'ಕೊಡಗಿನ ಶಾಂತಿ ಕದಡುವ ಟಿಪ್ಪು ಜಯಂತಿ ಬೇಕಿಲ್ಲ'

ಕೊಡಗು ಜಿಲ್ಲೆಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಆಚರಣೆ ಮೂಲಕ ಸರ್ಕಾರವು ಜನತೆಗೆ ತಪ್ಪು ಸಂದೇಶ ಸಾರುತ್ತಿದೆ ಎಂದು ಟಿಪ್ಪು ಆಚರಣೆ ವಿರೋಧಿ ಸಮಿತಿಯ ಅಧ್ಯಕ್ಷ ಆಭಿಮನ್ಯು ಕುಮಾರ್ ಹೇಳಿದ್ದಾರೆ.

Written by: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಅಕ್ಟೋಬರ್ 29: ಒಂದೆಡೆ ಸರ್ಕಾರ ಟಿಪ್ಪುಜಯಂತಿ ಆಚರಣೆಯನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದರೆ ಮತ್ತೊಂದೆಡೆ ಕೊಡಗು ಜಿಲ್ಲೆಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಆಚರಣೆ ಮೂಲಕ ಸರ್ಕಾರವು ಜನತೆಗೆ ತಪ್ಪು ಸಂದೇಶ ಸಾರುತ್ತಿದೆ ಎಂದು ಟಿಪ್ಪು ಆಚರಣೆ ವಿರೋಧಿ ಸಮಿತಿಯ ಅಧ್ಯಕ್ಷ ಆಭಿಮನ್ಯು ಕುಮಾರ್ ಹೇಳಿದ್ದಾರೆ.

ಇನ್ನು ಜನರ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವದಿಲ್ಲವೆಂದು ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ತಿಳಿಸಿದೆ. ಸಮಿತಿಯ ಜಿಲ್ಲಾಧ್ಯಕ್ಷ ಅಭಿಮನ್ಯುಕುಮಾರ್, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ಮನವಿ ಮಾಡಿಕೊಂಡಿರುವದಾಗಿ ತಿಳಿಸಿದ್ದಾರೆ.

ಯಾವದೇ ಕಾರಣಕ್ಕೂ ಹೊರ ಜಿಲ್ಲೆ, ಹೊರ ರಾಜ್ಯದವರಿಗೆ ಕೊಡಗು ಜಿಲ್ಲಾ ಕೇಂದ್ರ ಸ್ಥಾನ ಮತ್ತು ತಾಲೂಕು ಕೇಂದ್ರಗಳಿಗೆ ಬರಲು ಅವಕಾಶ ನೀಡಬಾರದೆಂದು ಒತ್ತಾಯಿಸಿದರು. ಟಿಪ್ಪು ಜಯಂತಿಯಿಂದ ಜಿಲ್ಲೆಯ ಜನತೆಯ ಆತ್ಮಾಭಿಮಾನಕ್ಕೆ ಧಕ್ಕೆಯಾಗಿದೆ. ನಮ್ಮ ಹೋರಾಟ ಶಾಂತಿಯುತವಾಗಿರುತ್ತದೆ ಎಂದಿದ್ದಾರೆ.

ಕಳೆದ ಕೆಲ ದಿನಗಳಿಂದ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಹಿಂದೂಪರ ಹಾಗೂ ಕೊಡವ ಸಮಾಜ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿವೆ. ಟಿಪ್ಪು ಜಯಂತಿಗೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು ಮತ್ತೆ ಕಳೆದ ವರ್ಷದ ಕರಾಳದಿನ ಎದುರಾಗುತ್ತಾ ಎಂಬ ಭಯ ಜನತೆಯನ್ನು ಕಾಡುತ್ತಿದೆ.

ಟಿಪ್ಪು ಜಯಂತಿ ಹೆಸರಿನಲ್ಲಿ ಗಲಭೆ ಭೀತಿ

ಶಾಂತಿಯುತ ಕೊಡಗಿನಲ್ಲಿ ಮತ್ತೆ ಟಿಪ್ಪು ಜಯಂತಿ ವಿಚಾರದಲ್ಲಿ ಗಲಭೆಗಳಾಗುವ ಲಕ್ಷಣಗಳಿವೆ. ಹೀಗಾಗಿ ಜನ ಭಯಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಿಲ್ಲೆಯ ಶೇ.80ರಷ್ಟು ಜನ ವಿರೋಧ ವ್ಯಕ್ತಪಡಿಸುತ್ತಿದ್ದು, ನೆಮ್ಮದಿಯಾಗಿ ಬದುಕಲು ಅವಕಾಶ ನೀಡಿ ಎಂದು ಗೋಗರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತೀವ್ರ ಒತ್ತಡಕ್ಕೆ ಮಣಿದು ವಾಪಾಸ್ ಪಡೆದರೆ ಒಂದು ವರ್ಗದ ಆಕ್ರೋಶಕ್ಕೆ ತುತ್ತಾಗಬೇಕಾಗಬೇಕೆಂಬ ಭಯ ಸರ್ಕಾರದ್ದಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜಿಲ್ಲಾಡಳಿತ ಜಯಂತಿ ಆಚರಿಸುವುದು ಅನಿವಾರ್ಯ.

