ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಕಾಂಗ್ರೆಸಿಗಿಲ್ಲ ಅಧ್ಯಕ್ಷರು, ಮುಗಿಯದ ಅಸಮಾಧಾನದ ಹೊಗೆ

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ: ರಾಜ್ಯದಲ್ಲಿ ಕಾಂಗ್ರೆಸ್‍ನ ಆಡಳಿತವಿದ್ದರೂ ಕೊಡಗಿನಲ್ಲಿ ಅದ್ಯಾಕೋ ಪಕ್ಷದ ಕಾರ್ಯಕರ್ತರು ಅನಾಥ ಪ್ರಜ್ಞೆಯಲ್ಲಿದ್ದಾರೆ. ಇಲ್ಲಿನ ನಾಯಕರನ್ನು ಅತೃಪ್ತತೆ ಕಾಡುತ್ತಿದೆ. ಒಳಗೊಳಗೆ ಅಸಮಾಧಾನದ ಕಿಚ್ಚು ಹೊತ್ತಿ ಉರಿಯತೊಡಗಿದೆ. ಆದರೂ ಇವರನ್ನು ಕೇಳುವವರಿಲ್ಲ.

ಪಕ್ಷಕ್ಕಾಗಿ ದುಡಿಯುತ್ತಾ ಬಂದ ನಾಯಕರಿಗೆ ತಮಗೆ ಪಕ್ಷದಲ್ಲಿ ಸ್ಥಾನಮಾನ ಸಿಕ್ಕಿಲ್ಲ ಎಂಬ ಆಕ್ರೋಶ ಒಂದು ಕಡೆಯಾದರೆ, ಅಧಿಕಾರಕ್ಕಾಗಿ ಸಮುದಾಯಗಳ ನಡುವೆ ಮುಸುಕಿನ ಗುದ್ದಾಟವೂ ನಡೆಯುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‍ನ ಜಿಲ್ಲಾ ಸಮಿತಿಗೆ ಸಮರ್ಥವಾಗಿರುವ ಅಭ್ಯರ್ಥಿಯನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಕೆಪಿಸಿಸಿಗೆ ಸಾಧ್ಯವಾಗಿಲ್ಲ. ಹೀಗಾಗಿ ಟಿ.ಪಿ.ರಮೇಶ್ ಎಂಬುವರು ಪ್ರಭಾರ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಇವರು ಈಗಾಗಲೇ ನಿಗಮ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವುದರಿಂದ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಕೊಡಿಸಿ ಎಂಬ ಕೂಗಿಗೆ ಕೆಪಿಸಿಸಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸದ್ಯಕ್ಕೆ ತೇಪೆ ಹಚ್ಚುವ ಕಾರ್ಯ ಮಾತ್ರ ಮುಂದುವರೆದಿದೆ.

ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ಒಬ್ಬರಿಗೆ ಸ್ಥಾನ ನೀಡಿದರೆ ಮತ್ತೊಬ್ಬರು ಬಂಡಾಯ ಏಳುವ ಸಾಧ್ಯತೆಯೇ ಹೆಚ್ಚಾಗಿದೆ. ಹೀಗಾಗಿ ಪಕ್ಷವನ್ನು ಸಂಘಟಿಸುವ, ಎಲ್ಲಾ ಮುಖಂಡರನ್ನು ಜೊತೆಯಲ್ಲಿ ಕೊಂಡೊಯ್ಯುವ ನಾಯಕನಿಗೆ ಅಧ್ಯಕ್ಷ ಪಟ್ಟ ನೀಡುತ್ತೇವೆ ಎಂದು ಕೆಪಿಸಿಸಿ ಹೇಳುತ್ತಾ ಬಂದಿದೆಯಾದರೂ ಅಂತಹ ನಾಯಕರನ್ನು ಆಯ್ಕೆ ಮಾಡುವಲ್ಲಿ ಮಾತ್ರ ವಿಫಲವಾಗಿದೆ.

