ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯಾದ್ಯಂತ ಇಂದು ಕಕ್ಕಡ ಪದಿನೆಟ್ಟ್ ಆಚರಣೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಆಗಸ್ಟ್ 3: ಕೊಡಗಿನಲ್ಲಿ ಆಗಸ್ಟ್ 3 ನ್ನು 'ಕಕ್ಕಡ ಪದಿನೆಟ್ಟ್' ಎಂದು ಆಚರಿಸಲಾಗುತ್ತಿದೆ. ಇವತ್ತು ಕಾಡಿನಲ್ಲಿರುವ ಮದ್ದು(ಆಟಿ) ಸೊಪ್ಪನ್ನು ತಂದು ಅದರ ರಸದಲ್ಲಿ ಪಾಯಸ ಸೇರಿದಂತೆ ಇನ್ನಿತರ ಖಾದ್ಯ ತಯಾರಿಸಿ ತಿನ್ನುವುದು ಇಲ್ಲಿನ ವಿಶೇಷವಾಗಿದೆ.

ಈ ಆಟಿ ಸೊಪ್ಪಿನಲ್ಲಿ ಇವತ್ತು 18 ಬಗೆಯ ಔಷಧೀಯ ಗುಣಗಳಿರುತ್ತವೆ ಎನ್ನಲಾಗಿದೆ. ಮತ್ತೆ ನಾಳೆಯಿಂದ ಇದರ ಗುಣ ಕಡಿಮೆಯಾಗುತ್ತಾ ಹೋಗುತ್ತದೆ ಎಂಬ ಮಾತಿದೆ. ಇವತ್ತು ಈ ಸೊಪ್ಪಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಸಂಪ್ರದಾಯದಂತೆ ಎಲ್ಲರೂ ಮನೆಗೆ ಕೊಂಡೊಯ್ದು ಖಾದ್ಯ ತಯಾರಿಸಿ ಜೇನು ಬೆರೆಸಿಕೊಂಡು ಸೇವಿಸುತ್ತಾರೆ.

"Kakkad padinett" a tradition in Madikeri district is celebrating on 3rd August

ಈ ಸೊಪ್ಪಿನ ರಸದಲ್ಲಿ ಉಷ್ಣಾಂಶದ ಗುಣದೊಂದಿಗೆ ಸುವಾಸನೆಯೂ ಹೇರಳವಾಗಿದೆ. ಇದರಲ್ಲಿ ಖಾದ್ಯ ತಯಾರಿಸುತ್ತಿದ್ದರೆ ಅದರ ಸುವಾಸನೆ ಸುತ್ತಮುತ್ತ ಬೀರುತ್ತದೆ. ಇಂತಹ ಔಷಧೀಯ ಗುಣಗಳ ಸೊಪ್ಪನ್ನು ಇಲ್ಲಿನವರು ಆಟಿ ಸೊಪ್ಪು ಎಂದೇ ಕರೆಯುತ್ತಾರೆ.

ಹಿಂದಿನ ಕಾಲದಲ್ಲಿ ಎಡೆಬಿಡದೆ ಮಳೆ ಸುರಿದು ಇಡೀ ವಾತಾವರಣವೇ ತೇವಾಂಶದಿಂದ ಕೂಡಿರುತ್ತಿತ್ತು. ಅಷ್ಟೇ ಅಲ್ಲದೆ ತಿಂಗಳ ಕಾಲ ಗಾಳಿ ಮಳೆಯಲ್ಲಿ ಗದ್ದೆ ಕೆಲಸದಲ್ಲಿ ನಿರತರಾದವರ ದೇಹ ಶೀತದಿಂದ ಕೂಡಿರುತ್ತಿತ್ತು. ಈ ಸಂದರ್ಭ ದೇಹಕ್ಕೆ ಉಷ್ಣಾಂಶವನ್ನು ನೀಡುವ ಖಾದ್ಯಗಳ ಅಗತ್ಯತೆ ಇತ್ತು.