ಮಡಿಕೇರಿಯಲ್ಲಿ ಕಳೆದ ವರ್ಷದ ಕಹಿ ಘಟನೆ

ಕಳೆದ ವರ್ಷದ ಕಹಿ ಘಟನೆ ಇನ್ನೂ ಹಸಿರಾಗಿರುವುದರಿಂದ ಬಹುಶಃ ಈ ಬಾರಿ ಎಲ್ಲ ರೀತಿಯ ಕಟ್ಟುನಿಟ್ಟಿನ ಮತ್ತು ಭಾರೀ ಬಿಗಿಪೊಲೀಸ್ ಬಂದೋಬಸ್ತ್‍ನಲ್ಲಿ ಟಿಪ್ಪು ಜಯಂತಿ ನಡೆದರೂ ನಡೆಯಬಹುದು. ಈ ನಡುವೆ ಎಲ್ಲ ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಸಭೆ ನಡೆಸುತ್ತಿರುವ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲವನ್ನು ಅವಲೋಕಿಸಿದರೆ ಮತ್ತೆ ಕೊಡಗಿನಲ್ಲಿ ಶಾಂತಿಭಂಗವುಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಕೊಡವ ಮಾಪಿಳ್ಳೆ ಸಮುದಾಯದ ವಿರೋಧ

ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ಮಾತನಾಡಿದ ಕೊಡವ ಮಾಪಿಳ್ಳೆ ಸಮುದಾಯದ ಪ್ರಮುಖರಾದ ಇಬ್ರಾಹಿಂ, ಇಸ್ಲಾಂ ಧರ್ಮದಲ್ಲಿ ಯಾವುದೇ ಮೂರ್ತಿ ಪೂಜೆ, ವ್ಯಕ್ತಿ ಪೂಜೆ, ಜಯಂತಿ ಆಚರಿಸುವ ಪದ್ಧತಿ ಇಲ್ಲ. ಕೊಡವ ಮಾಪಿಳ್ಳೆ ಸಮುದಾಯವಾದ ನಾವು ಹಿಂದೆ ಕೊಡವರಾಗಿದ್ದೆವು. ಟಿಪ್ಪು ಸುಲ್ತಾನ್ ನಮ್ಮನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ.

ಈ ಬಗ್ಗೆ ನಮಗೆ ಹಾಗೂ ನಮ್ಮ ಹಿರಿಯರಲ್ಲಿ ನೋವು ಹೆಪ್ಪುಗಟ್ಟಿದೆ. ಟಿಪ್ಪು ಜಯಂತಿಯನ್ನು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಮಾಪಿಳ್ಳೆ ಸಮುದಾಯ ವಿರೋಧಿಸುತ್ತದೆ.

 

ನಾವುಗಳು ಅಣ್ಣ-ತಮ್ಮಂದಿರಂತೆ ಇದ್ದೇವೆ

ನಾವುಗಳು ಅಣ್ಣ-ತಮ್ಮಂದಿರ ರೀತಿಯಲ್ಲಿ ಜಿಲ್ಲೆಯಲ್ಲಿ ಬಾಳುತ್ತಿದ್ದೇವೆ. ಯಾವುದೇ ಸಂದರ್ಭದಲ್ಲೂ ಕೊಡವರು ನಮ್ಮನ್ನು ಕೀಳಾಗಿ ಕಂಡಿಲ್ಲ.

ಈ ಟಿಪ್ಪು ಜಯಂತಿ ಆಚರಣೆ ಬಂದ ನಂತರ ಜಿಲ್ಲೆಯಲ್ಲಿ ಪರಸ್ಪರ ದ್ವೇಷ ಭಾವನೆ ಉಂಟಾಗಿದೆ. ಕಳೆದ ಬಾರಿಯ ಆಚರಣೆಯಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಹೊರಗಿನಿಂದ ಬಂದ ಕೆಲವರು ಟಿಪ್ಪು ಜಯಂತಿಗೆ ಬೆಂಬಲ ನೀಡುತ್ತಿದ್ದಾರೆಯೇ ಹೊರತು ಕೊಡವ ಮಾಪಿಳ್ಳೆ ಸಮುದಾಯ ಎಂದಿಗೂ ಟಿಪ್ಪು ಜಯಂತಿಗೆ ಬೆಂಬಲ ಸೂಚಿಸುವದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ದೇವಟ್ ಪರಂಬುವಿನಲ್ಲಿ ಕೊಡವರ ಹತ್ಯೆ ನೆನಪು

ಟಿ.ಶೆಟ್ಟಿಗೇರಿ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ ಕೊಡಗಿನ ದೇವಟ್ ಪರಂಬುವಿನಲ್ಲಿ ಕೊಡವ ಜನಾಂಗದ ಸುಮಾರು 80 ಸಾವಿರ ಜನರನ್ನು ಮೋಸದಿಂದ ಟಿಪ್ಪು ಹತ್ಯೆ ಮಾಡಿದ್ದಾನೆ. ಈ ಎಲ್ಲಾ ವಿಚಾರಗಳು ಇತಿಹಾಸದಲ್ಲಿ ದಾಖಲಾಗಿದೆ ಹೀಗಿರುವಾಗ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ದಿನಕಳೆದಂತೆ ಟಿಪ್ಪು ಜಯಂತಿಗೆ ವಿರೋಧಗಳು ಹೆಚ್ಚಾಗುತ್ತಲೇ ಸಾಗುತ್ತಿದ್ದು, ಸರ್ಕಾರ ಈ ವಿಚಾರದಲ್ಲಿ ಯಾವ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

English summary
The government should not glorify Tipu Jayanti. About 80% of the population in the district are opposing Tipu Jayanti said Tipu Jayanti Acharana Virodhi Samithi President Abhimanyu Kumar.
Please Wait while comments are loading...