ಅಲ್ಪಸಂಖ್ಯಾತ, ಗೌಡ, ಕೊಡವ ಸಮುದಾಯಗಳಲ್ಲಿ ಯಾರೊಬ್ಬರಿಗೆ ನೀಡಿದರೂ ಉಳಿದ ಸಮುದಾಯಗಳು ತಮ್ಮನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನಗೊಳ್ಳುವುದು ಖಚಿತ.

ರೇಸ್ ನಲ್ಲಿ ಮಿಟ್ಟುಚಂಗಪ್ಪ, ಅರುಣ್ ಮಾಚಯ್ಯ

ಈಗಾಗಲೇ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಮುಖಂಡರು ತುದಿಗಾಲ ಮೇಲೆ ನಿಂತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಮಿಟ್ಟುಚಂಗಪ್ಪ, ಅರುಣ್ ಮಾಚಯ್ಯ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಆದರೆ, ಇವರಿಬ್ಬರು ಕೊಡವ ಸಮುದಾಯಕ್ಕೆ ಸೇರಿದ್ದರಿಂದ ಇದುವರೆಗೆ ಕೊಡವ ಸಮುದಾಯದಿಂದ ಹೆಚ್ಚಿನವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಕೊಡವೇತರರಿಗೆ ನೀಡಿ ಎಂಬ ಆಕ್ಷೇಪಗಳು ಕೇಳಿ ಬರಬಹುದು.

District president post is still vacant, Crisis in Kodagu Congress

ಒಂದು ವೇಳೆ ಕೆಪಿಸಿಸಿ ಕಟ್ಟು ನಿಟ್ಟಿನ ಆದೇಶ ಮಾಡಿ ನಾಯಕರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿದರೂ ಅಸಮಾಧಾನಗೊಂಡ ನಾಯಕರು ತಟಸ್ಥರಾಗುವ ಅಥವಾ ಬೇರೆ ಪಕ್ಷದತ್ತ ಮುಖ ಮಾಡುವ ಸಂಭವವೇ ಹೆಚ್ಚು.

ಜಿಲ್ಲೆಯಲ್ಲಿ ಪಕ್ಷ ಸಂಘಟನೆ ವಿಫಲವಾಗಿದೆ. ತಮ್ಮದೇ ಆಡಳಿತವಿದ್ದರೂ ತಮಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂಬ ನೋವು ಕಾರ್ಯಕರ್ತರಲ್ಲಿದೆ. ಹೀಗಾಗಿ ತಳಮಟ್ಟದಲ್ಲಿ ಅಂದರೆ ಬ್ಲಾಕ್ ಮಟ್ಟದಲ್ಲೇ ಅಸಮಾಧಾನದ ಹೊಗೆ ಎದ್ದಿದೆ. ಎಲ್ಲರೂ ಬಂಡಾಯ ಎದ್ದು ಸಭೆ ನಡೆಸುವ ಮಟ್ಟಕ್ಕೆ ಬಂದಿದ್ದಾರೆ. ಸಭೆಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಬ್ಲಾಕ್ ಮಟ್ಟದ ಮುಖಂಡರ ಸಭೆಗಳು ಡಿಸಿಸಿ ಅಧ್ಯಕ್ಷರ ಗಮನಕ್ಕೆ ಬಾರದೆ ನಡೆಯುತ್ತದೆ ಎಂದರೆ ಪಕ್ಷದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎಂಬುದು ಎಂತಹವರಿಗೂ ಅರ್ಥವಾಗಿಬಿಡುತ್ತದೆ. ಸಭೆಯಲ್ಲಿ ಮುಖಂಡರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿರುವುದು ಕೂಡ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.