ಇದೇ ಕಾರಣಕ್ಕಾಗಿ ಹಿರಿಯರು ಕಾಡಿನಲ್ಲಿ ಎಲ್ಲೆಂದರಲ್ಲಿ ಹುಟ್ಟಿ ಬೆಳೆಯುತ್ತಿದ್ದ ಆಟಿ ಸೊಪ್ಪನ್ನು ತಂದು ಅದನ್ನು ಜೇನಿನೊಂದಿಗೆ ಸೇವಿಸಿ, ದೇಹಕ್ಕೆ ಉಷ್ಣಾಂಶ ನೀಡುತ್ತಿದ್ದರು. ಇಷ್ಟೇ ಅಲ್ಲದೆ ನಾಟಿಕೋಳಿ ಸಾರು, ಮರದ ಕೆಸುವಿನ ಎಲೆಯ ಪತ್ರೊಡೆ, ಬಿದಿರಿನ ಕಣಿಲೆಯ ವಿವಿಧ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು.

ತಿಂಗಳಾನುಗಟ್ಟಲೆ ಮಳೆ ಸುರಿದು ಹೊರ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಳ್ಳುತ್ತಿದ್ದ ಅವತ್ತಿನ ಕಾಲದಲ್ಲಿ ತಮ್ಮ ಸುತ್ತಮುತ್ತ ಸಿಗುವ ಸಸ್ಯಗಳಿಂದಲೇ ವಿವಿಧ ಔಷಧಗಳನ್ನು ಕಂಡುಕೊಂಡು ಅದನ್ನು ಸಂಪ್ರದಾಯವಾಗಿ ರೂಢಿಸಿಕೊಂಡು ಬಂದಿದ್ದು, ಇವತ್ತಿಗೂ ಇಲ್ಲಿನವರು ಅದನ್ನೇ ಉಳಿಸಿಕೊಂಡು ಹೋಗುತ್ತಿದ್ದಾರೆ.

ಈಗ ಕೊಡಗು ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾಗಿದೆ. ಆಧುನಿಕ ಬದುಕು ಇಲ್ಲಿನ ಜನಜೀವನದ ಮೇಲೆ ಪರಿಣಾಮ ಬೀರಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿನ ವಾತಾವರಣ ವರ್ಷದಿಂದ ವರ್ಷಕ್ಕೆ ಸಂಪೂರ್ಣ ಬದಲಾವಣೆಯಾಗಿದೆ. ಮಳೆ ಸಂಪೂರ್ಣ ಕಡಿಮೆಯಾಗುತ್ತಿದೆ. ವಾಡಿಕೆಯ ಮಳೆಯೂ ಸುರಿಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚಳಿ ಮಾಯವಾಗಿದೆ. ಹೀಗಿರುವಾಗ ಕಕ್ಕಡ ಪದಿನೆಟ್ಟ್ ಕೇವಲ ಆಚರಣೆಯಾಗಿ ಉಳಿದು ಹೋಗಿದೆ.

ಒಂದಷ್ಟು ಆಧುನಿಕತೆಯಲ್ಲಿ ಇಲ್ಲಿನ ಬದುಕಿನಲ್ಲಿ ಒಂದಷ್ಟು ವ್ಯತ್ಯಾಸ ಕಾಣುತ್ತಿದ್ದರೂ ಇಲ್ಲಿನ ಜನ ಸಂಪ್ರದಾಯವನ್ನು ಬಿಟ್ಟು ಬದುಕುತ್ತಿಲ್ಲ. ಹೀಗಾಗಿಯೇ ಕಕ್ಕಡ ಪದಿನೆಟ್ಟ್ ಆಚರಣೆಯನ್ನು ಸಂಭ್ರಮದಿಂದಲೇ ಆಚರಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
"Kakkad padinett" a tradition in Madikeri district is celebrating on 3rd August. To save our tradition and culture this festival takes place every year in the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X