ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬಾರೆ ಆನೆ ಶಿಬಿರಕ್ಕೆ ಬರಲಿದೆ ತೂಗು ಸೇತುವೆ

ತೂಗುಸೇತುವೆ ಸಾಕಾರಗೊಂಡರೆ ದುಬಾರೆ ಆನೆಶಿಬಿರದಲ್ಲಿರುವ ಅಂಗನವಾಡಿ, ಶಾಲೆಗೆ ತೆರಳುವ ಶಿಕ್ಷಕರಿಗೆ ಹಾಗೆಯೇ ಅಲ್ಲಿರುವ ವಿದ್ಯಾರ್ಥಿಗಳು ಹೊರಗೆ ಹೋಗಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಲಿದೆ.

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 21 : ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮಕ್ಕೆ ತೆರಳಲು ಅನುಕೂಲವಾಗುವಂತೆ ಕಾವೇರಿ ನದಿಗೆ ತೂಗುಸೇತುವೆ ನಿರ್ಮಿಸಿರುವ ಮಾದರಿಯಲ್ಲಿಯೇ ನಂಜರಾಯಪಟ್ಟಣ ಸಮೀಪದ ದುಬಾರೆ ಶಿಬಿರಕ್ಕೂ ತೂಗುಸೇತುವೆ ನಿರ್ಮಾಣದ ಚಿಂತನೆಯನ್ನು ಅರಣ್ಯ ಇಲಾಖೆ ಮಾಡಿದೆ ತಿಳಿದು ಬಂದಿದೆ.

ದುಬಾರೆ ಆನೆಶಿಬಿರದ ಸುತ್ತ ಕಾವೇರಿ ನದಿ ಹಾದು ಹೋಗಿದ್ದು, ಇಲ್ಲಿಗೆ ತೆರಳಬೇಕಾದರೆ ಮೋಟಾರ್ ಬೋಟ್‌ಗಳನ್ನು ಅವಲಂಬಿಸಬೇಕಾಗಿದೆ. ಈ ಮೋಟಾರ್ ಬೋಟ್‌ಗಳು ಉಗುಳುವ ಹೊಗೆ, ಸೋರುವ ಆಯಿಲ್‌ನಿಂದ ಕಾವೇರಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ದೂರುಗಳು ಕೂಡ ಕೇಳಿ ಬಂದಿವೆ.[75 ವರ್ಷಗಳ ಕನಸಾದ ಫಲ್ಗುಣಿ ತೂಗುಸೇತುವೆ ಉದ್ಘಾಟನೆ]

Hanging bridge to come up in Dubare, Madikeri

ದುಬಾರೆ ಆನೆಶಿಬಿರದಲ್ಲಿ ವಾಸವಿರುವ ಗಿರಿಜನ ಕುಟುಂಬಗಳು, ಮಕ್ಕಳು, ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಬೋಟ್‌ಗಳನ್ನೇ ಅವಲಂಬಿಸಬೇಕಾಗಿದೆ. ಏನಾದರೂ ತೊಂದರೆಯಾಯಿತೆಂದರೆ ತಕ್ಷಣಕ್ಕೆ ನದಿ ದಾಟಿ ಬರುವುದು ಅಸಾಧ್ಯವಾಗಿದೆ. ಆದ್ದರಿಂದ ಇಲ್ಲಿಗೆ ತೂಗುಸೇತುವೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಬಹು ದಿನಗಳ ಒತ್ತಾಯವಾಗಿದೆ.

ಒಂದು ವೇಳೆ ತೂಗುಸೇತುವೆ ಇಲ್ಲಿ ಸಾಕಾರಗೊಂಡದ್ದೇ ಆದರೆ ದುಬಾರೆಗೆ ತೆರಳುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆನೆಶಿಬಿರದಲ್ಲಿರುವ ಅಂಗನವಾಡಿ, ಶಾಲೆಗೆ ತೆರಳುವ ಶಿಕ್ಷಕರಿಗೆ ಹಾಗೆಯೇ ಅಲ್ಲಿರುವ ವಿದ್ಯಾರ್ಥಿಗಳು ಹೊರಗೆ ಹೋಗಿ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಲಿದೆ. ಬಹಳಷ್ಟು ಮಕ್ಕಳು ನದಿದಾಟಿ ಹೋಗಲಾಗದೆ ಶಾಲೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಇಲ್ಲಿ ಕಂಡು ಬರುತ್ತಿದೆ.

ದೂರದಿಂದ ಬರುವ ಪ್ರವಾಸಿಗರು ನಂಜರಾಯಪಟ್ಟಣದ ಕಾವೇರಿ ನದಿಯಿಂದ ಬೋಟ್‌ನಲ್ಲಿ ತೆರಳಬೇಕಲ್ಲ ಎಂಬ ಕಾರಣಕ್ಕೆ ಆನೆಶಿಬಿರಕ್ಕೆ ತೆರಳದೆ ಹಿಂತಿರುಗಿಬಿಡುತ್ತಾರೆ. ಬೋಟ್‌ಗಳಲ್ಲಿ ಪ್ರವಾಸಿಗರಿಂದ ಅಧಿಕ ಶುಲ್ಕ ವಸೂಲಿ ಮಾಡುತ್ತಾರೆ ಎಂಬ ಆರೋಪವೂ ಇದೆ. ಇದೆಲ್ಲವನ್ನು ತಡೆಯಬೇಕಾದರೆ ತೂಗುಸೇತುವೆ ಅನಿವಾರ್ಯವಾಗಿದೆ.

ತೂಗುಸೇತುವೆ ನಿರ್ಮಾಣದ ಕುರಿತಂತೆ ಸುಳಿವು ನೀಡಿರುವ ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಅವರು, ದುಬಾರೆಯಲ್ಲಿ ಮೋಟಾರ್ ಬೋಟುಗಳ ಮೂಲಕ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿರುವುದರಿಂದ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ತೂಗುಸೇತುವೆ ನಿರ್ಮಾಣಕ್ಕೆ ಅಂದಾಜು 60 ರಿಂದ 75 ಲಕ್ಷ ರು.ಗಳಷ್ಟು ಹಣ ಬೇಕಾಗುವುದರಿಂದ ಅರಣ್ಯ ಇಲಾಖೆಯಲ್ಲಿ ಹಣದ ಕೊರತೆಯಿದ್ದು ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಕುರಿತು ಮಾಹಿತಿ ನೀಡಿದ್ದಾರೆ.

ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣ ಶೀಘ್ರದಲ್ಲಿ ಆಗಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕಾದ ಅಗತ್ಯವಿದೆ.

English summary
Forest department is contemplating to construct hanging bridge over Cauver river in Dubare near Nanjarayapatna in Madikeri district. Due to use of boat the water in Cauvery river is getting polluted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X