿ ಮಾವುತ ಮತ್ತು ಕಾವಡಿಗಳಾದ ವಸಂತ ಹಾಗೂ ರವಿ ಶ್ರಮವಹಿಸುತ್ತಿದ್ದಾರೆ. ಚಿಕ್ಕವಯಸ್ಸಿನ ಇವರಿಬ್ಬರಿಗೆ ಈ ಮದಗಜನ ಪಳಗಿಸುವುದು ಸವಾಲ್ ಆಗಿದೆ.

ಆರಂಭದ ದಿನಗಳಿಗೆ ಹೋಲಿಸಿದರೆ ಇದೀಗ ಸ್ವಲ್ಪಮಟ್ಟಿಗೆ ಗರ್ವ ಕಳೆದು ಕೊಂಡಿರುವ ಮದಗಜ ನಿಧಾನವಾಗಿ ಪಳಗುತ್ತಿದ್ದಾನೆ. ಮೊದಲಿಗೆ ದೊಡ್ಡಿಯನ್ನೇ ಮುರಿದು ಬರುವ ಪ್ರಯತ್ನ ಮಾಡುತ್ತಾ, ಹತ್ತಿರ ಹೋದರೆ ಬುಸ್ ಎನ್ನುತ್ತಾ ಸೊಂಡಿಲನ್ನು ಹೊರಗೆ ಹಾಕಿ ಎಳೆಯುವ ಪ್ರಯತ್ನ ಮಾಡುತ್ತಿತ್ತಂತೆ. ಆಗ ಸುತ್ತಲೂ ಸಾಕಾನೆಗಳನ್ನು ನಿಲ್ಲಿಸಿ ಅವುಗಳಿಂದ ತದಕಿಸಿ ತೆಪ್ಪಗೆ ಇರುವಂತೆ ಮಾಡಲಾಗಿತ್ತು.

ಸಾಕಾನೆಗಳ ಮೂಲಕವೇ ಅದಕ್ಕೆ ಸೊಪ್ಪು ಹಾಕಲಾಗುತ್ತಿತ್ತು. ಇದೀಗ ಸಾಕಾನೆಗಳಿಗೆ ನೀಡುವ ಆಹಾರದಂತೆ ಭತ್ತದ ಹುಲ್ಲಿಗೆ ಬೆಲ್ಲ ಹಾಗೂ ಭತ್ತ ಹಾಕಿ ಅದರತ್ತ ಎಸೆದರೆ ಸೊಂಡಿಲಿನಿಂದ ಹೆಕ್ಕಿ ತಿನ್ನುವ, ನೀರು ನೀಡಿದರೆ ಕುಡಿಯುವಷ್ಟರ ಮಟ್ಟಿಗೆ ಪಳಗಿದೆ. ಮೊದ ಮೊದಲು ಕೋಪದಿಂದ ದೊಡ್ಡಿಯೊಳಗಿನ ಮರದ ದಿಮ್ಮಿಗೆ ಗುದ್ದಿ ಗಾಯ ಮಾಡಿಕೊಂಡಿತ್ತು, ಈಗ ಅದಕ್ಕೆ ಔಷಧಿ ಹಾಕಿ ವಾಸಿ ಮಾಡಲಾಗುತ್ತಿದೆ.

ಸುಮಾರು 9.45 ಅಡಿ ಎತ್ತರವಿರುವ ಭಾರೀ ಗಾತ್ರದ ಗಜ ಇದಾಗಿದೆ. ಬಲಭಾಗದ ದಂತ ಮುರಿದಿದ್ದು, ಎಡಭಾಗದ ದಂತ ಗಾತ್ರದಲ್ಲಿ ದೊಡ್ಡದಾಗಿದೆ. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಶಂಕರ್ ಇದರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಮಾವುತರಾದ ರವಿ ಮತ್ತು ವಸಂತ ಇದರ ಪಕ್ಕವೇ ರಾತ್ರಿ ಕೂಡ ಬೆಂಕಿ ಹಾಕಿಕೊಂಡು ಮಲಗುತ್ತಾ ಜತನದಿಂದ ನೋಡಿಕೊಳ್ಳುತ್ತಿದ್ದಾರೆ.

ಕೆಲವೇ ಸಮಯಗಳಲ್ಲಿ ಈ ಆನೆ ತರಬೇತಿ ಪಡೆದು ಎಲ್ಲ ಆನೆಗಳಂತೆ ಸಾಕಾನೆ ಶಿಬಿರ ಸೇರಲಿದೆ. ಇದೀಗ ಅದರ ಸೊಕ್ಕು ಅಡಗಿಸಿ ಇತರೆ ಸಾಕಾನೆಗಳಂತೆ ಮಾಡುವ ಕಾರ್ಯ ಭರದಿಂದ ಸಾಗಿದೆ.

English summary
Rogue elephant being trained in Mattigodu forest near Gonikoppalu in Madikeri. The farners in Chamarajanagar were spending sleepless nights due to trouble created by this rogue elephant. Now, the elephant is taking care and trained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X