ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಕೈ ಒಡಕಿಗೆ ಮುಲಾಮು ಹಚ್ಚೋ ಯತ್ನ!

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 23 : ಕೊಡಗು ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಗಾದಿಗಾಗಿ ಪೈಪೋಟಿ ಒಳಗೊಳಗೆ ನಡೆಯುತ್ತಲೇ ಇದೆ. ಒಂದೊಂದು ಜನಾಂಗದವರು ತಮಗೆ ಪ್ರಾಶಸ್ತ್ಯ ನೀಡಬೇಕೆಂದು ಹಪಹಪಿಸುತ್ತಿದ್ದಾರೆ. ಹೀಗಾಗಿ ಪಕ್ಷವನ್ನು ಮುನ್ನಡೆಸುವ ಚತುರತೆ ಇರುವ ವ್ಯಕ್ತಿಗೆ ನೀಡಬೇಕೋ ಜಾತಿಯ ಪ್ರಬಲತೆ ನೋಡಿ ನೀಡಬೇಕೋ ಎಂಬ ಜಿಜ್ಞಾಸೆ ಪಕ್ಷದ ರಾಜ್ಯ ನಾಯಕರನ್ನು ಕಾಡತೊಡಗಿದೆ.

ಇದುವರೆಗೆ ನಮ್ಮದು ಜಾತ್ಯಾತೀತ ಪಕ್ಷ ಎಂದು ಬೀಗುತ್ತಾ ಮತಗಿಟ್ಟಿಸುವ ಯತ್ನ ಮಾಡುತ್ತಿದ್ದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಇದೀಗ ಕೊಡವ ಮತ್ತು ಕೊಡವೇತರರು ಎಂಬ ಬಿರುಕು ಬಹಿರಂಗವಾಗಿ ಕಾಣಿಸಿಕೊಂಡಿದ್ದು, ಇದು ಪಕ್ಷದ ಒಳಗಿನ ಆಂತರಿಕ ಕಚ್ಚಾಟ ಬಹಿರಂಗವಾಗಲು ಕಾರಣವಾಗಿದೆ.

ಮೂಲ ನಿವಾಸಿಗಳಾದ ಕೊಡವರ ನಾಯಕರ ಹೊರತು ಪಡಿಸಿ ಇತರೆ ಜನಾಂಗದ ಕೊಡವೇತರರು ಗುಪ್ತ ಸಭೆ ನಡೆಸಿ ತಮಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ರಾಜ್ಯ ನಾಯಕರ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಿರುವುದು ಪಕ್ಷದ ಸಂಘಟನೆಗೆ ಮತ್ತು ವರ್ಚಸ್ಸಿಗೆ ದೊಡ್ಡ ಹೊಡೆತ ನೀಡಿದಂತಾಗಿದೆ. ಇದು ಕೊಡವ ನಾಯಕರನ್ನು ಕೆರಳಿಸಿದಂತಾಗಿದೆ. [ಕೊಡಗಿನಲ್ಲಿ ಕುಡಿಯಲೂ ಅಯೋಗ್ಯವಾಗಿದೆ ಕಾವೇರಿ ನೀರು!]

Internal fight comes out in Madikeri Congress

ಈಗಾಗಲೇ ಕೆಲವು ಕೊಡವ ನಾಯಕರು ತಮ್ಮ ಬೆಂಬಲವಿಲ್ಲದೆ ಹೇಗೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಅಸ್ತಿತ್ವ ಉಳಿಸಿಕೊಳ್ಳುತ್ತೀರಾ ಎಂಬಂತ ಸವಾಲ್ ಎಸೆದಿದ್ದಾರೆ. ಇನ್ನು ಕೆಲವು ಕೊಡವೇತರ ನಾಯಕರು ಕೂಡ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಡಿಸಿಸಿ ಪದಾಧಿಕಾರಿ ಎಸ್.ಎಂ. ಚಂಗಪ್ಪ ನೇತೃತ್ವದಲ್ಲಿ ಕೊಡವೇತರ ಸಭೆ ನಡೆಸಿದ್ದನ್ನು ಖಂಡಿಸಿದ್ದಾರೆ. ಇದರ ಅಗತ್ಯತೆ ಇರಲಿಲ್ಲ ಇದರಿಂದ ಜನಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ.

ಡಿಸಿಸಿ ಪ್ರಭಾರ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿಕೆ ನೀಡಿ, ಏನೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಿ, ಪ್ರತ್ಯೇಕ, ಗೌಪ್ಯ ಸಭೆ ನಡೆಸದಂತೆ ತಾಕೀತು ಮಾಡಿದ್ದಾರೆ. ಅಲ್ಲದೆ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಕ್ರಮ ಕೈಗೊಂಡಿದ್ದೇ ಆದರೆ ಅದರ ಹೊಡೆತ ಪಕ್ಷಕ್ಕೆ ಬೀಳಲಿದೆ. ಈಗಾಗಲೇ ಕೊಡವರು, ಕೊಡವೇತರರು ಎಂಬ ಎಂಬ ಸಣ್ಣ ಕಿಡಿ ಪಕ್ಷದಲ್ಲಿ ಕಾಣಿಸಿಕೊಂಡಿರುವುದರಿಂದ ಅದು ಮುಂದೆ ಯಾವ ರೀತಿಯಲ್ಲಿ ಹೊತ್ತಿ ಉರಿಯುತ್ತದೆಯೋ ಗೊತ್ತಿಲ್ಲ.

