ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯಲ್ಲಿ ಮಳೆಕೊಯ್ಲು ಹೆಸರಲ್ಲಿ ಸಾರ್ವಜನಿಕರಿಗೆ ಭರ್ಜರಿ ಟೋಪಿ!

By ಬಿಎಂ ಲವಕುಮಾರ್
|
Google Oneindia Kannada News

ಮಡಿಕೇರಿ, ಜುಲೈ 16: ಆಯಾಯ ಸಂದರ್ಭಕ್ಕೆ ತಕ್ಕಂತೆ ಮೋಸ ಮಾಡುವವರು ಹುಟ್ಟಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೊಡಗಿನಲ್ಲಿ ಮಳೆ ಕೊಯ್ಲು ಹೆಸರಿನಲ್ಲಿ ಕಳಪೆ ಗುಣಮಟ್ಟದ ಫಿಲ್ಟರ್ ನೀಡಿ ಹಣ ಪಡೆದ ಘಟನೆ ಬೆಳಕಿಗೆ ಬಂದಿದೆ. ಬಹುಶಃ ಈಗಾಗಲೇ ಅದೆಷ್ಟು ಮಂದಿಗೆ ಇವರು ಟೋಪಿ ಹಾಕಿದ್ದಾರೋ ಗೊತ್ತಿಲ್ಲ.

ಈಗಾಗಲೇ ಕೊಡಗಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಅಂತರ್ಜಲವೂ ಪಾತಾಳ ಸೇರಿದೆ. ಹೀಗಾಗಿ ಮಳೆ ಸುರಿದಾಗ ಅದನ್ನು ಮಳೆಕೊಯ್ಲು ಮೂಲಕ ಭೂಮಿಗೆ ಸೇರಿಸಿದರೆ ಅಂತರ್ಜಲ ಪ್ರಮಾಣ ಹೆಚ್ಚಳ ಮಾಡಬಹುದು ಎಂಬುದು ಇಲ್ಲಿನವರ ಚಿಂತನೆಯಾಗಿದೆ.

 Fraud in the name of installing Rain Water Harvesting in Kodagu

ಇಲ್ಲಿನ ಜನರ ಉದ್ದೇಶವನ್ನು ದುರುಪಯೋಗಪಡಿಸಿಕೊಂಡ ನಕಲಿ ಸಂಸ್ಥೆಯೊಂದು ಪತ್ರಿಕಾ ಜಾಹೀರಾತು ನೀಡಿ ಕಡಿಮೆ ಖರ್ಚಿನಲ್ಲಿ ಮಳೆಕೊಯ್ಲುಗೆ ಫಿಲ್ಟರನ್ನು ಒದಗಿಸುವುದಲ್ಲದೆ, ತಾವೇ ಮಳೆಕೊಯ್ಲುಗೆ ಸಂಬಂಧಿಸಿದ ಉಪಕರಣ ಅಳವಡಿಸುವುದಾಗಿ ಹೇಳಿದ್ದರು.

ಅದರಂತೆ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್‍ ಸಂಖ್ಯೆಯನ್ನು ಮಡಿಕೇರಿಯ ವ್ಯಕ್ತಿಯೊಬ್ಬರು ಸಂಪರ್ಕಿಸಿ ತಮಗೂ ಮಳೆಕೊಯ್ಲು ಅಳವಡಿಸಿಕೊಡುವಂತೆ ಹೇಳಿದ್ದಾರೆ. ಇದಕ್ಕೆ 19,500 ರೂ. ವೆಚ್ಚ ತಗಲುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ಮಳೆಕೊಯ್ಲಿನ ವಿಶೇಷತೆ ಬಗ್ಗೆ, ಅಳವಡಿಸಲಾಗುವ ಫಿಲ್ಟರ್ ಹೀಗೆ ಎಲ್ಲವನ್ನೂ ಅವರು ಅತಿರಂಜಿತವಾಗಿ ಹೇಳಿ ತಾವೇ ಬಂದು ಅಳವಡಿಸುವುದಾಗಿಯೂ ತಿಳಿಸಿದ್ದಾರೆ.

ಆ ನಂತರ ಮಡಿಕೇರಿಗೆ ಆಗಮಿಸಿ ಸ್ಥಳ ನೋಡಿ ಅಳವಡಿಸುವ ಜಾಗದ ಪರಿಶೀಲನೆ ನಡೆಸಿ 19,500 ರೂ.ನಲ್ಲಿ 1000 ರೂ.ನ್ನು ಬಿಡುವುದಾಗಿಯೂ, ಜೊತೆಗೆ ಪೈಪು ಜೋಡಣೆಗೆ ರೂ. 6000 ಖರ್ಚಾಗುವುದಾಗಿ ತಿಳಿಸಿದ್ದಾನೆ.

 Fraud in the name of installing Rain Water Harvesting in Kodagu

ಈ ವೇಳೆ ಮನೆಯವರು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ ಫಿಲ್ಟರ್ ಬೆಲೆಯೇ ಗರಿಷ್ಠ ರೂ. 8000 ಇರುವುದನ್ನು ಗಮನಿಸಿ ಅದನ್ನು ಮಳೆಕೊಯ್ಲು ಅಳವಡಿಸುವ ವ್ಯಕ್ತಿಯ ಗಮನಕ್ಕೆ ತಂದಿದ್ದಾರೆ. ಆಗ ಆತ ಅದು ಬೇರೆ ಎಂದೂ ತಮ್ಮ ಸಂಸ್ಥೆಯಿಂದ ಅಳವಡಿಸುವ ಫಿಲ್ಟರ್ ದೊಡ್ಡದಾಗಿರುತ್ತದೆ ಎಂದೆಲ್ಲ ಹೇಳಿದ್ದಾನೆ.