ಬೆಂಕಿಗೆ ತುಪ್ಪ ಸುರಿದ ಹೇಳಿಕೆ

ಯಾವಾಗ ಪಕ್ಷದ ಬ್ಲಾಕ್ ಮಟ್ಟದ ಒಂದಷ್ಟು ಮುಖಂಡರು ತಮ್ಮ ಅಸಮಾಧಾನವನ್ನು ಹೊರಹಾಕಿದರೂ ಎಚ್ಚೆತ್ತುಕೊಂಡ ಡಿಸಿಸಿ ಪ್ರಭಾರ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಸಭೆ ನಡೆಸಿ ಬ್ಲಾಕ್ ಮಟ್ಟದ ಮುಖಂಡರು ಬಹಿರಂಗ ಹೇಳಿಕೆ ನೀಡಬಾರದು ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿ ಪರಿಹರಿಸಿಕೊಳ್ಳೋಣ, ಪಕ್ಷದ ಬಗ್ಗೆ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಪಕ್ಷದಲ್ಲಿ ದುಡಿದವರಿಗೆ ಸ್ಥಾನಮಾನ ನೀಡುವ ಬಗ್ಗೆಯೂ ಮಾತನಾಡಿದ್ದಾರೆ.

District president post is still vacant, Crisis in Kodagu Congress

ಆದರೆ ಇವರ ಮಾತುಗಳು ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಗಿದೆಯೇ ಹೊರತು ತಣ್ಣೀರಂತು ಹಾಕಿಲ್ಲ. ಈಗಾಗಲೇ ಕೊಡಗು ಬಿಜೆಪಿ ಪಕ್ಷದ ಭದ್ರಕೋಟೆಯಾಗಿದೆ. ಹೀಗಿರುವಾಗಿ ಕಳೆದ ಎರಡು ವರ್ಷಗಳಿಂದ ಡಿಸಿಸಿಗೆ ಒಬ್ಬ ಅಧ್ಯಕ್ಷನನ್ನು ಆಯ್ಕೆ ಮಾಡಲಾಗದೆ ಪರದಾಡುತ್ತಿರುವುದನ್ನು ನೋಡಿದರೆ ಇಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಂತಹ ಹೀನಾಯ ಮಟ್ಟಕ್ಕೆ ಹೋಗಿದೆ ಎಂಬುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ.

ಹಿಂದೆ ಅಧ್ಯಕ್ಷರಾಗಿದ್ದ ಬಿ.ಟಿ.ಪ್ರದೀಪ್ ಅವರು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಎಲ್ಲರನ್ನು ಜೊತೆಯಲ್ಲಿ ಕೊಂಡೊಯ್ಯುವ ಸಾಮಥ್ರ್ಯ ಹೊಂದಿದ್ದರು. ಜಿಲ್ಲೆಯಲ್ಲಿ ನಡೆದ ಟಿಪ್ಪು ಜಯಂತಿ ಗಲಭೆ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕ್ಷದ ಚಟುವಟಿಕೆಯಿಂದ ದೂರವೇ ಇದ್ದ ಅವರು ಇತ್ತೀಚೆಗೆ ನಿಧನರಾದರು.

ಬಿ.ಟಿ.ಪ್ರದೀಪ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಒಮ್ಮತದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಟಿ.ಪಿ.ರಮೇಶ್ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ಮಾಡಿದ ಕೆಪಿಸಿಸಿ ಈಗಲೂ ಮುಂದುವರೆಸಿಕೊಂಡು ಹೋಗುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ನಾಲ್ಕು ವರ್ಷವಾಗಿದೆ. ಇನ್ನೊಂದು ವರ್ಷದಲ್ಲಿ ಮತ್ತೆ ಚುನಾವಣೆಗೆ ಹೋಗಬೇಕಾಗಿದೆ. ಹೀಗಿರುವಾಗ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಕೊಡಗಿನಲ್ಲಿ ಕಾಂಗ್ರೆಸ್‍ಗೆ ಭವಿಷ್ಯವಿಲ್ಲ ಎಂಬುದು ಮನದಟ್ಟಾಗುತ್ತಿದೆ.

English summary
Karnataka Pradesh Congress Committee (KPCC) failed to appoint full time president for Kodagu district congress committee. Which created crisis in block congress level as workers crossing disciplinary lines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X