ಕೊಡಗಿನಲ್ಲಿ ಬಿಜೆಪಿ ಭದ್ರವಾಗಿದೆ. ಮತ್ತೊಂದೆಡೆ ಸಮಾಜ ಸೇವಕ ಸಂಕೇತ್ ಪೂವಯ್ಯ ಅವರ ಸಾರಥ್ಯದಲ್ಲಿ ಜೆಡಿಎಸ್ ಚಿಗುರುತ್ತಿದೆ. ಹೀಗಿರುವಾಗ ಕಾಂಗ್ರೆಸ್‌ನಲ್ಲಿ ವೈಮನಸ್ಸು ಕಾಣಿಸಿಕೊಂಡಿರುವುದು ಬಿಜೆಪಿಗೆ ರಾಜಕೀಯವಾಗಿ ಲಾಭವಾಗಲಿದೆ. ಕಳೆದೊಂದು ದಶಕದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುಸಿದಿದೆ. ಹೀಗಿರುವಾಗ ಮತ್ತೆ ನಾಯಕರು ಅಧಿಕಾರಕ್ಕಾಗಿ ಬೀದಿ ರಂಪ ಮಾಡಲು ಹೊರಟಿರುವುದು ನಿಜಕ್ಕೂ ಪಕ್ಷಕ್ಕೆ ಆಘಾತವೇ. [ಕೊಡಗು ಕಾಂಗ್ರೆಸ್‍ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ!]

ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸದ್ಯದಲ್ಲಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳನ್ನು ಒಳಗೊಂಡಂತೆ ಕೆಪಿಸಿಸಿ ವರಿಷ್ಠರೊಂದಿಗೆ ಬೆಂಗಳೂರಿನಲ್ಲಿ ಸಮಾಲೋಚನಾ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಬಗ್ಗೆ ಡಿಸಿಸಿ ಪ್ರಭಾರ ಅಧ್ಯಕ್ಷ ಟಿ.ಪಿ. ರಮೇಶ್ ಹೇಳುತ್ತಿದ್ದಾರೆ.

ಮತ್ತೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕೊಡಗಿನ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ತಲೆಕೆಡಿಸುವಂತೆ ಮಾಡಿದೆ. ಅವರದು ಜಾತಿಯನ್ನು ಮೀರಿದ ಪಕ್ಷ ಕಟ್ಟುವ ಸಮರ್ಥರಿಗೆ ಅಧ್ಯಕ್ಷ ಸ್ಥಾನ ನೀಡುವ ಬಯಕೆಯಾಗಿದೆ.

ಯಾರಿಗೆ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬುದು ಮಾತ್ರ ಇನ್ನೂ ಅಂತಿಮವಾಗಿಲ್ಲ. ನವೆಂಬರ್ ಮಾಸಾಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ನಾಯಕರ ಸಭೆ ಕರೆದು ಅಧ್ಯಕ್ಷಗಾದಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಇರಾದೆ ದಿನೇಶ್ ಗುಂಡೂರಾವ್ ಅವರದ್ದಾಗಿದೆ ಎನ್ನಲಾಗಿದೆ.

ಅಲ್ಲಿಯ ತನಕ ಪಕ್ಷದೊಳಗೆ ಇನ್ಯಾವ ರೀತಿಯ ಬೆಳವಣಿಗೆಗಳು ನಡೆಯುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ. ಪಕ್ಷಕ್ಕಾಗಿ ಹಲವು ದಶಕಗಳಿಂದ ದುಡಿದಿರುವ ಹಿರಿಯ ನಾಯಕರಿಗೆ ಕೊನೆ ಪಕ್ಷ ಡಿಸಿಸಿ ಅಧ್ಯಕ್ಷರಾಗಿಯಾದರೂ ಬದುಕು ಸಾರ್ಥಕ ಮಾಡಿಕೊಳ್ಳುವ ಅಂತಿಮ ಬಯಕೆ ಬಂದಿದೆ. ಹೀಗಾಗಿಯೇ ಪೈಪೋಟಿಗಳು ನಡೆಯುತ್ತಿದ್ದು ಆಕಾಂಕ್ಷಿಗಳು ತಮ್ಮ ಆಪ್ತನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಯಾರಿಗೆ ಡಿಸಿಸಿ ಅಧ್ಯಕ್ಷ ಗಾದಿಯ ಪಟ್ಟ ಸಿಗುತ್ತೆ ಎನ್ನುವುದನ್ನು ಕಾದು ನೋಡ ಬೇಕಾಗಿದೆ.

English summary
Who will become the president of Congress unit in Madikeri district? Already many have thrown their towel for the post. Internal fights for the coveted post has come out embarassing KPCC. Dinesh Gundu Rao, the in-charge of Madikeri likely to take decision on this in December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X