ಜತೆಗೆ ಇದನ್ನು ಅಳವಡಿಸುವುದರಿಂದ ಬತ್ತಿದ ಬೋರ್‍ವೆಲ್‍ನಲ್ಲೂ ಅಂತರ್ಜಲ ಹೆಚ್ಚಾಗಲಿದೆ ಎಂದಿದ್ದಾನೆ. ಆತನ ಮಾತಿಗೆ ಮರುಳಾಗಿ ಒಪ್ಪಿಗೆ ನೀಡಿದ್ದಾರೆ. ಅವರಿಂದ ಮುಂಗಡ 2000 ರೂ ಪಡೆದ ಸಂಸ್ಥೆಯ ಪ್ರತಿನಿಧಿ ನಾಳೆಯೇ ಕೆಲಸಗಾರರನ್ನು ಕಳುಹಿಸುವುದಾಗಿ ಹೇಳಿ ಹೋಗಿದ್ದಾನೆ.

ಮಾರನೆಯ ದಿನ ಒಬ್ಬ ಮೇಸ್ತ್ರಿಯೊಂದಿಗೆ ಇಬ್ಬರು ಕೆಲಸಗಾರರು ಬಂದಿದ್ದಾರೆ. ಅಲ್ಲದೆ ಬೋರ್‍ವೆಲ್‍ಗೆ ಪೈಪ್ ಅಳವಡಿಸಲು ನೆಲ ಅಗೆಯಲು ಆರಂಭಿಸಿದ್ದಾರೆ. ಈ ವೇಳೆ ಮನೆಯವರು ಮಳೆಕೊಯ್ಲಿಗೆ ಅಳವಡಿಸುವ ಫಿಲ್ಟರ್ ಬಗ್ಗೆ ಕೇಳಿ ಅದನ್ನು ತೋರಿಸುವಂತೆ ಹೇಳಿದ್ದಾರೆ.

ಅದರಂತೆ ತಾವು ತಂದಿದ್ದ ಫಿಲ್ಟರ್‍ನ್ನು ಕೆಲಸಗಾರರು ತೋರಿಸಿದ್ದಾರೆ. ಈ ಸಂದರ್ಭ ಮನೆಯವರು ಅದರ ಮೇಲಿನ ಮುಚ್ಚಳ ತೆಗೆದು ನೋಡಿದಾಗ ಅದರೊಳಗೆ ಬಿಳಿ ಮಿಶ್ರಿತ ಕಪ್ಪು ಕಲ್ಲುಗಳಿದ್ದವು. ನಡುಭಾಗದಲ್ಲಿದ್ದ ಕಬ್ಬಿಣದ ಮೆಷ್ ಅಲುಗಾಡುತ್ತಿತ್ತು. ಫಿಲ್ಟರ್ ನ್ನು ತಲೆ ಕೆಳಗೆ ಮಾಡಿದಾಗ ಬಿಳಿಕಲ್ಲು ಮಿಶ್ರಿತ ಕಲ್ಲಿದ್ದಲಿನಂತಹ ಸುಮಾರು 5 ಕೆ.ಜಿ. ನೆಲಕ್ಕೆ ಬಿದ್ದಿದೆ. ಇದರ ಅಡಿಯಲ್ಲಿದ್ದ ಮರಳು ಕೂಡ ನೆಲಕ್ಕೆ ಬಿದ್ದಿದೆ. ತಕ್ಷಣ ನೋಡಿದಾಗ ಇದು ಗೋಲ್‍ಮಾಲ್ ಎಂಬುದು ಮನೆಯವರಿಗೆ ತಿಳಿದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವಾಗ ಮನೆಯವರು ಆಕ್ರೋಶ ವ್ಯಕ್ತಡಿಸಿದರೋ ಕೆಲಸಗಾರರು ಸದ್ದಿಲ್ಲದೆ ನಮಗೇನು ಗೊತ್ತಿಲ್ಲ ಎನ್ನುತ್ತಾ ಜಾಗ ಖಾಲಿ ಮಾಡಿದ್ದಾರೆ. ದೂರವಾಣಿ ಮೂಲಕ ಸಂಸ್ಥೆಯ ಪ್ರತಿನಿಧಿಯನ್ನು ಸಂಪರ್ಕಿಸಿದಾಗ ಆತ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾನೆ. ಇದೇ ಸಂಸ್ಥೆ ಹೆಸರಿನಲ್ಲಿ ಇನ್ನೆಷ್ಟು ಮಂದಿಗೆ ಪಂಗನಾಮ ಹಾಕಿದ್ದಾರೋ? ಇನ್ನಾದರೂ ಎಲ್ಲರೂ ಎಚ್ಚರವಾಗಿರುವುದು ಒಳಿತು.

English summary
Man cheated to public in the name of installing rain water harvesting filters in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X